ಹಾವೇರಿ:ನಗರದಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆದಲ್ಲಿ ಮುಸ್ಲಿಮರ ಕಡೆಗಣನೆ ಆಗಿದೆ ಎಂಬ ಆರೋಪ ಸುಳ್ಳು. ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಸಮುದಾಯದವರ 11 ಹೆಸರುಗಳಿವೆ. ಕೆಲವರು ದುರುದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಸ್ಪಷ್ಟಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾತನಾಡಿದ ಅವರು, ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ನಾನೊಬ್ಬನೇ ಅಂತಿಮಗೊಳಿಸಿಲ್ಲ. ನಿವೃತ್ತ ನ್ಯಾಯಾಧೀಶರು ಸೇರಿ ಹಲವು ಕನ್ನಡ ತಜ್ಞರಿದ್ದ ತಂಡ ತಯಾರಿಸಿದೆ. ಈ ಬಾರಿ ಹೊಸಬರಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಹಾವೇರಿ ಸಮ್ಮೇಳನದಲ್ಲಿ ರಾಜಾಸಾಬ ನದಾಫ್, ಖಾಜಾಸಾಬ ದೊಡ್ಡಮನಿ, ನೂರ್​ಜಹಾನ್ ಹೊಸಪೇಟೆ, ನಜೀರ್ ಸವಣೂರ, ಚಾಂದಪಾಷ ಎನ್.ಎಸ್., ರಮಜಾನ್ ಕಿಲ್ಲೇದಾರ ಸೇರಿ 11 ಮುಸ್ಲಿಮರ ಹೆಸರುಗಳಿವೆ. ಇವರು ಸನ್ಮಾನ, ಗೋಷ್ಠಿ, ನಿರೂಪಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೆಲ್ಲ ಗಮನಿಸದೇ ಕೆಲವರು ‘ಮುಸ್ಲಿಮರನ್ನು ಕಡೆಗಣಿಸಲಾಗಿದೆ’ ಎಂದು ಅಪಪ್ರಚಾರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.
ಸಮ್ಮೇಳನದ ಮುಖ್ಯ ವೇದಿಕೆಗೆ ಕನಕ-ಸರ್ವಜ್ಞ-ಷರೀಫರ ಹೆಸರಿಡಲಾಗಿದೆ. ಇದು ಕನ್ನಡಿಗರ ಸಮ್ಮೇಳನ. ಜಾತಿ, ಧರ್ಮಗಳ ಆಧಾರಿತ ಸಮ್ಮೇಳನ ಅಲ್ಲ. ಇಲ್ಲಿ ಕನ್ನಡವೇ ಮುಖ್ಯ ಹೊರತು ಧರ್ಮವಲ್ಲ. ಸ್ವಹಿತಾಸಕ್ತಿ ಮತ್ತು ಪೂರ್ವಾಗ್ರಹ ಪೀಡಿತರಾಗಿ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಬಿಳಿಮಲೆ ಆರೋಪ ದುರುದ್ದೇಶಪೂರಿತ: ಸಮ್ಮೇಳನದಲ್ಲಿ ಮುಸ್ಲಿಮರ ಕಡೆಗಣನೆಯಾಗಿದೆ ಎಂದು ಜಾಲತಾಣಗಳಲ್ಲಿ ಆರೋಪಿಸಿ, ಪರ್ಯಾಯ ಸಮ್ಮೇಳನ ಮಾಡುವ ಕುರಿತು ಪುರುಷೋತ್ತಮ ಬಿಳಿಮಲೆ, ಪತ್ರಕರ್ತ ಹನೀಫ್ ಹಾಗೂ ಆರ್.ಜಿ.ಹಳ್ಳಿ ನಾಗರಾಜ ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಜವಾಬ್ದಾರಿ ಮರೆತು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಹನೀಫ್ ಅನೇಕ ಬಾರಿ ಸಮ್ಮೇಳನದ ಗೋಷ್ಠಿ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಇದು ಅವರ ಕೋಪಕ್ಕೆ ಕಾರಣವಾಗಿದೆ ಎಂದು ಡಾ. ಮಹೇಶ ಜೋಶಿ ಹೇಳಿದರು. ಪುರುಷೋತ್ತಮ ಬಿಳಿಮಲೆ ಕರೆ ಮಾಡಿ ಹಾವೇರಿ ಸಮ್ಮೇಳನದಲ್ಲಿ ಪೆಂಡಾಲ್ ಹಾಕಲು ಪರಿಚಯಸ್ಥ ಮುಸಲ್ಮಾನರೊಬ್ಬರಿಗೆ ಅವಕಾಶ ಕೊಡಿಸುವಂತೆ ಕೇಳಿಕೊಂಡಿದ್ದರು. ಪೆಂಡಾಲ್ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದು ಜಿಲ್ಲಾಡಳಿತಕ್ಕೆ ಸಂಬಂಧಿಸಿದ್ದು ಎಂದಿದ್ದೆ. ನಂತರ ಅವರಿಗೆ ಆಮಂತ್ರಣ ಪತ್ರಿಕೆ ಕಳುಹಿಸಿಕೊಟ್ಟಿದ್ದೆ. ಅನಾರೋಗ್ಯ ಸಮಸ್ಯೆಯಿಂದ ಸಮ್ಮೇಳನಕ್ಕೆ ಬರಲು ಆಗುವುದಿಲ್ಲ ಎಂದು ಮರುಸಂದೇಶ ಕಳುಹಿಸಿದ್ದಾರೆ. ಪೆಂಡಾಲ್ ಹಾಕಲು ಅವಕಾಶ ಕೊಡಿಸಿಲ್ಲ ಎಂದು ಬೇಸರಗೊಂಡು ಪ್ರತ್ಯೇಕ ಸಮ್ಮೇಳನದ ಮಾತು ಆಡುತ್ತಿದ್ದಾರೆ ಎಂದು ಜೋಶಿ ತಿರುಗೇಟು ನೀಡಿದರು.
ದಲಿತರ ಕಡೆಗಣನೆ ಆರೋಪ: ಸಾಹಿತ್ಯ ಸಮ್ಮೇಳನದಲ್ಲಿ ದಲಿತರನ್ನು ಕಡೆಗಣನೆ ಮಾಡಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾವೇರಿ ಪ್ರವಾಸಿ ಮಂದಿರದಲ್ಲಿ ಗುರುವಾರ ಡಾ.ಮಹೇಶ ಜೋಶಿ ಎದುರು ದಿಢೀರ್ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಜಿಲ್ಲೆಯ ದಲಿತ ಮುಖಂಡರನ್ನು ಕರದು ಸಭೆ ಮಾಡಿಲ್ಲ. ಸಲಹೆಗಳನ್ನೂ ಕೇಳಿಲ್ಲ. ನೀವು ಬ್ರಾಹ್ಮಣ ಅಧ್ಯಕ್ಷರು. ಹಾಗಾಗಿ, ದಲಿತರನ್ನು ಕಡೆಗಣನೆ ಮಾಡಿದ್ದೀರಿ. ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಹಾಗೂ ಇತರರು ಸಮ್ಮೇಳನದಲ್ಲಿ ಕಮಿಷನ್ ತಿಂದಿದ್ದಾರೆ ಎಂದು ಖಾರವಾಗಿ ಆರೋಪಿಸಿದರು. ಜೋಶಿ ಅವರಿಗೆ ಉತ್ತರಿಸಲೂ ಅವಕಾಶ ನೀಡಲಿಲ್ಲ.
ಸಂಗೀತ ಪರಿಷತ್ತು ಆಕ್ಷೇಪ
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವಿತೆಗಳನ್ನು ವಾಚಿಸಬೇಕೇ ಹೊರತು ಹಾಡುವಂತಿಲ್ಲ ಎಂಬ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ನಿಲುವಿಗೆ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಆಕ್ಷೇಪ ವ್ಯಕ್ತಪಡಿಸಿದೆ. ಸುಗಮ ಸಂಗೀತ ಕಲಾವಿದರು ಗಾಯನದ ಮೂಲಕ ನಾಡಿನ ಹೆಸರಾಂತ ಕವಿಗಳ ಗೀತೆಗಳನ್ನು ಜಗತ್ತಿನಾದ್ಯಂತ ತಲುಪಿಸುತ್ತಿದ್ದಾರೆ. ಆದರೆ, ಕವಿತೆಯನ್ನು ಹಾಡುವಂತಿಲ್ಲ ಎಂಬ ಪರಿಷತ್ತಿನ ನಿಬಂಧನೆ ಖಂಡನಾರ್ಹ ಎಂದು ಪರಿಷತ್ತು ಬೇಸರ ವ್ಯಕ್ತಪಡಿಸಿದೆ.
ಕೋವಿಡ್ ಭೀತಿ ಇಲ್ಲ
ಮುಂಜಾಗ್ರತೆ ಕ್ರಮ ತೆಗೆದುಕೊಂಡು ಸಮ್ಮೇಳನ ನಡೆಸುವ ಬಗ್ಗೆ ಖುದ್ದು ಸಿಎಂ ಹೇಳಿದ್ದಾರೆ. ಹಾಗಾಗಿ, ಸಾಹಿತ್ಯ ಸಮ್ಮೇಳನಕ್ಕೆ ಕೋವಿಡ್ ಭೀತಿ ಇಲ್ಲ. ಹಾವೇರಿ ಜಿಲ್ಲಾ ರೆಡ್​ಕ್ರಾಸ್ ಸಂಸ್ಥೆ ಸಮ್ಮೇಳನಕ್ಕೆ 2 ಲಕ್ಷ ಮಾಸ್ಕ್ ನೀಡಿದೆ. ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೆ 10 ಸಾವಿರ ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮಹೇಶ ಜೋಷಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
