ಬೆಂಗಳೂರು:ನೈಸ್ ಯೋಜನೆಯನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದರು.
ನೈಸ್ ಕಂಪನಿ ವಶದಲ್ಲಿರುವ 13,404 ಎಕರೆಯಷ್ಟು ರೈತರ ಭೂಮಿಯನ್ನು ಸರ್ಕಾರ ಮರು ವಶಪಡಿಸಿಕೊಳ್ಳಬೇಕು. ಈ ಸಂಬಂಧ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರೂ ಅವರು ಈವರೆಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಬಡವರ ಪರ ಮಾತನಾಡುತ್ತಾರೆ. ಆ ಯೋಜನೆಯಲ್ಲಿ ಇಷ್ಟೊಂದು ಅಕ್ರಮ ಆಗಿದ್ದರೂ, ಬಡವರ ಭೂಮಿ ಲೂಟಿ ಹೊಡೆಯಲಾಗಿದ್ದರೂ ಏನು ಕ್ರಮ ತೆಗೆದುಕೊಂಡಿಲ್ಲ. ಬಡವರ ಪರ ಮಾತಾಡುವ ಸಿಎಂ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಎಷ್ಟು ವರ್ಷ ಆಳಿದರೂ ಈ ಕಪ್ಪುಚುಕ್ಕೆಯಿಂದ ಹೊರೆಗೆ ಬರಲು ಸಾಧ್ಯವಿಲ್ಲ. ಇದರ ವಿರುದ್ದ ಅವರು ಕ್ರಮ ತೆಗೆದುಕೊಳ್ಳದೇ ಹೋದರೆ ಅವರ ರಾಜಕೀಯ ಜೀವನಕ್ಕೆ ಇದೇ ಕಪ್ಪುಚುಕ್ಕೆಯಾಗಿ ಉಳಿದು ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು. ಕೂಡಲೇ ಸರ್ಕಾರ ನೈಸ್ ಯೋಜನೆಯನ್ನು ತನ್ನ ವಶಕ್ಕೆ ಪಡೆಯಬೇಕು. ಇಲ್ಲದೇ ಇದ್ದರೆ ತಾವು ಈ ವಿಷಯದಲ್ಲಿ ರೈತರ ಪರ ನಿಲ್ಲುವುದಕ್ಕೆ ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಿಎಂಗೆ ಬರೆದಿದ್ದ ಪತ್ರ ಬಿಡುಗಡೆ:2023 ಅಕ್ಟೋಬರ್ 19 ರಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ನೈಸ್ ವಿಚಾರವಾಗಿ ಕ್ರಮಕ್ಕೆ ಆಗ್ರಹ ಮಾಡಿದ್ದೆ. ಈ ಬಗ್ಗೆ ಖುದ್ದು ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ ಎಂದು ದೇವೇಗೌಡ ತಾವು ಬರೆದಿದ್ದ ಪತ್ರವನ್ನು ಬಿಡುಗಡೆ ಮಾಡಿದರು. ನೈಸ್ ಯೋಜನೆಯ ಮೌಲ್ಯ 7 ಸಾವಿರ ಕೋಟಿ ಅಂತ ಸದನ ಸಮಿತಿಯೇ ವರದಿ ಕೊಟ್ಟಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದೆ:ಒಳ್ಳೆಯ ರಸ್ತೆ ಆಗುತ್ತದೆ ಎಂದು ನಾನು ಜೀವನದಲ್ಲಿ ಒಂದು ತಪ್ಪು ಮಾಡಿದೆ. ಮೈಸೂರಿಗೆ ಒಂದು ಗಂಟೆಯಲ್ಲಿ ಹೋಗಬಹುದು ಎಂದು ಇದನ್ನು ಮಾಡಿದೆ. ಆದರೆ ದೊಡ್ಡ ಪೆಟ್ಟು ಕೊಟ್ಟರು ಮಹಾನುಭಾವರು. ನಮ್ಮ ಪಕ್ಷ ನೈಸ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ನಾನು ನಮ್ಮ ಪಕ್ಷ, ರೈತರು, ಬಡವರ ಪರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಡಿಸಿಎಂ ವಿರುದ್ಧ ಕಿಡಿ:ಡಿಸಿಎಂ ಅವರ ಉದ್ದಟತನ, ಅವರು ಎಲೆಲ್ಲಿ ಹೋಗಿದ್ದಾರೆ. ಎಷ್ಟು ಹಣ ಸಾಗಿಸಿದ್ದಾರೆ. ಎಷ್ಟು ಹಣವನ್ನು ಚುನಾವಣೆ ಆಯೋಗ ಸೀಜ್ ಮಾಡಿದೆ. ಈ ಹಣ ಹೋಗಿರೋದು ಬೆಂಗಳೂರಿನಿಂದ ಎನ್ನುವುದು ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.
ಸೇಡಿನ ರಾಜಕೀಯ ಬೇಡ:ನಾವು ರಾಮನನ್ನು ಪೂಜೆ ಮಾಡುತ್ತೇವೆ. ಅದರಲ್ಲಿ ನಮಗೇನು ಸಂಕೋಚ ಇಲ್ಲ. ರಾಮ ಬಗ್ಗೆ ಪೂಜೆ ಮಾಡಿದಾಕ್ಷಣ ಬೇರೆ ಸಮುದಾಯಕ್ಕೆ ಅಪಾಯ ಆದರೆ ರಕ್ಷಣೆ ಕೊಡುವುದು ಅಧಿಕಾರದಲ್ಲಿದ್ದವರ ಜವಾಬ್ದಾರಿ ಎಂದರು. ಎನ್‌ಡಿಎ ಮಿತ್ರಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಅವರ ಮೇಲೆ ಹಿಂದಿನ ಕೇಸ್ ರೀ ಓಪನ್ ಮಾಡಿ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಇದು ಸೇಡಿನ ರಾಜಕೀಯ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸೋಲಿಸಿಯೇ ಸೋಲಿಸುತ್ತೇವೆ:ಕರ್ನಾಟಕದಲ್ಲಿ ನಾವು ಕಾಂಗ್ರೆಸ್‌ನ್ನು ಸೋಲಿಸಿಯೇ ಸೋಲಿಸುತ್ತೇವೆ. ಈ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ.ಕರ್ನಾಟಕದಲ್ಲಿ ಎಲ್ಲರ ನಿರೀಕ್ಷೆ ಮೀರಿ ಜನರು ಎನ್‌ಡಿಎ ಮೈತ್ರಿಗೆ ಅಭೂತಪೂರ್ವ ತೀರ್ಪು ಕೊಡುತ್ತಾರೆ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರರು ಉಪಸ್ಥಿತರಿದ್ದರು.
ಚಿನ್ನದ ಕತ್ತಿ ರಾಮನಿಗೆ ಅರ್ಪಣೆ:ತಾವು ಪ್ರಧಾನಿ ಆಗಿದ್ದಾಗ ಒಮನ್ ದೇಶದಲ್ಲಿ ಚಿನ್ನದ ಕತ್ತಿಯನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ತೆರಿಗೆ ಕಟ್ಟಿ ಬೆಂಗಳೂರಿಗೆ ತರಿಸಿಕೊಂಡು ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ ಶ್ರೀರಾಮ ದೇವರಿಗೆ ಅರ್ಪಿಸಿದೆ. ಆ ಕತ್ತಿಯನ್ನು ನಾನೇ ಇಟ್ಟುಕೊಳ್ಳಬಹುದಿತ್ತು. ಆದರೆ ದೈವಸೇವೆ ನಮ್ಮ ನಂಬಿಕೆ. ಅದನ್ನೇ ಮಾಡಿದೆ ಎಂದು ದೇವೇಗೌಡ ಹೇಳಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × one =
Remember me
