ಮೈಸೂರು:ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ನಾಲ್ಕು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಮೊತ್ತ ಹಾಡಿಯ ಸೋಮಣ್ಣ ಅವರಿಗೆ ಪದ್ಮಶ್ರೀ ಗೌರವ ದೊರೆತಿದೆ. ರಾಜ್ಯ ಸರ್ಕಾರ 2016ನೇ ಸಾಲಿನಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿ, ಮರುದಿನ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿತ್ತು. ಇದನ್ನು ಖಂಡಿಸಿ ನಾಡಿನ ಪ್ರಗತಿಪರ ಚಿಂತಕರು ಸೇರಿಕೊಂಡು ಸಾಹಿತಿ ದೇವನೂರ ಮಹಾದೇವ ಸಮ್ಮುಖದಲ್ಲಿ ಅವರಿಗೆ 1 ಲಕ್ಷ ನಗದು ಒಳಗೊಂಡ ‘ಜನ ರಾಜ್ಯೋತ್ಸವ’ ಪ್ರಶಸ್ತಿಯನ್ನು ಪ್ರದಾನ ಮಾಡಿ ವಿಶೇಷವಾಗಿ ಗೌರವಿಸಿದ್ದರು. ಜನರಿಂದಲೇ ದೇಣಿಗೆ ಸಂಗ್ರಹಿಸಿ ನೀಡಿದ್ದರು.
ಈಚೆಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ವಾಲ್ಮೀಕಿ ಪ್ರಶಸ್ತಿಗೆ ಅವರು ಭಾಜನರಾಗಿದ್ದರು. 5 ಲಕ್ಷ ರೂ. ಹಣ, 20 ಗ್ರಾಂ. ಚಿನ್ನದ ಪದಕ ಒಳಗೊಂಡ ಈ ಪ್ರಶಸ್ತಿ ಅವರನ್ನು ಅರಸಿ ಬಂದಿತ್ತು. ಪ್ರಶಸ್ತಿ ಈಗ, ದೇಶದ 4ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀಯೂ ಸೋಮಣ್ಣ ಅವರನ್ನು ಹುಡುಕಿಕೊಂಡು ಬಂದಿದೆ.
ಬುಡಕಟ್ಟು ಜನರ ಸಾಕ್ಷಿಪ್ರಜ್ಞೆ: ಆಲತ್ತಾಳಹುಂಡಿಯ ಜೇನುಕುರುಬ ರಾದ ಅವರು ತಳ ಸಮುದಾಯದವರ ಅದರಲ್ಲೂ ಬುಡಕಟ್ಟು ಜನರ ಸಾಕ್ಷಿಪ್ರಜ್ಞೆ. ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರಲು ಹೋರಾಡುತ್ತಿದ್ದಾರೆ. ನಾಗರಹೊಳೆ, ಕಾಕನಕೋಟೆ ಅಭಯಾರಣ್ಯದಿಂದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಬುಡಕಟ್ಟು ಹಾಡಿಗಳಿಗೆ ಕಾಲ್ನಡಿಗೆ ಯಲ್ಲಿ ಸಂಚರಿಸಿ ಅವರ ಕಷ್ಟಸುಖದಲ್ಲಿ ಭಾಗಿಯಾದವರು. ಆದಿವಾಸಿಗಳಿಗೆ ಹಕ್ಕು ಕಲ್ಪಿಸಲು ನ್ಯಾಯಾಲಯದ ಮೆಟ್ಟಲೇರಿ ಹೋರಾಟವನ್ನೂ ನಡೆಸಿದವರು.
ಬಡತನದ ಕಾರಣದಿಂದ ಸೋಮಣ್ಣ ಶಾಲೆಗೆ ಹೋದವರಲ್ಲ. ಆದರೆ, ಲೋಕಜ್ಞಾನ ಪಡೆದು ಸಣ್ಣ ಭೂರಹಿತ ಆದಿವಾಸಿಗಳನ್ನು ಸಂಘಟಿಸಿದ್ದಾರೆ. ಪ್ರಗತಿಪರ ಹೋರಾಟಗಾರರ ಜೊತೆಗೂಡಿ ಕಟ್ಟಿದ ರಾಜ್ಯ ಮೂಲ ನಿವಾಸಿ ವೇದಿಕೆಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಂಘಟಿತ ಪ್ರಯತ್ನದಿಂದ ಆದಿವಾಸಿಗಳಿಗೆ ಅರಣ್ಯ ಪ್ರದೇಶದಿಂದ ಆರು ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿಕೊಟ್ಟು ಗಮನಸೆಳೆದಿದ್ದಾರೆ. ಆರಂಭದಲ್ಲಿ ಜೀತದಾಳಾಗಿದ್ದ ಅವರು ಅದರಿಂದ ಹೊರಬಂದು, ತನ್ನವರಾದ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರನ್ನು ಸಂಘಟಿಸಿ ಪುನರ್ವಸತಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ನರ್ಮದಾ ಬಚಾವೋ ಹೋರಾಟದಲ್ಲಿ ಮೇಧಾ ಪಾಟ್ಕರ್ ಜೊತೆ ಪಾಲ್ಗೊಂಡಿದ್ದರು. 2008ರಿಂದ ಜಾರಿಗೆ ಬಂದ ಅರಣ್ಯವಾಸಿಗಳ ಪಾರಂಪರಿಕ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯರಾಗಿದ್ದಾರೆ. 66 ವರ್ಷದ ಸೋಮಣ್ಣ ಪುತ್ರ ಕಾಳಸ್ವಾಮಿ ಜೊತೆ ಮೊತ್ತ ಹಾಡಿಯಲ್ಲಿ ವಾಸವಾಗಿದ್ದಾರೆ. ಈಚೆಗೆ ಕನ್ಹೇರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 20 =
Remember me
