ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ 2 ದಿನಗಳಿಂದ ಹಳ್ಳ ಹಿಡಿದಿದ್ದ ವಿಧಾನಸಭೆ ಅಧಿವೇಶನ ಬುಧವಾರ ಸರಿದಾರಿಯಲ್ಲಿ ಸಾಗಿತು. ಸಂವಿಧಾನ ಕುರಿತು ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು, ಸಂವಿಧಾನದ ಸ್ವಾರಸ್ಯಗಳನ್ನು ಕಿವಿಗೊಟ್ಟು ಆಲಿಸಿದ್ದು ವಿಶೇಷವಾಗಿತ್ತು.
ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಹಠ ಹಿಡಿದು ಧರಣಿ ನಡೆಸಿದ್ದ ಕಾಂಗ್ರೆಸ್, ದಿನದ ಆರಂಭದಲ್ಲಿಯೂ ಹೋರಾಟ ಮುಂದುವರಿಸಿತ್ತು. ಸಂವಿಧಾನದ ಮೇಲೆ ಚರ್ಚೆ ಆರಂಭವಾಗುತ್ತಿದ್ದಂತೆ ಘೋಷಣೆ ಹಾಕುವ ಮೂಲಕ ಅಡ್ಡಿಪಡಿಸಿದರು. ಆದರೆ, ರಾಜಭವನಕ್ಕೆ ತೆರಳಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಲಾಪಕ್ಕೆ ಆಗಮಿಸಿ ಧರಣಿ ಹಿಂತೆಗೆದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡಿದರು.ಗುರುವಾರ ಬಜೆಟ್ ಮಂಡನೆಯಾಗಲಿದೆ, 7-8 ಬಿಲ್ ಮಂಡನೆಯಾಗಿದೆ. ಅದರ ಬಗ್ಗೆ ಚರ್ಚೆಯಾಗಬೇಕಾಗಿದೆ. ನಮ್ಮ ಅನೇಕ ಸದಸ್ಯರು ಕ್ಷೇತ್ರದ ಸಮಸ್ಯೆ ಮುಂದಿಟ್ಟಿದ್ದಾರೆ. ಸದನದಲ್ಲಿ ನಮ್ಮ ಜಾವಾಬ್ದಾರಿ ನಿರ್ವಹಣೆ ಮಾಡದೆ ಇದ್ದರೆ ಕರ್ತವ್ಯ ಲೋಪ ಎಸಗಿದಂತೆ ಆಗುತ್ತದೆ. ಹೀಗಾಗಿ ಅನಗತ್ಯ ಧರಣಿ ಬೇಡ ಎಂಬ ನಿರ್ಧಾರ ಮಾಡಿದ್ದೇವೆ. ಧರಣಿ ವಾಪಸ್ ಪಡೆದು, ಸಂಪೂರ್ಣ ಚರ್ಚೆಯಲ್ಲಿ ಭಾಗವಹಿಸುತ್ತೇವೆ. ರಾಜ್ಯಪಾಲರು ನಿಮಗೆ ಸಲಹೆ ನೀಡಿದರೆ ಆಗ ಕ್ರಮ ತೆಗೆದುಕೊಳ್ಳುವುದು ಎಂದು ಸ್ಪೀಕರ್ ಉದ್ದೇಶಿಸಿ ಸಿದ್ದರಾಮಯ್ಯ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ವ್ಯತ್ಯಾಸಗಳು ಇರುವುದು ಸಹಜ, ಅಭಿಪ್ರಾಯ ನೀಡಲು ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶವಿದೆ, ನೀವು ಮಾಡಿದ್ದು ಸರಿ ಇದೆ. ಜನರ ಹಿತದೃಷ್ಟಿಯಿಂದ ಸದನ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಧರಣಿ ಹಿಂಪಡೆದ ವಿರೋಧ ಪಕ್ಷದ ನಿರ್ಧಾರ ಸ್ವಾಗತಾರ್ಹ ಎಂದು ಸ್ಪೀಕರ್ ತಿಳಿಸಿದರು.
ಕೃಷಿ, ಕಾರ್ವಿುಕರ ಬಗ್ಗೆಯೂ ಚರ್ಚೆ
ಸಂವಿಧಾನ ವಿಚಾರವಾಗಿ ಹಮ್ಮಿಕೊಂಡಿರುವ ವಿಶೇಷ ಚರ್ಚೆ ಸ್ವಾಗತಾರ್ಹ, ಇದೇ ರೀತಿ ಬೇರೆ ಬೇರೆ ವಿಚಾರಗಳ ಬಗ್ಗೆಯೂ ವಿಶೇಷ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷ ಸದಸ್ಯರು ಒತ್ತಾಯಿ ಸಿದರು. ಸ್ಪೀಕರ್ ಕಾಗೇರಿ ಮಾತನಾಡಿ, ಪ್ರತಿ ಅಧಿವೇಶನ ಸಂದರ್ಭದಲ್ಲಿಯೂ ಪಕ್ಷ ರಾಜಕಾರಣ ಹೊರತಾಗಿ ಒಂದು ದಿನ ವಿಶೇಷ ಚರ್ಚೆ ನಡೆಯಬೇಕೆಂಬ ಅಪೇಕ್ಷೆ ಇದೆ. ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಅಪೇಕ್ಷೆ ಪಟ್ಟರೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಯಾವ ವಿಷಯ ಎಂದು ತೀರ್ವನಿಸಿ ಅವಕಾಶ ನೀಡಬಹುದು ಎಂದರು. ಕೃಷಿ, ಕಾರ್ವಿುಕ, ರೈತರು, ತುಳಿತಕ್ಕೊಳಗಾದ ಸಮಾಜದ ಬಗ್ಗೆ ಈ ರೀತಿ ವಿಶೇಷ ಚರ್ಚೆ ನಡೆಬೇಕೆಂಬಯ ಅಭಿಪ್ರಾಯವೂ ವ್ಯಕ್ತವಾಯಿತು.
ಉತ್ಸಾಹ ನೂರ್ಮಡಿ
ಸಂವಿಧಾನ ವಿಚಾರದ ಬಗ್ಗೆ ನಮಗೆಲ್ಲ ಗೊತ್ತಿದೆ, ಇವರದ್ದೇನು ಚರ್ಚೆ ಎಂದು ಮಂಗಳವಾರ ಮೂಗು ಮುರಿದಿದ್ದ ಪ್ರತಿಪಕ್ಷದ ಕೆಲವು ಸದಸ್ಯರು ಬುಧವಾರ ಉತ್ಸಾಹದಿಂದ ಕಲಾಪದಲ್ಲಿ ಪಾಲ್ಗೊಂಡು ಸಂವಿಧಾನ ಕುರಿತ ಮಾತುಗಳನ್ನು ಕಿವಿ ತುಂಬಿಕೊಂಡರು. ಅನೇಕರು ಈ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂದು ಹಲವು ದಿನಗಳಿಂದ ಅಧ್ಯಯನ ಮಾಡಿಕೊಂಡು ಬಂದಿದ್ದರಲ್ಲದೆ, ಮತ್ತೆ ಕೆಲವರು ಸಂವಿಧಾನ ಪುಸ್ತಕ ತಿರುವಿಹಾಕಿ ನೋಟ್ ಮಾಡಿಕೊಳ್ಳುತ್ತಿದ್ದರು. ವಿಶೇಷವೆಂಬಂತೆ ಸಂವಿಧಾನ ಪುಸ್ತಕಗಳನ್ನು ಮೊಗಸಾಲೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಶಾಸಕರ ಉತ್ಸಾಹ ಕಂಡು ಇನ್ನು ಒಂದು ದಿನ ಇದೇ ವಿಷಯದ ಮೇಲೆ ಚರ್ಚೆಗೆ ಅವಕಾಶ ಕೊಡಬೇಕೆಂಬ ಕೋರಿಕೆಯೂ ಪ್ರತಿಪಕ್ಷದಿಂದ ಕೇಳಿಬಂತು. ಮಧ್ಯಾಹ್ನದ ಭೋಜನ ವಿರಾಮವನ್ನು 45 ನಿಮಿಷಕ್ಕೆ ಸೀಮಿತಗೊಳಿಸಲಾಯಿತು. ಜತೆಗೆ ರಾತ್ರಿ ಇಡೀ ನಡೆಯಲಿ ಎಂದು ಮಾಜಿ ಸ್ಪೀಕರ್ ರಮೇಶ್​ಕುಮಾರ್ ಸಲಹೆ ನೀಡಿದರು ಮತ್ತು ಆಡಳಿತ ಪಕ್ಷದ ಶಾಸಕ ಕುಡಚಿ ರಾಜೀವ್ ಮಾತುಗಳನ್ನು ಮೆಚ್ಚಿದರು.
ಸಭಾಪತಿ ಭರವಸೆ, ಪ್ರತಿಪಕ್ಷಗಳ ಧರಣಿ ವಾಪಸ್
ಮೇಲ್ಮನೆಯಲ್ಲಿ ಬುಧವಾರ ಕಾರ್ಯಕಲಾಪದ ಆರಂಭದಲ್ಲಿಯೇ ಪ್ರತಿಪಕ್ಷಗಳ ಧರಣಿ ಮಧ್ಯೆ ಜೆಡಿಎಸ್​ನ ಬಸವರಾಜ ಹೊರಟ್ಟಿ ಮಾತನಾಡಿ, ಸರ್ಕಾರ ಮೊಂಡುತನ ಬಿಟ್ಟು ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳ ಚರ್ಚೆಗೆ ಅವಕಾಶ ಕೊಡಬೇಕು. ಇಲ್ಲವಾದರೆ ಬಜೆಟ್ ಅಧಿವೇಶನಕ್ಕೆ ಬರುವುದಿಲ್ಲವೆಂದು ಎಚ್ಚರಿಸಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ವ್ಯವಸ್ಥಿತ ಸಭೆ ಹಾಗೂ ಚರ್ಚೆಗೆ ಸರ್ಕಾರ ಸಿದ್ಧವಿದ್ದು, ಸದಸ್ಯರಿಗೆ ಸ್ಪಷ್ಟೀಕರಣ ನೀಡಲು ಅವಕಾಶ ಕೊಡಿ ಎಂದು ಕೋರಿದರು. ‘ವೀರ ಸಾರ್ವಕರ್ ಸ್ಪೂರ್ತಿಯ ಕೇಂದ್ರ’ವೆಂದು ಬಿಜೆಪಿಯ ರವಿಕುಮಾರ್ ಮಾತಿಗಿಳಿದಾಗ ಭಾಷಣ ಬೇಡವೆಂದು ಪ್ರತಿಪಕ್ಷಗಳು ತಕರಾರು ತೆಗೆದರೆ, ಆಡಳಿತ ಪಕ್ಷದವರು ಆಕ್ಷೇಪಿಸಿದರು. ಇದರಿಂದಾಗಿ ಪರಸ್ಪರ ಮಾತಿನ ಸಮರ ಸೃಷ್ಟಿಯಾಯಿತು. ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ದೊರೆಸ್ವಾಮಿಗೆ ಸದನದಲ್ಲೇ ಅವಮಾನಿಸಿದ ಪ್ರಕರಣವನ್ನು ನೀತಿ ನಿರೂಪಣಾ ಸಮಿತಿಗೆ ಒಪ್ಪಿಸಬೇಕು ಎಂದು ಮನವಿದರು. ಪರಿಶೀಲಿಸಿ ನಿರ್ಧರಿಸುವ ಭರವಸೆ ಸಭಾಪತಿಯಿಂದ ಸಿಕ್ಕ ಬಳಿಕ ಪ್ರತಿಪಕ್ಷಗಳು ಧರಣಿ ವಾಪಸ್ ಪಡೆದವು.
ಸ್ಪೀಕರ್ ಭಾಷಣದಲ್ಲಿ ಲೋಪ ಹುಡುಕಿದ ಎಚ್​ಕೆಪಿ
ಬೆಂಗಳೂರು: ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಸ್ಪೀಕರ್ ಕಾಗೇರಿ ಮಾಡಿದ ಪ್ರಾಸ್ತಾವಿಕ ಭಾಷಣದಲ್ಲಿನ ಲೋಪವನ್ನು ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಹೆಕ್ಕಿ ತೆಗೆದರು. ‘ಸದನದಲ್ಲಿ ಪ್ರತಿಭಟನೆ ನಡೆಯುತ್ತಿರುವಾಗ ನೀವು ಭಾಷಣ ಮಾಡಿದ್ದೀರಿ. ಇದರಲ್ಲಿ ನಿಮ್ಮ ಪೂರ್ವಾಶ್ರಮದ ಪ್ರಭಾವ ಎದ್ದು ಕಾಣುತ್ತಿದೆ. ಸ್ವಾತಂತ್ರ್ಯ ಹೋರಾಟ, ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಜಕೀಯ ಮನಸು ನಿಮ್ಮನ್ನು ತಡೆದಿರಬಹುದು’ ಎಂದು ಸ್ಪೀಕರ್​ರನ್ನು ಪಾಟೀಲ್ ಮಾತಿನಲ್ಲೇ ಚುಚ್ಚಿದರು. ‘ವಿಶೇಷವಾಗಿ ಸರ್ ಬಿ.ಎನ್.ರಾವ್ ಕೊಡುಗೆ ಅಪಾರವಾದುದು. ಮೂಲತಃ ಮಂಗಳೂರಿನವರಾದ ಇವರು ಭಾರತ ಸಂವಿಧಾನ ರಚನಾ ಸಭೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು ಹಾಗೂ ಶ್ರೀಯುತರು ರಚಿಸಿದ ಸಂವಿಧಾನದ ಮೂಲ ಕರಡು ಪ್ರತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸಲಾಗಿತ್ತು. ಈ ಮೂಲ ಕರಡನ್ನು ರಚನಾ ಸಭೆಯಲ್ಲಿ ರ್ಚಚಿಸಿ ಅಂಬೇಡ್ಕರ್ ನೇತೃತ್ವದಲ್ಲಿ ಹಲವಾರು ಮಾರ್ಪಾಡು ಮಾಡಿ ಭಾರತೀಯರ ಸರ್ವತೋಮುಖ ಅಭಿವೃದ್ಧಿಗಾಗಿ ಸಮರ್ಥ, ಸಮಗ್ರವಾದ ಸಂವಿಧಾನ ರಚಿಸಿದ್ದಾರೆ’ ಎಂದು ಸ್ಪೀಕರ್ ಭಾಷಣ ಮಾಡಿದ್ದರು. ಕೆಲ ಅಂಶಗಳನ್ನು ತೆಗೆದು ತಿದ್ದುಪಡಿ ಮಾಡಿ, ಲಿಖಿತ ಭಾಷಣ ಕಳುಹಿಸುವುದಾಗಿ ಸ್ಪೀಕರ್ ಭರವಸೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nine =
Remember me
