ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದೋಸ್ತಿ ಪಕ್ಷ ಜೆಡಿಎಸ್ ಹೆಗಲಿಗೆ ಕೈಹಾಕಿ, ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಯಶಸ್ವಿಯಾಗಿ ಪಾದಯಾತ್ರೆ ನಡೆಸಿದ್ದ ರಾಜ್ಯ ಬಿಜೆಪಿಯಲ್ಲೀಗ ಭಿನ್ನಮತದ ತಣ್ಣಗಿನ ಉರಿ ಹೊತ್ತಿ ಹೊಗೆಯಾಡಲಾರಂಭಿಸಿದೆ. ಇದೇ ಉರಿಯಲ್ಲಿ ಕೆಲವರು ವರಿಷ್ಠರ ಒಂದು ಗುಂಪಿನ ಬೆಂಬಲದಿಂದ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾ ಗಿದ್ದರೂ ಹೈಕಮಾಂಡ್ ದಿವ್ಯ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.
ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ತಂಡ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ತೀರ್ವನಿಸಿ ವರಿಷ್ಠರ ಅನುಮತಿ ಪಡೆಯಲು ಯೋಚಿಸಿದ್ದಾರೆ. ಮೈಸೂರು ಚಲೋ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡವರು (ಪ್ರತಾಪಸಿಂಹ ಹೊರತುಪಡಿಸಿ) ಈ ನಿರ್ಧಾರ ತೆಗೆದು ಕೊಂಡ ತಂಡದಲ್ಲಿದ್ದು, ರಾಜ್ಯ ನಾಯಕತ್ವಕ್ಕೆ ಅದರಲ್ಲೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಸೆಡ್ಡು ಹೊಡೆಯುವ ತಂತ್ರಗಾರಿಕೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಮತ್ತೊಂದು ಮೂಲದ ಪ್ರಕಾರ ಹೊಸ ರಾಜಕೀಯ ಸಮೀಕರಣ. ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ‘ಅಹಿಂದ’ ವರ್ಗವನ್ನು ಸೆಳೆಯಲು ಜಾರಕಿಹೊಳಿ ಸೋದರರ ಸಾರಥ್ಯದಲ್ಲಿ ಹೆಣೆದ ತಂತ್ರಗಾರಿಕೆಯಿದು ಎಂದೂ ಹೇಳಲಾಗುತ್ತಿದೆ. ಆದರೆ ಡಾ.ರಾಧಾಮೋಹನ್ ದಾಸ್ ಅಗರ್ವಾಲ್ ಪಕ್ಷದ ರಾಜ್ಯ ಉಸ್ತುವಾರಿಯಾಗಿದ್ದಾರೆ. ಲೋಕಸಭೆ ಚುನಾವಣೆ ಕಾಲಕ್ಕೆ ರಾಜ್ಯ ಸುತ್ತಿ, ಸಂಘಟನೆ ಮಾಡಿ ನಾಯಕರೆಲ್ಲರ ಕಾರ್ಯವೈಖರಿ ಅರಿತಿದ್ದಾರೆ. ಹೀಗಾಗಿ ಇನ್ಮುಂದೆ ಬಣಗಾರಿಕೆ, ನಾಯಕತ್ವಕ್ಕೆ ಮುಜುಗರದ ನಡವಳಿಕೆ ನಡೆಯದೆಂಬ ಲೆಕ್ಕಾಚಾರಗಳು ಸದ್ಯಕ್ಕಂತೂ ತಲೆ ಕೆಳಗಾಗಿವೆ.
ದ್ವಂದ್ವ ನಿಲುವು:ಆದರೆ ಪಾದಯಾತ್ರೆಗೆ ವರಿಷ್ಠರ ಅನುಮತಿ ಪಡೆಯಲೆಂಬ ಷರತ್ತು ಮತ್ತೊಂದು ತಂಡ ವಿಧಿಸಿದೆ. ಕಾಂಗ್ರೆಸ್ ಸರ್ಕಾರದ ಹಗರಣದ ವಿರುದ್ಧ ಸದನದಲ್ಲಿ ಪಕ್ಷದ ಹೋರಾಟ ರ್ತಾಕ ಅಂತ್ಯ ಕಾಣಿಸಲು ಮುಖಂಡರು ವಿಫಲವಾದರು. ಇದು ಸಿದ್ದರಾಮಯ್ಯ ಜತೆಗೆ ಹೊಂದಾಣಿಕೆ ರಾಜಕಾರಣ, ಮೈಸೂರು ಚಲೋ ಪಾದಯಾತ್ರೆ ನಡೆಸಿದರೆ ಡಿ.ಕೆ.ಶಿವಕುಮಾರ್ ಪ್ರಾಯೋಜಿತ ಎನ್ನುವ ಯತ್ನಾಳ್​ರದು ದ್ವಂದ್ವ ನಿಲುವು. ಆದರೆ ಅವರೊಂದಿಗೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗದ ರಮೇಶ್ ಜಾರಕಿಹೊಳಿ ಜತೆಗೆ ಅರವಿಂದ ಲಿಂಬಾವಳಿ, ಪ್ರತಾಪಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಜಿ.ಎಂ.ಸಿದ್ದೇಶ್ವರ್, ಕುಮಾರ ಬಂಗಾರಪ್ಪ ಕೈಜೋಡಿಸಿರುವುದು ಗಮನಾರ್ಹ ಬೆಳವಣಿಗೆ. ಪಕ್ಷದ ನಿಷ್ಠೆ, ವರ್ಚಸ್ಸು, ಸಂಘಟನೆ ಹಿತಮುಖ್ಯವೆಂದು ಹೇಳುವವರೇ ಈ ಗುಂಪಿನಲ್ಲಿದ್ದಾರೆ. ಆದರೆ ವರಿಷ್ಠರು ನೇಮಿಸಿದ ರಾಜ್ಯಾಧ್ಯಕ್ಷ, ವಿಧಾನ ಮಂಡಲದ ಉಭಯ ಸದನಗಳ ನಾಯಕತ್ವದ ವಿರುದ್ಧ ಭಿನ್ನಧ್ವನಿಯು ಕೇಂದ್ರ ನಾಯಕರ ನಿರ್ಧಾರವನ್ನೇ ಪ್ರಶ್ನಿಸಿದಂತಾಗುವುದಿಲ್ಲವೆ ? ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಸಿಟಿ ರವಿ ಗೂಡಾರ್ಥ:ಈ ನಡುವೆ ಪಕ್ಷ ಪಕ್ಷವೆಂದು ಪ್ರಾಮಾಣಿಕವಾಗಿ ಯಾರು ಹೊಡೆದಾಡುತ್ತಾರೋ ಅವರೇ ಬಲಿಪಶು ಎನ್ನುವುದಕ್ಕೆ ನಾನೇ ನಿದರ್ಶನ. ರಾಜಿ ರಾಜಕಾರಣ ಮಾಡುವವರು ಎಲ್ಲ ಕಡೆ ಸಲ್ಲುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿರುವುದು ಅನೇಕ ಅರ್ಥಗಳನ್ನು ಕಲ್ಪಿಸಿದೆ. ಈ ಬೆಳವಣಿಗೆಯು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲವೆಂಬುದು ಸ್ಪಷ್ಟಗೊಳಿಸಿದೆ. ಮತ್ತೊಂದು ತಂಡದ ಪಾದಯಾತ್ರೆ ವಿಚಾರದಲ್ಲಿ ಕೇಂದ್ರ ನಾಯಕತ್ವ ತಳೆಯಲಿರುವ ಕುತೂಹಲ ಕೆರಳಿಸಿದೆ. ಮೂರು ವಿಧಾನಸಭೆ ಕ್ಷೇತ್ರಗಳು, ಒಂದು ವಿಧಾನ ಪರಿಷತ್ ಕ್ಷೇತ್ರದ ಉಪಚುನಾವಣೆ, ಬಿಬಿಎಂಪಿ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಘಟನೆ ಸಜ್ಜುಗೊಳಿಸುವುದು, ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟದ ಸಿದ್ಧತೆಗೆ ಅಡ್ಡಗಾಲು ಹಾಕಿದಂತಾಗಿದೆ ಎಂದು ಹೇಳಲಾಗುತ್ತಿದೆ.
ಚಿಂತನೆಗೆ ಪೂರಕ ಪ್ರಸ್ತಾಪ:ಮುಡಾ ಅಕ್ರಮದ ವಿಚಾರವಾಗಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆದ ಬಳಿಕ ವಾಲ್ಮೀಕಿ ನಿಗಮದ ಹಗರಣ ಮುಂದಿಟ್ಟುಕೊಂಡು ಬಳ್ಳಾರಿಯಲ್ಲಿ ಸಮಾವೇಶದ ಚಿಂತನೆ ನಡೆದಿತ್ತು. ಮೈಸೂರು ಚಲೋ ಪೂರ್ವ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಈ ಪ್ರಸ್ತಾವ ಮುಂದಿಟ್ಟಾಗ ಸಭೆ ತಾತ್ವಿಕ ಒಪ್ಪಿಗೆ ನೀಡಿತ್ತು. ಪರಿಶಿಷ್ಟ ಪಂಗಡ ಸಮುದಾಯಗಳ ಬಾಹುಳ್ಯದ 10 ಜಿಲ್ಲೆಗಳ ಕೇಂದ್ರೀಕರಿಸಿ ಈ ಸಮಾವೇಶದ ಯೋಚನೆಯಿತ್ತು. ಬೆಳಗಾವಿಯಲ್ಲಿ ಸಭೆ ಸೇರಿದ ನಾಯಕರ ಪಾದಯಾತ್ರೆ ಪ್ರಸ್ತಾಪವೂ ಚಿಂತನೆಗೆ ಪೂರಕವಾಗಿದ್ದು, ಸ್ವಪ್ರತಿಷ್ಠೆಯ ಮೇಲಾಟದಿಂದ ಪ್ರತಿತಂತ್ರದ ರೂಪ ಪಡೆದಿದೆ. ಕೆಲವರಿಗೆ ‘ಇರುವಿಕೆ’ಯ ಚಿಂತೆ. ಅಪಸ್ವರದ ಗಿರಣಿ ಚಾಲೂ ಇಟ್ಟರೆ ಹಿಟ್ಟು ಸಿಗುತ್ತದೆ. ರೊಟ್ಟಿ ತಟ್ಟುವುದು ಸುಲಭವೆಂಬ ಯೋಚನೆಯೇ ಕಾರಣವೆಂದು ಹೇಳಲಾಗುತ್ತಿದೆ.
ಬಿಜೆಪಿಯ ಹೊಸ ಅಸ್ತ್ರ ?:ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದಿರುವ ಸಭೆಯು ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ಬಲ, ಇನ್ನಷ್ಟು ಶಕ್ತಿ ತುಂಬಲಿದೆ. ಕಾಂಗ್ರೆಸ್​ನ ಹಿಡಿತ ಸಡಿಲಿಸಲು ಹೂಡಿದ ಬಿಜೆಪಿಯ ಹೊಸ ಅಸ್ತ್ರ ಎಂಬ ತರ್ಕ ತೇಲಿ ಬಿಡಲಾಗಿದೆ. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕವು ಎಸ್​ಸಿ, ಎಸ್​ಟಿ ಮತ್ತು ಹಿಂದುಳಿದ ವರ್ಗಗಳ ಪ್ರಾಬಲ್ಯದ ಪ್ರದೇಶಗಳಾಗಿವೆ. ಎಸ್​ಸಿ, ಎಸ್​ಟಿ ಉಪ ಯೋಜನೆ ಅನುದಾನ ಅನ್ಯ ಉದ್ದೇಶ ಬಳಕೆ, ವಾಲ್ಮೀಕಿ ನಿಗಮದ ಹಗರಣದ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರುವುದು. ಸಿಎಂ ಸಿದ್ದರಾಮಯ್ಯ ‘ಅಹಿಂದ’ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಈ ಸಮುದಾಯಗಳ ವಿಶ್ವಾಸ ಹೆಚ್ಚಿಸಿಕೊಳ್ಳುವುದು ಮತ್ತೊಂದು ಸುತ್ತಿನ ಪಾದಯಾತ್ರೆಯ ತಿರುಳು. ರಮೇಶ್ ಜಾರಕಿಹೊಳಿ, ಬಾಲಚಂದ್ರಜಾರಕಿಹೊಳಿ ನೇತೃತ್ವದ ಸಭೆ ಪ್ರಧಾನ ಕಾರ್ಯಸೂಚಿಯಿದು. ಈ ಕಾರಣಕ್ಕೆ ಜಾರಕಿಹೊಳಿಯನ್ನು ಕಂಡರಾಗದ ಅಣ್ಣಾಸಾಹೇಬ್ ಜೊಲ್ಲೆ ಜತೆಯಾಗಿದ್ದಾರೆ. ಪಕ್ಷದ ರಾಜ್ಯ ನಾಯಕರೊಂದಿಗೆ ರ್ಚಚಿಸಿಯೇ ಮುಂದಡಿಯಿಡಲಿದ್ದಾರೆ. ಅಷ್ಟರೊಳಗೆ ಕೆಲವರು ಬೇರೆ ಅರ್ಥ ಕಲ್ಪಿಸಿ ಹುಳಿ ಹಿಂಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಸಮಜಾಯಿಷಿ ಮತ್ತೊಂದು ಮೂಲದ್ದಾಗಿದೆ.
ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ನನ್ನ ಆದ್ಯ ಕರ್ತವ್ಯ. ಪಕ್ಷಕ್ಕೆ ಶಕ್ತಿ ಸಿಗುವುದಾದರೆ ಕೆಲವರು ಮಾಡಬಯಸಿದ ಪಾದಯಾತ್ರೆಗೆ ವರಿಷ್ಠರು ಸಮ್ಮತಿಸುತ್ತಾರೆ. ವರಿಷ್ಠರ ಭೇಟಿಯ ಹಿಂದೆಯೂ ಪಕ್ಷದ ಸಂಘಟನೆಗೆ ಲಾಭ ತರಬೇಕು ಎಂಬ ಸದುದ್ದೇಶವಿರಲಿ.
| ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ
ಪಕ್ಷದ ಕೆಲವು ನಾಯಕರು ಸೇರಿ ಪಾದಯಾತ್ರೆ ಬಗ್ಗೆ ರ್ಚಚಿಸಿರುವುದು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲರೂ ಒಂದಾಗಿ ಹೋಗುವುದಕ್ಕೆ ಬೇಕಾದ ಪ್ರಯತ್ನಗಳಾಗಲಿವೆ.
| ವಿ. ಸುನಿಲ್​ಕುಮಾರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಕಮಲಪಡೆಯ ಅಂತಃಕಲಹ ಕಾಂಗ್ರೆಸ್​ಗೆ ವರದಾನವಾಗಿದೆ. ಸರ್ಕಾರದ ವೈಫಲ್ಯ, ತಪು್ಪ ಹಿಡಿದು ಕಾಡಬೇಕಾದ ಪ್ರತಿಪಕ್ಷ ಬಿಜೆಪಿಗೆ ಒಳಗಿನ ಕಾಟವೇ ತಲೆನೋವಾಗಿ ಪರಿಣಮಿಸಿದೆ. ಮೈಸೂರು ಚಲೋ ಪಾದಯಾತ್ರೆ ಸರ್ಕಾರದ ಮೇಲೆ ಒತ್ತಡ ಹೇರಿದೆ. ಸಂಘಟನೆಯಲ್ಲೂ ಚೈತನ್ಯ ತುಂಬಿದೆ. ಆದರೆ ನಾಯಕರ ಒಳಜಗಳ ಕೊಡಲಿ ಪೆಟ್ಟು ನೀಡಲಿದೆ ಎಂದು ತಳಹಂತದ ಪಡೆ ತಳಮಳಿಸುತ್ತಿದೆ.
ಮಾಜಿ ಸಿಎಂ ಪುತ್ರನೆಂಬ ಛಾಯೆಯಿಂದ ಬಿ.ವೈ.ವಿಜಯೇಂದ್ರ ಹೊರ ಬಂದು, ಪಾದಯಾತ್ರೆ ಮೂಲಕ ಎಲ್ಲರನ್ನೂ ವಿಶ್ವಾಸ ತೆಗೆದುಕೊಂಡು ಹೋಗುವ ನಾಯಕತ್ವ ನಿರೂಪಿಸಿರುವುದು ಕೆಲವರಿಗೆ ಸೈರಣೆಯಾಗುತ್ತಿಲ್ಲ ಎಂಬ ಸಂದೇಹ ಮೂಡಿದೆ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಸಂಘಟನೆಯಲ್ಲಿ ಆರು ತಿಂಗಳ ಕಾಲ ‘ನಿರ್ವಾತ’ ಸ್ಥಿತಿಯಿತ್ತು. ಈ ಅವಧಿಯನ್ನು ಬಳಸಿಕೊಂಡು ತಮ್ಮ ಶಕ್ತಿ, ಸಾಮರ್ಥ್ಯ ನಿರೂಪಿಸುವವರಿಗೆ ರಾಜ್ಯ ಸಾರಥ್ಯವಹಿಸಲು ವರಿಷ್ಠರು ಉತ್ಸುಕರಾಗಿದ್ದರು. ಎಲ್ಲ ಮೂಲಗಳಿಂದ ಮಾಹಿತಿ, ಅಭಿಪ್ರಾಯ ಪಡೆದು, ಅಳೆದೂ ತೂಗಿದ್ದೇವೆ. ಹೊಸ ರಕ್ತ ಮತ್ತು ಯುವಶಕ್ತಿ ಆದ್ಯತೆ ನೀಡಲೆಂದು ವಿಜಯೇಂದ್ರಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸ್ವತಃ ಅಮಿತ್ ಷಾ ಹಲವು ಬಾರಿ ಹೇಳಿಯಾಗಿದೆ. ಹಿರಿತನದ ಸಮಸ್ಯೆ, ಅಸಮಾಧಾನಗಳಿದ್ದರೆ ಪಕ್ಷದ ವೇದಿಕೆಯಲ್ಲಿ ರ್ಚಚಿಸಲು ಅವಕಾಶವಿದೆ. ಆದರೆ ಪ್ರತ್ಯೇಕ ಸಭೆ, ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ನಷ್ಟವೆಂದು ಗೊತ್ತಿದ್ದೂ ವರಿಷ್ಠರು ತಟಸ್ಥ ಧೋರಣೆ ತಳೆದಿರುವುದು ಅತೃಪ್ತಿಯ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಆಯ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 1 =
Remember me
