
ಬೆಂಗಳೂರು:ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಸಿಬಿಐ ತನಿಖೆಗೆ 2019ರಲ್ಲಿ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನ ವಾಪಸ್ಸು ಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.ಸಿಬಿಐ ತನಿಖೆಯನ್ನು ಬಹುಪಾಲು ಪೂರ್ಣಗೊಳಿಸಿರುವ ಹಂತದಲ್ಲಿ ಪ್ರಕರಣವನ್ನು ಹಿಂಪಡೆಯುವುದು ಸರಿಯೇ? ಎನ್ನುವ ಬಗ್ಗೆ ಸಂಪುಟದಲ್ಲಿ ಸುಧೀರ್ಘ ಚರ್ಚೆ ನಡೆದಿದ್ದು, ವಿಧಾನಸಭಾಧ್ಯಕ್ಷರ ಅನುಮತಿಯೇ ಇಲ್ಲದೆ, ಎ್ಐಆರ್ ದಾಖಲಿಸದೆ ಅಂದಿನ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿರುವುದು ಕಾನೂನಾತ್ಮಕವಾಗಿ ವಿರುದ್ದವಾಗಿದೆ ಎನ್ನುವ ಅಭಿಪ್ರಾಯವನ್ನು ಸಂಪುಟ ವ್ಯಕ್ತಪಡಿಸಿದೆ.ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನೀಡಿರುವ 28 ಪುಟಗಳ ಅಭಿಪ್ರಾಯದ ಮೇಲಿನ ಟಿಪ್ಪಣಿ ಮೇಲೆ ಚರ್ಚೆ ನಡೆಯುವ ಸಂದರ್ಭದಲ್ಲಿ ಸಾಧಕ ಬಾಧಕಗಳ ಬಗ್ಗೆಯೂ ಪರಾಮರ್ಶೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಪುಟದ ಹಿರಿಯ ಸಚಿವರೊಬ್ಬರು ಖಚಿತಪಡಿಸಿದ್ದಾರೆ.ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 25-09-2019ರಲ್ಲಿ ಡಿ.ಕೆ.ಶಿವಕುಮಾರ್ ಮತ್ತಿತರರ ಮೇಲಿನ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ಆದರೆ ಬಿಜೆಪಿಯವರ ಮೇಲೆ ಇದ್ದ ಆರೋಪ ಪ್ರಕರಣಗಳನ್ನು ಪರಿಗಣಿಸದೆ, ಕೇವಲ ಡಿ.ಕೆ.ಶಿವಕುಮಾರ್ ಅವರ ಪ್ರಕರಣವನ್ನು ಮಾತ್ರವೇ ಸಿಬಿಐಗೆ ವಹಿಸಿರುವುದರ ಹಿಂದೆ ರಾಜಕೀಯ ದ್ವೇಷ ಅಡಗಿರುವುದನ್ನು ತೋರಿಸುತ್ತದೆ ಎಂದು ಸಂಪುಟ ಅಭಿಪ್ರಾಯಿಸಿದೆ.ಕೊನೆ ಹಂತದಲ್ಲಿರುವ ಪ್ರಕರಣ ಈಗ ದಿಢೀರ್ ವಾಪಸ್ಸು ಪಡೆಯುವುದು ನ್ಯಾಯಾಲಯದ ವಿರುದ್ದ ಆಗಬಹುದೇ? ಎನ್ನುವ ಪ್ರಶ್ನೆಯನ್ನು ಸಂಪುಟ ಸದಸ್ಯರೊಬ್ಬರು ಕೇಳಿದ್ದಕ್ಕೆ ಹಿಂದೆ ಸುಪ್ರೀಂಗೆ ಹೋಗಿರುವ 3 ಪ್ರಕರಣಗಳಲ್ಲಿ ಸಂಪುಟ ನಿರ್ಣಯ ಮಾಡಿ ಪ್ರಕರಣ ವಾಪಸ್ಸು ಪಡೆಯಲಾಗಿದೆ. ಆಗಲೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿಲ್ಲ ಮತ್ತು ಯಾವ ಸಮಸ್ಯೆಯೂ ಉದ್ಭವಿಸಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿಯೂ ರಾಜ್ಯ ಸರ್ಕಾರ ತೆಗೆದುಕೊಂಡಿದ್ದ ತೀರ್ಮಾನವನ್ನು ಅದೇ ರಾಜ್ಯ ಸರ್ಕಾರವೇ ವಾಪಸ್ಸು ಪಡೆಯುತ್ತಿರುವುದರಿಂದ ಸಮಸ್ಯೆ ಏನೂ ಆಗುವುದಿಲ್ಲ ಎನ್ನುವ ವಿವರಣೆಯನ್ನು ನೀಡಲಾಗಿದೆ.ಸಿಬಿಐ ತನಿಖೆಗೆ ವಹಿಸಿರುವ ತೀರ್ಮಾನವನ್ನು ಮಾತ್ರ ವಾಪಸ್ಸು ಪಡೆಯುತ್ತಿದ್ದೇವೆ. ಹೊರತು ತನಿಖೆ ಬೇಡ ಎಂದು ಸರ್ಕಾರ ಹೇಳುತ್ತಿಲ್ಲ. ಲೋಕಾಯುಕ್ತ ಅಥವಾ ಸಿಒಡಿ ಮೂಲಕವೂ ತನಿಖೆ ಮಾಡಿಸಬಹುದಾಗಿದೆ ಎನ್ನುವುದು ಸರ್ಕಾರದ ನಿಲುವಾಗಿದೆ ಎಂದು ಸಂಪುಟದಲ್ಲಿ ಪ್ರತಿಪಾದಿಸಲಾಗಿದೆ.ಕರ್ನಾಟಕ ವ್ಯವಹಾರ ಹಂಚಿಕೆ ನಿಯಮಾವಳಿ 1977 1ನೇ ಅನುಸೂಚಿ ಐಟಂ 30ರ ಅನ್ವಯ 2019ರಲ್ಲಿ ಸಿಬಿಐ ತನಿಖೆಗೆ ವಹಿಸಿರುವ ಆದೇಶವನ್ನು ವಾಪಸ್ಸು ಪಡೆದು ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸ್‌ಗೆ ವಹಿಸಬಹುದಾಗಿದೆ. ಯಾಕೆಂದರೆ ಹಿಂದೆ ಸಿಬಿಐಗೆ ವಹಿಸುವ ಮುನ್ನ ರಾಜ್ಯ ಪೊಲೀಸರ ಅಸಮರ್ಥತೆಯನ್ನು ಯಾವ ರೀತಿಯಲ್ಲಿಯೂ ಪರಿಶೀಲಿಸಿರುವುದಿಲ್ಲ ಮತ್ತು ಇದಕ್ಕೆ ಸಂಬಂದಿಸಿದ ಪ್ರೊಾರ‌್ಮದಲ್ಲಿ ಕಡ್ಡಯಾಗೊಳಿಸಿರುವ ಅಂತರರಾಜ್ಯ ಅಥವಾ ದೇಶವ್ಯಾಪ್ತಿಯ ಪರಿಣಾಮಗಳು ಇರುವಂತ ಯಾವ ಸಮರ್ಥನೆಯೂ ಇರುವುದಿಲ್ಲ. ಹಾಗಾಗಿ ಸಿಬಿಐಗೆ ವಹಿಸಿರುವುದಕ್ಕೆ ಯಾವುದೇ ಸಮರ್ಥನೀಯ ಕಾರಣಗಳು ಇಲ್ಲ ಎಂದು ಸಂಪುಟ ಅಭಿಪ್ರಾಯಿಸಿದೆ.
28 ಪುಟಗಳ ಅಭಿಪ್ರಾಯರಾಜ್ಯ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಡಿಕೆಶಿ ಅವರ ಪ್ರಕರಣದಲ್ಲಿ 28 ಪುಟಗಳ ಅಭಿಪ್ರಾಯವನ್ನು (ಕಡತ ಸಂಖ್ಯೆ ಎಚ್‌ಡಿ 4 ಸಿಒಡಿ 2023 ವಿಷಯ ಸಂಖ್ಯೆ ಸಿ 552/2023) ಮಂಡಿಸಿದ್ದಾರೆ. ಹಿಂದಿನ ಅಡ್ವಕೇಟ್ ಜನರಲ್ ಅಭಿಪ್ರಾಯವನ್ನು ಪಡೆಯದೆ ಆಗಿನ ಸಿಎಂ ಯಡಿಯೂರಪ್ಪ ಅವರ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಈ ಪ್ರಕ್ರಿಯೆ ಕಾನೂನುಗಳ ಲೋಪಕ್ಕೆ ಕಾರಣವಾಗಿದೆ ಎನ್ನುವ ಅಂಶವನ್ನು ಪಟ್ಟಿ ಮಾಡಲಾಗಿದೆ.
ನ.29ಕ್ಕೆ ವಿಚಾರಣೆತನಿಖೆಗೆ ತಡೆಯಾಜ್ಞೆ ತೆರವು ಕೋರಿ ಸಿಬಿಐ ಸುಪ್ರಿಂ ಮೆಟ್ಟಿಲೇರಿದ್ದು, ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿಯೇ ಇತ್ಯರ್ಥಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿಡಿಕೆಶಿ ಪ್ರಕರಣ ನ.29ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಮಹತ್ವ ಪಡೆದುಕೊಂಡಿದೆ. ವಿರೋಧ ಪಕ್ಷಗಳಿಗೆ ಈ ನಿರ್ಣಯ ರಾಜಕೀಯ ಅಸವಾಗುವ ಸಾಧ್ಯತೆಯಿದೆ.
ಸಂಪುಟಕ್ಕೆ ಡಿಕೆಶಿ ಗೈರುಸಚಿವ ಸಂಪುಟದಲ್ಲಿ ತಮ್ಮ ಪ್ರಕರಣದ ವಿಷಯ ಚರ್ಚೆಗೆ ಬರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಭೆಗೆ ಗೈರಾಗಿದ್ದರು. ತಮ್ಮ ಮೇಲಿರುವ ಸಿಬಿಐಗೆ ವಹಿಸಿರುವ ಪ್ರಕರಣವನ್ನು ವಾಪಸ್ಸು ಪಡೆಯುವ ವಿಷಯ ಸಂಪುಟದಲ್ಲಿ ಚರ್ಚೆಗೆ ಬರುವುದರಿಂದ ತಾವು ಸಭೆಗೆ ಬರುವುದು ಸೂಕ್ತವಲ್ಲ ಎನ್ನುವ ಸಲಹೆ ಹಿನ್ನೆಲೆಯಲ್ಲಿ ಸಂಪುಟಕ್ಕೆ ಗೈರು ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ 577 ಪ್ರಕರಣ ದಾಖಲುಡಿಕೆಶಿ ಪ್ರಕರಣ ಮಾತ್ರ ಸಿಬಿಐಗೆ
ಆದಾಯ ಮೀರಿ ಆಸ್ತಿ ಸಂಪಾದನೆಯಲ್ಲಿ ರಾಜ್ಯದಲ್ಲಿ 577 ಪ್ರಕರಣ ದಾಖಲಾಗಿದ್ದು, ಡಿಕೆ ಶಿವಕುಮಾರ್ ಪ್ರಕರಣವನ್ನು ಹೊರತುಪಡಿಸಿ ಯಾವೊಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿರುವ ಉದಾಹರಣೆಗಳಿಲ್ಲ. ಸಚಿವ ಜಮೀರ್ ಅಹಮದ್ ಖಾನ್ ಪ್ರಕರಣದಲ್ಲಿಯೂ ಆದಾಯ ಇಲಾಖೆ ದಾಳಿಯಾಗಿದ್ದು, ಆ ಪ್ರಕರಣವನ್ನು ಹಿಂದೆ ಇದ್ದ ಬಿಜೆಪಿ ಸರ್ಕಾರ ಲೋಕಾಯುಕ್ತ ತನಿಖೆಗೆ ನೀಡಿದೆ. ಅಭಯಕುಮಾರ್ ಪಾಟೀಲ್ ಪ್ರಕರಣದಲ್ಲಿ ಆಗಿನ ಸ್ಪೀಕರ್ ತನಿಖೆಗೆ ಅನುಮತಿಯನ್ನೆ ನೀಡಿರಲಿಲ್ಲ.
ಡಿಕೆ ಶಿವಕುಮಾರ್ ಪ್ರಕರಣದ ಹಾದಿ…*2017 ಆಗಸ್ಟ್ 2 ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ*ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿಯಲ್ಲಿ ಡಿಕೆಶಿ ಮೇಲೆ ಜಾರಿ ನಿರ್ದೇಶನಾಲಯದಿಂದಲೂ ಪ್ರಕರಣ ದಾಖಲು*2-9-2019 ರಂದು ಡಿಕೆ ಶಿವಕುಮಾರ್ ಬಂಧನ*ಜಾರಿ ನಿರ್ದೇಶನಾಲಯ ಪತ್ರ ಆಧಾರಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯಲ್ಲಿ 9-9-2019 ರಂದು ಸಿಬಿಐಗೆ ವಹಿಸಿದ ಆಗಿನ ಬಿಜೆಪಿ ಸರ್ಕಾರ*ರಾಜ್ಯ ಸರ್ಕಾರದ ಅನುಮತಿ ಆಧರಿಸಿ 3-10-2020ರಂದು ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್ 13(2), 13(1)(ಇ) ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲು*ಸಿಬಿಐ ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿದ್ದ ಡಿಕೆ ಶಿವಕುಮಾರ್ ಅವರ ಅರ್ಜಿ ಏಕ ಸದಸ್ಯ ಪೀಠದಿಂದ 20-4-2023 ರಂದು ವಜಾ*ಡಿಕೆಶಿ ಅವರಿಂದ ವಿಭಾಗಿಯ ಪೀಠಕ್ಕೆ ಮೇಲ್ಮನವಿ. ವಿಭಾಗೀಯ ಪೀಠದಿಂದ 12-6-2023ರಂದು ಮುಂದಿನ ವಿಚಾರಣೆಯವರೆಗೆ ತಡೆಯಾಜ್ಞೆ.*ಹೈಕೋರ್ಟ್ ತಡೆಯಾಜ್ಞೆ ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಸಿಬಿಐ ಅರ್ಜಿ, 15 ದಿನದಲ್ಲಿ ಪ್ರಕರಣ ಇತ್ಯರ್ಥಪಡಿಸುವಂತೆ ಹೈಕೋರ್ಟ್‌ಗೆ ಸುಪ್ರೀಂ ನಿರ್ದೇಶನ*ನ.22ರಂದು ನಡೆಯಬೇಕಾಗಿದ್ದ ವಿಚಾರಣೆಗೆ ಡಿಕೆಶಿ ಪರ ವಕೀಲರು ಮತ್ತು ಸಿಬಿಐ ಜಂಟಿ ಮೆಮೊ ಸಲ್ಲಿಸಿದ್ದರಿಂದ ನ.29ಕ್ಕೆ ವಿಚಾರಣೆಗೆ ಮುಂದೂಡಿಕೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 3 =
Remember me
