ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 100 ರೂ.ನಾಣ್ಯ, ಅಂಚೆ ಚೀಟಿ ಮತ್ತು ಲಕೋಟೆ ಬಿಡುಗಡೆ ಮಾಡಿದರು. ಭಾರತದ ಅಟಾರ್ನಿ ಜನರಲ್ ವೆಂಕಟರಮಣಿ, ಕರ್ನಾಟಕ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್, ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್, ಬ್ಯಾಂಕ್ ಚೇರ್ಮನ್ ಪಿ.ಪ್ರದೀಪ್ ಕುಮಾರ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ಉಪಸ್ಥಿತರಿದ್ದರು.
ಕರ್ಣಾಟಕ ಬ್ಯಾಂಕ್ ರಾಜ್ಯದ ಹೆಮ್ಮೆ ಹಾಗೂ ಅಭಿಮಾನ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರ ಪ್ರಮಾದವೋ ಏನೋ, ನಮ್ಮ ಮಣ್ಣಿನಲ್ಲಿ ಹುಟ್ಟಿದ ಸಿಂಡಿಕೇಟ್, ಕಾಪೋರೇಷನ್ ಬ್ಯಾಂಕ್​ಗಳು ಕಣ್ಮರೆಯಾಗಿವೆ. ನಿಮ್ಮ ಮುಂದಿನ ಗುರಿ ನಾವು ಕಳೆದುಕೊಂಡಿರುವ ನಮ್ಮ ಮಣ್ಣಿನ ಬ್ಯಾಂಕುಗಳನ್ನು ಮತ್ತೆ ಕರ್ಣಾಟಕ ಬ್ಯಾಂಕ್ ಮೂಲಕ ವಾಪಸ್ ಪಡೆದು, ನಮ್ಮ ಗೌರವ ಸ್ವಾಭಿಮಾನ ಮರಳಿ ಪಡೆಯುವುದು. ಈ ಬಗ್ಗೆ ಕರ್ಣಾಟಕ ಬ್ಯಾಂಕಿನ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪಣ ತೊಡಬೇಕು. ನಮ್ಮ ಮಣ್ಣಿನಲ್ಲಿ ಹುಟ್ಟಿ ಕಣ್ಮರೆಯಾಗಿರುವ ಬ್ಯಾಂಕುಗಳನ್ನು ಕರ್ಣಾಟಕ ಬ್ಯಾಂಕ್ ಜತೆ ವಿಲೀನ ಮಾಡಿಕೊಳ್ಳುವಂತಾಗಬೇಕು ಎಂದು ಆಶಿಸಿದರು.
ಕರ್ಣಾಟಕ ಬ್ಯಾಂಕ್ ಈ ಪ್ರದೇಶವನ್ನು ಹೇಗೆ ರಕ್ಷಣೆ ಮಾಡಿ ಕೊಳ್ಳಬೇಕು? ಎಂದು ಅಧ್ಯಯನ ಮಾಡಬೇಕು. ಇಲ್ಲಿನವರು ವಿದ್ಯಾವಂತರು. ಅವರು ಉದ್ಯೋಗ ಹುಡುಕಿ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಹೋಗುತ್ತಿದ್ದಾರೆ. ಇವರನ್ನು ರಾಜ್ಯದಲ್ಲೇ ಉಳಿಸಿ ಕೊಳ್ಳಲು ರಾಜ್ಯ ಸರ್ಕಾರಕ್ಕೆ ವರದಿ ನೀಡಿ ಎಂದು ಕೋರಿದರು. ಕರ್ಣಾಟಕ ಬ್ಯಾಂಕ್ ಹೆಸರು ಅಜರಾಮರವಾಗಿ ಉಳಿಯ ಬೇಕು. ಬ್ಲಡ್ ಮತ್ತು ದುಡ್ಡು ಚಲಾವಣೆಯಲ್ಲಿ ಇದ್ದಾಗ ಮಾತ್ರ ಅನುಕೂಲ ಎಂದು ಸ್ವಾಮಿಗಳು ಯಾವಾಗಲು ಹೇಳುತ್ತಾರೆ. ಗ್ರಾಹಕರು ಶಕ್ತಿಯುತರಾದಾಗ ಮಾತ್ರ ಬ್ಯಾಂಕ್ ಬಲಿಷ್ಠವಾಗಲು ಸಾಧ್ಯ ಎಂದರು.
ಕ್ಷೇತ್ರದ ಸಂಶೋಧನೆ: ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಬ್ಯಾಂಕ್​ಗಳು ಕುಸಿಯುತ್ತಿರುವ ಸಂದರ್ಭ ಭಾರತೀಯ ಬ್ಯಾಂಕುಗಳು ಗಟ್ಟಿಯಾಗಿವೆ. ನಮ್ಮ ಬ್ಯಾಂಕುಗಳ ನಾವೀನ್ಯ ಸೇವೆ ನಾವು ಉಳಿಯಲು ಕಾರಣ. ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳ ಅಧ್ಯಯನ ಮತ್ತು ಪರಿಹಾರಕ್ಕಾಗಿ ಸಂಶೋಧನೆ ನಡೆಸಲು ಸಂಸ್ಥೆಗಳನ್ನು ತೆರೆಯುವ ಅಗತ್ಯವಿದೆ. ಮಂಗಳೂರಿನಲ್ಲಿ ಜನ್ಮ ತಳೆದ
ಕರ್ಣಾಟಕ ಬ್ಯಾಂಕ್ ಗ್ರಾಹಕಸ್ನೇಹಿ ಸೇವೆ ಮೂಲಕ ದೇಶವ್ಯಾಪಿ ಎಲ್ಲ ವರ್ಗದ ಜನರನ್ನು ಜೋಡಿಸಿದೆ ಎಂದರು.
ಬ್ಯಾಂಕಿನ ಚೇರ್ಮನ್ ಪಿ.ಪ್ರದೀಪ್ ಕುಮಾರ್ ಮಾತನಾಡಿ, 100 ವರ್ಷಗಳಲ್ಲಿ ಗ್ರಾಹಕರ ಅವಿರತ ಅನಿಯಮಿತ ಬೆಂಬಲ, ಸಿಬ್ಬಂದಿಯ ಸೇವಾ ಬದ್ಧತೆ, ನವೀನತೆಗೆ ತೆರೆದುಕೊಳ್ಳುವ ಆಡಳಿತ ವರ್ಗದ ಗುಣದಿಂದಾಗಿ ಬ್ಯಾಂಕ್ ಬೆಳೆಯುವಂತಾಯಿತು ಎಂದರು.
ಕರ್ಣಾಟಕ ಬ್ಯಾಂಕಿನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್ ಸ್ವಾಗತಿಸಿದರು. ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ವಂದಿಸಿದರು. ಚೇರ್ಮನ್ ಪಿ.ಪ್ರದೀಪ್ ಕುಮಾರ್, ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು. ಚೈತ್ರಾ ವಾಸುದೇವನ್ ಕಾರ್ಯಕ್ರಮ ನಿರ್ವಹಿಸಿದರು. ಖ್ಯಾತ ಗಾಯಕರಾದ ವಿಜಯ ಪ್ರಕಾಶ್, ಶಂಕರ್ ಮಹಾದೇವನ್ ಸಂಗೀತ ಕಾರ್ಯಕ್ರಮ ಸಭಿಕರನ್ನು ಮುದಗೊಳಿಸಿತು.
ನೂರು ರೂ.ನಾಣ್ಯ, ಅಂಚೆಚೀಟಿ ಬಿಡುಗಡೆ
ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ 100 ರೂ. ನಾಣ್ಯ, ನೂರು ವರ್ಷಗಳ ಸಾಧನೆಯ ಸ್ಮರಣಸಂಚಿಕೆಯನ್ನು ಡಿ.ಕೆ.ಶಿವಕುಮಾರ್ ಲೋಕಾರ್ಪಣೆ ಮಾಡಿದರು. ಇದಕ್ಕೂ ಮೊದಲು ಬ್ಯಾಂಕಿನ ಶತಮಾನೋತ್ಸವ ಭವನವನ್ನು ಉದ್ಘಾಟಿಸಿದರು. ಇಂಡಿಯಾ ಪೋಸ್ಟ್ ವತಿಯಿಂದ ನೂತನ ಪೋಸ್ಟಲ್ ಸ್ಟ್ಯಾಂಪ್ ಮತ್ತು ಲಕೋಟೆಯನ್ನು ಆರ್.ವೆಂಕಟರಮಣಿ ಮತ್ತು ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು. ಶತಮಾನೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಕರ್ಣಾಟಕ ಬ್ಯಾಂಕಿನ ಒಟ್ಟು 15 ಹೊಸ ಶಾಖೆಗಳನ್ನು ಸಾಂಕೇತಿಕವಾಗಿ ಡಿ.ಕೆ.ಶಿವಕುಮಾರ್ ವರ್ಚುವಲ್ ವ್ಯವಸ್ಥೆಯಲ್ಲಿ ಉದ್ಘಾಟಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nineteen =
Remember me
