ಬಹುಶಃ ಇಂದಿನ ಯುಗದಲ್ಲಿ ಅದರಲ್ಲಿಯೂ ಸುಖ-ಭೋಗಗಳೇ ಜೀವನದ ಸರ್ವಸ್ವ ಎಂದು ತಿಳಿದಿರುವ ಜನರಿಗೆ ವ್ಯಾಕುಲತೆಯ ಅರಿವೇ ಇಲ್ಲವೆಂದೆನಿಸುತ್ತದೆ. ಈ ವಿಚಾರಕ್ಕೆ ಮೂಲ ಕಾರಣ ಸಾಮಾನ್ಯ ಜನರಿಗೆ ಭಗವದ್ ಚಿಂತನೆ, ಆರಾಧನೆ, ಅರ್ಚನೆ, ಮುಂತಾದವುಗಳ ಆಚರಣೆಯ ಮೂಲ ಗುರಿ ಏನೆಂಬುದರ ಅರಿವೇ ಇಲ್ಲದಿರುವುದು. ಅನ್ನಮಾಚಾರ್ಯರು, ಪುರಂದರದಾಸರು, ರಾಮದಾಸರು, ಪರಮಹಂಸ ರಾಮಕೃಷ್ಣರಂತೆ ಭಗವದ್ ವ್ಯಾಕುಲ ಚಿತ್ತರಾಗಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ, ತೀರಾ ವಿರಳ.
ಇಂತಹ ಸಂದರ್ಭದಲ್ಲಿ ಒಂದು ಅದ್ಭುತವಾದ ಹಾಗೂ ಅತ್ಯಂತ ಪರಿಣಾಮಕಾರಿಯಾದ ಪದವನ್ನು ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಪದೇ ಪದೇ ಭಕ್ತರಿಗೆ, ಸಾಧಕರಿಗೆ, ಸಾಧುಗಳಿಗೆ ತಿಳಿಸುತ್ತಾರೆ. ಅದೇ ವ್ಯಾಕುಲತೆ. ವ್ಯಾಕುಲತೆ ಬಂದಾಕ್ಷಣ ಭಗವದ್ದರ್ಶನ ಬಂದಂತೆಯೇ ಸರಿ. ಈ ವ್ಯಾಕುಲತೆ ಪ್ರಹ್ಲಾದನಿಗಿತ್ತು, ಬಾಲಕ ಧ್ರುವನಿಗಿತ್ತು, ಆಚಾರ್ಯವರೇಣ್ಯರಿಗಿತ್ತು, ದಾಸವರೇಣ್ಯರಿಗಿತ್ತು. ಆ ವ್ಯಾಕುಲತೆಯ ಸರಳ ವ್ಯಾಖ್ಯಾನವನ್ನು ಅರಿಯಲು ಪ್ರಯತ್ನಿಸೋಣ. ಯಾವ ರೀತಿ ಮಗು ತನ್ನ ತಾಯಿಯನ್ನು ಕಾಣದೆ ದಿಗ್ಭ›ಮೆಗೊಂಡು, ಅದರ ಬಾಯಿಗೆ ಸಿಹಿ ತಿಂಡಿ, ಮಿಠಾಯಿ, ಯಾವುದನ್ನು ಹಾಕಿದರೂ ಅದೊಂದೂ ಅದಕ್ಕೆ ಬೇಡವಾಗಿ ಏನು ಮಾಡಿದರೂ ತಾಯಿಯನ್ನು ಮರೆಯದೆ ಅಳುತ್ತಾ ತಾಯಿಯ ಹತ್ತಿರ ಹೋಗಬೇಕು, ಅಮ್ಮ ನನಗೆ ಬೇಕು ಎಂದು ಚಡಪಡಿಸುತ್ತದೆಯೋ, ಅದೇ ರೀತಿಯಾಗಿ ಭಗವಂತನಿಗಾಗಿ ಮನುಷ್ಯ ವ್ಯಾಕುಲನಾಗಬೇಕು. ಅದೇ ನೈಜ ವ್ಯಾಕುಲತೆ. ಯಾರಿಗೆ ಈ ಜಗತ್ತಿನ ಸುಖ-ಭೋಗಗಳು ರುಚಿಸವೋ, ಯಾರಿಗೆ ಬೇರಾವೂ ಬೇಕಿಲ್ಲವೋ, ಹಣ, ಸಂಪತ್ತು, ಹೆಸರು, ಕೀರ್ತಿ, ಸುಖ, ಇತ್ಯಾದಿಗಳು ಬಳಿಯೇ ಇದ್ದರೂ ಯಾವುವೂ ಬೇಕಿಲ್ಲವೋ, ಯಾವುದೂ ಹಿಡಿಸುವುದಿಲ್ಲವೋ ಆತ ಹೃತ್ಪೂರ್ವಕವಾಗಿಯೂ ಭಗವಂತನ ದರ್ಶನಕ್ಕಾಗಿ ಅತ್ಯಂತ ಕಾತರನಾಗುತ್ತಾನೆ. ಅಂತಹವರಿಗಾಗಿಯೇ ಭವತಾರಿಣಿ ಎಲ್ಲವನ್ನೂ ಬಿಟ್ಟು ಓಡೋಡಿ ಬರುತ್ತಾಳೆ. ವ್ಯಾಕುಲತೆಯೇ ಸರ್ವಸ್ವ. ಯಾವ ಮಾರ್ಗದಲ್ಲಾದರೂ ಹೋಗು – ನೀನು ಭಗವದ್ದರ್ಶನಕ್ಕೆ ಹಂಬಲಿಸುವಾಗ ನಿನಗೆ ಬೇಕಾಗಿರುವುದು ವ್ಯಾಕುಲತೆ. ಅದೊಂದಿದ್ದಲ್ಲಿ ಭಗವದ್ದರ್ಶನ ಖಂಡಿತಾ ಸಾಧ್ಯ! ಎಂದು ವಿವರಿಸುತ್ತಾರೆ ಭಗವಾನ್ ರಾಮಕೃಷ್ಣರು.
ಪರಮಹಂಸರ ಜೀವನವೇ ವ್ಯಾಕುಲತೆಯನ್ನು ಅರಿಯುವ ಒಂದು ಮಹಾನ್ ಪಥ. ಸಾಧಕರು, ಭಕ್ತರು, ಭಗವಂತನನ್ನು ಸಾಕ್ಷಾತ್ಕಾರಪಡಿಸಿಕೊಳ್ಳಲು ಯಾವ ರೀತಿಯಲ್ಲಿ ವ್ಯಾಕುಲತೆ ಹೊಂದಬೇಕು ಎಂಬ ವಿಚಾರವನ್ನು ಆಮೂಲಾಗ್ರವಾಗಿ ಪರಮಹಂಸರ ಜೀವನ, ಅದರಲ್ಲಿಯೂ ಅಧ್ಯಾತ್ಮ ಸಾಧನಾ ಪರ್ವದಲ್ಲಿ ನಾವು ಕಾಣಬಹುದಾಗಿದೆ. ಭವತಾರಿಣಿಯ ದರ್ಶನಕ್ಕೆ ಅದೆಷ್ಟು ರೀತಿಯಲ್ಲಿ ಸಾಧನೆ ಮಾಡಿ ಆ ಜಗಜ್ಜನನಿಯ ದಿವ್ಯ ಸಾಕ್ಷಾತ್ಕಾರ ಪಡೆದುಕೊಂಡರು ಎಂಬುದು ನಿಜಕ್ಕೂ ಅತ್ಯಾಶ್ಚರ್ಯವಾದ ಅಂಶ. ಭಗವತಿಯ ಅರ್ಚಕರಾಗಿ ನಂತರ ತಮ್ಮ ಅದ್ಭುತ ಸಾಧನೆಯಿಂದ ಭವತಾರಿಣಿಯ ದಿವ್ಯದರ್ಶನ ಪಡೆದು ದೇವ ಮಾನವ, ಅವತಾರ ವರಿಷ್ಠ ರಾಮಕೃಷ್ಣರು. ಸಾಧನಾ ವಿಚಾರಗಳನ್ನು, ತಮ್ಮ ಜೀವನದಲ್ಲಿಯೇ ಅನುಷ್ಠಾನಕ್ಕೆ ತಂದು ದೇವಮಾನವರೆನಿಸಿಕೊಂಡರು ರಾಮಕೃಷ್ಣರು. ಅವರ ದಿವ್ಯತೆಯ ಅರಿವು ಸ್ವಲ್ಪವಾದರೂ ಸಾಮಾನ್ಯನಿಗೆ ಆದರೆ ಅವನು ಸಾಧಕನಾಗಿ ಬಿಡುತ್ತಾನೆ. ಒಬ್ಬ ಭಕ್ತ ರಾಮಕೃಷ್ಣರಲ್ಲಿ ವ್ಯಾಕುಲತೆಯ ವ್ಯಾಖ್ಯಾನ ಏನು? ಎಂದು ಪ್ರಶ್ನಿಸಿದಾಗ ಅವರು ಹೀಗೆ ಉತ್ತರಿಸುತ್ತಾರೆ :
ವ್ಯಾಕುಲತೆ ಬೇಕು, ಯಾವ ರೀತಿಯಾಗಿ ಮಗು ತನ್ನ ತಾಯಿಯನ್ನು ಕಾಣದೆ ಚಡಪಡಿಸುತ್ತಾ ಏಕಪ್ರಕಾರವಾಗಿ ರೋದಿಸುವುದೋ ಅದೇ ರೀತಿಯಾಗಿ ವ್ಯಾಕುಲಚಿತ್ತನಾಗಿ ಭಗವದ್ದರ್ಶನಕ್ಕೆ ಅತ್ತಾಗ ಭಗವಂತನೂ ತತ್​ಕ್ಷಣ ದೊರೆಯುತ್ತಾನೆ ಎಂದು ವಿವರಿಸುತ್ತಾರೆ. ಅವರು ನೀಡುವ ಉದಾಹರಣೆ ಇದು: ಅರುಣೋದಯವಾದರೆ ಪೂರ್ವ ದಿಕ್ಕು ಹೊಂಬಣ್ಣವಾಗುತ್ತದೆ. ಆಗ ತಿಳಿಯುತ್ತದೆ ಸೂರ್ಯೋದಯಕ್ಕೆ ಇನ್ನು ಹೆಚ್ಚು ಹೊತ್ತು ಇಲ್ಲ ಎಂದು. ಅದೇ ರೀತಿಯಲ್ಲಿ ಯಾರಲ್ಲಿಯೇ ಆಗಲಿ ಭಗವಂತನಿಗಾಗಿ ಅತ್ಯಂತ ಅಗಾಧವಾದ ವ್ಯಾಕುಲತೆ ಉಂಟಾಗಿರುವುದು ಕಂಡುಬಂದರೆ, ಆಗ ಚೆನ್ನಾಗಿ ಗೊತ್ತಾಗುತ್ತದೆ ಆ ವ್ಯಕ್ತಿ ಭಗವದ್ದರ್ಶನಕ್ಕೆ ಹೆಚ್ಚು ಕಾಯಬೇಕಿಲ್ಲ ಎಂದು. ಪರಮಹಂಸರ ಈ ಸರಳ ಉಪಾಯ ಸಾಧಕರಿಗೆ ಭಗವದ್ದರ್ಶನದ ಮಾರ್ಗ ಅತಿ ಸುಲಭವಾಗಿ ಲಭ್ಯವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಮನುಜರು ತಾತ್ಕಾಲಿಕ, ಅಶಾಶ್ವತವಾದ ಪ್ರಾಪಂಚಿಕ ವಿಷಯ ವಸ್ತುಗಳಿಗೆ, ಸುಖ, ಸಂಪತ್ತಿಗೆ, ಹೆಣ್ಣು, ಹೊನ್ನು, ಮಣ್ಣಿಗಾಗಿ ಕೊಳಗದಷ್ಟು ಕಣ್ಣೀರನ್ನು ಸುರಿಸಿ ವೇದನೆ ಪಡುತ್ತಾರೆ. ಆದರೆ ಯಾರೂ ಸಹ ಭಗವದ್ದರ್ಶನ ಪಡೆಯಲು ವ್ಯಾಕುಲಚಿತ್ತರಾಗುವುದಿಲ್ಲ. ಹಾಗಾದಲ್ಲಿ ಭಗವದ್ದರ್ಶನ ಹೇಗೆ ಲಭ್ಯವಾದೀತು? ಈಗಲಾದರೂ ರಾಮಕೃಷ್ಣರು ಬೋಧಿಸಿದಂತೆ ಶುದ್ಧ ಹೃದಯ, ಶುದ್ಧ ಮನಸ್ಸು ಹಾಗೂ ಶುದ್ಧ ಭಕ್ತಿಯಿಂದ, ವ್ಯಾಕುಲತೆಯಿಂದ ಯಾರು ಅಹರ್ನಿಷಿ ಪ್ರಯತ್ನಿಸುತ್ತಾರೆಯೋ ಅಂತಹ ಸಾಧಕರಿಗೆ, ಭಕ್ತರಿಗೆ ಖಂಡಿತಾ ಭಗವದ್ದರ್ಶನವಾಗುವುದರಲ್ಲಿ ಸಂದೇಹವಿಲ್ಲ.
| ಸ್ವಾಮಿ ಜಪಾನಂದ

ಬಿರು ಬಿಸಿಲಿಗೆ ಕಾದು ಕೆಂಡದಂತಾಗಿದ್ದ ರಾಜಧಾನಿಗೆ ತಂಪೆರೆದ ಮಳೆರಾಯ: ಬೆಂಗಳೂರು ಮಂದಿ ಫುಲ್​ ಖುಷ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
