| ಗೊ.ರು.ಚನ್ನಬಸಪ್ಪ
‘ಮಹಾಪುರುಷರ ಜೀವನದಿಂದ ನಮ್ಮ ಜೀವನವೂ ಮಹೋನ್ನತವಾಗಬಹುದು. ನಮ್ಮನ್ನು ಅಗಲಿದವರು ತಮ್ಮ ಕಾಲದ ಮರಳಿನ ಮೇಲೆ ನಡೆದು ಹೆಜ್ಜೆಗುರುತುಗಳನ್ನು ಬಿಟ್ಟುಹೋಗಿರುತ್ತಾರೆ’ ವಿಶ್ವಪ್ರಸಿದ್ಧ ಕವಿ ಎಚ್.ಡಬ್ಲ್ಯೂ ಲಾಂಗ್​ಫೆಲೋ ಅವರ ಈ ನುಡಿಗಳು, ನಮ್ಮ ಮಧ್ಯೆಯೇ ಇದ್ದು, 17 ವರ್ಷಗಳ ಹಿಂದೆ ನಮ್ಮನ್ನಗಲಿದ ನ್ಯಾಯಮೂರ್ತಿ ಡಿ.ಎಂ. ಚಂದ್ರಶೇಖರ್ ಅವರನ್ನು ನೆನಪಿಗೆ ತರುತ್ತವೆ. ಅವರು ಬದುಕಿದ್ದಿದ್ದರೆ ಈಗ ‘ಶತಾಯುಷಿ’ (26.09.1920) ಎನಿಸಿಕೊಳ್ಳುತ್ತಿದ್ದರು. ಅವರ ಜನ್ಮ ಶತಮಾನೋತ್ಸವದ ಸ್ಮರಣೆಯಲ್ಲಿ ಕೆಲ ನೆನಪುಗಳು.
ನಿಧನರಾಗುವ 13 ವರ್ಷಗಳ ಹಿಂದೆಯೇ ಅವರು ಬರೆದಿಟ್ಟಿದ್ದ ಉಯಿಲಿನಲ್ಲಿ-‘ನನ್ನ ನಿಧನವಾದಾಗ ಕಣ್ಣುಗಳನ್ನು ಕಣ್ಣಾಸ್ಪತ್ರೆಗೆ ಕೊಡಿ. ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ಒಪ್ಪಿಸಿ. ಶ್ರದ್ಧಾಂಜಲಿ, ಪುಣ್ಯತಿಥಿ ಇತ್ಯಾದಿಗಳು ಬೇಡ. ಅದಕ್ಕಾಗಿ ಮಾಡುವ ವೆಚ್ಚವನ್ನು ಅನಾಥಾಲಯದ ಮಕ್ಕಳ ಕ್ಷೇಮಕ್ಕೆ ಬಳಸಿ. ನನಗಾಗಿ ಯಾವುದೇ ರೀತಿಯ ಸ್ಮಾರಕ ಬೇಡ’ ಎಂದು ತಿಳಿಸಿದ್ದರು.
ಡಿ.ಎಂ.ಚಂದ್ರಶೇಖರ್ ಅವರ ಸರಳ ಬದುಕು, ಸ್ವಾತಂತ್ರ್ಯಪ್ರೇಮ, ರಾಷ್ಟ್ರಭಕ್ತಿ, ನ್ಯಾಯನಿಷ್ಠೆ, ಸಾಮಾಜಿಕ ಕಳಕಳಿ ಸದಾ ಪ್ರೇರಣೆ ನೀಡುವಂಥ ಸಂಗತಿಗಳು. ಅಲ್ಲದೆ, ನೊಂದವರ ಬಗೆಗೆ ಅವರಿಗಿದ್ದ ಅನುಕಂಪ, ಕಾಯಕ-ದಾಸೋಹಗಳ ನೀತಿ, ಸದುವಿನಯದ ಸಂಪನ್ನತೆ, ಸ್ನೇಹಸೌಹಾರ್ದ, ಸ್ವಹಿತ ಮೀರಿದ ಅವರ ಸಮಷ್ಟಿ ಚಿಂತನ ಅನುಕರಣೀಯ. ಅವರು ಎಲ್ಲರಿಗೂ ಬಲ್ಲವರಾಗಿದ್ದು ನ್ಯಾಯಮೂರ್ತಿಗಳಾಗಿಯೇ. 20 ವರ್ಷಗಳ ಕಾಲ ನ್ಯಾಯಾಂಗದ ಸೇವೆ ಸಲ್ಲಿಸಿದರೆ, ನಿವೃತ್ತರಾದ ನಂತರ 20 ವರ್ಷ ಸಮಾಜಸೇವೆ ಸಲ್ಲಿಸಿದರು.
ಡಿ.ಎಂ.ಸಿ. ಶ್ರೇಷ್ಠ ನ್ಯಾಯಮೂರ್ತಿಗಳಾಗಿದ್ದರು. ವೈಯಕ್ತಿಕವಾಗಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆೆ, ಉದಾತ್ತ ಚಿಂತನೆ, ಸದ್ದಿಲ್ಲದೆ ಸೇವೆಗೆ ಬರೆದ ವ್ಯಾಖ್ಯಾನವಾಗಿದ್ದರು; ಬಸವಣ್ಣನವರ ವಿಚಾರಧಾರೆಗೆ ಶರಣರಾಗಿದ್ದರು. ಅವರು ಸಹಸ್ರಾರು ಅನಾಥರು, ಅಂಗನ್ಯೂನರು, ಅವಕಾಶವಂಚಿತರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಿದರು. ಸ್ವಯಂ-ಸೇವಾ ಸಂಸ್ಥೆಗಳತ್ತ ಹೆಚ್ಚು ಗಮನ ಹರಿಸಿದರು. ಅಂತಹ ಅನೇಕ ಸಂಸ್ಥೆಗಳ ಸ್ಥಾಪಕರಾಗಿ, ಉತ್ತೇಜಕ, ಪೋಷಕ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದರು. ರಾಜಕೀಯ ಏರು-ಪೇರುಗಳ ಬಗೆಗೆ ಅವರು ಎಂದೂ ತಲೆಕೆಡಿಸಿಕೊಳ್ಳಲಿಲ್ಲ. ಅವರ ಕಣ್ಣ ಮುಂದಿದ್ದುದೆಲ್ಲ ಜನಸೇವೆಯೊಂದೇ.
ನ್ಯಾಯಮೂರ್ತಿಯಾಗಿ ಡಿ.ಎಂ.ಸಿ ಎಷ್ಟೋ ತೀರ್ಪಗಳನ್ನು ನೀಡಿರಬಹುದು. ಆದರೆ, ಸ್ವತಂತ್ರ ಭಾರತದ ಇತಿಹಾಸದಲ್ಲೇ ದಾಖಲೆ ಎನಿಸುವಂತೆ ಅವರು ನೀಡಿದ ತೀರ್ಪೆಂದರೆ, ನಮ್ಮ ಪ್ರಜಾಪ್ರಭುತ್ವಕ್ಕೇ ಕಳಂಕ ತಂದಿದ್ದ 1975ರ ತುರ್ತಪರಿಸ್ಥಿತಿ ಸಂದರ್ಭದಲ್ಲಿ ನೀಡಿದ ತೀರ್ಪ. ಸಂವಿಧಾನದ 21-22ನೆಯ ನಿಬಂಧನೆಯ ಮೂಲಭೂತ ಹಕ್ಕುಗಳನ್ನು ರದ್ದುಪಡಿಸಿ ರಾಷ್ಟ್ರಪತಿಗಳು ಆಜ್ಞೆ ಹೊರಡಿಸಿದ್ದರೂ, ‘ನ್ಯಾಯಾಲಯ ಸಾರ್ವಜನಿಕ ಸ್ಥಾನಬದ್ಧತೆಯ ಸಂವಿಧಾನ ಬದ್ಧತೆಯನ್ನು ಪರಿಶೀಲಿಸಬಹುದೆಂದು ಹೇಳಿ, ತುರ್ತಪರಿಸ್ಥಿತಿಯಲ್ಲೂ ವ್ಯಕ್ತಿಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ನಿರಾಕರಿಸುವಂತಿಲ್ಲ’ ಎಂಬ ದಿಟ್ಟ ತೀರ್ಪನ್ನು ನೀಡಿ, ರಾಷ್ಟ್ರದ ಗಮನ ಸೆಳೆದರು. ಅಂದಿನ ಕೇಂದ್ರ ಸರ್ಕಾರ ಒಂದು ರೀತಿಯ ಸೇಡೆಂಬಂತೆ ಅವರನ್ನು ಅಲಹಾಬಾದ್ ಉಚ್ಚನ್ಯಾಯಾಲಯಕ್ಕೆ ವರ್ಗಾಯಿಸಿದರೂ ಅವರು ಆ ಬಗೆಗೆ ಚಿಂತಿಸಲಿಲ್ಲ. ಡಿ.ಎಂ.ಸಿ ದಿಟ್ಟತನ ಮತ್ತು ಸ್ವಾಭಿಮಾನಕ್ಕೆ ಸಾಕ್ಷಿ ಹೇಳುವ ಒಂದು ಪ್ರಸಂಗ. ಅವರು ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರಾಗಿದ್ದಾಗ ಗೋವಿಂದ ಭಟ್ ಮುಖ್ಯ ನ್ಯಾಯಾಧೀಶರಾಗಿದ್ದರು. ಆಗ ಇಲ್ಲಿ ಭೇಟಿ ನೀಡಿದ ಸುಪ್ರೀಂ ಕೋರ್ಟ್​ನ ಆಗಿನ ಮುಖ್ಯ ನ್ಯಾಯಮೂರ್ತಿ ಎ.ಎನ್.ರಾಯ್, ‘ಕರ್ನಾಟಕ ಹೈಕೋರ್ಟ್ ನಡವಳಿಕೆಗಳನ್ನು ವೇದಿಕೆ ಮೇಲೆ ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಬೇಕು’ ಎಂದು ಸೂಚನೆ ನೀಡಿದರು. ಅದಕ್ಕೆ ಇಲ್ಲಿನ ಪೂರ್ಣಪೀಠ ವಿರೋಧ ವ್ಯಕ್ತಪಡಿಸಿತು. ಅವರಿಗೆ ಚಹಾಕೂಟ ಏರ್ಪಡಿಸಿದಾಗ, ನ್ಯಾ.ರಾಯ್ ತಮ್ಮ ಸೂಚನೆಯನ್ನು ವಿರೋಧಿಸಿದ್ದೇಕೆ? ಎಂದು ಕೇಳಿದರು. ಆಗ ಡಿ.ಎಂ.ಸಿ-‘ಸಂವಿಧಾನದ ಪ್ರಕಾರ, ಹೈಕೋರ್ಟ್​ಗಳು ಸುಪ್ರೀಂ ಕೋರ್ಟಿನ ಆಡಳಿತಾಧೀನವಲ್ಲ. ಆದ್ದರಿಂದ ನೀವು ವೇದಿಕೆ ಮೇಲೆ ಕೂರುವುದು ತಪ್ಪುಸಂದೇಶ ನೀಡುತ್ತದೆ’ ಎಂದರು. ಆಗ ನ್ಯಾ.ರಾಯ್, ‘ಹೈಕೋರ್ಟ್​ಗಳ ತೀರ್ಪಗಳನ್ನು ರದ್ದುಗೊಳಿಸುವ ಅಧಿಕಾರ ಸುಪ್ರೀಂ ಕೋರ್ಟಿಗಿದೆ. ಅಷ್ಟೇ ಅಲ್ಲ, ಹೈಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ನಾವೇ ಶಿಫಾರಸು ಮಾಡಬೇಕು’ ಎಂದಾಗ, ಡಿ.ಎಂ.ಸಿ-‘ನಮಗೆ ಸುಪ್ರೀಂ ಕೋರ್ಟ್ ಜಡ್ಜ್ ಆಗುವ ಇಚ್ಛೆಯೇನೂ ಇಲ್ಲ. ಆದರೆ ನಮಗೆ ಮುಖ್ಯವಾದದ್ದು ರಾಜ್ಯವೊಂದರ ಉಚ್ಚನ್ಯಾಯಾಲಯದ ಘನತೆ-ಗೌರವಗಳ ರಕ್ಷಣೆ’ ಎಂದು ನೇರವಾಗಿ ಹೇಳಿದರು.
ಡಿ.ಎಂ.ಸಿ ಅವರದು ಅಸಾಧಾರಣ ವ್ಯಕ್ತಿತ್ವ. ನ್ಯಾಯಾಂಗದಂತೆಯೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಬಗೆಗೂ ಅಪಾರ ಶ್ರದ್ಧಾಸಕ್ತಿ ಇಟ್ಟುಕೊಂಡಿದ್ದರು. ಅವರು ಒಳ್ಳೆಯ ಲೇಖಕರೂ ಆಗಿದ್ದರು. ಸಮಾಜಸೇವೆ, ದಾನ-ಧರ್ಮಕಾರ್ಯ, ಕಾಯಕ-ದಾಸೋಹ, ಆರೋಗ್ಯ, ಯೋಗ, ಪ್ರಕೃತಿ ಚಿಕಿತ್ಸೆ, ಸ್ವದೇಶಿ ಚಳವಳಿ, ಅರಣ್ಯ ಸಂರಕ್ಷಣೆ, ಮಾನವ ಹಕ್ಕುಗಳು, ಸಂವಿಧಾನ, ಶಾಸಕಾಂಗ, ನ್ಯಾಯಾಂಗ- ಹೀಗೆ ರಾಷ್ಟ್ರೀಯ ಮಹತ್ವದ ಅನೇಕ ವಿಷಯಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ. ಅನೇಕ ವೇದಿಕೆಗಳಲ್ಲಿ ವಿಚಾರಪೂರ್ಣವಾಗಿ ಮಾತನಾಡಿದ್ದಾರೆ. ‘ಜನಜಾಗೃತಿ ಉಂಟಾದರೆ ಉಳಿದೆಲ್ಲ ಅಭಿವೃದ್ಧಿ ಸುಗಮವಾಗುತ್ತದೆ’ ಎಂಬುದು ಅವರ ದೃಢನಂಬಿಕೆಯಾಗಿತ್ತು.
ವಿಶ್ವಪ್ರಸಿದ್ಧ ಸಂತ ಜಲಾಲುದ್ದೀನ್ ರೂಮಿಯ ಒಂದು ಸೂಕ್ತಿಯಿದೆ: ‘ನೀನು ಈ ಜಗತ್ತನ್ನು ಬಿಡುವಾಗ ನಿನ್ನ ವಿಶ್ರಾಂತಿ ಸ್ಥಳವನ್ನು ನೆಲದಲ್ಲಿ ಹುಡುಕಬೇಡ, ಜನರ ಹೃದಯದಲ್ಲಿ ಕಂಡುಕೋ’. ಆ ಸೂಕ್ತಿಯಂತೆ ಜನ-ಹೃದಯದಲ್ಲಿ ನೆಲೆಗೊಂಡವರು ಡಿ.ಎಂ. ಚಂದ್ರಶೇಖರ್!
(ಲೇಖಕರು ಸಾಹಿತಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 8 =
Remember me
