ಹಾವು ಕಡಿತದಿಂದ ಮಗಳು ಮೃತಳಾದಳು ಎಂದೇ ಭಾವಿಸಿದ್ದ ಪೋಷಕರು ಎರಡು ದಿನಗಳ ನಂತರ ಮಗಳು ಕಣ್ಣು ಪಿಳುಕಿಸಿದ್ದನ್ನು ನೋಡಿ ಆನಂದಬಾಷ್ಪ ಸುರಿಸಿದ್ದು ಇನ್ನೂ ನೆನಪಿನ ಅಂಗಳದಿಂದ ಸರಿದಿಲ್ಲ. 1993ರಲ್ಲಿ ಗದಗ ನಗರದ ಜರ್ಮನ್ ಆಸ್ಪತ್ರೆಯಲ್ಲಿ ಶಿಫ್ಟ್​ನಲ್ಲಿ ಕೆಲಸ ಮಾಡುತ್ತಿದ್ದ ನನಗೆ, ‘ಹಾವು ಕಡಿತಕ್ಕೆ ಒಳಗಾದ ಬಾಲಕಿಯನ್ನು ಪೋಷಕರು ಕರೆತಂದಿದ್ದಾರೆ, ಬೇಗನೇ ಬನ್ನಿ’ ಎಂದು ರಿಸೆಪ್ಷನ್​ನಿಂದ ಕರೆ ಬಂದಿತು. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಾಲಕಿ ಆಕೆ. ಆಗ ಈಗಿನಂತೆ ಹಾವು ಕಡಿತಕ್ಕೆ ಪರಿಣಾಮಕಾರಿ ಔಷಧಗಳು ಲಭ್ಯ ಇರಲಿಲ್ಲ. ಅಷ್ಟರಲ್ಲಾಗಲೇ ಕೈ ಮೀರಿ ಹೋದಂತಿತ್ತು ಪರಿಸ್ಥಿತಿ. ವೆಂಟಿಲೇಟರ್ ಸಂಪರ್ಕ ಕಲ್ಪಿಸಿ ಏನೇನು ಸಾಧ್ಯವೋ ಅದನ್ನೆಲ್ಲ ಮಾಡಿದೆ. ಪವಾಡಸದೃಶ ರೀತಿಯಲ್ಲಿ ಬಾಲಕಿ ಬದುಕಿದಳು. 2004ರಲ್ಲಿ ಜಿಬಿ ಸಿಂಡ್ರೋಮ್ ಪ್ಯಾರಾಲಿಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ನರೇಗಲ್ ಗ್ರಾಮದ ಬಾಲಕಿ ಚಿಕಿತ್ಸೆಗಾಗಿ ಬಂದಳು. ಒಂದು ವರ್ಷ ಚಿಕಿತ್ಸೆ ನೀಡಿದೆ. ಬಾಲಕಿ ಚೇತರಿಸಿಕೊಂಡಳು. ಆಕೆ 8 ವರ್ಷಗಳ ನಂತರ ಪಾಲಕರೊಂದಿಗೆ ನನ್ನಲ್ಲಿಗೆ ಬಂದು, ಎಂಎ ಶಿಕ್ಷಣ ಪೂರೈಸಿದೆ ಎಂದು ಹೇಳಿದಾಗ ನನಗೆ ಆದ ಆನಂದ ಅಷ್ಟಿಷ್ಟಲ್ಲ. ಕೆಲವರು ಆಗಾಗ ಕರೆ ಮಾಡಿ ನನ್ನ ಯೋಗಕ್ಷೇಮ ವಿಚಾರಿಸುತ್ತಾರೆ, ಮನೆ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಇದಕ್ಕಿಂತ ದೊಡ್ಡ ಧನ್ಯತೆ ಇನ್ನೇನು ಬೇಕು ಒಬ್ಬ ವೈದ್ಯನಿಗೆ?! ಜರ್ಮನ್ ಆಸ್ಪತ್ರೆಯಿಂದ ನಿವೃತ್ತಿಯಾಗಿ ಪ್ರಸ್ತುತ ಗದಗ ನಗರದ ಹಾತಲಗೇರಿ ನಾಕಾದಲ್ಲಿ ಸ್ವಂತ ಕ್ಲಿನಿಕ್ ನಡೆಸುತ್ತಿದ್ದೇನೆ. ವೃತ್ತಿಯಲ್ಲಿರುವಾಗ ರೋಗಿಗಳಿಗೆ ತುರ್ತು ಅಗತ್ಯವಿದ್ದಾಗ ಒಟ್ಟು 100 ಬಾರಿ ರಕ್ತದಾನ ಮಾಡಿದ್ದೇನೆ.
| ಡಾ. ಸೋಲೋಮನ್ ಚೆಲ್ಲಯ್ಯ ಗದಗ
2022ರಲ್ಲಿ ನಡೆದ ಘಟನೆ. ಅಂದು ಎಂದಿನಂತೆ ಆಸ್ಪತ್ರೆಯಲ್ಲಿದ್ದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ನಾಗೇಶ ಚವ್ಹಾಣ ಎನ್ನುವ 16 ವರ್ಷದ ಯುವಕ ಅಪಘಾತದಲ್ಲಿ ತೀವ್ರಗಾಯಗೊಂಡಿದ್ದ, ಆತನ ಪೋಷಕರು ಅಪಘಾತ ನಡೆದ ಒಂದು ಗಂಟೆಯೊಳಗೆ ಆಸ್ಪತ್ರೆಗೆ ಕರೆತಂದಿದ್ದರು. ಆತನ ಬಲಗಾಲು ಸಂಪೂರ್ಣ ತುಂಡಾಗಿತ್ತು. ಕಾಲು ತೆಗೆದು ಹಾಕುವ ಸಂಭವವೇ ಹೆಚ್ಚಿತ್ತು. ಆದರೆ, ಅದೃಷ್ಟವಶಾತ್ ರಕ್ತನಾಳದಲ್ಲಿ ರಕ್ತ ಸಂಚಾರ ಕಡಿಮೆಯಾಗಿರಲಿಲ್ಲ. ತಕ್ಷಣವೇ ಆತನಿಗೆ ರಕ್ತ ಹಾಕಿ, ಶಸ್ತ್ರಚಿಕಿತ್ಸೆ ಮಾಡಿ ಕಾಲು ಜೋಡಣೆಗೆ ಸಿದ್ಧಪಡಿಸಲಾಯಿತು. ಸತತ ಎರಡು ಗಂಟೆಗಳ ಕಾಲ ರಿಸ್ಕ್ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡಲಾಯಿತು. ನಂತರ ನಿರಂತರವಾಗಿ ಚಿಕಿತ್ಸೆ ನೀಡಿ 25 ದಿನಗಳ ಬಳಿಕ ಸಂಪೂರ್ಣ ಗುಣಮುಖನಾದ. ಅಂದು ನನ್ನೊಂದಿಗೆ ಡಾ. ಮಹಾಂತೇಶ ಮಠ, ಡಾ. ರಂಗನಾಥ, ಡಾ. ಮಹೇಂದ್ರ ಕೈಜೋಡಿಸಿದ್ದರು. ಈಗ ಯುವಕ ಸಂಪೂರ್ಣ ಗುಣಮುಖನಾಗಿದ್ದಾನೆ. ಎಲ್ಲಾ ಕೆಲಸವನ್ನು ಸ್ವತಂತ್ರವಾಗಿ ಮಾಡಿಕೊಳ್ಳುತ್ತಾನೆ. ಅಪಘಾತ ನಡೆದ ಒಂದು ಗಂಟೆಯೊಳಗೆ ಆಸ್ಪತ್ರೆಗೆ ರೋಗಿಯನ್ನು ಕರೆತಂದರೆ ಖಂಡಿತ ಚಿಕಿತ್ಸೆ ನೀಡಿ ಗುಣಮುಖರಾಗಿಸಬಹುದು. ಮುಖ್ಯ ರಕ್ತನಾಳಕ್ಕೆ ತೀವ್ರ ಹಾನಿ ಆಗಿದ್ದರೆ ಕಷ್ಟ.
| ಡಾ. ಎಚ್.ಆರ್. ಕಟ್ಟಿ ಕಟ್ಟಿ ಆಸ್ಪತ್ರೆ, ಬಾಗಲಕೋಟೆ
ನಲವತ್ತೈದು ವರ್ಷಗಳಿಂದ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮಂಗಳೂರಿನ ಕೆಎಂಸಿಯಲ್ಲಿ ವೈದ್ಯ ಶಿಕ್ಷಣ ಪೂರೈಸಿದ ಬಳಿಕ 1978ರಲ್ಲಿ ಮಹಿಳೆ ಮತ್ತು ಮಕ್ಕಳ ತಜ್ಞೆಯಾದೆ. ಆರಂಭದಿಂದಲೂ ರೋಗಗಳಿಂದ ಕನಿಷ್ಠ ಶುಲ್ಕ ಪಡೆಯುತ್ತಿದ್ದೇನೆ. ಹಣ ಇಲ್ಲದವರಿಗೆ ಉಚಿತ ಸೇವೆ. 20 ವರ್ಷಗಳ ಹಿಂದೆ ತಾಯಿಯೊಬ್ಬರು ನನ್ನ ಮನೆಯ ಬಾಗಿಲು ಬಡಿದು, ಬೊಬ್ಬಿಡುವ ಸದ್ದು ಕೇಳಿಸಿತು. ನೋಡಿದಾಗ ಆ ತಾಯಿ 6 ವಾರಗಳ ಮಗುವನ್ನು ನನ್ನ ಕೈಗಿತ್ತು ‘ಬದುಕಿಸಿಕೊಡಿ’ ಎಂದು ಅಂಗಲಾಚುತ್ತಿದ್ದಳು. ಮಗು ಉಸಿರಾಟ ನಿಲ್ಲಿಸುವ ಸ್ಥಿತಿಯಲ್ಲಿತ್ತು, ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಮಗುವಿನ ಬಾಯಿ ತೆರೆದು ನೋಡುವಾಗ ಗಂಟಲಿನ ‘ಕ್ಲೆಫ್ಟ್ ಪ್ಯಾಲೆಟ್’ನಲ್ಲಿ ಒಣದ್ರಾಕ್ಷಿಯ ಗಂಟು ಸಿಕ್ಕಿಹಾಕಿಕೊಂಡಿತ್ತು! (ಹೆಚ್ಚು ಅಳುವ ಮಗುವಿನ ಬಾಯಿಗೆ ಕೆಲವರು ಹತ್ತಿಬಟ್ಟೆಯಲ್ಲಿ ಒಣದ್ರಾಕ್ಷಿಯನ್ನು ಒಳಗೊಂಡ ಗಂಟನ್ನು ಕಟ್ಟುತ್ತಾರೆ, ಇದು ತಪ್ಪು) ಉಸಿರಾಟಕ್ಕೆ ತೊಂದರೆಯಾಗಿ ಆಮ್ಲಜನಕದ ಕೊರತೆಯಿಂದ ಮಗುವಿನ ಮೈಬಣ್ಣ ಬದಲಾಗಿತ್ತು. ತಕ್ಷಣ ಬಾಯೊಳಗೆ ಕೈ ಹಾಕಿ ಆ ಗಂಟನ್ನು ತೆಗೆದೆ. ಮಗು ಬದುಕುಳಿಯಿತು. ಇಂದು ಆ ಮಗು ದೊಡ್ಡವಳಾಗಿ, ಅವಳಿಗೂ ಮಕ್ಕಳಿದ್ದಾರೆ. ಹಿಂದೆ ಬಾಗಿಲು ಬಡಿದಿದ್ದ ಆ ಮಹಿಳೆ, ಇತ್ತೀಚೆಗೆ ನನ್ನ ಕಚೇರಿಗೆ ಬಂದು ‘ಅಂದು ನೀವು ಬದುಕಿಸಿದ ಮಗು ಇವಳೇ’ ಎಂದು ತನ್ನ ಮಗಳನ್ನು ಪರಿಚಯಿಸಿದಾಗ, ಮುಖದಲ್ಲಿ ಕೃತಜ್ಞತಾ ಭಾವ ಕಂಡೆ.
| ಡಾ.ಗೀತಾ ಶೆಣೈ ಮಹಿಳಾ ಮತ್ತು ಮಕ್ಕಳ ತಜ್ಞೆ, ಅಶೋಕನಗರ, ಮಂಗಳೂರು
ಇದು ನಡೆದದ್ದು 2020ರಲ್ಲಿ. ಅಂದು ಎಂದಿನಂತೆ ನಮ್ಮ ಆಸ್ಪತ್ರೆಯ ಮೇಲಂತಸ್ತಿನಲ್ಲಿರುವ ಒಪಿಡಿಯಲ್ಲಿ ಹೃದಯ ರೋಗಿಗಳೊಂದಿಗೆ ಸಮಾಲೋಚಿಸುತ್ತಾ ತಪಾಸಣೆ ಮಾಡುತ್ತಿದ್ದೆ. ಆಗ ಆಸ್ಪತ್ರೆಯ ಸಿಬ್ಬಂದಿ ಬಂದು, ‘ಸರ್… ಬೇಗ ಬನ್ನಿ… ರೋಗಿಯೊಬ್ಬರಿಗೆ ರಿಸೆಪ್ಶನ್ ಕೌಂಟರ್ ಬಳಿಯೇ ಹಾರ್ಟ್​ಅಟ್ಯಾಕ್ ಆಗಿದೆ. ಭಾಗಶಃ ಸತ್ತೇ ಹೋಗಿದ್ದಾರೇನೋ’ ಎಂದ. ಕೊಲ್ಹಾರ ತಾಲೂಕಿನ ಹಳ್ಳದಗೆಣ್ಣೂರ ಗ್ರಾಮದಿಂದ ಹೃದಯ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಮಗನೊಂದಿಗೆ ಬಂದಿದ್ದ ಮೆಹಬೂಬ ತೊನಶ್ಯಾಳ ಎಂಬಾತನಿಗೆ ಹೃದಯಾಘಾತವಾಗಿ ಬಹುತೇಕವಾಗಿ ಕೊನೆಯುಸಿರೆಳೆದಿದ್ದ. ಪರೀಕ್ಷಿಸಿದಾಗ ಪಲ್ಸ್ ಸಿಗಲಿಲ್ಲ. ಹೇಗಾದರಾಗಲಿ ಎಂದು ತಕ್ಷಣ ಆತನನ್ನು ಸಿಪಿಆರ್ (ಇಚ್ಟಛಜಿಟಟ್ಠ್ಝಟ್ಞಚ್ಟಢ ್ಟಠ್ಠಠ್ಚಜಿಠಿಚಠಿಜಿಟ್ಞ) ಮಾಡಿಕೊಂಡೇ ಲಿಫ್ಟ್​ನಲ್ಲಿ ಆಸ್ಪತ್ರೆಯ ಐಸಿಯುಗೆ ಸಾಗಿಸಲು ಹೇಳಿದೆ. ಅವರ ಸಂಬಂಧಿಕರಿಗೆ ಪ್ರಾಣಹೋಗಿದೆ. ಆದರೂ ಪ್ರಯತ್ನಿಸುತ್ತೇನೆ ಎಂದು ಧೈರ್ಯ ಹೇಳಿ, ಐಸಿಯುಗೆ ತೆರಳಿ ಶಾಕ್, ಇಂಜೆಕ್ಷನ್ ಸೇರಿದಂತೆ ಹೃದಯದ ಪುನಶ್ಚೇತನಕ್ಕೆ ಪೂರಕವಾದ ಸೂಕ್ತ ಚಿಕಿತ್ಸೆ ನೀಡಿದೆ. ಮತ್ತೆ ರಕ್ತ ಸಂಚಲನೆ ಆರಂಭವಾಗಿ ಹೃದಯ ಪುನಃಶ್ಚೇತನಗೊಂಡು, ಬಡಿದುಕೊಳ್ಳಲಾರಂಭಿಸಿತು. ನಂತರ ಕೆಲದಿನ ಆಸ್ಪತ್ರೆಯಲ್ಲೇ ಉಳಿಸಿಕೊಂಡು ಚಿಕಿತ್ಸೆಕೊಟ್ಟು ಕಳಿಸಿಕೊಟ್ಟೆವು. ಮೆಹಬೂಬ ಅವರ ಮಗ ಅಸ್ಲಂ ಬಂದು ಕೃತಜ್ಞತೆಯಿಂದ ‘ನಮ್ಮತಂದೆಯನ್ನುಳಿಸಿದ ದೇವರು’ ಎಂದಾಗ ಎಲ್ಲೋ ಕಸಿವಿಸಿಯಾಯಿತಾದರೂ ಮನದಲ್ಲಿ ಸಾರ್ಥಕ ಭಾವ ಮೂಡಿತು.
| ಡಾ. ಸಂಜೀವ ಸಜ್ಜನರ, ಸಾಯಿ ಕಾರ್ಡಿಯಾಕ್ ಸೆಂಟರ್, ವಿಜಯಪುರ
2 ತಿಂಗಳ ಹಿಂದೆ ನಡೆದ ಘಟನೆ ಇದು. ಆ ಯುವತಿಗೆ 30 ವರ್ಷ. ತಾಳಿ ಕಟ್ಟಿ ಕೆಲ ನಿಮಿಷದಲ್ಲೇ ಮದುವೆ ಮಂಟಪದಲ್ಲೇ ಆಕೆಗೆ ಹೃದಯಾಘಾತವಾಗಿ ಕುಸಿದುಬಿದ್ದಿದ್ದಳು. ತಕ್ಷಣ ಆಕೆಯನ್ನು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದುಕೊಂಡು ಬಂದರು. ನಾನು ಪ್ರಾಥಮಿಕ ಪರೀಕ್ಷೆ ನಡೆಸಿದಾಗ ಹೃದಯಾಘಾತವಾಗಿರುವುದು ಖಚಿತವಾಯಿತು. ಆಂಜಿಯೋಪ್ಲಾಸ್ಟಿ ಮಾಡಿದಾಗ ಹೃದಯದಲ್ಲಿರುವ ರಕ್ತನಾಳವೊಂದು ಕಟ್ಟಿಕೊಂಡು ಆ ನಾಳದಲ್ಲಿ ರಕ್ತಸಂಚಲನ ಸ್ಥಗಿತಗೊಂಡಿತ್ತು. ಆಗ ತಾನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವ ವಿವಾಹಿತೆ ಖುಷಿಯಿಂದ ಹೊಸ ಕನಸು ಕಾಣುತ್ತ ನಲಿಯುತ್ತಿರಬೇಕಿತ್ತು. ಆದರೆ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯ ಹಾಸಿಗೆ ಮೇಲಿದ್ದಳು. ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಅಳವಡಿಸಲಾಯಿತು. ಇದರಿಂದ ಸಲೀಸಾಗಿ ರಕ್ತಚಲನೆ ಸಾಧ್ಯವಾಯಿತು. ತಡ ಮಾಡದೆ ಆಸ್ಪತ್ರೆಗೆ ಕರೆತಂದಿದ್ದರಿಂದ ಆಕೆಯ ಜೀವ ಉಳಿಯಿತು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಆಕೆ ಎಲ್ಲರಂತೆ ಜೀವನ ನಡೆಸುತ್ತಿದ್ದಾಳೆ. ಇನ್ನೊಂದು ಪ್ರಕರಣ. 75 ವರ್ಷ ವಯಸ್ಸಿನ ವೃದ್ಧೆಗೆ ಹೃದಯಾಘಾತವಾಗಿತ್ತು. ವಯಸ್ಸಿನ ಕಾರಣಕ್ಕೆ ತೆರೆದ ಹೃದಯಚಿಕಿತ್ಸೆ ಮಾಡಲು ಸಾಧ್ಯವಿರಲಿಲ್ಲ. ಆಧುನಿಕ ಶಸ್ತ್ರಚಿಕಿತ್ಸೆಯ ಮೊರೆ ಹೋಗಲಾಯಿತು. ಅಪಧಮನಿ ಬದಲಾವಣೆ ಮಾಡಿ ಅವರನ್ನು ಬದುಕಿಸಲಾಯಿತು. ಅವರು ಚೇತರಿಸಿಕೊಂಡು ಚೆನ್ನಾಗಿದ್ದಾರೆ.
| ಡಾ. ಕೆ.ಎಸ್.ಸದಾನಂದ ಅಧೀಕ್ಷಕರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮೈಸೂರು
ಮಕ್ಕಳ ಆರೋಗ್ಯ ರಕ್ಷಣೆಗೆ ಈಗೆಲ್ಲಾ ಸಾಕಷ್ಟು ಸೌಲಭ್ಯಗಳಿವೆ. ಆದರೆ, 2008-09ರಲ್ಲಿ ಇದ್ದ ಸೌಲಭ್ಯವನ್ನೇ ಬಳಸಿಕೊಂಡು ಪ್ರಾಣ ರಕ್ಷಿಸಬೇಕಿತ್ತು. ಆ ಅವಧಿಯಲ್ಲಿ ಮಕ್ಕಳ ವೈದ್ಯನಾಗಿ ಜಿಲ್ಲಾಸ್ಪತ್ರೆಯಲ್ಲಿ ಇದ್ದದ್ದು ನಾನೊಬ್ಬನೇ. ವೈದ್ಯ ವೃತ್ತಿಯಲ್ಲಿ ಜೀವ ಉಳಿಸುವಲ್ಲಿ ಸಿಗುವ ತೃಪ್ತಿ ಮತ್ತೊಂದರಲ್ಲಿ ಸಿಗದು. 2008-09ರಲ್ಲಿ ಜಿಲ್ಲೆಯ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಘಟಕ ಇರಲಿಲ್ಲ. ಪ್ರತಿ ತಿಂಗಳು 800 ರಿಂದ 900 ಗ್ರಾಂ ತೂಕದ ಏಳೆಂಟು ನವಜಾತ ಶಿಶುಗಳು ಅವಧಿಗೂ ಮುನ್ನ ಜನಿಸುತ್ತಿದ್ದವು. ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಹೋಗಲಾಗದ ಬಡವರು ಇಲ್ಲಿಗೆ ಬರುತ್ತಿದ್ದರು. ಯಾವುದೇ ಸೋಂಕು ತಗುಲದಂತೆ ಒಂದೂವರೆ ತಿಂಗಳು ತೀವ್ರ ನಿಗಾ ವಹಿಸಬೇಕಿತ್ತು. ಬಹುತೇಕ ಶಿಶುಗಳು ಬೆಳವಣಿಗೆ ಕಂಡು ಆರೋಗ್ಯವಾಗಿ ಮನೆಗೆ ಮರಳಿವೆ. 2009-10ರಲ್ಲಿ ಚಿಕೂನ್​ಗುನ್ಯಾ, ಡೆಂಘೆ ಪ್ರಕರಣಗಳ ಸಂಖ್ಯೆ ಕರೊನಾ ಮಾದರಿಯಲ್ಲೇ ಪ್ರತಿದಿನ ಏರಿಕೆಯಾಗುತ್ತಿತ್ತು. ಆ ವೇಳೆ ಒಪಿಡಿಯಲ್ಲಿ ನಿತ್ಯ 250 ರಿಂದ 300 ಮಕ್ಕಳನ್ನು ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದ್ದೇನೆ. 2010-11ರಲ್ಲಿ ಎಚ್1ಎನ್1 ಕೂಡ ಇದಕ್ಕೆ ಹೊರತಾಗಿರಲಿಲ್ಲ. ಈಗ ಜಿಲ್ಲಾಸ್ಪತ್ರೆಯಲ್ಲಿ ಏಳೆಂಟು ಮಕ್ಕಳ ವೈದ್ಯರಿದ್ದು, ಹಿಂದಿನ ದಿನಗಳನ್ನು ಅವಲೋಕಿಸಿದರೆ, ಒಬ್ಬನೇ ಸೇವೆ ಮಾಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಒಮ್ಮೊಮ್ಮೆ ಕಾಡುತ್ತದೆ.
| ಡಾ.ಎಸ್.ಎಚ್.ದೇವರಾಜ್, ಮಕ್ಕಳ ತಜ್ಞರು, ಚಿತ್ರದುರ್ಗ ಜಿಲ್ಲಾಸ್ಪತ್ರೆ
ಇತ್ತೀಚಿನ ಘಟನೆ. ಜಗಳದಲ್ಲಿ ಯುವಕನೊಬ್ಬನ ತಲೆಗೆ ಚಾಕು ಚುಚ್ಚಲಾಗಿತ್ತು. ಚಾಕು ಹೊರತೆಗೆದರೆ ಯುವಕ ಸಾವಿಗೀಡಾಗುವ ಸಾಧ್ಯತೆಗಳಿದ್ದವು. ಆಗ ನಾವು ಮೂರು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಯುವಕನನ ್ನು ಕಾಪಾಡಿದ್ದು ಮರೆಯಲಾಗದ ಕ್ಷಣ. ಮತ್ತೊಂದು ಘಟನೆಯಲ್ಲಿ ನಿರ್ಮಾಣ ಹಂತದಲ್ಲಿನ ಕಟ್ಟಡದಿಂದ ಬಿದ್ದಿದ್ದ ವ್ಯಕ್ತಿಯ ಎದೆಯಿಂದ ಬೆನ್ನಿನವರೆಗೆ ಕಬ್ಬಿಣದ ರಾಡ್ ಚುಚ್ಚಿತ್ತು. ಅಂತಹ ಸಂದರ್ಭದಲ್ಲಿ ಗಾಯಾಳು ಕುಟುಂಬದವರು ನಮ್ಮ ಮೇಲಿಡುವ ನಂಬಿಕೆಯೇ ನಮಗೆ ಶಕ್ತಿಯಾಗುತ್ತದೆ. ಕಳೆದ 26 ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜಟಿಲ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದೇನೆ. ವ್ಯಕ್ತಿಯೊಬ್ಬರ ಕಾಲಿನ ಮಧ್ಯಭಾಗದ ಎಲುಬು ಸಂಪೂರ್ಣ ಪುಡಿಯಾಗಿದ್ದು, ಅದನ್ನು 14 ಸೆಂ.ಮೀ.ವರೆಗೆ ಬೆಳವಣಿಗೆ ಮಾಡಿದ ಪ್ರಕರಣವೂ ನಮ್ಮಲ್ಲಿ ನಡೆದಿವೆ. ಮಹಿಳೆಯರಲ್ಲಿ ಸಂಧಿವಾತ ಹೆಚ್ಚಾಗಿ ಕಂಡುಬರುತ್ತಿದ್ದು, ಅಂತಹವರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಔಷಧ ನೀಡಲಾಗುತ್ತಿದೆ. ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳಿದ್ದಾಗ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿದ್ದು, ವೈದ್ಯಕೀಯ ವಿಭಾಗದ ಸಂಘಟಿತ ಪ್ರಯತ್ನದಿಂದ ಪ್ರಾಣ ಉಳಿಯುತ್ತದೆ.
| ಡಾ. ಶ್ರೀಧರ ರೆಡ್ಡಿ ಮೂಳೆ ಶಸ್ತ್ರಚಿಕಿತ್ಸಾ ತಜ್ಞರು, ಬಾಲಂಕು ಆಸ್ಪತ್ರೆ, ರಾಯಚೂರು
1975ರಲ್ಲಿ ಖಾಸಗಿ ಆಸ್ಪತ್ರೆ ಆರಂಭಿಸಿದೆ. ಮನೆ ಹತ್ತಿರದಲ್ಲಿದ್ದ ಹಿರಿಯ ವೈದ್ಯ ಡಾ. ವಿಠ್ಠಲರಾವ ಪಳನಿಟಕರ್ ಅವರಿಗೆ ಮಿದುಳಿನಲ್ಲಿ ರಕ್ತಸ್ರಾವವಾಗಿ ಮೈಮರೆವು ಉಂಟಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕವೂ ‘ಬದುಕುಳಿಯುವುದು ಕಷ್ಟಕರ; ಮನೆ ಕರೆದೊಯ್ಯಿರಿ’ ಎಂದು ಅಲ್ಲಿನ ವೈದ್ಯರು ಹೇಳಿದ್ದರಿಂದ ಮನೆಯಲ್ಲೇ ನಾನು ನಿತ್ಯ ಟ್ರೀಟ್​ವೆುಂಟ್ ಮಾಡುತ್ತಿದ್ದೆ. ನಾಲ್ಕು ತಿಂಗಳ ಸತತ ಪ್ರಯತ್ನದ ಬಳಿಕ ಅವರಿಗೆ ಎಚ್ಚರ ಬಂತು. ಅನಂತರ ಅವರು 12 ವರ್ಷ ವೈದ್ಯಕೀಯ ಸೇವೆ ಮುಂದುವರಿಸಿದರು. ಅವರಿಗೆ ಕೊಟ್ಟ ಚಿಕಿತ್ಸೆ ನನಗೆ ಸಾಕಷ್ಟು ಅನುಭವ ಕಲಿಸಿಕೊಟ್ಟಿತು. ಒಂದ್ಸಲ ದಾರಿಯಲ್ಲಿ ಹೋಗುವಾಗ ಒಂದು ಮನೆಯಲ್ಲಿ ಅಳುವ ಧ್ವನಿ ಕೇಳಿಸಿತು. ವಿಚಾರಿಸಿದಾಗ ಹುಡುಗಿಯೊಬ್ಬಳು ನೀರಲ್ಲಿ ಬಿದ್ದು ಎಚ್ಚರ ತಪ್ಪಿದ್ದಾಳೆ ಎಂದು ಗೊತ್ತಾಯಿತು. ತಕ್ಷಣ ಮನೆಯಲ್ಲೇ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದೆ. ರಾತ್ರಿ 11ರ ಸುಮಾರಿಗೆ ಮನೆಗೆ ಬರುವಾಗ ಮಗುವಿಗೆ ಗಂಟಲು ತಡೆ (ಜಟ್ಚkಜ್ಞಿಜ) ಆಗಿತ್ತು. ರಸ್ತೆಯಲ್ಲೇ ಚಿಕಿತ್ಸೆ ನೀಡಿ ಜೀವ ಕಾಪಾಡಿದೆ. ಹೈದರಾಬಾದ್ ಹತ್ತಿರದ ಯಾದಗಿರಿ ಗುಟ್ಟಾಕ್ಕೆ ಮದುವೆ ಕಾರ್ಯಕ್ರಮಕ್ಕಾಗಿ ಹೋದಾಗ ಟ್ರ್ಯಾಕ್ಟರ್ ಪಲ್ಟಿಯಾಗಿತ್ತು. ಎಲ್ಲ ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಮರೆಯಲಾರದ ಕ್ಷಣ. 1980ರಲ್ಲಿ ರಕ್ತನಿಧಿ ಭಂಡಾರ, ರಕ್ತ ಪರೀಕ್ಷಾ ಕೇಂದ್ರ ಹಾಗೂ ಎರಡು ಆಂಬುಲೆನ್ಸ್ ಸೇವೆ ಆರಂಭಿಸಿದೆ. ಪ್ರತಿ ಭಾನುವಾರ ಆಂಬುಲೆನ್ಸ್​ನಲ್ಲಿ ಒಂದು ಹಳ್ಳಿಗೆ ತೆರಳಿ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೆ. ಈಗ ಬೆಳಗ್ಗಿನ ಸಮಯದಲ್ಲಿ ಮಾತ್ರ ಟ್ರೀಟ್​ವೆುಂಟ್ ಮಾಡುತ್ತಿರುವೆ. ಜತೆಗೆ ಜನರಿಗೆ ಕಮ್ಮಿ ಬೆಲೆಯಲ್ಲಿ ಔಷಧ ಸಿಗುವಂತೆ ಜನೌಷಧ ಕೇಂದ್ರ ಆರಂಭಿಸಿರುವೆ.
| ಡಾ. ಮಲ್ಹಾರರಾವ್ ಮಲ್ಲೆ ಹಿರಿಯ ವೈದ್ಯ (ಹತ್ರೂಪಾಯಿ ಡಾಕ್ಟ್ರು ಎಂದೇ ಖ್ಯಾತಿ), ಕಲಬುರಗಿ
ಅದು 1968ರ ಸಮಯ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪದವಿ ಪಡೆದಿದ್ದೆ. ನಾನು ಜನಿಸಿದ್ದು ಕಾಸರಗೋಡಿನ ನೆಕ್ರಾಜೆಯಲ್ಲಿ. ನಾನು ಎಂಬಿಬಿಎಸ್, ಎಂಡಿ ಪೂರೈಸಿದಾಗ ಶಿವಮೊಗ್ಗದಲ್ಲಿ ಖಾಸಗಿ ಕನ್ಸಲ್ಟೆಂಟ್ ಫಿಜಿಷಿಯನ್ ಇಲ್ಲ ಎಂಬುದು ತಿಳಿಯಿತು. ಹೀಗಾಗಿ ಶಿವಮೊಗ್ಗದಲ್ಲೇ ವೈದ್ಯ ವೃತ್ತಿ ಆರಂಭಿಸಿದೆ. ಆಗ ಶಿವಮೊಗ್ಗದಲ್ಲಿ ಇದ್ದಿದ್ದು ನನ್ನದೊಂದೇ ಖಾಸಗಿ ಕ್ಲಿನಿಕ್. ಅದರೊಟ್ಟಿಗೆ ಸಣ್ಣದೊಂದು ಲ್ಯಾಬ್ ಆರಂಭಿಸಿದೆ. ಮೂತ್ರ ಹಾಗೂ ರಕ್ತ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಂಡೆ. ಇಸಿಜಿ ಪರೀಕ್ಷೆ ಮಾಡುತ್ತಿದ್ದವ ನಾನೊಬ್ಬನೇ. ಜನರಿಗೆ ಕ್ಷಯ ಹಾಗೂ ರಕ್ತಹೀನತೆಗೆ ಚಿಕಿತ್ಸೆ ನೀಡುವ ಜತೆಗೆ ಅವರಲ್ಲಿ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿಯೂ ಇತ್ತು. ಲ್ಯಾಬ್​ನಲ್ಲಿ ತಂತ್ರಜ್ಞರೂ ಇರಲಿಲ್ಲ. ಓರ್ವ ಸಹಾಯಕನ ನೆರವಿನಿಂದ ನಾನೇ ಪರೀಕ್ಷೆ ಮಾಡಬೇಕಿತ್ತು. ಅರಸೀಕೆರೆ, ಹೊನ್ನಾಳಿ, ಆಗುಂಬೆ, ಶೃಂಗೇರಿ ಮುಂತಾದ ಊರುಗಳಿಂದಲೂ ರೋಗಿಗಳು ಬರುತ್ತಿದ್ದರು. ಕೆಲವೊಮ್ಮೆ ರಾತ್ರಿ 12ರವರೆಗೂ ಚಿಕಿತ್ಸೆ ನೀಡುತ್ತಿದ್ದೆ. ‘ದೀನ ದಲಿತರ ಸೇವೆಯೇ ಭಗವಂತನ ಸೇವೆ’ ಎಂಬ ಗಾಂಧೀಜಿ ಕರೆಗೆ ಓಗೊಟ್ಟು, ಕಂದಾಯ ಇಲಾಖೆಯ ಗುಮಾಸ್ತ ಹುದ್ದೆಯನ್ನು ತೊರೆದು ವೈದ್ಯಕೀಯ ಪದವಿ ಪಡೆದು ಜನಸೇವೆ ಆರಂಭಿಸಿದವ ನಾನು. ಹೀಗಾಗಿ ಹಣ ಗಳಿಕೆಗೆ ಹೆಚ್ಚು ಪ್ರಾಶಸ್ಱ ನೀಡಲಿಲ್ಲ. ಇದರಲ್ಲಿ ಆತ್ಮತೃಪ್ತಿ ಸಿಕ್ಕಿದೆ.
| ಡಾ. ಎನ್.ಎಲ್.ನಾಯಕ್ ಶಿವಮೊಗ್ಗ
ಶಕ್ತಿ ಯೋಜನೆ ರದ್ದು ಮಾಡಿ ಅಥವಾ ನಮಗೆ ಆರ್ಥಿಕ ನೆರವು ನೀಡಿ: ಮುಖ್ಯಮಂತ್ರಿಗೆ ಆಟೋಚಾಲಕರ ಮನವಿ

ಪಿಕ್​ನಿಕ್​ಗೆ ತೆರಳಿದ್ದ 27 ವರ್ಷದ ಯುವಕ ಹೃದಯಾಘಾತದಿಂದ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 16 =
Remember me
