ಬೆಂಗಳೂರು:ಸರ್ಕಾರದ ಬೊಕ್ಕಸಕ್ಕೆ ಆದಾಯ ತರಲು ಕಠಿಣ ಕ್ರಮಕೈಗೊಳ್ಳಬೇಕಾದ ಪೌರಾಡಳಿತ ಇಲಾಖೆಯು ದೂರ ಸಂಪರ್ಕ ಸ್ಥಾವರ ವಿಚಾರದಲ್ಲಿ ಖಾಸಗಿ ಸಂಸ್ಥೆಗಳ ಲಾಬಿಗೆ ಮಣಿದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೋರ್ಟ್ ಆದೇಶವನ್ನೇ ನೆಪ ಮಾಡಿಕೊಂಡಿರುವ ಇಲಾಖೆ ಅಧಿಕಾರಿಗಳು ಖಾಸಗಿ ಲಾಬಿಗೆ ಮಣಿದು ಟವರ್‌ಗಳಿಗೆ ತೆರಿಗೆ ವಿಧಿಸುವ ಸಂಬಂಧ ಹಳೆಯ ಆದೇಶವನ್ನು ತಿದ್ದುಪಡಿ ತಂದು ಹೊಸ ಸುತ್ತೋಲೆ ಹೊರಡಿಸಲು ಬರೋಬ್ಬರಿ 4 ವರ್ಷ ತೆಗೆದುಕೊಂಡಿದ್ದಾರೆ. ಅಲ್ಲದೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ನೂರಾರು ಕೋಟಿ ರೂ. ಆದಾಯ ಖೋತಾವಾಗಿದೆ. ನಿಯಮ ಉಲ್ಲಂಘಿಸಿ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಸಾವಿರಾರು ದೂರಸಂಪರ್ಕ ಕೇಂದ್ರಗಳ ವಿರುದ್ಧ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.
ಗೊಂದಲ ಮಾಹಿತಿ ನೀಡಿದ ಇಲಾಖೆ: ಅ.31ರಂದು ವಿಜಯವಾಣಿ ಮುಖಪುಟದಲ್ಲಿ ‘ಶೇ.82 ಟವರ್ ಅಕ್ರಮ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ರಾಜ್ಯದ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೇ ಅವಳಡಿಸಿರುವ ಖಾಸಗಿ ಮೊಬೈಲ್ ಟವರ್‌ಗಳು ಹಾಗೂ ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿರುವ ಬಗ್ಗೆ ಒಂದು ತಿಂಗಳೊಳಗೆ ಸಮಗ್ರ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜು ಪೌರಾಡಳಿತ ಇಲಾಖೆಗೆ ಆದೇಶಿಸಿದ್ದರು. ಇದೀಗ ವರದಿ ನೀಡಿರುವ ಇಲಾಖೆ ಗೊಂದಲದ ಮಾಹಿತಿ ನೀಡಿದೆ. ಒಂದು ಕಡೆ ಸರ್ಕಾರದ ಸುತ್ತೋಲೆಯಲ್ಲಿ ಟೆಲಿಕಮ್ಯುನಿಕೇಷನ್ ಗೋಪುರಗಳು ಮತ್ತು ಅದರ ಸಲಕರಣೆಗಳನ್ನು ವಸತಿ-ವಾಣಿಜ್ಯ ಕಟ್ಟಡಗಳ ಮೇಲೆ ಮತ್ತು ವ್ಯವಸಾಯ ಭೂಮಿ, ಕೈಗಾರಿಕಾ ಭೂಮಿ ಹಾಗೂ ಖಾಸಗಿ ಭೂಮಿಗಳಲ್ಲಿ ನೆಲದ ಮೇಲೆ ಗೋಪುರಗಳನ್ನು ನಿರ್ಮಿಸಲು ಸರ್ಕಾರದಿಂದ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿರುತ್ತದೆ. ಸುತ್ತೋಲೆಯ ಷರತ್ತಿನಲ್ಲಿ ಸ್ಥಳೀಯ ಸಂಸ್ಥೆಗಳು ವಿಧಿಸುವ ಯಾವುದೇ ತೆರಿಗೆಗೆ ಬದ್ಧರಾಗಿರಬೇಕು ಎಂದು ಹೇಳಿದೆ. ಇನ್ನೊಂದು ಕಡೆ 2014ರ ಮೇ 13ರಂದು ಸುತ್ತೋಲೆಗೆ ತಿದ್ದುಪಡಿ ತರಲಾಗಿದ್ದು, ಟೆಲಿಕಾಂ ಟವರ್‌ಗಳ ತೆರಿಗೆ ನಿಯಮಗಳನ್ನು ತಿದ್ದುಪಡಿ ಮಾಡುವವರೆಗೂ ಸ್ಥಳಿಯ ಸಂಸ್ಥೆಗಳು ದೂರ ಸಂಪರ್ಕ ಸ್ಥಾವರ ಹಾಗೂ ಅದರ ಸಲಕರಣೆಗಳನ್ನು ಸ್ಥಾಪಿಸುವ ಸಂಸ್ಥೆಗಳಿಗೆ ವಾರ್ಷಿಕ 12 ಸಾವಿರ ರೂ. ತೆರಿಗೆ ವಿಧಿಸಲು ಸೂಚಿಸಲಾಗಿದೆ ಎಂದು ಹೇಳಿದೆ. ಮತ್ತೊಂದು ಕಡೆ ಮೊಬೈಲ್ ಫೋನ್​ ಟವರ್‌ಗಳಿಗೆ ಯಾವ ರೀತಿ ಹಾಗೂ ಎಷ್ಟು ತೆರಿಗೆ ವಿಧಿಸಬೇಕು ಎಂಬುದರ ಬಗ್ಗೆ ಸರ್ಕಾರದ ಆದೇಶವಿಲ್ಲದೆ ತೆರಿಗೆ ಪಾವತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.
ಸುತ್ತೋಲೆ ಹೊರಡಿಸಲು ಬೇಕಾಯ್ತು 4 ವರ್ಷ:ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 12(3) ಹಾಗೂ ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಕಲಂ 02(1) (ಎ)ರಲ್ಲಿ ಕಟ್ಟಡ ಎಂಬ ಪರಿಭಾಷೆಯಲ್ಲಿ ದೂರ ಸಂಪರ್ಕ ಸ್ಥಾವರವನ್ನು ಸಹ ಕಟ್ಟಡವೆಂದು ಪರಿಗಣಿಸಲಾಗಿದೆ ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ. 2015ರ ಜ.9ರಿಂದ ಈ ಸುತ್ತೋಲೆ ಜಾರಿಗೆ ಬರುವಂತೆ ತಿದ್ದುಪಡಿ ಮಾಡಲಾಗಿದೆ. ದೂರಸಂಪರ್ಕ ಸ್ಥಾವರಗಳನ್ನು ಕಟ್ಟಡ ಎಂದು ಪರಿಗಣಿಸಿರುವುದರಿಂದ ತೆರಿಗೆ ನಿರ್ಧರಣೆ ಮಾಡುವ ಬಗ್ಗೆ 2019ರ ಡಿ.12ರಂದು ಸರ್ಕಾರಕ್ಕೆ ಪತ್ರ ಬರೆದಿರುವ ಇಲಾಖೆ ಮೊಬೈಲ್​ಫೋನ್​ ಟವರ್‌ಗಳಿಗೆ ಯಾವ ರೀತಿ, ಎಷ್ಟು ತೆರಿಗೆ ವಿಧಿಸಬೇಕು ಎಂಬುದರ ಬಗ್ಗೆ ಸರ್ಕಾರದ ಆದೇಶವಿಲ್ಲದೆ ತೆರಿಗೆ ಪಾವತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದೆ. ಆದರೆ, ಹೊಸ ಸುತ್ತೋಲೆ ಹೊರಡಿಸಲು ಬರೋಬ್ಬರಿ 4 ವರ್ಷಗಳನ್ನು ತೆಗೆದುಕೊಂಡಿದೆ.
ಇಲಾಖೆ ಕರ್ತವ್ಯ:ಮೊಬೈಲ್ ಫೋನ್​ ಟವರ್‌ನಿಂದ ಬರಬೇಕಿರುವ ತೆರಿಗೆ ಎಷ್ಟು, ಪ್ರತಿ ವರ್ಷ ಎಷ್ಟು ತೆರಿಗೆ ವಿಧಿಸಬೇಕು, ಅನಧಿಕೃತ ಹಾಗೂ ಅಧಿಕೃತ ಟವರ್‌ಗಳೆಷ್ಟು? ನಿಯಮ ಉಲ್ಲಂಘಿಸಿರುವ ಟವರ್ ವಿರುದ್ಧ ಕೈಗೊಂಡಿರುವ ಕ್ರಮಗಳೇನು? ಟವರ್ ನಿರ್ಮಿಸುವ ವೇಳೆ ಪಾಲಿಸಿರುವ ಮಾರ್ಗಸೂಚಿಗಳೇನು? ಸೇರಿ ಇತ್ಯಾದಿ ಮಾಹಿತಿಗಳನ್ನು ಸರ್ಕಾರದ ಗಮನಕ್ಕೆ ತರಬೇಕಿತ್ತು, ಆದರೆ, ಅನ್ಯ ಕಾರಣ ನೆಪವೊಡ್ಡಿ ಹಾಗೂ ಖಾಸಗಿ ಲಾಬಿಗೆ ಮಣಿದಿರುವ ಇಲಾಖೆ ಈಗಿನವರೆಗೂ ಮೊಬೈಲ್ ಫೋನ್​ ಟವರ್‌ಗಳಿಂದ ತೆರಿಗೆ ವಸೂಲಿ ಮಾಡುತ್ತಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 15 =
Remember me
