ಬೆಂಗಳೂರು:ಮೂರು ಹಂತದ ಪಂಚಾಯತ್​ರಾಜ್ ವ್ಯವಸ್ಥೆಯಲ್ಲಿ ತಾಲೂಕು ಪಂಚಾಯಿತಿಗಳನ್ನು ರದ್ದುಮಾಡುವ ವಿಚಾರ ರಾಜ್ಯದಲ್ಲಿ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಸರ್ಕಾರ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಿ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ. ತಾಪಂ ರದ್ದತಿ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳಿವೆ. ಹೀಗಾಗಿ ವಿಧಾನಮಂಡಲ ಅಧಿವೇಶನದಲ್ಲಿಯೇ ಸ್ಪಷ್ಟ ನಿರ್ಧಾರಕ್ಕೆ ಬಂದು ಕೇಂದ್ರದ ಅಂಗಳಕ್ಕೆ ಈ ಚೆಂಡನ್ನು ದಾಟಿಸಲು ಸರ್ಕಾರ ಚಿಂತನೆ ಮಾಡಿದೆ. ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಮೂರು ಹಂತದ ಪಂಚಾಯಿತಿ ರಾಜ್ ವ್ಯವಸ್ಥೆ ತರಲಾಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ನಡುವೆ ತಾಲೂಕು ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಆರ್ಥಿಕ ಬಲ ಇಲ್ಲದಿರುವುದರಿಂದಲೇ ಇವುಗಳ ಅಸ್ತಿತ್ವ ಬೇಡ ಎಂಬುದು ಸರ್ಕಾರದ ಆಲೋಚನೆ ಎನ್ನಲಾಗಿದೆ. ತಾಪಂ ವ್ಯವಸ್ಥೆ ರದ್ದು ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಂವಿಧಾನದ ತಿದ್ದುಪಡಿ ಆಗಬೇಕಾಗುತ್ತದೆ. ಆದ್ದರಿಂದಲೇ ಕೇಂದ್ರಕ್ಕೆ ಶಿಫಾರಸು ಮಾಡಲು ಸರ್ಕಾರ ತೀರ್ಮಾನಿಸಿದೆ.
ತಾಲೂಕು ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಪ್ರಯತ್ನ ಆಗಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಕ್ಕ 2 ಕೋಟಿ ರೂ.ಗಳ ಅನಿರ್ಬಂಧಿತ ಅನುದಾನವೇ ಹೆಚ್ಚಿನ ಅನುದಾನವಾಗಿದೆ. ಇದೀಗ ಕೇಂದ್ರದ 15 ನೇ ಹಣಕಾಸು ಆಯೋಗ ಒಂದಷ್ಟು ಅನುದಾನ ನೀಡಲು ನಿರ್ಧಾರ ಮಾಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಈ ಬಗ್ಗೆ ಹಲವು ಬಾರಿ ತಮ್ಮ ನಿರ್ಧಾರ ಹೇಳಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಅಧಿಕಾರ ವಿಕೇಂದ್ರೀಕರಣ, ಪಂಚಾಯತ್​ರಾಜ್ ವ್ಯವಸ್ಥೆ ಹಿಂದಿನಂತೆಯೇ ಎರಡು ಹಂತದಲ್ಲಿರಲಿ, ತಾಪಂ ಬೇಡವೆಂಬ ಅಭಿಪ್ರಾಯಗಳಿವೆ. ಆದರೆ ಅಂತಿಮ ನಿರ್ಧಾರ ರಾಜ್ಯ ಸರ್ಕಾರದ ಕೈಲ್ಲಿಲ್ಲ’ ಎಂದು ಹೇಳಿದರು. ‘ಕಳೆದ ವಿಧಾನ ಮಂಡಲದ ಅಧಿವೇಶನದಲ್ಲೇ ಈ ವಿಚಾರ ಚರ್ಚೆಗೆ ಬಂದಿತ್ತು. ಹೀಗಾಗಿ ಮುಂದಿನ ಬಜೆಟ್ ಅಧಿವೇಶನದಲ್ಲಿ ವಿಸõತ ಚರ್ಚೆಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ತಾ.ಪಂ. ಅಸ್ತಿತ್ವ ಬಗ್ಗೆ ಅಧಿವೇಶನದಲ್ಲಿ ಸ್ಪಷ್ಟ ನಿರ್ಣಯ ಕೈಗೊಂಡು ಗ್ರಾಮ ಸ್ವರಾಜ್ ಮತ್ತು ಪಂಚಾಯತ್​ರಾಜ್ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ’ ಎಂದರು.
ಏಕಾಏಕಿ ತಾ.ಪಂ.ಗಳನ್ನು ರದ್ದುಪಡಿಸಲಾಗದು. ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಅಭಿಪ್ರಾಯ, ಶಿಫಾರಸು ಪಡೆದು ಮುಂದಡಿಯಿಡಬೇಕಾಗುತ್ತದೆ ಎಂದು ಈಶ್ವರಪ್ಪ ವಿವರಿಸಿದರು.
ಅನುದಾನವೇ ಇಲ್ಲ:ತಾಪಂಗಳಿಗೆ ಹೆಚ್ಚಿನ ಅನುದಾನವೇ ಸಿಗುವುದಿಲ್ಲ. 10 ಲೆಕ್ಕ ಶೀರ್ಷಿಕೆಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ಅನುದಾನ ದೊರಕುತ್ತದೆಯಷ್ಟೆ.
ಅಧಿಕಾರ ವಿಕೇಂದ್ರೀಕರಣದ ಎರಡನೇ ಹಂತ ತಾಲೂಕು ಪಂಚಾಯಿತಿ ಹಲ್ಲಿಲ್ಲದ ಹಾವಾಗಿದೆ. ಸರ್ಕಾರಗಳು ಅನುದಾನ ನೀಡದಿರುವುದರಿಂದ ತಾಪಂ ವ್ಯವಸ್ಥೆ ಕುಸಿದಿದೆ. ಅನುದಾನ ಕೊಟ್ಟರೆ ಸರಿ, ಇಲ್ಲದಿದ್ದರೆ 2 ಹಂತದ ಪಂಚಾಯಿತಿ ವ್ಯವಸ್ಥೆಯೇ ಸೂಕ್ತ.
|ಎಚ್.ಕೆ.ಕುಮಾರಸ್ವಾಮಿಜೆಡಿಎಸ್ ರಾಜ್ಯಾಧ್ಯಕ್ಷ
ಚುನಾವಣೆ ಅಬಾಧಿತ:ತಾ.ಪಂ. ರದ್ದತಿ ಚಿಂತನೆ ನಡೆದಿರುವ ಮಾತ್ರಕ್ಕೆ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಮುಂದುವರಿಸಲು ಸಮಸ್ಯೆಯಾಗದು. ಸಂವಿಧಾನಕ್ಕೆ ತಿದ್ದುಪಡಿಯಾಗಿ ರದ್ದಾಗುವ ತನಕ ತಾಪಂಗಳು ಅಸ್ತಿತ್ವದಲ್ಲಿ ಇರಬೇಕಾಗುತ್ತದೆ. ಮಾರ್ಚ್​ಗೆ ಹಾಲಿ ಪಂಚಾಯಿತಿಗಳ ಅವಧಿ ಮುಕ್ತಾಯವಾಗಲಿದೆ. 227 ತಾಲೂಕು ಪಂಚಾಯಿತಿಗಳಿಗೆ ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ಮೊದಲ ವಾರ ಚುನಾವಣೆ ನಡೆಸಬೇಕಾಗುತ್ತದೆ. ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯರಿರುತ್ತಾರೆ.
ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ರ್ಚಚಿಸಿದ ನಂತರ ಕೇಂದ್ರಕ್ಕೆ ಶಿಫಾರಸು ಮಾಡುವ ಚಿಂತನೆ ಇದೆ. ಇದು ಕೇಂದ್ರ ಸರ್ಕಾರ ಕೈಗೊಳ್ಳಬೇಕಾದ ನಿರ್ಧಾರವಾಗಿದೆ.
|ಕೆ.ಎಸ್. ಈಶ್ವರಪ್ಪಗ್ರಾಮೀಣಾಭಿವೃದ್ಧಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
