ಮೈಸೂರು: ವಿಶ್ವದೆಲ್ಲೆಡೆ ಕರೊನಾ ಜನರನ್ನು ಚಿಂತೆಗೀಡಾಗಿಸಿರುವ ಮಧ್ಯೆ ವೈರಸ್ ಹರಡದಂತೆ ತಡೆಯುವ ಯಂತ್ರವೊಂದನ್ನು ರಷ್ಯಾದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನಗರದ ವಿಜ್ಞಾನಿ ಉನ್ನತೀಕರಿಸುವ ಕಾರ್ಯ ಮಾಡಿದ್ದಾರೆ!
ರಷ್ಯಾದ ಕ್ರಾಸ್ನೊಯಾರ್ಸ್ಕ್ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಸೂಕ್ಷ್ಮಜೀವಶಾಸ್ತ್ರದ ಸಂಶೋಧನೆಯಲ್ಲಿ ತೊಡಗಿರುವ ಮೈಸೂರಿನ ಅಗ್ರಹಾರದ ಡಾ.ಸೈಯದ್ ಬೇಕರ್ ಅವರು, ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಯಂತ್ರವನ್ನು ಪರಿಚಯಿಸಿದ್ದಾರೆ. ನ್ಯಾನೋ ತಂತ್ರಜ್ಞಾನ ಬಳಸಿಕೊಂಡು ಉನ್ನತೀಕರಿಸಿರುವ ‘ಹೈಬ್ರಿಡ್ ನ್ಯಾನೋ ಜೋನ್’ ಯಂತ್ರ, ಆಸ್ಪತ್ರೆ ಬೆಡ್, ಐಸಿಯು, ಕ್ವಾರಂಟೈನ್ ಇಡಲಾದ ಮನೆ, ಹೋಟೆಲ್, ಲಾಡ್ಜ್, ಯಾತ್ರಿ ನಿವಾಸ ಕೊಠಡಿಯ ಪರಿಸರದಲ್ಲಿ ಇರುವ ವೈರಸ್, ಬ್ಯಾಕ್ಟೀರಿಯಾ ಸೇರಿ ಇನ್ನಿತರೆ ಕಣಗಳನ್ನು ಸಂಪೂರ್ಣವಾಗಿ ಕೊಲ್ಲಲಿದೆ.
ವೈರಸ್ ಸೋಂಕಿತರು, ಅನುಮಾನ ಬಂದವರನ್ನು ಈಗಾಗಲೇ ಆಸ್ಪತ್ರೆ, ಹೋಟೆಲ್, ಮನೆ, ಲಾಡ್ಜ್, ಯಾತ್ರಿ ನಿವಾಸ ಸೇರಿ ಇನ್ನಿತರೆ ಕಡೆಗಳಲ್ಲಿ ಇರಿಸಲಾಗುತ್ತಿದೆ. ಆದರೆ, ಅವರು ಗುಣಮುಖರಾದ ಬಳಿಕ ಅವರು ಉಳಿದುಕೊಂಡಿದ್ದ ಸ್ಥಳದಲ್ಲಿ ಮಾರಕ ಕರೊನಾ ವೈರಸ್ ಉಳಿದುಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಆ ಪರಿಸರವನ್ನು ಶುಚಿಗೊಳಿಸಿ ವೈರಸ್, ಬ್ಯಾಕ್ಟೀರಿಯಾ ನಿಮೂಲನೆ ಮಾಡದಿದ್ದಲ್ಲಿ ಅದು ಮತ್ತೆ ವ್ಯಾಪಿಸುವ ಅಪಾಯ ಇರುತ್ತದೆ. ಹೀಗಾಗಿ ಸೋಂಕಿತರು ಉಳಿದಿದ್ದ ಜಾಗದಲ್ಲಿ ಈ ಹೈಬ್ರಿಡ್ ನ್ಯಾನೋ ಜೋನ್ ಯಂತ್ರವನ್ನು ಇಟ್ಟು ನಿಮೂಲನಾ ಕಾರ್ಯ ಮಾಡಿದರೆ ವೈರಸ್, ಬ್ಯಾಕ್ಟೀರಿಯಾ ಶೇ.99.9 ನಾಶವಾಗುತ್ತದೆ ಎಂದು ಡಾ.ಸೈಯದ್ ಬೇಕರ್ ‘ವಿಜಯವಾಣಿ’ಗೆ ವಿವರಿಸಿದರು.
ಹಿಂದೆಯೇ ಸಂಶೋಧನೆ: ಕರೊನಾ ಕಾಣಿಸಿಕೊಳ್ಳುವ ಮುನ್ನವೇ 2002ರಲ್ಲಿ ಚೀನಾದಲ್ಲಿ ಸ್ಯಾಕ್ಸ್ ವೈರಾಣು ಕಾಣಿಸಿಕೊಂಡ ಸಮಯದಲ್ಲೇ ಈ ನ್ಯಾನೋ ಜೋನ್ ಸಂಶೋಧನೆಗೊಂಡಿತ್ತು. ಈಗ ಕಾಣಿಸಿರುವ ಕರೊನಾ ವೈರಸ್​ಗೂ, ಸ್ಯಾಕ್ಸ್ ವೈರಾಣುವಿಗೂ ಶೇ.82 ಸಾಮ್ಯತೆ ಇದೆ. ಹೀಗಾಗಿ ಕರೊನಾ ವೈರಾಣು ಕೊಲ್ಲಲು ನ್ಯಾನೋ ಜೋನ್ ಸಹಕಾರಿ ಆಗಲಿದೆ. ಐದು ವರ್ಷಗಳಿಂದ ಈ ಯಂತ್ರವನ್ನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮತ್ತಷ್ಟು ಉನ್ನತೀಕರಿಸಲಾಗಿದೆ. ಹೀಗಾಗಿ ಇದು ಕರೊನಾ ವೈರಾಣು ನಾಶಪಡಿಸಲು ಸಹಕಾರಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ವಾರಂಟೈನ್ ಇರಿಸಿದ, ಚಿಕಿತ್ಸೆ ನೀಡಿದ ಜಾಗವನ್ನು ಸ್ವಚ್ಛಗೊಳಿಸುವುದು ಅತಿ ಮುಖ್ಯ. ಸೋಂಕಿತರು ಗುಣಮುಖರಾದ ಬಳಿಕ ಕೊಠಡಿಯಲ್ಲಿ ಯಂತ್ರವಿಟ್ಟು ಗಾಳಿ ಹೋಗದಂತೆ ಸಂಪೂರ್ಣವಾಗಿ (ಏರ್​ಬ್ಲಾಕ್) ಮುಚ್ಚಬೇಕು. ಕೊಠಡಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ವಿವಿಧ ನಮೂನೆಯ ಯಂತ್ರಗಳನ್ನು 2ರಿಂದ 3 ಗಂಟೆಗಳ ಕಾಲ ಇಟ್ಟರೆ ವೈರಾಣು, ಬ್ಯಾಕ್ಟೀರಿಯಾ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಕ್ರಿಮಿನಾಶಕ ಸಿಂಪಡಿಸಿ ಕರೊನಾ ವೈರಸ್ ಸೋಂಕಿತರು-ಶಂಕಿತರನ್ನು ಇರಿಸಿದ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಆದರೆ, ಇದು ಸಂಪೂರ್ಣ ಸುರಕ್ಷಿತವಲ್ಲ. ಇದು ವೈರಾಣು ಉಳಿಯುವ ಸಾಧ್ಯತೆ ಜತೆಗೆ, ಪರಿಸರಕ್ಕೂ ಹಾನಿಕಾರಕ. ಕ್ರಿಮಿನಾಶಕ ಬಳಸುವುದರಿಂದ ಪರಿಸರ ಸಂರಕ್ಷಣೆಯಲ್ಲಿ ಅತಿಮುಖ್ಯ ಪಾತ್ರ ವಹಿಸಿರುವ ಓಝೋನ್ ಪದರಕ್ಕೂ ತೊಂದರೆಯಾಗುತ್ತದೆ. ಆದ್ದರಿಂದ ನ್ಯಾನೋ ತಂತ್ರಜ್ಞಾನದ ಯಂತ್ರಗಳನ್ನು ಬಳಸುವುದು ಸಹಕಾರಿ ಎನ್ನುತ್ತಾರೆ.
ಮೈಸೂರು ವಿವಿ ವಿದ್ಯಾರ್ಥಿ
ಮೈಸೂರು ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮಜೀವಶಾಸ್ತ್ರದ ಸ್ನಾತಕೋತ್ತರದ ಜತೆಗೆ ಪಿಎಚ್​ಡಿ ಪಡೆದ ಬಳಿಕ ಡಾ.ಸೈಯದ್ ಬೇಕರ್, ಕೆಲಕಾಲ ಸಿಎಫ್​ಟಿಆರ್​ಐನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದರು. ಬಳಿಕ ರಷ್ಯಾದ ವೈದ್ಯಕೀಯ ಸಂಸ್ಥೆ ನಡೆಸುವ ‘ಎಂ’ ಸ್ಕಾಲರ್​ಶಿಪ್​ನಲ್ಲಿ ಆಯ್ಕೆಯಾದ ಐವರಲ್ಲಿ ಇವರು ಒಬ್ಬರಾಗಿ 4 ವರ್ಷದ ಹಿಂದೆ ರಷ್ಯಾಕ್ಕೆ ತೆರಳಿ ಔಷಧ, ಸೂಕ್ಷಾ್ಮಣು ರೋಗಕಾರಕ ವಿರುದ್ಧದ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
ಆರ್. ಕೃಷ್ಣ
ಗೂಗಲ್‌ನಿಂದ ನಿರಾಶ್ರಿತರಿಗಾಗಿ ಹೊಸ ಫೀಚರ್‌: ಆಹಾರ ಮತ್ತು ಸ್ಥಳಾವಕಾಶ ತಿಳಿಯಲು ಸಹಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
