ಬೆಂಗಳೂರು ಗಲಭೆಯ ನಂತರ ಕೊತ್ಮಿರಿ ಸೊಪ್ಪು (ಕೊತ್ತಂಬರಿ ಸೊಪ್ಪು) ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟು ಟ್ರೆಂಡ್​ ಆಯಿತು ಎಂಬುದು ಗೊತ್ತೇ ಇದೆ. ಕಳೆದ ಎರಡು ದಿನಗಳಿಂದಲೂ ಸೋಷಿಯಲ್​ ಮೀಡಿಯಾ ಕೊತ್ತಂಬರಿ ಸೊಪ್ಪಿನಿಂದ ತುಂಬಿಯೇ ಹೋಗಿದೆ.
ಅದಕ್ಕೆ ಕಾರಣ ಮುಸ್ಲಿಂ ಮಹಿಳೆಯೋರ್ವರು ಮಾಧ್ಯಮಕ್ಕೆ ನೀಡಿದ್ದ ಪ್ರತಿಕ್ರಿಯೆ. ನನ್ನ ಅಣ್ಣ ರಾತ್ರಿ 1 ಗಂಟೆಗೆ ಕೊತ್ಮಿರಿಸೊಪ್ಪು ತರಲು ಹೋಗಿದ್ದ…ಅವನಿಗೂ, ಗಲಭೆಗೂ ಸಂಬಂಧವಿಲ್ಲ. ಆದರೂ ಅವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದೇ ಇದಕ್ಕೆ ಕಾರಣ. ರಾತ್ರಿ 1 ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗುತ್ತಾರಾ? ಎಂಬ ಪ್ರಶ್ನೆಯಿಂದ ಶುರುವಾದ ವಿಷಯ…ಅದೀಗ ಎಲ್ಲೆಲ್ಲೋ ಹೋಗಿ ತಲುಪಿದೆ. ನೆಟ್ಟಿಗರು ತಮ್ಮ ಕ್ರಿಯಾಶೀಲತೆಗೆ ತಕ್ಕಂತೆ ಕೊತ್ಮಿರಿ ಸೊಪ್ಪಿನ ಬಗ್ಗೆ ಪೋಸ್ಟ್ ಹಾಕಿ, ಟ್ರೋಲ್​ ಮಾಡುತ್ತಿದ್ದಾರೆ.
ಹೀಗಿರುವಾಗ ಸ್ಯಾಂಡಲ್​ವುಡ್​ನ ಖ್ಯಾತ ಸಾಹಿತಿ, ನಿರ್ದೇಶಕ ಕವಿರಾಜ್​ ಅವರು ಈ ಕೊತ್ಮಿರಿ ಸೊಪ್ಪಿನ ವಿಷಯವನ್ನು ಬೇರೆಯದೇ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ್ದಾರೆ.
“ನಮ್ಮಣ್ಣ ರಾತ್ರಿ ಒಂದ್ ಗಂಟೆಗೆ ಕೊತ್ಮಿರಿ ಸಪ್ಪು ತಗಂಡ್ ಬಂದಿದ್ದು, ಅಂಗಡೀನಲ್ಲಿ ಹಾಕೋಕೆ ಇರೋದು ನಮ್ಮಣ್ಣ” ಕನ್ನಡ ಸರಿಯಾಗಿ ಮಾತಾಡಲು ಬರದ ಉರ್ದು ಮಾತೃಭಾಷೆಯ ಹೆಂಗಸು ಮಾತಾಡಿರುವ ಯಥಾವತ್ತು ಮಾತಿದು…ಎಂದು ತಮ್ಮ ವಿಶ್ಲೇಷಣೆಯನ್ನು ಪ್ರಾರಂಭಿಸಿರುವ ಕವಿರಾಜ್​, ‘ಕನ್ನಡ ಬರುವ ಯಾರಿಗಾದರೂ ತಿಳಿಯುತ್ತದೆ. ಆ ಮಹಿಳೆಯ ಅಣ್ಣ ರಾತ್ರಿ 1 ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದು ಬಿರಿಯಾನಿ ಮಾಡಲು ಅಲ್ಲ. ಬದಲಾಗಿ ಕೊತ್ತಂಬರಿ ಸೊಪ್ಪು ತಂದು ಅಂಗಡಿಗಳಿಗೆ ಹಾಕುವುದು ಅವರ ಕೆಲಸ. ಸ್ವಲ್ಪವಾದರೂ ಬೆಂಗಳೂರಿನ ದಿನನಿತ್ಯದ ವ್ಯವಹಾರದ ಆಗುಹೋಗುಗಳ ಪರಿಚಯ ಇದ್ದರೆ, ಆ ಹೆಂಗಸಿನ ಭಾಷಾ ಪ್ರಯೋಗದ ಹೊರತಾಗಿ, ಆಕೆ ಕೊತ್ತಂಬರಿ ಸೊಪ್ಪಿನ ವಿಚಾರದಲ್ಲಿ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎನ್ನುವುದು ತಿಳಿಯುತ್ತದೆ. ನಮ್ಮ-ನಿಮ್ಮಂತೆ, ಕೆಲವು ಶ್ರಮಜೀವಿ ವರ್ಗಕ್ಕೆ ಹಗಲು ಕೆಲಸ, ರಾತ್ರಿ ನಿದ್ದೆ ಎಂಬ ಸೌಭಾಗ್ಯದ ಬದುಕಿಲ್ಲ ಎಂದು ಕವಿರಾಜ್​ ಹೇಳಿದ್ದಾರೆ.
ಮಹಿಳೆ ಅಂಗಡಿ ಎಂಬ ಪದ ಪ್ರಯೋಗ ಮಾಡಿದ್ದಾರೆ. ಆದರೆ ನ್ಯೂಸ್​ ಚಾನಲ್​ವೊಂದರಲ್ಲಿ ಬಂದ ಕ್ಲಿಪಿಂಗ್​​ನಲ್ಲಿ ಅಂಗಡಿ ಎಂಬ ಪದವನ್ನು ಎಡಿಟ್​ ಮಾಡಲಾಗಿದೆ. ಟ್ರೋಲ್​ ಪೇಜ್​​ಗಳಲ್ಲಿ ಬರುತ್ತಿರುವ ವಿಡಿಯೋದಲ್ಲಿ ಆಕೆ ಅಂಗಡಿ ಶಬ್ದ ಪ್ರಯೋಗಿಸಿದ್ದನ್ನು ಕೇಳಬಹುದು. ಆಕೆಯ ಅಣ್ಣ ಕೊತ್ತಂಬರಿ ಸೊಪ್ಪನ್ನು ತಂದು ಅಂಗಡಿಗಳಿಗೆ ಹಾಕುವ ಕೆಲಸ ಮಾಡುತ್ತಾರೆ ಹೊರತು..ಮನೆಗೆ ತರಲು ಹೋಗಿದ್ದಲ್ಲ ಎಂಬುದು ಇಲ್ಲಿಯೇ ಸ್ಪಷ್ಟವಾಗುತ್ತದೆ.
ಸೊಪ್ಪು-ತರಕಾರಿ ಇನ್ನಿತರ ಸರಕು ಹೊತ್ತ ಲಾರಿಗಳು ಬೆಂಗಳೂರು ಪ್ರವೇಶಿಸುವುದೇ ತಡರಾತ್ರಿ ಮೀರಿದ ಮೇಲೆ. ನಾವೆಲ್ಲ ಗಡದ್ದಾಗಿ ತಿಂದು ಮಲಗಿದ್ದಾಗ, ಇಂಥ ಹಲವು ಕೆಲಸಗಾರರು ಮಾರುಕಟ್ಟೆಗೆ ಹೋಗಿ, ಸಾಮಗ್ರಿಗಳನ್ನು ಸಂಗ್ರಹಿಸುತ್ತಾರೆ. ಹಾಗೇ, ಬೆಳಗಾಗುವುದರೊಳಗೆ ಗಾಡಿಯಲ್ಲಿ ತಂದು ಅಕ್ಕಪಕ್ಕದ ಅಂಗಡಿಗಳಿಗೆ ತಲುಪಿಸುತ್ತಾರೆ. ಆದ್ದರಿಂದಲೇ ಬೆಳಗ್ಗೆ ವಾಕಿಂಗ್​ ಗೆ ಹೋದ ತಾಯಂದಿರು ಫ್ರೆಶ್​ ಆಗಿರೋ ಕೊತ್ತಂಬರಿ ಸೊಪ್ಪು ತಂದು ಸಾರು, ಸಾಂಬಾರು, ಚಟ್ನಿ, ಪಲ್ಯಗಳನ್ನು ರುಚಿಯಾಗಿ ಮಾಡಿ, ನಮ್ಮ ಹೊಟ್ಟೆ ತುಂಬಿಸಲು ಸಾಧ್ಯವಾಗುವುದು ಎಂದು ಕವಿರಾಜ್​ ಬರೆದಿದ್ದಾರೆ.
ಯಾರಿಗೆ ಗೊತ್ತು ನಾವಿಂದು ಗೇಲಿ ಮಾಡುತ್ತಿರುವ ಆ ವ್ಯಕ್ತಿ ತಂದ ಕೊತ್ತಂಬರಿ ಸೊಪ್ಪೇ ರುಚಿಯಾಗಿ ನಮ್ಮಲ್ಲಿ ಕೆಲವರ ಹೊಟ್ಟೆ ಸೇರಿರಬಹುದು. ನಾವು ತಿನ್ನುವ ಪ್ರತಿ ಆಹಾರದ ಹಿಂದೆ ಬೆವರು ಸುರಿಸಿ ಬೆಳೆದ ರೈತ, ನಡುರಾತ್ರಿ ಎದ್ದು ಹೋಗಿ ಹೊತ್ತುಕೊಂಡೋ, ಗಾಡಿಗಳಲ್ಲಿ ಹಾಕಿ ತಳ್ಳಿಕೊಂಡೋ ತಂದು ನಮ್ಮ ತನಕ ತಲುಪಿಸಿದ ಇಂತಹ ಶ್ರಮಜೀವಿಗಳ ಋಣವಿದೆ. ಹೋಗಲಿ ಅವರೇನು ಪುಕ್ಕಟೆ ಕೊಡುತ್ತಾರ ? ನಾವು ಹಣ ಕೊಟ್ಟು ಕೊಂಡು ಕೊಂಡರೆ ತಾನೇ ಅವರ ‌ಹೊಟ್ಟೆ ತುಂಬುವುದು ಅಂತಾ ಪ್ರಾಕ್ಟಿಕಲ್ ಆಗಿ ಯೋಚಿಸಿದರೂ ಪರವಾಗಿಲ್ಲ. ಆ ಹೆಂಗಸಿನ ಮಾತನ್ನು ಪೂರ್ತಿಯಾಗಿ ಕೇಳಿ , ನೋಡಿ ಅರ್ಥೈಸಿಕೊಳ್ಳಿ, ಯಾರೋ ಅರೆಬರೆ ಕೇಳಿದವರು ಹೇಳಿದರೆಂದೋ, ಪೂರ್ವಾಗ್ರಹ ಪೀಡಿತ ಮನಸ್ಥಿತಿಯವರು ಫಾರ್ವರ್ಡ್ ಮಾಡಿದರೆಂದೋ ನೀವು ಆ ಬಡ ಹೆಣ್ಣುಮಗಳ ಮಾತನ್ನು ಈ ಪರಿ ಗೇಲಿ ಮಾಡಬೇಡಿ. ಅದರಲ್ಲೂ ಮಾಹಿತಿ ಕೊರತೆಯಿಂದಲೋ ಅಥವಾ ಸುಮ್ಮನೆ ನಮ್ಮದೂ ಒಂದಿರಲಿ ಅಂತಲೋ ನಾನು ಸೆನ್ಸಿಬಲ್ ಅಂತ ಅಂದುಕೊಂಡಿರುವ ಕೆಲವರು ಕೂಡಾ ಇದೇ ಕೆಲಸದಲ್ಲಿ ತೊಡಗಿರುವುದು ಕಂಡು ಅಚ್ಚರಿ ಆಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನಾಳೆ ನಮ್ಮ ನಿಮ್ಮ ತಾಯಂದಿರು ಮೈಕ್ ಮುಂದೆ ಮಾತಾಡಿದರೂ, ಅವರ ಮಾತುಗಳೂ ಟ್ರೋಲ್​ಗೆ ಒಳಗಾಗಬಹುದು. ಟ್ರೋಲಿಗರಿಗೆ ಇನ್ನೇನು ಕೆಲಸ? ಕೊತ್ತಂಬರಿ ಸೊಪ್ಪು ಎಂದು ಬಿಡಿಸಿ ಹೇಳುವವರು ತೀರ ವಿರಳ. ಆಡು ಭಾಷೆಯಲ್ಲಿ ಕೊತ್ತಂಬ್ರಿ, ಕೊತ್ತುಮ್ರೀ, ಕೊತ್ಮಿರಿ…ಎಂದೆಲ್ಲ ಹೇಳುತ್ತಾರೆ. ಹಿಂದು, ಮುಸ್ಲಿಂ, ಕ್ರೈಸ್ತ ಅಥವಾ ಇನ್ಯಾವುದೇ ಧರ್ಮದ ಅಕ್ಕ -ತಂಗಿ -ತಾಯಂದಿರೆಲ್ಲ ಒಂದೇ. ಕೊನೆಕ್ಷಣದವರೆಗೂ ತಮ್ಮ ಅಣ್ಣ, ತಮ್ಮ,ಮಗ ತಪ್ಪಿತಸ್ಥ ಎಂದು ಅವರ ಮನಸ್ಸು ಒಪ್ಪುವುದಿಲ್ಲ. ಅದರಲ್ಲೂ ತಮ್ಮವರು ಸಂಕಷ್ಟಕ್ಕೆ ಸಿಲುಕಿದಾಗ ಆ ಮನಸ್ಸು ವಿಲವಿಲ ಒದ್ದಾಡುತ್ತೆ. ಇಡೀ ಜಗತ್ತೇ ಮಗನ/ಮಗಳ/ ಅಣ್ಣತಮ್ಮಂದಿರ ವಿರುದ್ಧ ನಿಂತರೂ ತಾಯಿ/ ಅಕ್ಕತಂಗಿಯರು ಆದಷ್ಟು ತಮ್ಮವರ ಪರ ನಿಲ್ಲಲು ಹೆಣಗುತ್ತಾರೆ. ಇದೀಗ ಕೊತ್ತಂಬರಿ ಸೊಪ್ಪಿನ ವಿಚಾರದಲ್ಲಿ ಮಾತಾಡಿದ ಹೆಂಗಸಿನ ಸ್ಥಿತಿಯು ಅಷ್ಟೇ ಎಂದಿದ್ದಾರೆ.
ಹಾಗಂತ ಖಂಡಿತಾ ಅವರ ಅಣ್ಣ ಅಮಾಯಕ ಎನ್ನುವ ಮಾತು ಒಪ್ಪಲಾಗದು. ಪೊಲೀಸ್ ಸ್ಟೇಶನಿಗೆ ಬೆಂಕಿ ಹಚ್ಚಿದವರ ಮೇಲೆ ಕಿಂಚಿತ್ತೂ ಕರುಣೆ ತೋರದೆ ಕಠಿಣಾತೀಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಈ ಹಿಂದೆ ಪೋಸ್ಟ್ ಹಾಕಿದ್ದೇನೆ. ನಾನು ಈ ಪೋಸ್ಟ್​ನಲ್ಲಿ ಮಾತನಾಡುತ್ತಿರುವುದು ಕೇವಲ ಹೆಂಗಸಿನ ಮಾತುಗಳನ್ನು ಗೇಲಿ ಮಾಡುತ್ತಿರುವ ಬಗ್ಗೆ ಮಾತ್ರ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮಟ್ಟಿನ ಗಲಭೆ ಸರಿರಾತ್ರಿಯಲ್ಲಿ ನಡೆಯುತ್ತಿದ್ದಾಗ ಅಲ್ಲಿದ್ದ ಅವರ ಅಣ್ಣ ಅದನ್ನು ಬರೀ ನೋಡುತ್ತ ನಿಂತಿದ್ದ ಅಂದರೆ ನಂಬಲಾಗದು. ಅಷ್ಟು ಅಮಾಯಕನಾದರೆ ಅವನೇನು ಅಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ನಿಂತಿದ್ದನೇ ಎಂದೂ ಕೂಡ ಪ್ರಶ್ನಿಸಿದ್ದಾರೆ.
ಖಂಡಿತಾ ಅವನನ್ನು ಹುಡುಕಿಕೊಂಡು ಹೋಗಿ ಬಂಧಿಸಿದ್ದಾರೆ ಎಂದರೆ ಪೊಲೀಸರಿಗೆ ಏನೋ ಒಂದು ಕುರುಹು ಸಿಕ್ಕೇ ಇರುತ್ತದೆ. ಸಾಕ್ಷಿ ಇದ್ದರೆ ಶಿಕ್ಷೆ ಆಗುತ್ತದೆ . ಇಲ್ಲವಾದರೆ ವಿಚಾರಣೆ ನಡೆಸಿ ಬಿಟ್ಟು ಕಳಿಸುತ್ತಾರೆ. Basically ಟ್ರೋಲ್ ಎನ್ನುವುದೇ ಇನ್ನೊಬ್ಬರನ್ನು ಗೇಲಿ ಮಾಡಿ ನಾವು ಸಂತೋಷ ಪಡುವ ಅನಾರೋಗ್ಯಕರ ಮನಸ್ಥಿತಿ. ಅದರಲ್ಲೂ ಟ್ರೋಲ್ ಮೂಲಕ ಆಡಳಿತದ ಕಿವಿ ಹಿಂಡಿದರೆ, ಬಲಾಢ್ಯರ ತಪ್ಪುಗಳನ್ನು ಎತ್ತಿ ತೋರಿಸಿದರೆ, ಸುಳ್ಳನ್ನೇ ಬಂಡವಾಳ ಮಾಡಿಕೊಂಡವರ ಕಾಲೆಳೆದರೆ, ಸಮಾಜದ ಒಳಿತಿಗಾಗಿ ಉಪಯೋಗಿಸಿದರೆ ಟ್ರೋಲ್ ಅನ್ನು ಒಂದು ಮಟ್ಟಕ್ಕೆ ಸಮರ್ಥಿಸಬಹುದು. ಅದನ್ನು ಬಿಟ್ಟು ಬಡವರ, ಅಮಾಯಕರ , ಅನಕ್ಷರಸ್ಥರ, ಅಸಹಾಯಕರ ಪರಿಸ್ಥಿತಿಗಳನ್ನು ಗೇಲಿ ಮಾಡಲು, ಟ್ರೋಲ್ ಮಾಡಲು ಬಳಸದಿರೋಣ ಎಂದು ಸಲಹೆ ನೀಡಿದ್ದಾರೆ.
ಕವಿರಾಜ್​ ಅವರ ಪೋಸ್ಟ್​​ನ್ನು ಇಲ್ಲಿ ಓದಿ:https://m.facebook.com/story.php?story_fbid=3593576160676394&id=100000721371078

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eighteen =
Remember me
