| ಪಂಕಜ ಕೆ.ಎಂ. ಬೆಂಗಳೂರು
ದಾನಗಳಲ್ಲೇ ಶ್ರೇಷ್ಠ ದಾನ ‘ರಕ್ತ ದಾನ’ ಎಂದು ಹೇಳಲಾಗುತ್ತದೆ. ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ. ಇಂತಹ ಮಹತ್ವದ ಕಾರ್ಯದ ಕುರಿತು ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಪ್ರತಿ ವರ್ಷ ಜೂ. 14 ರಂದು ವಿಶ್ವ ರಕ್ತ ದಾನಿಗಳ ದಿನ ಆಚರಿಸಲಾಗುತ್ತಿದೆ.
ಈ ವರ್ಷ ‘ರಕ್ತದಾನ ಮಾಡುವುದು ಒಗ್ಗಟ್ಟಿನ ಪ್ರಕ್ರಿಯೆ, ಈ ಪ್ರಯತ್ನಕ್ಕೆ ಕೈ ಜೋಡಿಸಿ ಜೀವ ಉಳಿಸೋಣ’ ಎಂಬ ಘೋಷವಾಕ್ಯದೊಂದಿಗೆ ಸರ್ಕಾರ, ರಕ್ತನಿಧಿಗಳು ಹಾಗೂ ಸಂಘ-ಸಂಸ್ಥೆಗಳು ರಾಜ್ಯಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಿವೆ. ಜತೆಗೆ ರಕ್ತದಾನಿಗಳನ್ನು ಪ್ರೋತ್ಸಾಹಿಸಲು ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವವರನ್ನು ಗುರುತಿಸಿ ಗೌರವಿಸುವ ಕಾರ್ಯವೂ ನಡೆಯುತ್ತಿದೆ.
ಇಂಟರ್​ನ್ಯಾಷನಲ್ ಫೆಡರೇಷನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ ಇಂಟರ್​ನ್ಯಾಷನಲ್ ಫೆರಡೇಷನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಷನ್ ಮತ್ತು ಇಂಟರ್​ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್​ಪ್ಯೂಷನ್ ಸಹಯೋಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರಕ್ತದಾನಿಗಳ ದಿನವನ್ನು ಘೋಷಿಸಿದೆ. ರಕ್ತದಾನಿಗಳನ್ನು ಪ್ರೇರೇಪಿಸಲು ಪ್ರತಿ ವರ್ಷ ಜ. 12ರಂದು ಯುವ ರಕ್ತದಾನಿಗಳ ದಿನ, ಜೂ. 14ರಂದು ವಿಶ್ವ ರಕ್ತದಾನಿಗಳ ದಿನ ಹಾಗೂ ಭಾರತದಲ್ಲಿ ಅ. 1ರಂದು ರಾಷ್ಟ್ರೀಯ ರಕ್ತದಾನ ದಿನ ಆಚರಿಸಲಾಗುತ್ತದೆ.
9.75 ಲಕ್ಷ ಯೂನಿಟ್ ರಕ್ತ ಸಂಗ್ರಹ:ರಾಜ್ಯದಲ್ಲಿ ಅಂದಾಜು 8.08 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ ಶೇ.1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿಗೆ ನಿಗದಿತ ಗುರಿ 8,08,529ಗಿಂತ ಹೆಚ್ಚುವರಿಯಾಗಿ 9,75,785 ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಶೇ. 121 ಪ್ರಗತಿ ಸಾಧಿಸಿದೆ. ರಾಜ್ಯದಲ್ಲಿ 248 ರಕ್ತ ನಿಧಿಗಳಿದ್ದು, ಜನರು ತಮ್ಮ ಹತ್ತಿರದ ರಕ್ತ ನಿಧಿಗಳಿಗೆ ಸ್ವಯಂ ಪ್ರೇರಿತರಾಗಿ ತೆರಳಿ ರಕ್ತದಾನ ಮಾಡಬಹುದಾಗಿದೆ.
ಯಾರು ರಕ್ತದಾನ ಮಾಡಬಹುದು?:18 ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, ಕನಿಷ್ಠ 45 ಕೆ.ಜಿ. ದೇಹದ ತೂಕ ಇರುವವರು 350 ಎಂಎಲ್ ಹಾಗೂ 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂಎಲ್ ರಕ್ತದಾನ ಮಾಡಬಹುದಾಗಿದೆ. ದಾನಿಗಳ ಹಿಮೋಗ್ಲೋಬಿನ್ (ಎಚ್​ಬಿ) ಪ್ರಮಾಣ ಕನಿಷ್ಠ 12.5 ಇರಬೇಕು. ಒಂದು ಯೂನಿಟ್ ರಕ್ತದಿಂದ ನಾಲ್ಕು ಜೀವಗಳನ್ನು ಉಳಿಸಬಹುದಾಗಿದೆ.
ಯಾರು ರಕ್ತದಾನ ಮಾಡಬಾರದು:ಅನಾರೋಗ್ಯ ಹೊಂದಿರುವವರು, ನಿಯಮಿತ ಹಾಗೂ ನಿರಂತರ ಔಷಧ ಸೇವಿಸುವವರು, ಎಚ್​ಐವಿ/ಏಡ್ಸ್, ಕ್ಯಾನ್ಸರ್ ರೋಗಿಗಳು, ಹೃದ್ರೋಗಿಗಳು, ಲಿವರ್ ಮತ್ತು ಕಿಡ್ನಿ ಸಮಸ್ಯೆ ಹೊಂದಿರುವವರು, ಗರ್ಭಿಣಿಯರು, ಹೆಪಟೈಟಿಸ್ ಬಿ ಸೋಂಕಿತರು, ಸಾಂಕ್ರಾಮಿಕ ರೋಗಿಗಳು, ಮಾದಕ ವ್ಯಸನಿಗಳು, ಕಡಿಮೆ ತೂಕ ಹೊಂದಿರುವವರು ಹಾಗೂ ಹಿಮೋಗ್ಲೋಬಿನ್ ಕೊರತೆ ಇರುವವರು ರಕ್ತದಾನ ಮಾಡುವಂತಿಲ್ಲ.
ರಕ್ತ ಸಾಗಣೆ ವಾಹನ:ರಾಜ್ಯದಲ್ಲಿ ಸರ್ಕಾರದ ವತಿಯಿಂದ 9 ರಕ್ತ ಸಾಗಣೆ ವಾಹನಗಳು ಚಾಲನೆಯಲ್ಲಿದ್ದು, ಇವಲ್ಲದೆ 7 ವಾಹನಗಳು ರಕ್ತ ಸಾಗಣೆ ಮತ್ತು ರಕ್ತ ಸಂಗ್ರಹಣಾ ವಾಹನ (ಬಿಸಿಟಿವಿ) ಗಳು ಕಾರ್ಯನಿರ್ವಹಿಸುತ್ತಿವೆ. ಒಂದು ದೊಡ್ಡ ಮೊಬೈಲ್ ಬಸ್ ಸಹ ಇದೆ. ಎಲ್ಲ ಸೇರಿ ಒಟ್ಟು 17 ವಾಹನಗಳು ರಕ್ತ ಮತ್ತದರ ಅಂಗಾಂಶಗಳ ಸಂಗ್ರಹಣೆ ಮತ್ತು ಅವುಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಪೂರೈಕೆ ಮಾಡುವ ಕಾರ್ಯ ನಿರ್ವಹಿಸುತ್ತಿವೆ. ಇನ್ನು ಆರೋಗ್ಯ ಇಲಾಖೆ ವತಿಯಿಂದ ಹೊಸದಾಗಿ ನಾಲ್ಕು ರಕ್ತ ಸಾಗಣೆ ಮತ್ತು ರಕ್ತ ಸಂಗ್ರಹಣಾ ವಾಹನಗಳ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ತದಾನದ ಉಪಯೋಗಗಳು:ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ. ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾನಪಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಆಗಿ ಹೃದಯಘಾತ ಆಗುವುದನ್ನು ಶೇ. 80 ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳು ತಡೆಯಲು ರಕ್ತದಾನ ಸಹಕಾರಿಯಾಗಿದೆ. ಆದರೆ, ಒಮ್ಮೆ ರಕ್ತದಾನ ಮಾಡಿದರೆ ಮುಂದಿನ ಮೂರು ತಿಂಗಳ ಕಾಲ ದಾನ ಮಾಡಬಾರದು ಎನ್ನುತ್ತಾರೆ ವೈದ್ಯರು.
‘ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ 18-65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ತಪ್ಪದೇ ರಕ್ತದಾನ ಮಾಡಬೇಕು. ಯುವ ಜನರು ತಮ್ಮ 18 ವರ್ಷ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಳ್ಳುವ ನಿಟ್ಟಿನಲ್ಲಿ ಆ ದಿನದಂದು ಹಾಗೂ ನಂತರದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇತರರ ಜೀವದಾನಕ್ಕೆ ನೆರವಾಗಬೇಕು.’
| ಡಾ. ಡಿ. ಜಯರಾಜು, ಜಂಟಿ ನಿರ್ದೇಶಕರು, ರಕ್ತ ಸುರಕ್ಷತೆ ವಿಭಾಗ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (ಕೆಸಾಪ್ಸ್)
ಇಂದು ಕಾರ್ಯಕ್ರಮ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಸೇರಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಜೂ. 14ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ನೂತನ ಕಟ್ಟಡದ ಸಭಾಂಗಣದಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತಿದೆ. ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಶಾಸಕ ಉದಯ್ ಬಿ. ಗರುಡಾಚಾರ್, ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಇತರರು ಪಾಲ್ಗೊಳ್ಳಲಿದ್ದಾರೆ.
ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?

ಆತಂಕದಲ್ಲೇ ಬದುಕುತ್ತಿದ್ದ ಅಜ್ಜಿಗಾಗಿ ಹೊಸ ಮನೆ; ದಾನಿಗಳ ಸಹಕಾರದಲ್ಲಿ ನಿರ್ಮಾಣ, ನಾಳೆಯೇ ಗೃಹಪ್ರವೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
