ಬೆಂಗಳೂರು:ಬಾಕಿ ವೇತನ ಪಾವತಿ ಹಾಗೂ ಸೇವಾ ಭದ್ರತೆಗೆ ಆಗ್ರಹಿಸಿ ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿ ಗುರುವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯದ 167 ಡಯಾಲಿಸಿಸ್ ಕೇಂದ್ರಗಳು ಬಂದ್ ಆಗುವ ಸಾಧ್ಯತೆ ಇದ್ದು, ರೋಗಿಗಳು ಪರದಾಡಬೇಕಾಗುತ್ತದೆ.
ಸರ್ಕಾರ ಈ ಹಿಂದೆ ಕರೊನಾ ಕಾರಣ ನೀಡಿ ವೇತನಕ್ಕೆ ಕತ್ತರಿ ಹಾಕಿತ್ತು. ಈ ಹಿನ್ನೆಲೆ ಕಳೆದ ಎರಡೂವರೆ ವರ್ಷಗಳಿಂದ ಸಿಬ್ಬಂದಿ ಅರ್ಧ ಸಂಬಳ ಪಡೆದು ಕೆಲಸ ಮಾಡುತ್ತಿದ್ದರು. ಇದೀಗ ಕಳೆದ 4 ತಿಂಗಳಿಂದ ವೇತನವನ್ನೇ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಈ ಕುರಿತು ಹಲವು ಬಾರಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಯಾವುದಕ್ಕೂ ಪ್ರತಿಕ್ರಿಯೆ ದೊರೆಯದ ಕಾರಣ ಅನಿವಾರ್ಯವಾಗಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಬೇಕಾಗಿದೆ ಎಂದು ಸಿಬ್ಬಂದಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಈ ಹಿಂದೆ ಡಯಾಲಿಸಿಸ್ ಕೇಂದ್ರ ನಿರ್ವಹಣೆ ಮಾಡುತ್ತಿದ್ದ ಬಿಆರ್‌ಎಸ್ ಸಂಸ್ಥೆಗೆ 2021ರಲ್ಲಿ ಸರ್ಕಾರದಿಂದ ಸರಿಯಾಗಿ ಹಣ ಬಿಡುಗಡೆ ಮಾಡದಿದ್ದರಿಂದ ಸಂಸ್ಥೆ ನಿರ್ವಹಣೆ ಕೈ ಬಿಟ್ಟಿತು. ನಂತರ ಯಾವುದೇ ಟೆಂಡರ್ ಕರೆಯದೇ ಈ ಹಿಂದೆ 45 ಕೇಂದ್ರಗಳ ನಿರ್ವಹಣೆ ಮಾಡುತ್ತಿದ್ದ ಕೋಲ್ಕತ್ತ ಮೂಲದ ಎಸ್ಕಾಗ್ ಸಂಜೀವಿನಿಗೆ 167 ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ಜವಾಬ್ದಾರಿ ನೀಡಲಾಗಿತ್ತು. ಸದ್ಯ ಆರೋಗ್ಯ ಇಲಾಖೆಯಿಂದಲೇ ಕೇಂದ್ರಗಳ ನಿರ್ವಹಣೆ ಮಾಡಲಾಗುತ್ತಿದೆಯಾದರೂ, ಸಿಬ್ಬಂದಿಗೆ ವೇತನ ಪಾವತಿ ಮಾಡಿಲ್ಲ.
ನಾಲ್ಕು ತಿಂಗಳಿಂದ ವೇತನವಿಲ್ಲ:ಸಿಬ್ಬಂದಿಗೆ ವೇತನ ಬಿಡುಗಡೆ ಮಾಡುವ ವಿಚಾರದಲ್ಲಿ ಸರ್ಕಾರ ಈವರೆಗೆ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದರಿಂದ ಕೇಂದ್ರಗಳಲ್ಲಿನ 650 ಸಿಬ್ಬಂದಿ ಆಗಸ್ಟ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ 15 ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದ ಆರೋಗ್ಯ ಇಲಾಖೆ ನಂತರದಲ್ಲೂ ಬೇಡಿಕೆ ಈಡೇರಿಸಲಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಸಿಬ್ಬಂದಿಗೆ ವೇತನ ಪಾವತಿ ಮಾಡಿಲ್ಲ.
1800 ರೋಗಿಗಳಿಗೆ ತೊಂದರೆ:ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ಪ್ರತಿಭಟನೆಯಿಂದ ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1,800ಕ್ಕೂ ಅಧಿಕ ರೋಗಿಗಳಿಗೆ ಸೇವೆ ದೊರೆಯದೆ ಪರದಾಡುವ ಸ್ಥಿತಿ ಎದುರಾಗಲಿದೆ. ಪರ್ಯಾಯ ವ್ಯವಸ್ಥೆ ದೊರೆಯದಿದ್ದರೆ ಪ್ರಾಣಕ್ಕೆ ಅಪಾಯವೂ ಎದುರಾಗುವ ಸಾಧ್ಯತೆಗಳಿವೆ.
ವೇತನ ಬಿಡುಗಡೆ:ಡಯಾಲಿಸಿಸ್ ಸಿಬ್ಬಂದಿ ಬಾಕಿ ವೇತನ ಪಾವತಿಸಲು ಹಣ ಬಿಡುಗಡೆ ಮಾಡಲಾಗಿದ್ದು, ಆಯಾ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಿಬ್ಬಂದಿಗೆ ವೇತನ ಪಾವತಿಯಾಗಲಿದೆ. ಪ್ರತಿಭಟನೆ ನಡೆಸದಂತೆ ಸಿಬ್ಬಂದಿ ಮನವೊಲಿಸುವ ಪ್ರಯತ್ನ ಮಾಡಲಾಗುವುದು. ಎಲ್ಲಾ ಡಯಾಲಿಸಿಸ್ ಕೇಂದ್ರಗಳು ಆರೋಗ್ಯ ಇಲಾಖೆ ಅಡಿಯಲ್ಲಿ ನಿರ್ವಹಣೆಗೊಳ್ಳುತ್ತಿರುವುದರಿಂದ ಇಲಾಖೆ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯಿಂದ ರೋಗಿಗಳಿಗೆ ತೊಂದರೆ ಆಗದಂತೆ ಸೇವೆ ಒದಗಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 9 =
Remember me
