ಬೆಂಗಳೂರು:ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿಯನ್ನು ಕಾಂಗ್ರೆಸ್ ವರಿಷ್ಠರು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಿರುವುದು ತಲೆಬಿಸಿಯನ್ನುಂಟು ಮಾಡಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 20 ಗೆಲ್ಲಲೇಬೇಕೆಂದು ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಕಾಂಗ್ರೆಸ್​ಗೆ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಅವಕಾಶ ಇರುವುದು ರಾಜ್ಯದಲ್ಲಿ. ಆದ್ದರಿಂದಲೇ ಹೈಕಮಾಂಡ್ ರಾಜ್ಯದ ಕಡೆ ಹೆಚ್ಚಿನ ನಿಗಾ ವಹಿಸಿದೆ. ಕೆಲ ಸಚಿವರನ್ನು ಅಭ್ಯರ್ಥಿಗಳನ್ನಾಗಿ ಚುನಾವಣಾ ಕಣಕ್ಕೆ ಇಳಿಸಲಾಗುತ್ತದೆ ಎಂಬ ವದಂತಿಗಳಿವೆ. ಆದರೆ ಕಾಂಗ್ರೆಸ್ ಮೂಲಗಳ ಪ್ರಕಾರ ಅಂತಹ ಪ್ರಯತ್ನಕ್ಕೆ ಪಕ್ಷ ಮುಂದಾಗುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ.
ಬಿಜೆಪಿ ಆಪರೇಷನ್ ಕಮಲ ನಡೆಸಬಹುದೆಂಬ ಭಯ ಇರುವುದರಿಂದಲೇ ಸಚಿವರನ್ನು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಮಾಡಿ ಮತ್ತಷ್ಟು ಸಮಸ್ಯೆ ತಂದುಕೊಳ್ಳಲು ಕಾಂಗ್ರೆಸ್ ವರಿಷ್ಠರು ಸಿದ್ಧರಿಲ್ಲ. ಆದ್ದರಿಂದಲೇ ನವದೆಹಲಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ನಿಲ್ಲಿಸುವ ಬಗ್ಗೆ ಚರ್ಚೆಯಾಗಿಲ್ಲ. ಆದರೆ ಚುನಾವಣೆ ಗೆಲ್ಲುವ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಮೂಲಗಳು ಹೇಳಿವೆ. ಜಿಲ್ಲಾ ಉಸ್ತುವಾರಿ ಸಚಿವರು ಪಕ್ಷ ಗುರುತಿಸುವ ಅಭ್ಯರ್ಥಿಗಳ ಜತೆ ಎಲ್ಲ ಮುಖಂಡರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ. ಅದು ಈಗ ದೊಡ್ಡ ಹೊಣೆಯಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಗೊಂದಲಗಳಿವೆ. ಅವುಗಳನ್ನು ಬಗೆಹರಿಸಿಕೊಳ್ಳುವುದು ಸಚಿವರಿಗೆ ಇರುವ ಸವಾಲಿನ ಕೆಲಸವಾಗಿದೆ.
ಹೊರಗಿನವರು ಎಲ್ಲಿ ಉಸ್ತುವಾರಿ?:ರಾಜ್ಯದಲ್ಲಿ 31 ಜಿಲ್ಲೆಗಳಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಪೌರಾಡಳಿತ ಸಚಿವ ರಹೀಂಖಾನ್ ಅವರಿಗೆ ಮಾತ್ರ ಯಾವುದೇ ಜಿಲ್ಲೆಯ ಉಸ್ತುವಾರಿ ಇಲ್ಲ. ರಾಮನಗರದ ಡಿಕೆ ಶಿವಕುಮಾರ್ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರಿನ ದಿನೇಶ್ ಗುಂಡೂರಾವ್ ದಕ್ಷಿಣ ಕನ್ನಡ ಜಿಲ್ಲೆಗೆ, ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿ, ಬೆಂಗಳೂರಿನ ರಾಮಲಿಂಗಾರೆಡ್ಡಿ ರಾಮನಗರ, ಕೆ.ಜೆ. ಜಾರ್ಜ್ ಚಿಕ್ಕಮಗಳೂರು, ಬೈರತಿ ಸುರೇಶ್ ಕೋಲಾರ, ಜಮೀರ್ ಅಹಮದ್ ವಿಜಯನಗರ, ಮೈಸೂರಿನ ಕೆ. ವೆಂಕಟೇಶ್ ಚಾಮರಾಜನಗರ, ಕಲಬುರಗಿಯ ಶರಣ ಪ್ರಕಾಶ್ ಪಾಟೀಲ್ ರಾಯಚೂರು, ರಾಯಚೂರಿನ ಬೋಸರಾಜ್ ಕೊಡಗು, ವಿಜಯಪುರ ಜಿಲ್ಲೆಯ ಶಿವಾನಂದ ಪಾಟೀಲ್ ಹಾವೇರಿ, ತುಮಕೂರಿನ ರಾಜಣ್ಣ ಹಾಸನ ಜಿಲ್ಲೆಗಳಿಗೆ ಉಸ್ತುವಾರಿಗಳಾಗಿದ್ದಾರೆ. ಇವರಿಗೆ ಈಗ ಜವಾಬ್ದಾರಿ ಹೆಚ್ಚಿನದ್ದಾಗಿದೆ.
ಅಭ್ಯರ್ಥಿಗಳ ಆಯ್ಕೆ:ಅಭ್ಯರ್ಥಿಗಳ ಆಯ್ಕೆಗೂ ಸಚಿವರು ಮುಂದಾಗಬೇಕಾಗಿದೆ. ಜಿಲ್ಲೆಯಲ್ಲಿ ಎಷ್ಟು ಜನ ಆಕಾಂಕ್ಷಿಗಳಿದ್ದಾರೆ ಎಂಬುದನ್ನು ಗಮನಿಸಿ ಅರ್ಹರ ಹೆಸರನ್ನು ರಾಜ್ಯ ನಾಯಕರಿಗೆ ತಿಳಿಸಬೇಕಾಗಿದೆ. ಅನೇಕ ಕಡೆಗಳಲ್ಲಿ ಅರ್ಹ ಅಭ್ಯರ್ಥಿಗಳಿಲ್ಲದೇ ಸಮಸ್ಯೆಗಳಿವೆ. ಅಂತಹ ಕಡೆಗಳಲ್ಲಿ ಅಭ್ಯರ್ಥಿಗಳನ್ನು ಹುಡುಕುವ ಪ್ರಯತ್ನ ಮಾಡಬೇಕಾಗಿದೆ. ಆಯ್ಕೆಯ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕಷ್ಟದ ಪರಿಸ್ಥಿತಿಯನ್ನು ಸಚಿವರು ಎದುರಿಸಬೇಕಾಗುತ್ತದೆ.
ಲೋಕಸಭಾ ಚುನಾವಣೆ ಯಲ್ಲಿ ಸಚಿವರು ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ಹೇಳಿಲ್ಲ. ಬದಲಾಗಿ ಹೆಚ್ಚು ಸ್ಥಾನ ಗೆಲ್ಲಿಸಲು ತಯಾರಿ ನಡೆಸುವಂತೆ ಎಲ್ಲರಿಗೂ ಸೂಚನೆ ನೀಡಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಿ ಅವರಿಗೆ ಅವಕಾಶ ಕೊಡುತ್ತೇವೆ.
| ಸತೀಶ ಜಾರಕಿಹೊಳಿ, ಸಚಿವ
ಯಾವ ಶಾಸಕರು, ಮಂತ್ರಿಗಳು ಲೋಕಸಭೆಗೆ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿಲ್ಲ. ದೆಹಲಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿಲ್ಲ. ಅಂಥ ಸ್ಥಿತಿ ಬಂದಿಲ್ಲ. ಒಂದೊಮ್ಮೆ ಪಕ್ಷ ಸೂಚಿಸಿದರೆ ನಾನು ಸಿದ್ಧನಿರುವೆ.
| ಶಿವರಾಜ ತಂಗಡಗಿ, ಸಚಿವ
ಲೋಕಸಭೆ ಚುನಾವಣೆಗೆ 5 ತಿಂಗಳು ಮುಂಚಿತವಾಗಿ ಅಭ್ಯರ್ಥಿಗಳ ಹೆಸರು ಘೊಷಣೆ ಮಾಡಲು ಪಕ್ಷ ನಿರ್ಧರಿಸಿದೆ. ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಓರ್ವ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರನ್ನು ವೀಕ್ಷಕರನ್ನಾಗಿ ಸದ್ಯದಲ್ಲೇ ನೇಮಕ ಮಾಡಲು ಅ. 2ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ತೀರ್ವನಿಸಲಾಗಿದೆ.
| ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವುದಕ್ಕೆ ವರಿಷ್ಠರು ಗುರಿ ನಿಗದಿ ಮಾಡಿರುವುದು ಸಚಿವರಿಗೆ ಎರಡು ರೀತಿಯ ಆತಂಕ ತಂದೊಡ್ಡಿದೆ. ಮೊದಲನೆಯದು ಚುನಾವಣೆ ಸೋತರೆ ತಲೆ ದಂಡವಾಗಬಹುದು ಎಂಬುದಾದರೆ, ಎರಡನೇಯದು ಚುನಾವಣೆಗೆ ಸಂಪನ್ಮೂಲ ಕ್ರೋಡೀಕರಣ. ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಬಹುತೇಕ ಜಿಲ್ಲೆಗಳಿಗೆ ಅದೇ ಜಿಲ್ಲೆಯ ಸಚಿವರೇ ಉಸ್ತುವಾರಿಯಾಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಹೊರ ಜಿಲ್ಲೆಯವರು ಉಸ್ತುವಾರಿಗಳು. ಜಿಲ್ಲೆಯಲ್ಲಿ ಈಗ ಸಚಿವಾಕಾಂಕ್ಷಿಗಳಾಗಿದ್ದವರಿಗೆ ಮಂತ್ರಿ ಸ್ಥಾನ ಸಿಗದೆ ಅಸಮಾಧಾನವಾಗಿದೆ. ಅಂತಹ ಶಾಸಕರನ್ನು ಜತೆಗೆ ಸೇರಿಸಿಕೊಂಡು ಚುನಾವಣೆ ಸಿದ್ಧತೆ ಸಾಧ್ಯವೇ ಎಂಬ ಪ್ರಶ್ನೆ ಸಚಿವರಲ್ಲಿದೆ. ನಿಗಮ ಮತ್ತು ಮಂಡಳಿಗಳಿಗೆ ಸರ್ಕಾರ ನೇಮಕ ಮಾಡಿದರೂ ಅದು ಕಾರ್ಯಕರ್ತರ ನಡುವೆ ಅಸಮಾಧಾನಕ್ಕೆ ಕಾರಣವಾಗಬಹುದೆಂಬ ಭಯವಿದೆ. ಸರ್ಕಾರ ಐದು ಗ್ಯಾರಂಟಿಗಳ ಕಡೆ ಹೆಚ್ಚಿನ ನಿಗಾವಹಿಸಿದೆ. ಹಾಗಾಗಿ ಚುನಾವಣೆಗೆ ಸಂಪನ್ಮೂಲ ಸಂಗ್ರಹಿಸುವುದು ಹೇಗೆ ಎಂಬ ತಲೆಬಿಸಿಯೂ ಉಂಟಾಗಿದೆ ಎಂದು ಹೆಸರು ಬಹಿರಂಗಕ್ಕೆ ಒಪ್ಪದ ಸಚಿವರೊಬ್ಬರು ಹೇಳುತ್ತಾರೆ.
2000 ರೂ. ನೋಟು ಹಿಂಪಡೆ ವಿಚಾರ: ಆರ್​ಬಿಐನಿಂದ ಮತ್ತೆ ಮನವಿ; ಇಲ್ಲಿದೆ ವಿವರ..

ಇನ್ನು ಜನನ ಪ್ರಮಾಣಪತ್ರವೇ ಎಲ್ಲದಕ್ಕೂ ದಾಖಲೆ; ಸಂಸತ್ತಲ್ಲಿ ಮಹತ್ವದ ಮಸೂದೆ ಅಂಗೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 8 =
Remember me
