ಬೆಳಗಾವಿ:ಈ ರಾಜ್ಯದಲ್ಲಿ ಯಾವುದೇ ಉದ್ಯಮಿ ಅಥವಾ ರಾಜಕಾರಣಿ ಸಿಬಿಐ ಕೈಗೆ ಸಿಕ್ಕಿಲ್ಲ, ನಾವು ಮಾತ್ರ ಸಿಕ್ಕಿದ್ದೇವೆ. ಏನು ಮಾಡಬೇಕೋ ಅದನ್ನು ಮಾಡಲಿ, ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಒಂದು ರೌಂಡ್ ಕಳುಹಿಸಿದ್ದಾರೆ. ಈಗ ಮತ್ತೊಂದು ಬಾರಿ ಕಳುಹಿಸಲು ಏನೆಲ್ಲಾ ಮಾಡಬೇಕೋ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ‌.
ಸಿಬಿಐ ಅಧಿಕಾರಿಗಳು ಸೋಮವಾರ ಬೆಂಗಳೂರಿನ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಹಾಗೂ ಟ್ರಸ್ಟಿಗಳನ್ನು ವಿಚಾರಣೆ ಮಾಡಿದ್ದಾರೆ. ಆದರೆ ಅವರು ಯಾವ ಮಾಹಿತಿ ಪಡೆದಿದ್ದಾರೆ ಗೊತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರ ಸಿಬಿಐಗೆ ತನಿಖೆ ಮಾಡುವ ಅಧಿಕಾರ ಕೊಟ್ಟಿದ್ದು, ಅವರು ಏನು ಮಾಡುತ್ತಾರೋ ಮಾಡಲಿ. ಅವರಿಗೆ ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆಯೋ ಅದನ್ನು ಮಾಡಲಿ ಎಂದು ಹೇಳಿದರು.ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನನ್ನ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದರು. ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೆ. ಈ ಪ್ರಕರಣವನ್ನು ಸ್ಥಳೀಯ ತನಿಖಾ ಸಂಸ್ಥೆಗಳ ಮೂಲಕವೇ ತನಿಖೆ ಮಾಡಿಸಬಹುದು. ಇದೇನು ವಿಶೇಷ ಪ್ರಕರಣವಲ್ಲ ಎಂಬ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ನಾನು ನ್ಯಾಯಾಲಯಕ್ಕೆ ತಿಳಿಸಿದ್ದೆ. ಆದರೂ ರಾಜಕೀಯ ಒತ್ತಡದಿಂದ ಸಿಬಿಐಗೆ ನೀಡಿದ್ದರು ಎಂದರು.
ನಾನು ಕೆಲವು ತಿಂಗಳ ಹಿಂದೆಯೇ ಕಾಗದ ಬರೆದು ಈ ಪ್ರಕರಣದಲ್ಲಿ ಎಫ್ಐಆರ್ ಹಾಕಿ ಎರಡು ವರ್ಷ ಆಗಿದೆ. ನೀವು ಯಾವುದೇ ತನಿಖೆ ಮಾಡಿಲ್ಲ. ನಿಮಗೆ ಯಾವುದೇ ಸ್ಪಷ್ಟತೆ ಬೇಕಿದ್ದರೂ ಕೇಳಿ, ನಾನು ಸ್ಪಷ್ಟನೆ ನೀಡುತ್ತೇನೆ ಎಂದು ತಿಳಿಸಿದ್ದೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದೆ ಎಂದು ಹೇಳಿದರು.ಈಗಲೂ ತೊಂದರೆ ನೀಡಬೇಕು ಎಂದು ತೀರ್ಮಾನಿಸಿದ್ದಾರೆ. ಅದರಲ್ಲಿ ಅನುಮಾನವಿಲ್ಲ. ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಸಮಯಾವಕಾಶ ಕೇಳಿದ್ದೆ. ಆದರೂ ಪಟ್ಟು ಹಿಡಿದು ವಿಚಾರಣೆಗೆ ಕರೆದರು. ನನ್ನ ಜತೆ ವ್ಯವಹಾರ ಮಾಡಿರುವವರಿಗೂ ತೊಂದರೆ ನೀಡುತ್ತಿದ್ದಾರೆ. ನಾನು ಯಾರಿಗಾದರೂ ಮೋಸ ಮಾಡಿ, ತೊಂದರೆ ಕೊಟ್ಟಿದ್ದರೆ, ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಬೇಕಾದರೂ ನೀಡಲಿ. ನನ್ನ ಬದುಕು, ವ್ಯವಹಾರ, ಶಿಕ್ಷಣ ಸಂಸ್ಥೆ, ರಾಜಕೀಯ ಬದುಕು ಎಲ್ಲವೂ ಪಾರದರ್ಶಕವಾಗಿದೆ. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ತನಿಖೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂಧನ ಸಚಿವನಾಗಿದ್ದಾಗಲೂ ಒಂದೂ ಅಕ್ರಮ ನಡೆಸಿಲ್ಲ. ಆದರೂ ನನ್ನ ಮೇಲೆ ಅಕ್ರಮ ಆಸ್ತಿ ಸಂಪಾದನೆ ಎಂದು ಹೇಗೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು ತನಿಖೆಗೆ ನೀಡಿ 3 ವರ್ಷ ಆಗಿದೆ. ಇಷ್ಟು ಹೊತ್ತಿಗೆ ಎಲ್ಲ ತನಿಖೆ ಮಾಡಿ, ನಾನು ಏನು ತಪ್ಪು ಮಾಡಿದ್ದೇನೆ ಎಂದು ಹೇಳಬಹುದಿತ್ತಲ್ಲವೇ? ಆದರೆ ಯಾವುದೂ ಆಗಿಲ್ಲ ಎಂದರು.
ಮನಸಿಗೆ ಬಹಳ ನೋವಾಗುತ್ತದೆ. ನನಗಿಂತ ನನ್ನ ಜತೆ ವ್ಯಾಪಾರ, ವ್ಯವಹಾರ ಮಾಡಿದ ಜನರಿಗೆ ತೊಂದರೆ ನೀಡುತ್ತಿರುವುದು ನೋವು ತಂದಿದೆ. ಒಬ್ಬ ವಕೀಲರಿಗೆ 5 ಲಕ್ಷ ಶುಲ್ಕ ನೀಡಿದ್ದೆ. ಅವರಿಗೆ ಸಮನ್ಸ್ ನೀಡಿದ್ದಾರೆ. ನಾನು ಪ್ರವಾಸಕ್ಕೆ ನನ್ನ ಸ್ನೇಹಿತನನ್ನು ಅಮೆರಿಕಕ್ಕೆ ಕಳುಹಿಸಿದ್ದೆ. ಆ ಟ್ರಾವೆಲ್ ಏಜೆಂಟ್ ಗೆ ನೊಟೀಸ್ ನೀಡಿದ್ದಾರೆ. ಇನ್ನು ಎಷ್ಟು ಜನಕ್ಕೆ ನೋಟೀಸ್ ನೀಡಿದ್ದಾರೆ ಎಂಬುದರ ಬಗ್ಗೆ ಪಟ್ಟಿ ನೀಡಲು ಹೋಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯವರು ಏನಾದರೂ ಹೇಳಲಿ. ಅವರ ಮಂತ್ರಿಗಳು, ನಾಯಕರ ಮೇಲೂ ಇಂತಹದೇ ಪ್ರಕರಣಗಳಿವೆ. ಅವರ ಪ್ರಕರಣಗಳನ್ನು ಸಿಬಿಐಗೆ ಯಾಕೆ ನೀಡಿಲ್ಲ ಎಂದ ಅವರು ಸಂಸದ ಶ್ರೀನಿವಾಸ್ ಪ್ರಸಾದ್ ಹಣದ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಹಿಂದೆಯೂ ಪ್ರತಾಪ್ ಸಿಂಹ ಭಾಷಣ ಮಾಡುತ್ತಾ ವಿವಿ ಕುಲಪತಿ ಹುದ್ದೆಗೆ 3-5 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಕುಲಪತಿಗಳನ್ನು ನೇಮಕ ಮಾಡುವ ರಾಜ್ಯಪಾಲರ ಕಚೇರಿ ಮೇಲೆ ಸಂಸದರು ಇಂತಹ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಬೊಮ್ಮಾಯಿ ಅವರು ಸಿಬಿಐ ಅಥವಾ ಇಡಿ ತನಿಖೆಗೆ ಯಾಕೆ ನೀಡಿಲ್ಲ? ಎಂದು ಪ್ರಶ್ನಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 3 =
Remember me
