| ರಮೇಶ್ ಹಂಡ್ರಂಗಿ ಹಾಸನಸಾಮಾನ್ಯ ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆದು ಸರ್ಕಾರಿ ಶಾಲೆಯಲ್ಲಿ ಕಲಿತು ಕನ್ನಡ ನೆಲದಿಂದ ವಿದೇಶಕ್ಕೆ ಹಾರಿದ ಯುವಕ ಇಂದು ವೈದ್ಯಕೀಯ ಲೋಕವೇ ಮೆಚ್ಚುವಂಥ ಸಂಶೋಧನೆಯಿಂದ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಂತಿದ್ದಾರೆ. ಜ್ವರ ವೈರಸ್​ನಿಂದ ಬಂದಿದೆಯೇ ಅಥವಾ ಬ್ಯಾಕ್ಟೀರಿಯಾದಿಂದ ಬಂದಿದೆಯೇ ಎಂದು ನಿಖರವಾಗಿ ಪತ್ತೆಹಚ್ಚುವ ‘ಸೆಲ್ ಫೇಸ್’ ಎಂಬ ಆಧುನಿಕ ತಂತ್ರಜ್ಞಾನದ ಸಾಧನವನ್ನು ಆವಿಷ್ಕರಿಸಿದ್ದಾರೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಡಾ.ಕೋಮಲ್​ಕುಮಾರ್ ಜವರಪ್ಪ.
ಡಾ.ಕೋಮಲ್​ಕುಮಾರ್ ಅವರ ಸಂಶೋಧನಾ ಪ್ರಬಂಧವು ಇಂಗ್ಲೆಂಡ್​ನ ಪ್ರತಿಷ್ಠಿತ ವಿಜ್ಞಾನ ಮಾಧ್ಯಮ ‘ಸೆಲೆಕ್ಟ್ ಸೈನ್ಸ್’ನಲ್ಲಿ ಪ್ರಕಟವಾಗಿದೆ. ಇದುವರೆಗಿನ ವೈದ್ಯಕೀಯ ತಂತ್ರಜ್ಞಾನದ ಸಲಕರಣೆಗಳಲ್ಲಿ ಜ್ವರದ ನಿಖರ ಕಾರಣ ಪತ್ತೆ ಕಾರ್ಯ ಶೇಕಡ 50ರಷ್ಟು ಮಾತ್ರ ಸಾಧ್ಯತೆ ಇತ್ತು. ಈಗ ಹೊಸ ಆವಿಷ್ಕಾರದ ತಂತ್ರಜ್ಞಾನದ ಸಲಕರಣೆ ಮೂಲಕ ಶೇ.100ರಷ್ಟು ಖಚಿತವಾಗಿ ಪತ್ತೆ ಮಾಡಿ ಅಗತ್ಯ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಪ್ರಸ್ತುತ ಸಿಂಗಾಪುರದಲ್ಲಿರುವ ಡಾ.ಕೋಮಲ್​ಕುಮಾರ್ ಜವರಪ್ಪ ಅವರೊಂದಿಗೆ ವಿಜಯವಾಣಿ ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
-ಸಿಂಗಾಪುರದ ಟುಮ್ ಕ್ರಿಯೇಟ್ ಸಂಸ್ಥೆಯ ಪ್ರೊ. ಪರ್ಸಿನಲ್ಲೆ ಮತ್ತು ಪ್ರೊ.ಅಲಿವರ್ ಹೈಡನ್ ಮಾರ್ಗದರ್ಶನದಲ್ಲಿ ಸಂಶೋಧಿಸಿರುವ ಈ ಉಪಕರಣದಿಂದ ಮನುಷ್ಯರಿಗೆ ಬರುವ ಜ್ವರವು ವೈರಸ್​ನಿಂದ ಬಂದಿದೆಯೇ ಅಥವಾ ಬ್ಯಾಕ್ಟೀರಿಯಾದಿಂದ ಬಂದಿದೆಯೇ ಎಂಬುದನ್ನು ಖಚಿತವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ನಾವು ಭಾರತವನ್ನೇ ಉದಾಹರಣೆಗೆ ತೆಗೆದುಕೊಂಡರೆ ಬಹುತೇಕ ವೈದ್ಯರು ಜ್ವರ ಬ್ಯಾಕ್ಟೀರಿಯಾದಿಂದ ಬಂದಿದೆ ಎಂದುಕೊಂಡು ಆಂಟಿಬಯೋಟಿಕ್ ನೀಡುತ್ತಾರೆ. ಇದರಿಂದ ಮನುಷ್ಯರಿಗೆ ಹೆಚ್ಚು ತೊಂದರೆಯೇ ಹೊರತು ಯಾವ ಪ್ರಯೋಜನವೂ ಇಲ್ಲ. ಜ್ವರದ ತೀವ್ರತೆ ಹೆಚ್ಚಾದಲ್ಲಿ ಸೂಕ್ಷಾ್ಮಣುಜೀವಿಗಳು ದೇಹವನ್ನು ಆವರಿಸಿ, ಅಂಗಾಂಗಗಳ ಕಾರ್ಯಕ್ಷಮತೆ ಕುಂಠಿತಗೊಳಿಸಿ ರೋಗಿಯನ್ನು ಸಾವಿನ ದವಡೆಗೆ ದೂಡಬಹುದು. ಹೀಗೆ ಜ್ವರಕ್ಕೆ ಕಾರಣವಾದ ವೈರಸ್ ಯಾವುದು ಎಂದು ತಿಳಿದು ಅದಕ್ಕೆ ಬೇಕಾದ ಔಷಧವನ್ನು ನೀಡಬೇಕು. ಈ ನಿಟ್ಟಿನಲ್ಲಿ ಯೋಚಿಸಿ 4 ವರ್ಷಗಳ ಹಿಂದೆ ಈ ಸಂಶೋಧನೆ ಆರಂಭಿಸಲಾಯಿತು. ಇನ್ನು ಆರು ತಿಂಗಳಲ್ಲಿ ಈ ಸಾಧನ ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳ ಆಸ್ಪತ್ರೆಗಳಲ್ಲಿ ಸಿಗಲಿದೆ.
-ಜ್ವರದ ಕಾರಣವಷ್ಟೇ ಅಲ್ಲ, ಹೃದಯಾಘಾತವಾದಾಗ ಬಹುತೇಕರಿಗೆ ಪ್ಲೇಟ್​ಲೆಟ್ಸ್​ಗಳು ಅಂಟಿಕೊಳ್ಳಲು ಆರಂಭಿಸುತ್ತವೆ. ಆಗ ರಕ್ತಸಂಚಾರ ಬ್ಲಾಕ್ ಆಗಿ ಆಕ್ಸಿಜನ್ ಸಿಗದೆ ವ್ಯಕ್ತಿ ಕೂಡಲೇ ಮೃತಪಡುತ್ತಾನೆ. ವೈದ್ಯರಿಗೆ ಪ್ಲೇಟ್​ಲೆಟ್ಸ್ ಅಂಟಿಕೊಳ್ಳುತ್ತಿದೆಯೇ ಎಂದು ಗುರುತಿಸುಲು ಸಾಧ್ಯವಾಗುವುದಿಲ್ಲ. ಈ ಯಂತ್ರದಿಂದ ಅದನ್ನೂ ತಿಳಿಯಬಹುದು. ಹೃದಯಾಘಾತ ಅಥವಾ ಹೃದಯಸ್ತಂಭನದ ಸಮಯದಲ್ಲಿ ಈ ಯಂತ್ರ ಸಾಕಷ್ಟು ಸಹಾಯಕವಾಗಲಿದೆ.
-ಸೆಲ್ ಫೇಸ್ ಯಂತ್ರ ಚಿಕ್ಕ ಗಾತ್ರದ್ದಾಗಿದ್ದು, ಆಸ್ಪತ್ರೆಯ ಪಾಯಿಂಟ್ ಆಫ್ ಕೇರ್ (ಪಿಒಸಿ)ನಲ್ಲಿ ಇಡಬಹುದು. ರೋಗಿಯ ಕೈ ಬೆರಳಿನಿಂದ ಒಂದು ಹನಿ ರಕ್ತವನ್ನು ತೆಗೆದು ಈ ಉಪಕರಣಕ್ಕೆ ಹಾಕಿದಾಗ ಅದು ಕ್ಷಣಾರ್ಧದಲ್ಲೇ ವರದಿ ನೀಡುತ್ತದೆ. ಇಂದು ಭಾರತದಲ್ಲಿ ರಕ್ತ ಪರೀಕ್ಷೆಗೆ ಸಾವಿರಾರು ರೂ. ನೀಡಬೇಕು. ಈ ಉಪಕರಣದ ಪರೀಕ್ಷೆ 100 ರೂ. ಖರ್ಚಿನಲ್ಲಿ ಮುಗಿದುಹೋಗುತ್ತದೆ.
-ನಾನು ಹುಟ್ಟಿದ್ದು ಅರಕಲಗೂಡಿನಲ್ಲಿ, ತಾಯಿ ರತ್ನಮ್ಮ, ತಂದೆ ಜವರಪ್ಪ. ನನಗೆ ಇಬ್ಬರು ಅಣ್ಣಂದಿರು ಇದ್ದಾರೆ. ನಾನು ರ್ಯಾಂಕ್​ಸ್ಟೂಡೆಂಟ್ ಅಲ್ಲ. ಪ್ರಾಥಮಿಕ ಶಿಕ್ಷಣವನ್ನು ಅರಕಲಗೂಡು ಸರ್ಕಾರಿ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಜ್ಯೋತಿ ಕಾನ್ವೆಂಟ್​ನಲ್ಲಿ ಮುಗಿಸಿದೆ. ಪಿಯು ಶಿಕ್ಷಣವನ್ನು ಅರಕಲಗೂಡಿನ ಸರ್ಕಾರಿ ಕಾಲೇಜಿನಲ್ಲಿ ಪಡೆದು, ಹಾಸನದ ಸರ್ಕಾರಿ ಕಾಲೇಜಿನಲ್ಲಿ ಬಿಎಸ್​ಸಿ ಪದವಿ ಪಡೆದೆ. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಪರಿಸರವಿಜ್ಞಾನ ವಿಷಯದಲ್ಲಿ ಎಂಎಸ್​ಸಿ ಸ್ನಾತಕೋತ್ತರ ಪದವಿ ಪಡೆದು, ಪ್ರೊ.ದೇವಿಪ್ರಸಾದ್ ಮಾರ್ಗದರ್ಶನದಲ್ಲಿ 2013ರಲ್ಲಿ ಪಿಎಚ್​ಡಿ ಮುಗಿಸಿದೆ. ನಂತರ ಸ್ವೀಡನ್​ಗೆ ತೆರಳಿ ಅಲ್ಲಿ ಲಿಂಕ್ ಶಾಪಿಂನ್ ಎಂಬ ಪ್ರತಿಷ್ಠಿತ ವಿವಿಯಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ (ಪಿಡಿಎಫ್) ಪಡೆದೆ. ಬಳಿಕ ಫಿನ್​ಲೆಂಡ್​ನಲ್ಲಿ 2016ರಲ್ಲಿ ಲುಕೇಮಿಯಾ ಎಂಬ ಮಾರಕ ಬ್ಲಡ್​ಕ್ಯಾನ್ಸರ್ ಮೇಲೆ ಸಂಶೋಧನೆ ನಡೆಸಿದೆ. 2021ರಲ್ಲಿ ಡೆನ್ಮಾರ್ಕ್​ನ ಕೂಪನ್​ಹೇಗ್​ನ ವಿಶ್ವದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ರಿಂಗ್ಸ್ ಹಾಸ್ಪಿಟಲೆಟ್​ನಲ್ಲಿ ವಿಜ್ಞಾನಿಯಾಗಿ ನಿಯುಕ್ತಿಗೊಂಡೆ. ಬ್ಲಡ್​ಕ್ಯಾನ್ಸರ್ ಕಾಯಿಲೆ ಬಗ್ಗೆ ಸತತ ಹತ್ತು ವರ್ಷಗಳ ಕಾಲ ಸಂಶೋಧನೆ ನಡೆಸಿಕೊಂಡು ಬಂದಿದ್ದೇನೆ. ಈ ನಡುವೆ ಸಿಂಗಾಪುರದ ಟುಮ್ ಕ್ರಿಯೇಟ್ ಸಂಸ್ಥೆಯಲ್ಲಿ ‘ಸೆಲ್ ಫೇಸ್’ ಸಂಶೋಧನೆಯನ್ನು ನಡೆಸಿ ಅದರಲ್ಲಿ ಬಹುಪಾಲು ಯಶಸ್ಸು ಕಂಡಿದ್ದು, ಅದರ ಮುಂದುವರಿದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ.

-ನನ್ನ ಈ ಬೆಳವಣಿಗೆಗೆ ಸಂಪೂರ್ಣ ಕಾರಣರಾದವರು ನನ್ನ ದೊಡ್ಡಣ್ಣ. ಮೈಸೂರಿನಲ್ಲಿ ನನ್ನ ಪಿಎಚ್.ಡಿ ಮುಗಿದ ಮಾರನೆ ದಿನವೇ ಅವರು ನನಗೆ ಸ್ವೀಡನ್ ದೇಶದ ದಾರಿ ತೋರಿಸಿದರು. ನನ್ನ ಅಣ್ಣನೂ ದೊಡ್ಡ ವಿಜ್ಞಾನಿ. ಬಹುತೇಕ ಕನ್ನಡಿಗರು ನನ್ನ ಅಣ್ಣ ಡಾ.ಮಹದೇಶ್ ಪ್ರಸಾದ್ ಹೆಸರನ್ನು ಕೇಳಿರುತ್ತಾರೆ. ಏಕೆಂದರೆ ಇಡೀ ಜಗತ್ತನ್ನೇ ಬಾಧಿಸಿದ ಕರೊನಾ ಕಾಲದಲ್ಲಿ ಕೋವಿಡ್ ಲಸಿಕೆ ಕಂಡು ಹಿಡಿಯಲು ಯುರೋಪ್ ವಿಶ್ವವಿದ್ಯಾಲಯಗಳು ರಚಿಸಿದ್ದ ಸಂಶೋಧನಾ ತಂಡದಲ್ಲಿ ಸ್ಥಾನ ಪಡೆದಿದ್ದ ಏಕೈಕ ಭಾರತೀಯ ಅವರು. ಮೈಸೂರು ವಿವಿಯಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದ ಅವರು ವಿವಿ ಇತಿಹಾಸದಲ್ಲಿಯೇ ಕಡಿಮೆ ಅವಧಿಯಲ್ಲಿ ಪಿಎಚ್.ಡಿ ಗಳಿಸಿದ ಮೊದಲಿಗರು. ಪ್ರಸ್ತುತ ಬೆಲ್ಜಿಯಂನಲ್ಲಿ ವಾಸವಾಗಿದ್ದಾರೆ. ಎರಡನೇ ಅಣ್ಣ ಮೈಸೂರಿನಲ್ಲಿ ಉದ್ಯಮಿಯಾಗಿದ್ದಾರೆ.
-ವರ್ಷದಲ್ಲಿ ಒಮ್ಮೆಯಾದರೂ ಬಿಡುವು ಮಾಡಿಕೊಂಡು ನನ್ನ ಊರಿಗೆ ಬರುತ್ತೇನೆ. ಬಂದ ತಕ್ಷಣ ಮೊದಲು ಮಾಡುವ ಕೆಲಸ ಗೊರೂರು ಹೊಳೆಗೆ ಹೋಗಿ ಈಜಾಡುವುದು. ಚಿಕ್ಕವನಿದ್ದಾಗಲೂ ಕದ್ದುಮುಚ್ಚಿ ಈಜಲು ಹೋಗುತ್ತಿದ್ದೆ.
-ಶಾಲಾದಿನಗಳಲ್ಲಿ ಸ್ನೇಹಿತರೊಂದಿಗೆ ಸೇರಿ ಬೇರೆಯವರ ಜಮೀನಿನಲ್ಲಿ ಬೆಳೆದಿದ್ದ ಜೋಳ ಹಾಗೂ ಸೊಪ್ಪುಕಡಲೆಯನ್ನು ಕದ್ದು ತಿನ್ನುತ್ತಿದ್ದೆವು. ಒಂದು ದಿನ ಹೀಗೆ ಕದ್ದ ಜೋಳವನ್ನು ಮನೆಗೆ ತಂದಾಗ ತಾಯಿ ನನಗೆ ಚೆನ್ನಾಗಿ ಹೊಡೆದು ಜೋಳ ಬೆಳೆದಿದ್ದ ವ್ಯಕ್ತಿಗೆ ಮನೆಗೆ ಕರೆದುಕೊಂಡು ಹೋಗಿ ಜೋಳ ಹಿಂದಿರುಗಿಸಿಕೊಟ್ಟಿದ್ದರು. ಬಹುಶಃ ಈ ಘಟನೆ ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಪ್ರಾಮಾಣಿಕತೆ ಮೊದಲ ಪಾಠ ಕಲಿತದ್ದೇ ಇಲ್ಲಿಂದ.
-ಸಾಮಾನ್ಯ ಮಧ್ಯಮ ವರ್ಗದ ಕುಟುಂಬ ನಮ್ಮದು. ತಂದೆ ಜವರಪ್ಪ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಜೀಪ್ ಚಾಲಕರಾಗಿದ್ದರು. ಅವರಿಗೆ ಮದ್ಯವ್ಯಸನವಿತ್ತು. ಅವರ ಸಂಬಳದ ಬಹುತೇಕ ಹಣವನ್ನು ಮದ್ಯಕ್ಕೆ ಖರ್ಚು ಮಾಡುತ್ತಿದ್ದರು. ತಾಯಿಯೇ ಮೂವರು ಮಕ್ಕಳ ಜತೆಗೆ ಸಂಸಾರದ ಜವಾಬ್ದಾರಿ ಹೊತ್ತಿದ್ದರು. ತಂದೆ ಕೊಡುವ ಅಲ್ಪಸ್ವಲ್ಪ ದುಡ್ಡಿನ ಜತೆಗೆ ಮಕ್ಕಳಿಗೆ ಮನೆಪಾಠ ಹೇಳಿಕೊಡುವುದು, ಬಟ್ಟೆ ಹೊಲೆಯುವುದರಿಂದ ಅಲ್ಪಸ್ವಲ್ಪ ಹಣ ಸಂಪಾದಿಸಿ ಸಂಸಾರದ ಜತೆಗೆ ನಮಗೆ ಶಿಕ್ಷಣ ಕೊಡಿಸಿ, ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದರು.
-ಎಲ್ಲೇ ಇದ್ದರೂ ನನ್ನ ದೇಶ, ನನ್ನ ಊರು ಎಂಬ ಅಭಿಮಾನ ಎಲ್ಲರಿಗೂ ಇದ್ದೇ ಇರುತ್ತದೆ. ನಮ್ಮ ದೇಶದಲ್ಲಿ ಸಾಕಷ್ಟು ಪ್ರತಿಭಾವಂತರು ಇದ್ದಾರೆ. ಜಗತ್ತಿನ ಎಲ್ಲ ದೇಶಗಳಲ್ಲೂ ಭಾರತೀಯರು ಇದ್ದಾರೆ. ಅವರೆಲ್ಲ ದೇಶ ಬಿಟ್ಟು ಹೋಗಲು ಕಾರಣ ಸರ್ಕಾರಗಳು ಸಂಶೋಧನೆ, ಪ್ರತಿಭೆಗೆ ಮಹತ್ವ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಗಳು ಬದಲಾಗಬೇಕು. ಹೊರದೇಶದಲ್ಲಿ ಇರುವ ಎಲ್ಲರನ್ನೂ ದೇಶಕ್ಕೆ ಕರೆಸಿಕೊಂಡು ಅವರ ಕ್ಷೇತ್ರಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನನಗೂ ಭಾರತಕ್ಕೆ ಬರಬೇಕು, ಅಲ್ಲಿ ಒಂದು ಕ್ಯಾನ್ಸರ್ ಸಂಶೋಧನಾ ಕೇಂದ್ರ ತೆರೆದು ಸಂಶೋಧನೆ, ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು ಎಂಬ ಮಹದಾಸೆ ಇದೆ.
ಚಿತ್ರರಂಗದ ಮಂದಿಗೆ ಸಂತಸದ ಸುದ್ದಿ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + nineteen =
Remember me
