ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಮೂರು ಪಕ್ಷಗಳು ಮಾಡು ಇಲ್ಲವೇ ಮಡಿ ಹೋರಾಟ ನಡೆಸಿ, ಜನತಾ ನ್ಯಾಯಾಲಯ ತೀರ್ಪಿನತ್ತ ಕಣ್ಣು ನೆಟ್ಟಿದ್ದಾರೆ.
ಪ್ರಚಾರದ ಆರ್ಭಟದ ನಂತರ ತೆರೆಮರೆಯ ಮತಸಮರವೂ ಮುಗಿದಿದೆ. ಜನಾದೇಶಕ್ಕೆ ವೇದಿಕೆ ಸಜ್ಜಾಗಿದ್ದು, ಮತದಾರಪ್ರಭುಗಳು ವಿದ್ಯುನ್ಮಾನ ಮತಯಂತ್ರದಲ್ಲಿ ತಮ್ಮ ತೀರ್ಪು ಬುಧವಾರ ದಾಖಲಿಸಲಿದ್ದಾರೆ.
ಸ್ವಂತ ಬಲದ ಮೇಲೆ ಮುಂದಿನ ಐದು ವರ್ಷ ಆಡಳಿತದ ಚುಕ್ಕಾಣಿ ಹಿಡಿಯಲು ಆಡಳಿತ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜಿದ್ದಾಜಿದ್ದಿಗೆ ಇಳಿದವು. ಮೂರು ಪಕ್ಷಗಳ ಜಂಗೀಕುಸ್ತಿಗೆ ‘ಜನ ಸೇವೆ’ಯಷ್ಟೇ ಕಾರಣವಲ್ಲ. ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯಕ್ಕೆ ಹೊಸ ಭಾಷ್ಯ ಬರೆದು, ರಾಷ್ಟ್ರ ರಾಜಕಾರಣಕ್ಕೆ ಸಂದೇಶ ರವಾನಿಸಲು ಬಯಸಿವೆ.
ಹೆಚ್ಚಿದ ನಿರೀಕ್ಷೆ:ಕಳೆದ ಒಂದು ವರ್ಷದಿಂದ ಮೂರು ಪಕ್ಷಗಳ ನಾಯಕರು ಸಿದ್ಧತೆ ನಡೆಸಿದ್ದರು. ಆರು ತಿಂಗಳ ಹಿಂದೆ ಪೂರ್ವಭಾವಿ ತಾಲೀಮು ಚುರುಕುಗೊಳಿಸಿದರು. ವಿಧಾನ ಮಂಡಲದ ಬಜೆಟ್ ಅಧಿವೇಶನ ಮುಗಿದ ಬೆನ್ನಲ್ಲೇ ಚುನಾವಣೆ ಮೂಡ್​ಗೆ ಜಾರಿದವು. ಈ ನಿಟ್ಟಿನಲ್ಲಿ ಜನಾಭಿಪ್ರಾಯ ಮೂಡಿಸಲೆಂದು ಯಾತ್ರೆಗಳನ್ನು ಕೈಗೊಂಡವು.
ಖಾಸಗಿ ಸಂಸ್ಥೆಗಳ ಸಮೀಕ್ಷಾ ವರದಿಗಳನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರೊಜೆಕ್ಟ್ ಮಾಡಿ, ಪಕ್ಷದ ಪರ ಅಲೆಯಿದೆ ಎಂದು ಬಿಂಬಿಸಲು ಪ್ರಯತ್ನಿಸಿದವು. ಆದರೆ ಜೆಡಿಎಸ್ ಸಾಕಷ್ಟು ಮುಂಚಿತವಾಗಿ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ, ಈ ಬಾರಿ ಚುನಾವಣೆಯಲ್ಲಿ ಮುಂದಿರುವುದು ತಾನೇ ಎಂದು ಸಾರಿತು. ವಿವಿಧ ತಂತ್ರಗಾರಿಕೆಗಳನ್ನು ಬಳಸಿಕೊಂಡು ಮೂರು ಪಕ್ಷಗಳ ನಾಯಕರು, ಪ್ರಮುಖರ ಬೆವರಿಸಿದ್ದೇ ಬಂತು, ಮತದಾರರ ನಾಡಿಮಿಡಿತ ತಿಳಿದುಕೊಳ್ಳಲಾಗಲಿಲ್ಲ.
ಹೆಚ್ಚಿಸಿದ ಕಾವು:ಯಾವುದೇ ಪಕ್ಷದ ಪರ ಅಲೆಯಿಲ್ಲದ, ಜನರ ಮನಸ್ಸಿನಲ್ಲೇನಿದೆ ಎಂದು ತಿಳಿಯದ ಕಾರಣಕ್ಕೆ ಜನರ ಮನಗೆಲ್ಲಲು ಬಿರುಸಿನ ಓಡಾಟ, ಅಬ್ಬರದ ಪ್ರಚಾರಕ್ಕೆ ಮೊರೆ ಹೋದವು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸೋನಿಯಾ ಗಾಂಧಿ, ಅಮಿತ್ ಷಾ, ಜೆ.ಪಿ.ನಡ್ಡಾ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ವಾಧ್ರಾ ಮುಂತಾದ ರಾಷ್ಟ್ರೀಯ ನಾಯಕರ ಮಿಂಚಿನ ಸಂಚಾರ ಗಮನಸೆಳೆದವು. ಸ್ಪರ್ಧಾ ಅಖಾಡ ಕಾವು, ಉಮೇದುವಾರರ ಉಮೇದಿ ಹಾಗೂ ಕಾರ್ಯಕರ್ತರಲ್ಲಿ ಬಲ ತುಂಬಿದರೂ ಜನರು ತಮ್ಮ ನಿಲುವು ಗೌಪ್ಯವಾಗಿ ಇಟ್ಟುಕೊಂಡಿದ್ದಾರೆ. ಅಭಿವೃದ್ಧಿ ಮಂತ್ರ, ಬಗೆ ಬಗೆಯ ತಂತ್ರಗಳ ಪ್ರಯೋಗದ ಬಳಿಕವೂ ನಿಚ್ಚಳವಾದ ಮುನ್ಸೂಚನೆ ಸಿಗದ ಕಾರಣ ಮೂರು ಪಕ್ಷಗಳು ಆತಂಕದ ಮಡುವಿಗೆ ಬಿದ್ದಿವೆ.
ಸಮೀಕ್ಷಾ ವರದಿ ಆಧರಿಸಿ ರಣವ್ಯೂಹ:ಜೆಡಿಎಸ್ ಒಂದು ಬಾರಿ, ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಬಾರಿ ಬಾಹ್ಯ ಮತ್ತು ಆಂತರಿಕ ಸಮೀಕ್ಷಾ ವರದಿ ಆಧರಿಸಿ ರಣವ್ಯೂಹ ಹೆಣೆದದ್ದು ಮತ್ತೊಂದು ವಿಶೇಷ. ಮೂರು ಪಕ್ಷಗಳ ಚುನಾವಣಾ ಪೂರ್ವ ತಾಲೀಮು, ಅಭ್ಯರ್ಥಿಗಳ ಆಯ್ಕೆ, ನಂತರ ಪ್ರಚಾರದ ಕಾರ್ಯತಂತ್ರಗಳಲ್ಲಿ ಸಮೀಕ್ಷಾ ವರದಿಗಳು ನಿರ್ಣಾಯಕಪಾತ್ರವಹಿಸಿವೆ.
ಹಾಲಿ, ಮಾಜಿ ಶಾಸಕರು, ಆಕಾಂಕ್ಷಿಗಳ ಕುರಿತು ಕ್ಷೇತ್ರಾವಾರು ನಿಕಟತೆ, ಜನಾಭಿಪ್ರಾಯ, ವರ್ಚಸ್ಸು ತಿಳಿದುಕೊಳ್ಳಲು ಬಿಜೆಪಿ, ಕಾಂಗ್ರೆಸ್ ಎರಡು ಹಂತದಲ್ಲಿ ಸಮೀಕ್ಷೆ ಕೈಗೊಂಡವು. ಸಮೀಕ್ಷೆ ವರದಿಯಂತೆ ಅಭ್ಯರ್ಥಿಗಳ ಆಯ್ಕೆ ಮಾಡಿದರೂ ಬಂಡಾಯ ಭುಗಿಲೆದ್ದಿತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ರಾಜಿಸಂಧಾನದ ಮೂಲಕ ಹಾನಿ ನಿಯಂತ್ರಿಸಿದರು. ಆದರೂ ಕೆಲವು ಕ್ಷೇತ್ರಗಳು ಹಿಡಿತಕ್ಕೆ ಬಾರದ ಕಾರಣ ಪಕ್ಷದಿದ ಆರು ವರ್ಷಗಳ ಕಾಲ ಉಚ್ಚಾಟನೆ ಅಸ್ತ್ರ ಪ್ರಯೋಗಿಸಿ ಉಳಿದವರಿಗೆ ಎಚ್ಚರಿಕೆ ಗಂಟೆ ಬಾರಿಸಿದರೆ, ಜೆಡಿಎಸ್​ಗೆ ಇಂತಹ ತಲೆನೋವು ಬಹಳ ಕಡಿಮೆ ಪ್ರಮಾಣದಲ್ಲಿ ಬಾಧಿಸಿತು. ಕಮಲಪಡೆ ಮತ್ತೂ ಒಂದು ಹೆಜ್ಜೆ ಮುಂದಿಟ್ಟಿತು. 189 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ನಂತರ ಉಳಿದ ಅಭ್ಯಥಿಗಳ ಆಯ್ಕೆಗಾಗಿ ಮತ್ತೊಂದು ಸುತ್ತಿನ ಆಂತರಿಕ ಸಮೀಕ್ಷಾ ವರದಿ ತರಿಸಿಕೊಂಡಿತು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
