ಹರೀಶ್ ಬೇಲೂರುಬೆಂಗಳೂರು:ಅನಾರೋಗ್ಯಕ್ಕೆ ಕಾರಣ ಪತ್ತೆ ಹಚ್ಚುವ ರೋಗನಿರ್ಣಯ (ಡಯಾಗ್ನಾಸ್ಟಿಕ್) ಕೇಂದ್ರಗಳೇ ಹೊಸ ಕಾಯಿಲೆಗಳನ್ನು ಅಂಟಿಸುತ್ತಿರುವ ಆತಂಕಕಾರಿ ಮಾಹಿತಿ ಬಯಲಾಗಿದೆ. ಹೌದು, ಕೇಂದ್ರ ಸರ್ಕಾರ ಅಧೀನದ ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್​ಬಿ) ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಸಿಸ್ ಸೆಂಟರ್​ಗಳು ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ರೋಗಿಗಳ ದೇಹಕ್ಕೆ ವಿಕಿರಣ ತೂರಿಸಿ ಹೊಸ ಕಾಯಿಲೆಗಳು ಅಂಟಲು ಕಾರಣವಾಗುತ್ತಿವೆ.
ಮನಬಂದಂತೆ ಸಿಟಿ ಸ್ಕ್ಯಾನ್, ಕ್ಷ-ಕಿರಣ ಹಾಗೂ ಮ್ಯಾಮೊಗ್ರಾಫಿ ಯಂತ್ರಗಳನ್ನು ಬಳ ಸುತ್ತಿರುವುದರಿಂದ ಸಾರ್ವ ಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಉಂಟಾಗಿದೆ. ರಾಜ್ಯದಲ್ಲಿ ಅಂದಾಜು 20 ಸಾವಿರ ಖಾಸಗಿ ಆಸ್ಪತ್ರೆಗಳು ಮತ್ತು ಡಯಾಗ್ನಾಸ್ಟಿಕ್ ಸೆಂಟರ್​ಗಳಿವೆ. ಹೊಸದಾಗಿ ಇವುಗಳನ್ನು ಪ್ರಾರಂಭಿಸುವ ಮುನ್ನ ಎಇಆರ್​ಬಿ ಅನುಮತಿ ಕಡ್ಡಾಯವಾಗಿದೆ. ಈ ಯಂತ್ರಗಳ ಅಳವಡಿಕೆಗೆ 350 ಚದರಡಿ ಜಾಗ ಹೊಂದಿರುವುದು, ಅಗತ್ಯ ಪರವಾನಗಿ ಪಡೆಯುವುದು, ಐದು ವರ್ಷಕ್ಕೊಮ್ಮೆ ಪರವಾನಗಿ ನವೀಕರಿಸುವುದು, 2 ವರ್ಷಕ್ಕೊಮ್ಮೆ ಗುಣಮಟ್ಟ ಪರಿಶೀಲಿಸುವುದು ಸೇರಿ ಇತರ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಪಡೆಯಬೇಕು ಎಂಬ ನಿಯಮಗಳಿವೆ. ಜತೆಗೆ, ಪ್ರಾಮಾಣಿತ ಕಾರ್ಯಾಚರಣೆ ವಿಧಾನದಲ್ಲಿ (ಎಸ್​ಒಪಿ) ಕಾರ್ಯನಿರ್ವಹಿಸಬೇಕು. ಆದರೆ, ಇದ್ಯಾವ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಆರೋಗ್ಯ ಆತಂಕ: ಆರೋಗ್ಯ ಸಮಸ್ಯೆಗಳ ಸಂಬಂಧಪಟ್ಟಂತೆ ಎಕ್ಸ್ ರೇ ಪರೀಕ್ಷೆ ಮಾಡಿಸುವ ಸಂದರ್ಭದಲ್ಲಿ ಯಂತ್ರಗಳಿಂದ ಹೊರಸೂಸುವ ವಿಕಿರಣಗಳಿಂದ ರೋಗಿಗಳು, ಕ್ಯಾನ್ಸರ್, ಚರ್ಮರೋಗ, ಹೃದಯ, ಶ್ವಾಸಕೋಶ ಸೇರಿ ಇತರ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ. ಈ ಕಾರಣಕ್ಕೆ ಹಲವು ಕಟ್ಟುನಿಟ್ಟುಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ಹಲವರು ನಕಲಿ ಯಂತ್ರಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ಸೇವೆ ನೀಡುತ್ತಿರುವ ಬಗ್ಗೆಯೂ ಆರೋಪಗಳು ಕಳವಳಕಾರಿಯಾಗಿವೆ.
ನಿಯಮ ಪಾಲಿಸದಿದ್ದರೆ ಶಿಕ್ಷೆ ಏನು?
ಸಿಟಿ ಸ್ಕ್ಯಾನ್, ಕ್ಷ- ಕಿರಣ ಹಾಗೂ ಮ್ಯಾಮೊಗ್ರಾಫಿ ಯಂತ್ರಗಳನ್ನು ಅಳವಡಿಸಿ ರೋಗಿಗಳಿಗೆ ಸೇವೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಾಸ್ಟಿಕ್ ಸೆಂಟರ್​ಗಳು ಎಇಆರ್​ಬಿ ನಿಯಮ ಪಾಲಿಸದಿದ್ದರೆ ಮೊದಲ ಮತ್ತು ಎರಡನೇ ಬಾರಿ 1,500 ರೂ. ದಂಡ ಹಾಕಿ ಸೂಚನಾ ಪತ್ರ ನೀಡಲಾಗುತ್ತದೆ. 3ನೇ ಬಾರಿಯೂ ನಿಯಮ ಉಲ್ಲಂಘನೆಯಾದರೆ ಇವುಗಳನ್ನು ಶಾಶ್ವತವಾಗಿ ಮುಚ್ಚಿಸಿ ಐದು ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ.
ನಿರ್ದೇಶನಾಲಯಕ್ಕೆ ಸಿಕ್ಕಿಲ್ಲ ಅನುಮತಿ
ಎಇಆರ್​ಬಿ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯ ನಡುವಿನ 2018ರ ಡಿ.22ರಂದು ಒಪ್ಪಂದದಂತೆ ಕ್ಷ- ಕಿರಣ ವಿಕಿರಣ ಸುರಕ್ಷತಾ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ಇದನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ತರಲಾಗಿದೆ. ರಾಜ್ಯದಲ್ಲಿರುವ ಕ್ಷ- ಕಿರಣ ಕೇಂದ್ರಗಳು, ಸಿಟಿ ಸ್ಕಾ್ಯನ್ ಮತ್ತು ಮ್ಯಾಮೊಗ್ರಾಫಿ ಕೇಂದ್ರಗಳ ನೋಂದಣಿ, ಎಇಆರ್​ಬಿಯಿಂದ ಅನುಮತಿ ಪಡೆದು ಕಾರ್ಯಾಚರಣೆ ಮಾಡುತ್ತಿದೆಯೋ ಇಲ್ಲವೋ ಎಂಬುದರ ಪರಿಶೀಲನೆ, ಕ್ಷ- ಕಿರಣ ಯಂತ್ರಗಳ ಪರಿವೀಕ್ಷಣೆ, ನಿಯಮಗಳ ಪಾಲನೆ ಮೇಲೆ ನಿಗಾ, ಎಇಆರ್​ಬಿ ನೋಂದಣಿ ಮತ್ತು ಎಇಆರ್​ಬಿ ನಿಯಮ ಪಾಲಿಸದ ಕೇಂದ್ರಗಳಿಗೆ ಸೂಚನೆ ಪತ್ರ ನೀಡುವುದು, ನಿಯಮ ಪಾಲಿಸದಿರುವ ಕೇಂದ್ರಗಳನ್ನು ಸ್ಥಗಿತಗೊಳಿಸುವುದು, ಹೊಸ ಕೇಂದ್ರಗಳಿಗೆ ಅನುಮತಿ ನೀಡುವುದು, ಜಿಲ್ಲಾ ಕೇಂದ್ರಗಳಿಂದ ಮಾಸಿಕ ವರದಿ ತರಿಸಿಕೊಂಡು ಎಇಆರ್​ಬಿಗೆ ಸಲ್ಲಿಸುವುದು, ಕ್ಷ-ಕಿರಣ ಹೊರಸೂಸುವ ಯಂತ್ರಗಳಿಂದ ಅಪಾಯ ತಡೆಯುವುದು ನಿರ್ದೇಶನಾಲಯದ ಜವಾಬ್ದಾರಿಯಾಗಿದೆ. ಆದರೆ, ಎಇಆರ್​ಬಿಯಿಂದ ಅನುಮತಿ ಸಿಗದಿರುವ ಹಿನ್ನೆಲೆಯಲ್ಲಿ ನಿರ್ದೇಶನಾಲಯವು ಈವರೆಗೆ ಈ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಸಿಸ್ ಸೆಂಟರ್​ಗಳು ಹಣ ಮಾಡುವ ದಂಧೆಯಲ್ಲಿ ತೊಡಗಿಕೊಂಡಿವೆ ಎಂದು ದೂರಲಾಗಿದೆ.
ನಿರ್ದೇಶನಾಲಯ ಉಳಿಸಿ
ಆದೇಶ ಉಲ್ಲಂಘನೆ ಆರೋಪದ ಮೇರೆಗೆ ಭವಿಷ್ಯದಲ್ಲಿ ನಿರ್ದೇಶನಾಲಯವನ್ನು ಎಇಆರ್​ಬಿ ಶಾಶ್ವತವಾಗಿ ಮುಚ್ಚುವ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ನಡುವೆ, ನಿರ್ದೇಶನಾಲಯವನ್ನು ಮುಚ್ಚದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಸರ್ಕಾರಿ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಕೇಂದ್ರ ಸಂಘ ಪತ್ರ ಬರೆದು ಮನವಿ ಮಾಡಿದೆ.
ಅನರ್ಹರ ನೇಮಕ ಆರೋಪ
ಕ್ಷ- ಕಿರಣ ವಿಕಿರಣ ಸುರಕ್ಷತಾ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಗೆ ನೇಮಕಗೊಳ್ಳುವ ವ್ಯಕ್ತಿಗೆ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಮತ್ತು ಎಇಆರ್​ಬಿ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಅಂತೆಯೇ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿರಬೇಕು ಅಥವಾ ರೇಡಿಯಾಲಜಿಕಲ್ ಭೌತಶಾಸ್ತ್ರದಲ್ಲಿ ಎಂಎಸ್ಸಿ ಡಿಪ್ಲೊಮಾ ಪಡೆದಿರಬೇಕು. ಪ್ರತಿಷ್ಠಿತ ಅಕಾಡೆಮಿಕ್ ಅಥವಾ ಸಂಶೋಧನೆಗಳ ಸಂಸ್ಥೆಗಳಲ್ಲಿ ವಿಕಿರಣ ಸುರಕ್ಷತೆ ಸಂಬಂಧ ಐದು ವರ್ಷ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕೆಂದು ಸೂಚಿಸಲಾಗಿದೆ. ಆದರೆ, ಎಇಆರ್​ಬಿ ನಿಯಮ ಉಲ್ಲಂಘಿಸಿ ಅನರ್ಹ ಅಧಿಕಾರಿಯನ್ನು ನಿರ್ದೇಶನಾಲಯ ಹುದ್ದೆಗೆ ನೇಮಿಸಲಾಗಿದೆ. ಈ ಕ್ರಮದಿಂದ ಎಇಆರ್​ಬಿ ಯಾವುದೇ ಕಾರ್ಯಾಚರಣೆ ನಡೆಸದಂತೆ ನಿರ್ದೇಶನಾಲಯಕ್ಕೆ ಸೂಚಿಸಿ ರುವುದು ಕೇಂದ್ರದ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗಿ ಪರಿಣಮಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
