ಬೆಂಗಳೂರು:ಮಹಾಮಾರಿ ಕರೋನಾ ವೈರಸ್ ಹರಡುವಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಮಾ.22) ‘ಜನತಾ ಕರ್ಫ್ಯೂ’ಗೆ ಕರೆ ಕೊಟ್ಟಿರುವುದನ್ನು ನಿರ್ಲಕ್ಷಿಸಿ, ಅನಾವಶ್ಯಕವಾಗಿ ಸುತ್ತಾಡುವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಸಮಾಜದ ಹಿತದೃಷ್ಟಿಯಿಂದ ಪ್ರತಿಯೊಬ್ಬರು ಜನತಾ ಕರ್ಫ್ಯೂಗೆ ಸಹಕರಿಸಬೇಕು. ಇದನ್ನು ಲಘುವಾಗಿ ಪರಿಗಣಿಸಿ, ಅನಾವಶ್ಯಕವಾಗಿ ನಗರದಲ್ಲಿ ಸುತ್ತಾಡುವುದು ಕಂಡು ಬಂದರೆ ಕರ್ನಾಟಕ ಪೊಲೀಸ್ ಆಕ್ಟ್ 31 (ಎಲ್) ಅಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿನಾಕಾರಣ ಮನೆಯಿಂದ ಹೊರಗಡೆ ಬರುವುದು, ಮೋಜು-ಮಸ್ತಿ ಹಾಗೂ ಪಾರ್ಟಿ ಮಾಡುವುದು ಬೇಡ. ನಗರದೆಲ್ಲೆಡೆ ಪೊಲೀಸರು ಗಸ್ತು ತಿರುಗಲಿದ್ದು, ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕಿ ನಿಗಾ ವಹಿಸಲಿದ್ದಾರೆ. ಸಭೆ, ಸಮಾರಂಭ, ವಾಯುವಿಹಾರ, ಬೈಕ್ ರೈಡಿಂಗ್ ಮಾಡುವುದು ಬೇಡ. ತುರ್ತು ಸಂದರ್ಭ ಹೊರತು ಪಡಿಸಿ ಅನಾವಶ್ಯಕವಾಗಿ ಎಲ್ಲಿಗೂ ಹೋಗುವುದು ಬೇಡ ಎಂದು ಮನವಿ ಮಾಡಿದ್ದಾರೆ.
ವಿದೇಶಗಳಿಂದ ಬಂದವರಿಗೆ ಗೃಹ ಬಂಧನ!:ವಿದೇಶಗಳಿಂದ ವಾಪಸ್ ಆದ ಜನರಿಗೆ ಕರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಅವರ ಆರೋಗ್ಯದ ಮೇಲೆ ನಿಗಾವಹಿಸಲು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಜತೆಗೂಡಿ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಕಮಾಂಡೆಂಟ್ ಡಿಸಿಪಿ ಇಶಾ ಪಂತ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಕಳೆದ 15 ದಿನದಲ್ಲಿ ವಿದೇಶದಿಂದ 40-45 ಸಾವಿರ ಜನರು ರಾಜ್ಯಕ್ಕೆ ಬಂದಿದ್ದಾರೆ. ಅದರಲ್ಲಿ, ಅತಿಹೆಚ್ಚಿನ ಸಂಖ್ಯೆಯ ಜನರು ಬೆಂಗಳೂರಿಗೆ ಬಂದಿರುವ ಮಾಹಿತಿ ಇದೆ. ವಿದೇಶದಿಂದ ಬಂದ ಬಳಿಕ ಆರೋಗ್ಯ ತಪಾಸಣೆಗೆ ಸಹಕರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಗೃಹಬಂಧನದಲ್ಲಿಟ್ಟು ನಿಗಾವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಜತೆಗೂಡಿ ಭಾನುವಾರ (ಮಾ.22) ವಿದೇಶದಿಂದ ಬಂದವರ ಮನೆಗೆ ಭೇಟಿ ಮಾಡಿ ಕೈಗೆ ಮೊಹರು ಹಾಕುತ್ತಾರೆ. ಅವರನ್ನು ಮನೆ ಬಿಟ್ಟು ಎಲ್ಲಿಗೂ ಹೋಗದಂತೆ ನಿಗಾವಹಿಸಲು ಮನೆ ಮಾಲೀಕರಿಗೆ ಹಾಗೂ ಕುಟುಂಬಸ್ಥರಿಗೆ ಸೂಚಿಸಲಾಗುವುದು ಎಂದರು.
ಸಿಬ್ಬಂದಿ ಸುರಕ್ಷತೆಗೆ ಒತ್ತು
ಆರೋಗ್ಯ ಇಲಾಖೆಯ ಸಲಹೆ ಮೇರೆಗೆ ಸಿಬ್ಬಂದಿಯ ಸುರಕ್ಷತೆಗೆ ಒತ್ತು ಕೊಡುವಂತೆ ಎಲ್ಲ ವಿಭಾಗದ ಡಿಸಿಪಿ ಹಾಗೂ ಉಪವಿಭಾಗದ ಎಸಿಪಿಗಳಿಗೆ ಭಾಸ್ಕರ್ ರಾವ್ ಸೂಚಿಸಿದ್ದಾರೆ. ಪ್ರತಿಯೊಬ್ಬ ಕರ್ತವ್ಯ ನಿರತ ಸಿಬ್ಬಂದಿಗೆ ದಿನಕ್ಕೆ 3 ಮಾಸ್ಕ್ ಹಾಗೂ ನೈರ್ಮಲ್ಯಕಾರಕವನ್ನು ವಿತರಿಸಬೇಕು. ನೈರ್ಮಲ್ಯಕಾರಕವನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು. ಕರ್ತವ್ಯದ ವೇಳೆ ಜನರಿಂದ ಅಂತರ ಕಾಯ್ದುಕೊಳ್ಳಬೇಕು. ವಿದೇಶಗಳಿಂದ ಬಂದ ಜನರ ಮನೆಗೆ ಭೇಟಿ ಕೊಡುವ ಸಿಬ್ಬಂದಿ ಕಡ್ಡಾಯವಾಗಿ ಕೈಗವಸು, ಮುಖಗವಸು., ಬೂಟು ಹಾಗೂ ಕನ್ನಡಕ ಧರಿಸುವಂತೆ ಸೂಚನೆ ನೀಡಿದ್ದಾರೆ.
ಕರೊನಾ ವೈರಸ್ ಸೋಂಕು ಹರಡ ದಂತೆ ಪ್ರತಿಯೊಬ್ಬರೂ ಸರ್ಕಾರದ ಜತೆ ಕೈಜೋಡಿಸಬೇಕು. ನಿರ್ಲಕ್ಷಿಸಿದರೆ ಬಹುದೊಡ್ಡ ತೊಂದರೆ ಅನುಭವಿಸಬೇಕಾಗುತ್ತದೆ. ಜನತಾ ಕರ್ಫ್ಯೂ ವೇಳೆ ಯಾರೂ ಮನೆಯಿಂದ ಹೊರಬರಬೇಡಿ.
| ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ
ಕರ್ನಾಟಕ ಪೊಲೀಸ್ ಕಾಯ್ದೆ ಏನು ಹೇಳುತ್ತೆ?
ಸಾರ್ವಜನಿಕರ ಆಸ್ತಿ ಹಾನಿ ಮಾಡುವುದು ಹಾಗೂ ಕಾನೂನು ನಿಯಮಗಳನ್ನು ಉಲ್ಲಂಘಿಸುವರ ವಿರುದ್ಧ ಕರ್ನಾಟಕ ಪೊಲೀಸ್ ಆಕ್ಟ್ 31 (ಎಲ್) ಕಾಯ್ದೆ ಅಡಿ ಕ್ರಮ ಜರುಗಿಸಲಾಗುತ್ತದೆ. ಅದೇರೀತಿ, ಸಾರ್ವಜನಿಕರಿಗೆ ಕರೊನಾ ವೈರಸ್ ಸೋಂಕು ಹರಡುವ ರೀತಿಯಲ್ಲಿ ನಡೆದುಕೊಂಡಿರುವುದು ಕಂಡು ಬಂದರೆ, ಈ ಕಾಯ್ದೆ ಅಡಿ ಕ್ರಮ ಕೈಗೊಳ್ಳಬಹುದು. ಅಂಥವರನ್ನು ಠಾಣೆಗೆ ಕರೆದೊಯ್ದು ಸಂಜೆವರೆ ಕೂರಿಸಿ ನಂತರ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳುಹಿಸಲಾಗುತ್ತದೆ.
ನಿಮ್ಮೊಂದಿಗೆ ನಾವಿದ್ದೇವೆ
ಬೆಂಗಳೂರು: ಜನತಾ ಕರ್ಫ್ಯೂ ವೇಳೆ ನಗರದಲ್ಲಿ ವೈದ್ಯರ 15 ತಂಡಗಳು ‘ನಿಮ್ಮೊಂದಿಗೆ ನಾವಿದ್ದೇವೆ’ ಶೀರ್ಷಿಕೆಯಡಿ ಜಾಗೃತಿ ಮೂಡಿಸಲಿದ್ದಾರೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಪಾಲಿಕೆಯಿಂದ 4 ತಂಡಗಳನ್ನು ರಚಿಸಲಾಗಿದೆ. ಪಾಲಿಕೆ ಕೇಂದ್ರ ಕಚೇರಿಯಲ್ಲಿ ಕರೊನಾ ವಾರ್ ರೂಂ ಸಿದ್ಧಪಡಿಸಲಾಗಿದ್ದು, ಎಲ್ಲ ಬಗೆಯ ಮಾಹಿತಿಗಳನ್ನು ಪಡೆದುಕೊಂಡು ಚಿಕಿತ್ಸೆ ನೀಡುವುದು ಹಾಗೂ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೇ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ವೈದ್ಯರ ತಂಡಗಳು ಸಜ್ಜಾಗಿವೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಕರೊನಾ ಜಾಗೃತಿಗೆ ತಲಾ 100 ವೈದ್ಯರು, ನರ್ಸ್​ಗಳು ಹಾಗೂ ಸಮಾಜ ಸೇವಕರನ್ನು ಒಳಗೊಂಡ 300 ಜನರ ತಂಡ ಸನ್ನದ್ಧವಾಗಿದೆ. ಇದರಲ್ಲಿ ತಲಾ 20 ಜನರಂತೆ 15 ತಂಡಗಳು ಕಾರ್ಯ ನಿರ್ವಹಿಸಲಿವೆ. ಪಾಲಿಕೆಯ 8 ವಲಯದಲ್ಲಿ ತಲಾ 2 ತಂಡಗಳು ಜಾಗೃತಿ ಮೂಡಿಸಲಿವೆ ಎಂದು ಮೇಯರ್ ಮಾಹಿತಿ ನೀಡಿದರು.
ಭಾನುವಾರ ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ 14 ಗಂಟೆ ಕಾಲ ಮನೆಯಿಂದ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ. ಎಲ್ಲರೂ ಇದನ್ನು ತಪ್ಪದೆ ಪಾಲಿಸಬೇಕು. ನಾಳೆ ಮಾತ್ರವಲ್ಲದೆ, ಮುಂದಿನ ದಿನಗಳಲ್ಲೂ ಅನಗತ್ಯ ಸಂಚಾರವನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
‘ಕರೊನಾ ವಾರ್ ರೂಂ’ 24 ಗಂಟೆ ಸೇವೆ: ವಿದೇಶಗಳಿಂದ ಬಂದಿರುವ ಅನೇಕರಲ್ಲಿ ಕರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ವಿದೇಶದಿಂದ ಬಂದವರನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಸೋಂಕಿತರ ಮೇಲೆ ನಿಗಾವಹಿಸಲು ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಅಲ್ಲಿನ ದೃಶ್ಯಾವಳಿಯನ್ನು ಪಾಲಿಕೆ ಕಚೇರಿಯಲ್ಲಿನ ‘ಕರೊನಾ ವಾರ್ ರೂಂ’ನಲ್ಲಿ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.
ಜನತಾ ಕರ್ಫ್ಯೂ ದಿನದಂದು ಕೃ.ರಾ. ಮಾರುಕಟ್ಟೆಯನ್ನು ಸ್ವಯಂಪ್ರೇರಿತ ರಾಗಿ ಬಂದ್ ಮಾಡಲು ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಬಿಜೆಪಿ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಕೂಡ ಸಾರ್ವಜನಿಕರಿಗೆ ಮನೆಯಿಂದ ಹೊರಗೆ ಬರದಂತೆ ಆಟೋ ಪ್ರಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಿದ್ದಾರೆ.
| ಎಂ. ಗೌತಮ್ ಕುಮಾರ್ ಮೇಯರ್
ಕರೊನಾ ಮಣಿಸೋಣ: ಜನತಾ ಕರ್ಫ್ಯೂ ಬೆಂಬಲಿಸಿ, ವೈರಸ್ ಬಡಿದೋಡಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
