ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 18ನೇ ಲೋಕಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದೆ. ಅಧಿಕಾರಾರೂಢ ಬಿಜೆಪಿಯ ಸದಸ್ಯರ ಸಂಖ್ಯೆ ಸ್ವಲ್ಪ ತಗ್ಗಿರುವುದು, ವಿರೋಧ ಪಕ್ಷ ಕಾಂಗ್ರೆಸ್​ನ ಸದಸ್ಯರ ಸಂಖ್ಯೆ ತುಸು ಹೆಚ್ಚಳ ಆಗಿರುವುದರಿಂದ ಈ ಬಾರಿ ಸಂಸತ್ತಿನ ಸಮೀಕರಣವೇ ಬದಲಾಗಿದೆ. ವಿರೋಧ ಪಕ್ಷಗಳ ಸದಸ್ಯರು ಮುಂದಿನ ದಿನಗಳಲ್ಲಿ ಎಷ್ಟು ಆಕ್ರಮಣಕಾರಿ ನಡವಳಿಕೆ ಪ್ರದರ್ಶಿಸಬಹುದು ಎಂಬುದರ ಮುನ್ಸೂಚನೆ ಮೊದಲ ದಿನದ ಗದ್ದಲದಿಂದಲೇ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಮಾಣವಚನ ಸ್ವೀಕರಿಸುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆ ಪಕ್ಷದ ಇತರ ಸಂಸದರು ಸಂವಿಧಾನ ಪ್ರತಿಯನ್ನು ಪ್ರದರ್ಶಿಸಿದರು. ಹೊಸ ಲೋಕಸಭೆ ಅಸ್ತಿತ್ವಕ್ಕೆ ಬಂದು, ಪ್ರಮಾಣವಚನ ನಡೆಯುತ್ತಿರುವ ಸಂದರ್ಭದಲ್ಲಿ ಇಂಥ ಘಟನೆ ನಡೆಯಬಾರದಿತ್ತು. ಸಂಸದ ಓವೈಸಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿ, ಪ್ಯಾಲೆಸೆôನ್ ರಾಷ್ಟ್ರಕ್ಕೆ ಜೈಕಾರ ಹಾಕಿರುವುದು ಅಕ್ಷಮ್ಯವೇ ಸರಿ.
ಪ್ರತಿಪಕ್ಷಗಳು ಆರಂಭದಿಂದಲೇ ಗಮನ ಸೆಳೆಯುವ ಉದ್ದೇಶ ಹೊಂದಿವೆ ಎಂಬುದು ಅವುಗಳ ನಡವಳಿಕೆಯಿಂದ ಸ್ಪಷ್ಟವಾಗುತ್ತದೆ. ಆದರೆ, ಸದನ ಕಲಾಪದ ಗಾಂಭೀರ್ಯವನ್ನು ಕಾಪಾಡಿಕೊಂಡು ಸಂಸದೀಯ ಮೌಲ್ಯಗಳ ಪಾಲನೆ ಮಾಡುವುದು ಎಲ್ಲ ಪಕ್ಷಗಳ ಜವಾಬ್ದಾರಿ ಎಂಬುದನ್ನು ಮರೆಯುವಂತಿಲ್ಲ. ಇಡೀ ಅಧಿವೇಶನ ಇದೇ ರೀತಿ ನಡೆದರೆ ಅದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ. ಆಡಳಿತ ಪಕ್ಷ- ವಿರೋಧ ಪಕ್ಷಗಳು ಪರಸ್ಪರ ತಿಳಿವಳಿಕೆಯಿಂದ ಜನೋಪಯೋಗಿ ಚರ್ಚೆಗೆ ಮುಂದಾದರೆ ಮಾತ್ರ ಅಧಿವೇಶನದ ಉದ್ದೇಶ ಈಡೇರಲು ಸಾಧ್ಯ. ರಾಜಕೀಯ ಪ್ರತಿಷ್ಠೆಯೇ ಮುಖ್ಯವಾದರೆ ಕಲಾಪ ಸುಗಮವಾಗಿ ನಡೆಸುವುದು ಕಷ್ಟವಾಗುತ್ತದೆ. ಚುನಾವಣೆಯ ವೇಳೆ ಬಿಜೆಪಿ, ಕಾಂಗ್ರೆಸ್ ಸೇರಿ ಇತರ ಪಕ್ಷಗಳು ಸಾಲು ಸಾಲು ಆಶ್ವಾಸನೆಗಳನ್ನು ನೀಡಿವೆ. ಹಂತಹಂತವಾಗಿ ಅವುಗಳನ್ನು ಈಡೇರಿಸುವ, ಜನರ ಆಶೋತ್ತರಗಳನ್ನು ಪೂರ್ಣಗೊಳಿಸುವ ಮಹತ್ತರ ಹೊಣೆಗಾರಿಕೆ ನೂತನ ಸಂಸದರ ಮೇಲಿದೆ.
ಯಾವುದೇ ವಿಷಯದ ಬಗ್ಗೆ ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆ ನಡೆಸಿದರೆ ಪರಿಹಾರದ ದಾರಿ ಸಿಕ್ಕೇ ಸಿಗುತ್ತದೆ. ಆಡಳಿತ ಪಕ್ಷ ಹಠಮಾರಿ ಧೋರಣೆ ತಳೆಯದೆ, ಪ್ರತಿಪಕ್ಷಗಳ ಮಾತನ್ನು ಸಂಯಮದಿಂದ ಆಲಿಸಬೇಕು ಮತ್ತು ಟೀಕೆ, ನ್ಯೂನತೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿ, ಸುಧಾರಣೆಗಳನ್ನು ಕಂಡುಕೊಳ್ಳಬೇಕು. ಅಲ್ಲದೆ, ವಿಪಕ್ಷಗಳು ಎಂದರೆ ಸರ್ಕಾರದ ಪ್ರತಿ ನಡೆಯನ್ನೂ ವಿರೋಧಿಸಬೇಕು ಎಂದಲ್ಲ. ಸರ್ಕಾರ ಎಡವಿದಾಗ, ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾದಾಗ ಎಚ್ಚರಿಸುವ ಕೆಲಸ ಮಾಡಬೇಕೆ ಹೊರತು ಘೋಷಣೆ, ಗದ್ದಲ, ಸಭಾತ್ಯಾಗದಂಥ ನಡವಳಿಕೆಯಿಂದ ಯಾವುದೇ ಪ್ರಯೋಜನವಿಲ್ಲ.
ಸಂಸದರಿಗೆ ದೊರೆಯುವ ಸಂಬಳ ಸವಲತ್ತು, ಸದನದ ಕಲಾಪ ಇದೆಲ್ಲದಕ್ಕೂ ಜನರ ತೆರಿಗೆ ಹಣ ವೆಚ್ಚವಾಗುತ್ತದೆ. ಹೀಗಾಗಿ, ರಾಜಕೀಯ ಲಾಭಕ್ಕಾಗಿ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆಯಿಂದ ರಾಜಕೀಯ ಪಕ್ಷಗಳು ಹೊರಬರಬೇಕು. ಕಲಾಪವನ್ನು ಇಡೀ ದೇಶ ಗಂಭೀರವಾಗಿ ಗಮನಿಸುತ್ತದೆ ಎಂಬ ವಾಸ್ತವವನ್ನು ರಾಜಕೀಯ ನಾಯಕರು ಅರ್ಥ ಮಾಡಿಕೊಳ್ಳಬೇಕು. 18ನೇ ಲೋಕಸಭೆಯ ಅಧಿವೇಶನ ಸಾರ್ಥಕವಾಗಿ ನಡೆದು, ಜನದನಿಗೆ ವೇದಿಕೆಯಾಗಬೇಕು. ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿಹಿಡಿಯಬೇಕು.
ಲೋಕಸಭೆ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 18 =
Remember me
