ವಿಜಯವಾಣಿ ಸುದ್ದಿಜಾಲ ಬೆಂಗಳೂರುರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆ.ಎನ್-1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಆತಂಕಕ್ಕೇ ಒಳಪಡದೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಸಲಹೆ ಮಾಡಿದ್ದಾರೆ.
ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಗೆ ಒಳಪಡುವ ವಿವಿಧ ಅಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜತೆ ನಡೆಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಪೂರ್ವ ಸಿದ್ದತೆಗಳ ಕುರಿತು ಮಾಹಿತಿ ಪಡೆದುಕೊಂಡರು.
ರೂಪಾಂತರ ಜೆ.ಎನ್-1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರೇ ಹೇಳಿದ್ದಾರೆ.ಆದರೂ ಇದರ ಬಗ್ಗೆ ಮೈ ಮರೆಯದೆ, ಕೆಲವು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಡಾ. ಶರಣ್ ಪ್ರಕಾಶ ಪಾಟೀಲ್, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 30 ಸಾವಿರ ಕೋವಿಡ್ ವ್ಯಾಕ್ಸಿನ್ ಬಂದಿದೆ. ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
60 ವರ್ಷ ಹಾಗೂ ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. ಒಂದು ಮತ್ತು 2ನೇ ಕೋವಿಡ್ ಸಂದರ್ಭದಲ್ಲಿ ಯಾವ ಲಸಿಕೆಯನ್ನು ನೀಡಲಾಗಿತ್ತೋ ಅದೇ ಲಸಿಕೆಯನ್ನು ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.ಜೆಎನ್-1 ರೂಪಾಂತರ ಸೋಂಕು ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ ಎಂಬ ಮಾಹಿತಿ ಇದೆ. ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬಾರದೆಂದು ಮನವಿ ಮಾಡಿದರು.
ಜನದಟ್ಟಣೆ ಮತ್ತಿತರ ಕಡೆ ಅಗತ್ಯ ಇರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು ಉತ್ತಮ. ಆದರೆ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕೆಂಬ ಆದೇಶವನ್ನು ಹೊರಡಿಸುವುದಿಲ್ಲ. ಹಾಗೆಂದು ಜನರು ಮೈ ಮರೆಬಾರದೆಂದು ಸಲಹೆ ಮಾಡಿದರು.ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್, ಔಷಧಗಳು, ಸೇರಿದಂತೆ ಲಭ್ಯವಿರುವ ಉಪಕರಣಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕೋವಿಡ್ ಸಂಬಂಧ ಔಷಧ ಖರೀದಿಸಲು ಹಣಕಾಸಿನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ 10 ಮಂದಿ ಸಾವನ್ನಪ್ಪಿದ್ದರು. ಇದು ಕೋವಿಡ್ ಕಾರಣದಿಂದಾಗಿ ಆಗಿಲ್ಲ. ಮೃತಪಟ್ಟ 10 ಮಂದಿಯಲ್ಲಿ 9 ಮಂದಿ ಬೇರೆ ಬೇರೆ ಅಂದರೆ ಹೃದಯ ಸಂಬಂಧಿ, ಕಿಡ್ನಿ ಹೀಗೆ ಹಲವಾರ ಕಾಯಿಲೆಗಳಿಂದ ಬಳಲುತ್ತಿದ್ದರು. ಇವರ ಸಾವಿಗೂ ಕೋವಿಡ್‌ಗೂ ಸಂಬಂಧವೇ ಇಲ್ಲ ಎಂದು ಹೇಳಿದರು.
ಮೃತಪಟ್ಟವರಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ತೆಗೆದುಕೊಂಡಿರಲಿಲ್ಲ. ಮದ್ಯಪಾನದ ವ್ಯಸನಕ್ಕೆ ತುತ್ತಾಗಿದ್ದರು ಎಂದು ಶರಣ್ ಪ್ರಕಾಶ ಪಾಟೀಲ್ ತಿಳಿಸಿದರು.ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತ ರಾಥೋಡ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ.ಮಂಜುನಾಥ್ , ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಮುಖ್ಯಾಂಶಗಳು:
*ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಬೆಡ್ ಮೀಸಲಿಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.*ವೈದ್ಯಕೀಯ ಕಾಲೇಜಿನಲ್ಲಿ 18,141 ಸರ್ಕಾರಿ ಆಸ್ಪತ್ರೆಗಳಲ್ಲಿ 10 ಸಾವಿರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರುವ ಆಸ್ಪತ್ರಗಳಲ್ಲಿ 11,500 ಹಾಸಿಗೆಗಳು ಇವೆ.*ಕೇರಳದಲ್ಲಿ ಕಾಣಿಸಿಕೊಂಡ ರೂಪಾಂತರ ಜೆಎನ್-1 ಸೋಂಕು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲೂ ಒಂದು ವೇಳೆ ಹಬ್ಬಿದರೆ ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದೆಲ್ಲವನ್ನು ತೆಗೆದುಕೊಂಡಿದ್ದೇವೆ.*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚನೆ ನೀಡಿದ್ದಾರೆ. ಅದರಂತೆ ಇಲಾಖೆಯಲ್ಲಿರುವ ಕೋವಿಡ್ ವಾರಿಯರ್ಸ್‌ಗಳುಫ್ಲೂ-ಲಸಿಕೆಯನ್ನು ಪಡೆಯಬೇಕು.*ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತಿದೆ. ಜತೆಗೆ ಆರೋಗ್ಯ ಸೌಲಭ್ಯಗಳ ಕಾರ್ಯ ಸಿದ್ಧತೆ ನಡೆಸಲಾಗಿದೆ.*ಸಭೆಯಲ್ಲಿ 99 ಮೆಡಿಕಲ್ ಕಾಲೇಜುಗಳು, 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ದೇಶಕರ ಜತೆ ಚರ್ಚೆ ನಡೆಸಲಾಗಿದೆ.*ಎಲ್ಲ ಸರ್ಕಾರಿ ಕಾಲೇಜುಗಳಲ್ಲೂ ಪ್ರತ್ಯೇಕವಾದ ಆಕ್ಸಿಜನ್ ಬೆಡ್ ಮತ್ತು ಐಸಿಯು ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮಾನವ ಸಂಪನ್ಮೂಲಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.*30 ಸಾವಿರ ಲಸಿಕೆಗಳು ಲಭ್ಯವಿದ್ದು, ಈವರೆಗೂ ಲಸಿಕೆ ಪಡೆಯದೇ ಇದ್ದವರೂ ಮತ್ತು ಮುಂಜಾಗ್ರತಾ ಲಸಿಕೆಯನ್ನಾಗಿ ತೆಗೆದುಕೊಳ್ಳುವವರು ಈ ಸೌಲಭ್ಯ ಪಡೆದುಕೊಳ್ಳಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − one =
Remember me
