ಬೆಂಗಳೂರು:ರಾಜ್ಯದ ಆರ್ಥಿಕ ಲೆಕ್ಕಪತ್ರದ ಮುನ್ನೋಟವನ್ನು ಜನರ ಮುಂದಿಡುವ ಆಯವ್ಯಯದಲ್ಲಿ ರಾಜಕೀಯ ಟೀಕೆ ಟಿಪ್ಪಣಿ, ಹಿಂದಿನ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಹೊಸ ಪರಂಪರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಮುನ್ನುಡಿ ಬರೆದಿದ್ದಾರೆ. ಆರ್ಥಿಕ ಪರಿಸ್ಥಿತಿ, ಯೋಜನೆಗಳು ಸೇರಿ ವಿವಿಧ ವಿಚಾರವಾಗಿ 50ಕ್ಕಿಂತ ಹೆಚ್ಚು ಬಾರಿ ಹಿಂದಿನ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ. 2023ರ ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ್ದ ವೇಳೆ 2022-23ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಿದ್ಧಪಡಿಸಿ ಬಿಡುಗಡೆಗೊಳಿಸಿತ್ತು. ಅಲ್ಲಿನ ಅನೇಕ ಅಂಶಗಳು ಅಥವಾ ವಿಶ್ಲೇಷಣೆ, ಆತಂಕಗಳು, ಮುನ್ನೆಚ್ಚರಿಕೆಗಳು ಸಿದ್ದರಾಮಯ್ಯ ಬಜೆಟ್​ನಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ, ಇನ್ನು ಕೆಲವು ವಿಚಾರಗಳಲ್ಲಿ ಬಜೆಟ್ ಭಾಷಣಕ್ಕೂ ಫೆಬ್ರವರಿಯಲ್ಲಿ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯಲ್ಲಿರುವ ಅಂಶಕ್ಕೂ ಸಾಕಷ್ಟು ವೈರುಧ್ಯವಿದೆ.
ಇತರೆ ಅಂಶಗಳು:ಆರ್ಥಿಕ ಸಮೀಕ್ಷೆಯಲ್ಲಿರುವ ಸಂಗತಿಗಳೆಂದರೆ ಸ್ಟಾರ್ಟ್​ಅಪ್ ರಾಜಧಾನಿಯಾಗಿರುವ ಬೆಂಗಳೂರು ದೇಶದ 100 ಯುನಿಕಾರ್ನ್​ಗಳ ಪೈಕಿ 40 ಯುನಿಕಾರ್ನ್​ಗಳನ್ನು ಹೊಂದಿ ಉತ್ತಮ ಸ್ಥಾನಮಾನ ಪಡೆದಿದೆ. ಕೃಷಿ ವಲಯದ ಬೆಳವಣಿಗೆ ದರ 2021-22ನೇ ಸಾಲಿನ ಶೇ.8.7ಕ್ಕೆ ಹೋಲಿಸಿದರೆ ಶೇ.5.5ರಷ್ಟು ಬೆಳವಣಿಗೆಯಾಗಬಹುದೆಂದು ಅಂದಾಜಿಸಲಾಗಿದೆ. ಕೈಗಾರಿಕೆ ಬೆಳವಣಿಗೆ ದರ ಶೇ.10.3ರಿಂದ ಶೇ.5.1ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.
2019ರ ಅಕ್ಟೋಬರ್​ನಿಂದ 2022ರ ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯವು 39.36 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಆಕರ್ಷಿಸಿದೆ. ಇದು ದೇಶದ ಶೇ.23ರಷ್ಟಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
2022ರ ಏಪ್ರಿಲ್​ನಿಂದ ಡಿಸೆಂಬರ್​ವರೆಗೆ 1.95 ಲಕ್ಷ ಉದ್ಯೋಗ ಸೃಷ್ಟಿಗಾಗಿ 2.37 ಲಕ್ಷ ಕೋಟಿ ರೂ. ಮೌಲ್ಯದ 393 ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
2022-23ನೇ ಸಾಲಿನ ನವೆಂಬರ್ ಅಂತ್ಯಕ್ಕೆ ಜಲ ಜೀವನ್ ಮಿಷನ್ ಮೂಲಕ 2,204 ಕೋಟಿಗಳಷ್ಟು ವೆಚ್ಚ ಮಾಡಿ 12.33 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಕೊಳಾಯಿ ಮೂಲಕ ಕುಡಿಯುವ ನೀರು ಒದಗಿಸಲಾಗಿದೆ. ರಾಜ್ಯದಲ್ಲಿ ಅಂದಾಜು 2,20,000 ಸಾರ್ವಜನಿಕ ಗ್ರಾಮೀಣ ಕುಡಿಯುವ ನೀರಿನ ಮೂಲ ಸ್ಥಾಪಿಸಲಾಗಿದೆ.
2022ರ ನವೆಂಬರ್​ವರೆಗೆ 39.89 ಲಕ್ಷ ರೈತರು ಕೃಷಿ ಯಂತ್ರ ಧಾರೆ ಯೋಜನೆ ಅಡಿಯಲ್ಲಿ ಸದುಪಯೋಗ ಪಡೆದಿದ್ದಾರೆ. ಇನ್ನು ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲು (ಕೇಂದ್ರದ ಆಯವ್ಯಯದ ಪ್ರಕಾರ) 2021-22ರಲ್ಲಿ (ಪರಿಷ್ಕೃತ ಅಂದಾಜು) 27,134.94 ಕೋಟಿಯಿಂದ 2022-23 (ಆಯವ್ಯಯ ಅಂದಾಜು) ರಲ್ಲಿ ಶೇ.9.76ರಷ್ಟು ಬೆಳವಣಿಗೆಯಾಗಿದೆ.
ಫೆಬ್ರವರಿಯಲ್ಲಿ ನೀಡಿದ್ದ ಎಚ್ಚರಿಕೆ:15ನೇ ಹಣಕಾಸು ಆಯೋಗದ ಅವಧಿಯಲ್ಲಿ ಒಂದು ಪ್ರಮುಖ ಮತ್ತು ಗಂಭೀರ ಸವಾಲು ಎಂದರೆ ಕೇಂದ್ರದ ತೆರಿಗೆಗಳನ್ನು ಭಾಗಿಸಬಹುದಾದ ಗುಣಕದಲ್ಲಿ ರಾಜ್ಯದ ಪಾಲು ಕುಸಿತವಾಗಿದೆ. ಕರ್ನಾಟಕವು ಕೇಂದ್ರ ತೆರಿಗೆ ವರ್ಗಾವಣೆಯಲ್ಲಿ ಶೇಕಡಾ ಶೇ.24.5ರಷ್ಟು ಕುಸಿತ ಕಾಣಬಹುದು. ಇದು ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ನಿಭಾಯಿಸಲು ತೀವ್ರ ಸವಾಲು ಒಡ್ಡಲಿದೆ. 15ನೇ ಹಣಕಾಸು ಆಯೋಗದ ಅನುದಾನದ ಒಟ್ಟಾರೆ ಪಾಲು ಶೇ.3.7ರಷ್ಟು ಇದೆ. ಇದು 14ನೇ ಹಣಕಾಸು ಆಯೋಗಕ್ಕೆ ಶೇ.4.71ರಷ್ಟು ಕಡಿಮೆಯಾಗಿದೆ. ಇದೇ ಸಂಗತಿಯನ್ನು ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಬಳಸಿಕೊಂಡಂತಿದೆ.
ಕಠಿಣ ಪರಿಣಾಮದ ಅನಿವಾರ್ಯತೆ:ವಿತ್ತೀಯ ಹೊಣೆಗಾರಿಕೆ ಶಾಸನ ಇದ್ದರೂ ಅದಕ್ಕೆ ವಿರುದ್ಧವಾಗಿ ಕೆಲವು ಆದಾಯ ವೆಚ್ಚಗಳನ್ನು ಸಮೀಕರಣಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯವು ಕಠಿಣ ಪರಿಣಾಮ ಕೈಗೊಳ್ಳಬೇಕಾಗಿದೆ ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯ ಮಂಡಿಸಿತ್ತು. ಕರ್ನಾಟಕದಲ್ಲಿ ಸಹಾಯಧನಗಳು ಇತರ ರಾಜ್ಯಗಳಿಗಿಂತ ಹೆಚ್ಚಿನ ಮಟ್ಟದಲ್ಲಿದೆ. ಅದರೊಳಗೆ ಅರ್ಹವಲ್ಲದ ಸಬ್ಸಿಡಿಗಳು ದೊಡ್ಡದಾಗಿ ಕಾಣಿಸುತ್ತವೆ. ಈ ಸಬ್ಸಿಡಿಗಳನ್ನು ಸಮೀಕರಣಗೊಳಿಸುವುದು ಅಭಿವೃದ್ಧಿಯ ಒಂದು ಪ್ರಮುಖ ಅಂಶವಾಗಿದೆ ಎಂದಿತ್ತು.
ಹಾಗೆಯೇ, ಕೇಂದ್ರ ಸರ್ಕಾರದಿಂದ ಬರುವ ರಾಜ್ಯದ ಪಾಲು ಕಡಿಮೆಯಾಗಿರುವುದರೊಂದಿಗೆ ಮತ್ತು ಒಟ್ಟು ದೇಶೀಯ ಉತ್ಪನ್ನ ಜಾರಿಯಲ್ಲಿರುವುದರಿಂದ ರಾಜ್ಯದ ಸ್ವಂತ ತೆರಿಗೆ ರಾಜಸ್ವದ ಮೇಲಿನ ಒತ್ತಡವು ಹಲವು ಪಟ್ಟು ಹೆಚ್ಚಾಗಿದೆ. ರಾಜ್ಯವು ಸಂಪನ್ಮೂಲಕ್ಕೆ ಪರ್ಯಾಯ ಮೂಲಗಳನ್ನು ಹುಡುಕುವ ಅವಶ್ಯಕತೆ ಇದೆ. ಮಾಹಿತಿ ತಂತ್ರಜ್ಞಾನ ಸೇವೆಗಳ ಬಳಕೆಯ ಮೂಲಕ ತೆರಿಗೆ ಆಡಳಿತವನ್ನು ಸುಧಾರಿಸುವುದು ಸಹ ರಾಜ್ಯಕ್ಕಿರುವ ಮಾರ್ಗವಾಗಿದೆ ಎಂದು ಫೆಬ್ರವರಿಯ ವರದಿಯಲ್ಲಿ ಯೋಜನೆ ಇಲಾಖೆ ಅಭಿಪ್ರಾಯಪಟ್ಟಿದೆ. ಈ ಎಚ್ಚರಿಕೆ ನಡುವೆಯೂ ಇದೀಗ ಗ್ಯಾರಂಟಿ, ಸಬ್ಸಿಡಿ, ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ.
ಸಿದ್ದರಾಮಯ್ಯ ಟೀಕೆಗಳು:ರಾಜ್ಯದ ಅರ್ಥ ವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿದೆ. ವಿತ್ತೀಯ ಶಿಸ್ತನ್ನು ಗಾಳಿಗೆ ತೂರಲಾಗಿದೆ. ಬದ್ಧ ವೆಚ್ಚಗಳಿಗೆ ಕಡಿವಾಣ ಹಾಕಿ ಜನಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಡೀಕರಿಸಲು ವಿಫಲವಾಗಿದೆ. ಹಿಂದಿನ ಸರ್ಕಾರದಿಂದ ರಾಜ್ಯದ ಆರ್ಥಿಕತೆ ಕತ್ತಲೆಯಲ್ಲಿ ಮುಳುಗಿದೆ ಎಂಬಿತ್ಯಾದಿಯಾಗಿ ಸಾಲುಸಾಲು ಟೀಕೆ ಮಾಡಲಾಗಿದೆ.
ಆರ್ಥಿಕ ಸಮೀಕ್ಷೆಯಲ್ಲಿ ರಾಜ್ಯದ ಆಂತರಿಕ ಉತ್ಪನ್ನವು 2021-22ರಲ್ಲಿ 19.62 ಲಕ್ಷ ಕೋಟಿಗಳಿದ್ದು, 2022-23ರಲ್ಲಿ ಶೇ.14.2ರ ಬೆಳವಣಿಗೆಯೊಂದಿಗೆ 22.41 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದೇ ಅವಧಿಯಲ್ಲಿ ತಲಾದಾಯವು 2,65,623 ರೂ.ನಿಂದ 3,01,673 ರೂ.ಗೆ. ಏರಿದೆ. ಇದು ಭಾರತದ ತಲಾದಾಯಕ್ಕಿಂತ ಶೇ.77ರಷ್ಟು ಹೆಚ್ಚು ಎಂದು ವಿವರಿಸಲಾಗಿದೆ. ವಿತ್ತೀಯ ಕೊರತೆಯನ್ನು ರಾಜ್ಯದ ಆಂತರಿಕ ಉತ್ಪನ್ನದಲ್ಲಿ ಶೇ.4ಕ್ಕಿಂತ ಕೆಳಮಟ್ಟದಲ್ಲಿ ನಿಯಂತ್ರಿಸಲು ಯಶಸ್ವಿಯಾಗುವ ಮೂಲಕ ಉತ್ತಮ ಆರ್ಥಿಕತೆ ಹೊಂದಿರುತ್ತದೆ. ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕವು ಕಡಿಮೆ ವಿತ್ತೀಯ ಕೊರತೆ ದಾಖಲಿಸಿದೆ. 2021-22ರಲ್ಲಿ ಆಂಧ್ರ (ಶೇ.3.50), ತೆಲಂಗಾಣ (ಶೇ.4), ತಮಿಳುನಾಡು (ಶೇ.4.80)ಗೆ ಹೋಲಿಸಿದರೆ ಕರ್ನಾಟಕದ ವಿತ್ತೀಯ ಕೊರತೆ (ಶೇ.3.30) ಇದೆ.
ಹಿಂದೂಗಳು ಪೂಜೆ ಮಾಡಲು ಪೊಲೀಸ್​-ಬಿಬಿಎಂಪಿ ಅನುಮತಿ ಬೇಕೇ?: ವಿವಾದ ಸೃಷ್ಟಿಸಿದ್ದ ಪೊಲೀಸರ ನೋಟಿಸ್​​​ಗೆ ಯತ್ನಾಳ್​ ಪ್ರಶ್ನೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × two =
Remember me
