ಬೇರೆ ಯಾವುದೇ ಹಬ್ಬಗಳಿಗಿಂತ ಹೆಚ್ಚಾಗಿ ದೀಪಗಳನ್ನು ಬೆಳಗುವುದು ದೀಪಾವಳಿ ಹಬ್ಬದಲ್ಲಿ ಮಾತ್ರ. ನರಕಚತುರ್ದಶಿ, ದೀಪದಾನ-ಲಕ್ಷ್ಮೀಪೂಜಾ ಮತ್ತು ಬಲಿಪಾಡ್ಯ ಎಂಬ ಮೂರೂ ಪರ್ವಗಳು ಸೇರಿ ದೀಪಾವಳಿ ಉತ್ಸವವಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇದನ್ನು ಆಚರಿಸುವುದರಿಂದ ಭಾರತೀಯ ಸಂಸ್ಕೃತಿಯ ಏಕತೆಯ ಕೆಲವೇ ವಿಷಯಗಳಲ್ಲಿ ದೀಪಾವಳಿಯೂ ಒಂದಾಗಿದೆ.
| ಡಾ. ಕೆ. ಗಣಪತಿ ಭಟ್ಟ ಕತಗಾಲ
ಚೆನ್ನಾಗಿ ಬೆಳಗುತ್ತಿರುವ ದೀಪಗಳ ಆವಲಿ (ಸಾಲು) ದೀಪಾವಲಿ ಎಂಬುದು ಸಾಮಾನ್ಯ ಅರ್ಥ. ಮೂರು ದಿನಗಳ ವಿಶಿಷ್ಟ ಪರ್ವ, ಉತ್ಸವ ಅಥವಾ ಹಬ್ಬ ಎಂಬುದು ವಿಶೇಷಾರ್ಥ. ಹೊಳಪು (ದೀಪ್ತಿ) ಎಂಬ ಅರ್ಥದಲ್ಲಿ ‘ದೀಪೀ’ ಎಂಬ ಧಾತುವಿನಿಂದ ನಿಷ್ಪನ್ನವಾದದ್ದು ದೀಪ. ಭಾರತೀಯ ವಾšಯದಲ್ಲಿ ವಿಭಿನ್ನ ನಾಮಗಳಿಂದ ದೀಪಾವಳಿಯನ್ನು ಸಂಬೋಧಿಸಿದ್ದಾರೆ. ವಾತ್ಸಾ್ಯಯನನ ಕಾಮಸೂತ್ರದಲ್ಲಿ ಯಕ್ಷರಾತ್ರಿಯೆಂದೂ ಹೇಮಚಂದ್ರನ ಸಿದ್ಧಹೇಮ ಗ್ರಂಥದಲ್ಲಿ ದೀಪಾಲಿಕಾ ಎಂದೂ ಶ್ರೀಹರ್ಷನ ನಾಗಾನಂದ ನಾಟಕದಲ್ಲಿ ದೀಪಪ್ರತಿಪದುತ್ಸವವೆಂದೂ ನೀಲಮತ ಪುರಾಣದಲ್ಲಿ ದೀಪಮಾಲಾ ಉತ್ಸವವೆಂದೂ ಉಲ್ಲೇಖವಿದೆ. 11ನೇ ಶತಮಾನದ ಶ್ರೀಪತಿಯು ತನ್ನ ಜ್ಯೋತಿಷರತ್ನಮಾಲಾ ಗ್ರಂಥದಲ್ಲಿ ದೀಪಾವಳಿಯ ಕುರಿತಾಗಿ ವಿಶೇಷವಾಗಿ ವರ್ಣಿಸಿದ್ದಾನೆ. ಅದರ ಮರಾಠಿ ವ್ಯಾಖ್ಯಾನದಲ್ಲಿ ಸರ್ವಪ್ರಥಮವಾಗಿ ದೀಪಾವಳಿಯನ್ನು ‘ದಿವಾಳಿ’ ಎಂದು ಹೆಸರಿಸಲಾಗಿದೆ. ಆದ್ದರಿಂದ ಉತ್ತರಭಾರತದಲ್ಲಿ ಇಂದಿಗೂ ‘ದಿವಾಲಿ’ ಎಂದೇ ಕರೆಯುತ್ತಾರೆ.
ಮಳೆಗಾಲ ಮುಗಿಯುತ್ತಿದ್ದಂತೆ ನವರಾತ್ರಿಯ ನಂತರ ಶರತ್ ಕಾಲದ ಸಂಧಿ ಭಾಗದಲ್ಲಿ ಬರುವುದೇ ದೀಪಾವಳಿ ಉತ್ಸವ. 14 ವರ್ಷಗಳ ವನವಾಸದ ನಂತರ ಶ್ರೀರಾಮಚಂದ್ರನು ಸೀತೆಯೊಡಗೂಡಿ ಅಯೋಧ್ಯೆಯನ್ನು ಪ್ರವೇಶಿಸಿದ್ದು ಇದೇ ದೀಪಾವಳಿಯ ಸಂದರ್ಭವೆಂದು ಪ್ರಜೆಗಳೆಲ್ಲ ದೀಪೋತ್ಸವವನ್ನು ಆಚರಿಸಿದರು. ಅದು ಇಂದಿಗೂ ಆಚರಣೆಯಲ್ಲಿದೆ.
ಇತಿಹಾಸದ ಕಲ್ಪನೆ:ಸಾಮ್ರಾಟ ಅಶೋಕನ ದಿಗ್ವಿಜಯದ ಪ್ರೀತ್ಯರ್ಥವಾಗಿ ಈ ದೀಪಾವಳಿ ಉತ್ಸವ ಆರಂಭವಾಗಿದೆ. ಮತ್ತು ಸಾಮ್ರಾಟ ಚಂದ್ರಗುಪ್ತ ವಿಕ್ರಮಾದಿತ್ಯನ ರಾಜ್ಯಾಭಿಷೇಕ ಸಮಾರಂಭದ ಸಂದರ್ಭದಲ್ಲಿ ಆರಂಭವಾದ ದೀಪೋತ್ಸವವು ಹಾಗೇ ಮುಂದುವರಿಯಿತು ಎಂದು.
ಧಾರ್ವಿುಕ ಹಿನ್ನೆಲೆ:ತ್ರಯೋದಶಿಯಂದು ಧನತ್ರಯೋದಶಿ. ಯಮರಾಜನ ಪ್ರಸನ್ನತೆಗಾಗಿ ಮತ್ತು ಅಪಮೃತ್ಯು ನಿವಾರಣೆಗಾಗಿ ಆ ದಿನ ದೀಪದಾನ ಮಾಡುವ ಪದ್ಧತಿ ಇದೆ. ಮನೆಯಲ್ಲಿರುವ ಬಂಗಾರದ ಅಲಂಕಾರಗಳನ್ನು ಸ್ವಚ್ಛ ಮಾಡಿಟ್ಟು ವಿಷ್ಣು, ಲಕ್ಷ್ಮೀ, ಕುಬೇರ, ಯೋಗಿನಿ, ಗಣೇಶ, ನಾಗ, ದ್ರವ್ಯನಿಧಿ ದೇವತೆಗಳನ್ನು ಪೂಜಿಸುವ ಪದ್ಧತಿ ಇದೆ. ಅಖಂಡವಾದ ದೀಪವಿಟ್ಟು ಪಾಯಸ ನೈವೇದ್ಯ ಮಾಡಿ, ಯಥಾಶಕ್ತಿ ಪರೋಪಕಾರ ಮಾಡಬೇಕು. ಈ ಧನ ತ್ರಯೋದಶಿ ದಿವಸವೇ ಆಯುರ್ವೆದ ಪ್ರವರ್ತಕ ಧನ್ವಂತರಿಯ ಜನ್ಮದಿನ. ಇದೇ ದಿನ ಸಂಜೆ ಗೃಹಿಣಿಯರು ಗಂಗಾಪೂಜೆಯೊಂದಿಗೆ ಸ್ನಾನದ ಪಾತ್ರೆಗೆ (ಹಂಡೆಗೆ) ನೀರು ತುಂಬುವ ಸಂಪ್ರದಾಯವಿದೆ.
ನರಕಚತುರ್ದಶಿ:ನರಕಚತುರ್ದಶಿಯನ್ನು ರೂಪಚತುರ್ದಶಿಯೆಂದೂ ಹೇಳುವುದಿದೆ. ಈ ದಿನ ಸೂರ್ಯೋದಯಕ್ಕಿಂತ ಮೊದಲು ನಾರಿಯರಿಂದ ಆರತಿ ಮಾಡಿಸಿಕೊಂಡು ಅಭ್ಯಂಗ ಸ್ನಾನ ಮಾಡುವುದು ಭಾರತದಾದ್ಯಂತ ರೂಢಿಯಲ್ಲಿದೆ. ಇದರಿಂದ ನರಕ ಭಯ ತಪ್ಪುತ್ತದೆ ಎಂಬುದು ವಾಡಿಕೆ. ಭಯದಿಂದಲಾದರೂ ನರಕಚತುರ್ದಶಿಯ ನಿಯಮವನ್ನು ಎಲ್ಲರೂ ವರ್ಷಕ್ಕೊಮ್ಮೆ ಆಚರಿಸುತ್ತಾರೆ.
ಹಿನ್ನೆಲೆ:ಪ್ರಾಗ್ಜ್ಯೋತಿಷಪುರದ ರಾಜನಾದ ನರಕಾಸುರನು ಭೂದೇವಿಯ ಆರಾಧನೆಯನ್ನು ಮಾಡಿ ವೈಷ್ಣವಾಸ್ತ್ರವನ್ನು ಸಂಪಾದಿಸಿ, ಬಲಾಢ್ಯನಾಗಿ ದೇವತೆಗಳನ್ನು ಪೀಡಿಸುತ್ತಿದ್ದ. ಇಂದ್ರಾದಿಗಳ ಪ್ರಾರ್ಥನೆಯಂತೆ ಕೃಷ್ಣ-ಸತ್ಯಭಾಮೆಯರ ಸಹಾಯದಿಂದ ನರಕಾಸುರನ ವಧೆಯಾಯಿತು. ಮತ್ತು ಕಾರಾಗಾರದಲ್ಲಿ ಬಂಧಿಸಲ್ಪಟ್ಟ 16 ಸಾವಿರ ರಾಜಕನ್ಯೆಯರ ಬಿಡುಗಡೆಯಾಯಿತು. ನರಕಾಸುರನ ಪ್ರಾರ್ಥನೆಯಂತೆ ಕೃಷ್ಣನು ವರವೊಂದನ್ನು ನೀಡಿದ. ‘ಯಾರು ನರಕಚತುರ್ದಶಿಯಂದು ಬೆಳಗ್ಗೆ ಮಂಗಲಸ್ನಾನ ಮಾಡುತ್ತಾರೋ ಅವರು ನರಕದ ಪೀಡೆಯಿಂದ ಮುಕ್ತರಾಗುತ್ತಾರೆ’ ಎಂದು.
ಲಕ್ಷ್ಮೀಪೂಜೆ:ಅಶ್ವಯುಜ ಅಮಾವಾಸ್ಯೆಯಂದು ಸಾಯಂಕಾಲ ಲಕ್ಷ್ಮೀಪೂಜೆ ಮಾಡುವುದು ಸಮಗ್ರ ಭಾರತದಲ್ಲಿ ಏಕರೂಪವಾಗಿ ರೂಢಿಯಲ್ಲಿದೆ. ಎಲ್ಲ ದೇವತೆಗಳಲ್ಲಿ ಲಕ್ಷ್ಮೀದೇವಿಯು ಶ್ರೇಷ್ಠಳು ಎಂಬ ಪ್ರಾರ್ಥನೆ ಹೀಗಿದೆ.
ನಮಸ್ತೇ ಸರ್ವದೇವಾನಾಂ ವರದಾಸಿ ಹರೆಃ ಪ್ರಿಯಾ |
ಯಾ ಗತಿಃ ತ್ವತ್ಪ್ರಪನ್ನಾನಾಂ ಸಾ ಮೇ ಸ್ಯಾತ್ತವ ದರ್ಶನಾತ್ ||
ಲಕ್ಷ್ಮಿಯ ಕಲಶದ ಎದುರಿನಲ್ಲಿ ಕುಬೇರನ ಪ್ರತಿಮೆಯನ್ನಿಟ್ಟು ಈ ರೀತಿ ಪ್ರಾರ್ಥಿಸಲಾಗುತ್ತದೆ.
ಧನದಾಯ ನಮಸ್ತುಭ್ಯಂ ನಿಧಿಪದ್ಮಾಧಿಪಾಯ ಚ |
ಭವಂತು ತ್ವತ್ಪ್ರಸಾದೇನ ಧನಧಾನ್ಯಾದಿ ಸಂಪದಃ ||
ಪುರಾಣದ ಹಿನ್ನೆಲೆಯಂತೆ ಈ ದಿನ ಮಾತ್ರ ರಾತ್ರಿಯಲ್ಲಿ ಲಕ್ಷ್ಮೀದೇವಿ ಎಲ್ಲೆಡೆ ಸಂಚಾರ ಮಾಡುತ್ತಾಳೆ.
ಬಲಿಪಾಡ್ಯ:ಪ್ರಾಚೀನ ಕಾಲದಲ್ಲಿ ವಿರೋಚನ ಎಂಬ ರಾಜನ ಮಗನಾದ ‘ಬಲಿ’ ಎಂಬ ಬಲಾಢ್ಯ ರಾಜನು ಮದಾಂಧನಾಗಿ ಲಕ್ಷ್ಮೀ ಮತ್ತು ಅನೇಕ ದೇವತೆಗಳನ್ನು ಬಂಧನದಲ್ಲಿಟ್ಟಿದ್ದನು. ಅವನ ದರ್ಪವನ್ನು ನಾಶಪಡಿಸಲು ವಿಷ್ಣು ವಾಮನಾವತಾರ ಧರಿಸಿದನು. ತ್ರಿವಿಕ್ರಮನಾಗಿ ಯಜ್ಞದ ಆರಂಭದಲ್ಲಿ ಬಲಿ ಚಕ್ರವರ್ತಿಯಿಂದ ಮೂರು ಪಾದ ಇಡುವಷ್ಟು ಭೂಮಿಯನ್ನು ದಾನ ಪಡೆದ. ಇದು ಅಶ್ವಯುಜ ಕೃಷ್ಣ ತ್ರಯೋದಶಿ, ಚತುರ್ದಶಿ ಮತ್ತು ಅಮಾವಾಸ್ಯೆಯಂದು ಘಟಿಸಿದೆ.
ವಾಮನನ ಇಚ್ಛೆಯಂತೆ ಬಲಿಯು ಲೋಕಕಲ್ಯಾಣಕ್ಕಾಗಿ ಕೇಳಿದ ವರವೊಂದು ಸಾಧಕರ ಗಮನವನ್ನೂ ಸೆಳೆಯುವಂತಿದೆ. ಈ ಮೂರು ದಿನಗಳಲ್ಲಿ ಯಾರು ಯಮನ ಪ್ರೀತಿಗಾಗಿ ದೀಪದಾನ ಮಾಡುತ್ತಾರೋ ಅವರು ಯಮಯಾತನೆಯಿಂದ ದೂರವಿರಲಿ ಎಂದು. ಬಲಿಯ ಈ ಚಿಂತನೆಯಿಂದ ತೃಪ್ತನಾದ ವಿಷ್ಣು ಮುಂದಿನ ದಿನಗಳಲ್ಲಿ ಕಾರ್ತಿಕ ಶುಕ್ಲ ಪ್ರತಿಪದೆಯು ಬಲಿಪಾಡ್ಯವೆಂದು ಪ್ರಸಿದ್ಧಿಯಾಗಲೆಂದು ಹರಸಿದನು. ಆ ದಿನ ದಾನಶೂರನಾದ ಬಲಿಚಕ್ರವರ್ತಿಯ ಪ್ರೀತಿಗಾಗಿ ದೀಪ ಹಾಗೂ ವಸ್ತ್ರದಾನ ಮಾಡುತ್ತಾರೆ.
ಬಲಿರಾಜ! ನಮಸ್ತುಭ್ಯಂ ವಿರೋಚನ ಸುತಪ್ರಭೋ |
ಭವಿಷ್ಯೇಂದ್ರಾಸುರಾರಾತೇ ಪೂಜೇಯಂ ಪ್ರತಿಗೃಹ್ಯತಾಮ್ ||
ಕಾರ್ತಿಕ ಶುದ್ಧ ಪ್ರತಿಪದೆಯನ್ನು ವಿಕ್ರಮ ಸಂವತ್ಸರದ ಆರಂಭದ ದಿನವೆಂದೂ ಹೇಳುತ್ತಾರೆ. ಈ ದಿನದಂದು ನೂತನ ವಸ್ತ್ರ ಧರಿಸುತ್ತಾರೆ. ಪಾರ್ವತಿಯು ದ್ಯೂತದಲ್ಲಿ ಪತಿಯಾದ ಶಿವನನ್ನು ಸೋಲಿಸಿದ ಕಾರಣ ದ್ಯೂತಪ್ರತಿಪದೆಯೆಂದು ಪ್ರಸಿದ್ಧವಾಯಿತು. ಈ ದಿನ ದ್ಯೂತ (ಪಗಡೆ) ಆಡುತ್ತಾರೆ. ಇದೇ ದಿನ ಕೃಷ್ಣನು ಗೋವುಗಳ ರಕ್ಷಣೆಗಾಗಿ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದ ಕಾರಣ ಗೋಪೂಜೆ ಮಾಡುವ ಪದ್ಧತಿ ಇದೆ. ಯಾರು ಗೋವರ್ಧನ ಪೂಜೆ ಮಾಡುವುದಿಲ್ಲವೋ ಅವರಿಗೆ ಕಾರ್ತಿಕಮಾಸದ ಪುಣ್ಯ ಲಭಿಸುವುದಿಲ್ಲ. ಭಾಗ್ಯ ಅಥವಾ ಲಕ್ಷ್ಮೀ ಪ್ರಾಪ್ತಿಗಾಗಿ ಆಕಾಶದೀಪ ಹಚ್ಚುವ ರೂಢಿ ಇದೆ. ಅಶ್ವಾರೂಢನಾದ ಬಲಿಚಕ್ರವರ್ತಿಯ ದೊಡ್ಡ ಪ್ರತಿಮೆ ಮಾಡಿ ಪೂಜಿಸುವ ಲೋಕಾಚಾರವಿದೆ.
ಸಾಮಾಜಿಕ ಸ್ವರೂಪ:ಸಕಲ ಸಮಾಜದವರೂ ಸಮಾನ ರೀತಿಯಲ್ಲಿ ಆಚರಿಸುವ ಹೋಳಿಯು ಬಣ್ಣದ ಹಬ್ಬವಾದರೆ ದೀಪಾವಳಿಯು ದೀಪದ ಹಬ್ಬವಾಗಿದೆ. ಕೆಲವರು ಗೋವತ್ಸ ದ್ವಾದಶಿಯಿಂದಲೇ ದೀಪಾವಳಿಯನ್ನು ಆಚರಿಸುತ್ತಾರೆ. ವ್ಯಾಪಾರಿ ವರ್ಗದವರು ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆಯನ್ನು ಮಾಡಿ, ಜಮಾ-ಖರ್ಚಿಗೆ ಸಂಬಂಧಿಸಿದ ಹೊಸ ಪುಸ್ತಕದಲ್ಲಿ ಶ್ರೀ ಅಕ್ಷರ ಮತ್ತು ಸ್ವಸ್ತಿಕ ಚಿಹ್ನೆಯನ್ನು ಬರೆಯುತ್ತಾರೆ. ದೀಪಾವಳಿಯ ಸಂದರ್ಭದಲ್ಲಿ ಯಜಮಾನನು ತನ್ನ ಕೆಲಸಗಾರರಿಗೆ ಭಕ್ಷೀಸ (ಖುಶಿ) ನೀಡುವ ಪರಂಪರೆ ಇದೆ. ಈಗಂತೂ ಕೆಲವು ಉದ್ಯಮ ಕಂಪನಿಗಳು ಉದ್ಯೋಗಿಗಳಿಗೆ ದೀಪಾವಳಿ ನೆನಪಿಗಾಗಿ ಬೋನಸ್ ನೀಡುತ್ತವೆ. ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ವಾರ್ಷಿಕ ರಜೆಯನ್ನು ದೀಪಾವಳಿಯ ಸಂದರ್ಭದಲ್ಲಿ ನೀಡುತ್ತಿದ್ದರು. ಹೊಸ ದಂಪತಿಗೆ ಉಡುಗೊರೆ ಕೊಡುವ ರೀತಿ-ರಿವಾಜು ಇದೆ. ಅಶೌಚ ಅಥವಾ ದುಃಖದ ವಾತಾವರಣವಿದ್ದರೆ ಆ ಕುಟುಂಬದಲ್ಲಿ ದೀಪಾವಳಿಯನ್ನು ಆಚರಿಸುವುದಿಲ್ಲ.
ಒಟ್ಟಾರೆ ಎಲ್ಲ ಹಬ್ಬಗಳಲ್ಲಿ ದೀಪಾವಳಿ ಅಧಿಕ ಲೋಕಪ್ರಿಯವಾಗಿದೆ. ಸುಖ- ಸಮೃದ್ಧಿಗಳ ಉತ್ಸವವಾಗಿದೆ. ಕೃಷಿಕರು, ಉದ್ಯೋಗಪತಿಗಳು, ವ್ಯಾಪಾರಿಗಳು ತಾವು ವರ್ಷವಿಡೀ ಕಷ್ಟದಿಂದ ಸಂಪಾದಿಸಿದ ಸಂಪತ್ತನ್ನು ಉಪಭೋಗಿಸುವ ಮಹೋತ್ಸವವಾಗಿದೆ. ಮಾನವನ ವಿಶೇಷ ಆಕಾಂಕ್ಷೆಗಳನ್ನು ಪೂರೈಸುವ ಮಹಾಪರ್ವವಾಗಿದೆ. ಭಾರತೀಯ ಪ್ರಾಚೀನ ಸಂಸ್ಕೃತಿ- ಪರಂಪರೆಯನ್ನು ಪೀಳಿಗೆಯಿಂದ ಪೀಳಿಗೆಗೆ ಪ್ರವಹಿಸುವ ಸಂತೋಷದ ಸಂದರ್ಭ ಇದಾಗಿದೆ.
ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಔಷಧವಾಗಿದೆ. ದೇಶದ ಸಾಂಸ್ಕೃತಿಕ ಏಕತೆಯನ್ನು ಪೋಷಿಸುವ ಸೂತ್ರವಾಗಿದೆ. ಪರಸ್ಪರ ಸಹೋದರತ್ವ ಅಥವಾ ಮಿತ್ರತ್ವ ಪ್ರತಿಪಾದಕ ಸಮಾರಂಭವಾಗಿದೆ. ದೇಶದ ಲೌಕಿಕ-ಅಲೌಕಿಕ ಸಮಗ್ರತೆಯನ್ನು ಎತ್ತಿ ಹಿಡಿಯುವ ಸಮಾರಾಧನೆಯಾಗಿದೆ.
(ಲೇಖಕರು ಸಂಸ್ಕೃತ-ಸಂಗೀತ ವಿದ್ವಾಂಸರು)
ಬೆಳಕಿನ ಹಬ್ಬ ದೀಪಾವಳಿಯಂದು ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
