| ನವೀನ್ ಎಂ.ಬಿ., ರಮೇಶ್ ಜಹಗೀರದಾರ್ ದಾವಣಗೆರೆ
‘ವೀರಶೈವ ಲಿಂಗಾಯತ ಸಮುದಾಯದ ಸ್ವಾಭಿಮಾನಕ್ಕೆ, ಸ್ಥಾನಮಾನಕ್ಕೆ, ಅಸ್ತಿತ್ವಕ್ಕೆ ಧಕ್ಕೆ ಎದುರಾದಾಗಲೆಲ್ಲ ನಾವು ಸಿಡಿದೇಳುತ್ತೇವೆ. ಸಿಂಹಗರ್ಜನೆ ಮಾಡುತ್ತೇವೆ. ಗುರಿ ಮುಟ್ಟುವವರೆಗೆ ಹೋರಾಡುತ್ತೇವೆ’.
‘ಸಮಾಜದ ಹಿತ ಕಾಯುವುದೇ ನಮ್ಮ ಪರಮ ಗುರಿ! ಈ ಅಧಿವೇಶನದ ಮೂಲಕ ಸಮಾಜದ ಸಂಘಟನೆಗೂ ಬಲ ಬರಲಿದೆ, ನಮ್ಮ ಶಕ್ತಿಪ್ರದರ್ಶನಕ್ಕೆ ಇದೊಂದು ವೇದಿಕೆಯಾಗಿದೆ. ಸಮುದಾಯದ ಎಲ್ಲ ಒಳ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸುವವರೆಗೆ, ದೋಷಪೂರಿತ ಜಾತಿ ಸಮೀಕ್ಷೆ ಕೈ ಬಿಡುವವರೆಗೆ ನಮ್ಮ ಹೋರಾಟ ನಿಲ್ಲದು’.
ದಾವಣಗೆರೆಯಲ್ಲಿ ಡಿಸೆಂಬರ್ 23 ಮತ್ತು 24 ರಂದು ನಡೆಯಲಿರುವ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದ ಹಿನ್ನೆಲೆಯಲ್ಲಿ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳಿವು.
‘ನನಗೀಗ 93 ವರ್ಷ ವಯಸ್ಸಿರಬಹುದು. ವೀರಶೈವರ ಹಿತಾಸಕ್ತಿಯ ವಿಷಯ ಬಂದಾಗ ನಾನು 39ರ ಪ್ರಾಯದವನಾಗುತ್ತೇನೆ. ಸಮಾಜದ ಹಿತಕ್ಕೆ ನನ್ನ ಜೀವನ ಮುಡಿಪಿಟ್ಟಿದ್ದೇನೆ. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಉದಾತ್ತವಾದ ಹಾಗೂ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ಶಾಂತಿ ಎಂಬುದು ನಮ್ಮ ಘೊಷವಾಕ್ಯ. ಹೀಗಾಗಿ ಸ್ವಧರ್ಮದ ಹಿತ ಕಾಯುವ ಜತೆಗೆ ಪರಧರ್ಮ ಸಹಿಷ್ಣುತೆ ಪಾಲಿಸಿ ಸಾಮರಸ್ಯದ ಹಣತೆ ಬೆಳಗುತ್ತಲೇ ಮುಂದೆ ಸಾಗುತ್ತೇವೆ’. ಮಹಾಸಭಾ ಸ್ಥಾಪನೆಯಾದ ಸನ್ನಿವೇಶ, ನಡೆದು ಬಂದ ದಾರಿ, ಮುಂದಿನ ಗುರಿ, ಸಮಾಜ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಳಪಂಗಡಗಳ ಭೇದ ಮರೆತು ಸಮುದಾಯ ಒಂದಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಬಿಎಸ್​ವೈ ಬೆಂಬಲಕ್ಕೆ ನಿಂತಿದ್ದೆವುವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ವೇಳೆ ಮಹಾಸಭಾ ವಿರೋಧ ವ್ಯಕ್ತಪಡಿಸಿತ್ತು. ಹೀಗೆ ಸಮಾಜದ ಯಾರಿಗೇ ಅನ್ಯಾಯವಾದರೂ ಪಕ್ಷಾತೀತವಾಗಿ ಅವರ ಪರ ನಿಲ್ಲುತ್ತೇವೆ ಎಂದು ಶಾಮನೂರು ಹೇಳಿದರು.
4ನೇ ಮಹಾ ಅಧಿವೇಶನದಿಂದ ನಿರೀಕ್ಷೆ ಏನು?ಕೇಂದ್ರದ ಒಬಿಸಿ ಪಟ್ಟಿಗೆ ಸೇರದ ಕಾರಣ ವೀರಶೈವ ಸಮಾಜದ ಯುವಕ, ಯುವತಿಯರು ಹಲವು ದಶಕಗಳಿಂದ ಕೇಂದ್ರದ ನೇಮಕಾತಿ ಅವಕಾಶಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಸಮಾಜದ ಎಲ್ಲ ಉಪ ಪಂಗಡಗಳಿಗೆ ಒಬಿಸಿ ಮೀಸಲು ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬುದು ಈ ಅಧಿವೇಶನದ ಮುಖ್ಯ ಅಜೆಂಡಾ. ಒಳಪಂಗಡಗಳ ಭೇದ ಮರೆತು ಎಲ್ಲ ವೀರಶೈವ ಲಿಂಗಾಯತರು ಒಂದಾಗಬೇಕೆಂಬ ಆಶಯಕ್ಕೂ ಈ ಕಾರ್ಯಕ್ರಮ ಬಲ ತುಂಬಲಿದೆ.
ಜಾತಿ ಸಮೀಕ್ಷೆಯ ಕುರಿತು ಏನು ಹೇಳಬಯಸುತ್ತೀರಿ?ಜಾತಿ ಸಮೀಕ್ಷೆ ಪ್ರಕ್ರಿಯೆ ವೈಜ್ಞಾನಿಕವಾಗಿ ನಡೆದಿಲ್ಲ. ಮನೆ, ಮನೆಗೆ ಹೋಗಿ ವರದಿ ತಯಾರಿಸುವ ಬದಲು ಮನೆಯಲ್ಲೇ ಕುಳಿತು, ತುಂಬಿದ್ದಾರೆಂಬ ಆರೋಪಗಳಿವೆ. ಇಂಥ ಪ್ರಮಾದ ಘಟಿಸಿರುವಾಗ ವರದಿ ಒಪ್ಪಲು ಸಾಧ್ಯವಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಭೇಟಿ ಮಾಡಿ ನಮ್ಮ ನಿಲುವು ಸ್ಪಷ್ಟಪಡಿಸಿದ್ದೇವೆ. ವೈಜ್ಞಾನಿಕ ಸಮೀಕ್ಷೆಗೆ ಒತ್ತಾಯಿಸಿದ್ದೇವೆ.
ವೀರಶೈವ ಮಹಾಸಭಾ ಸ್ಥಾಪನೆಯಾಗಿದ್ದು ಯಾವಾಗ, ಉದ್ದೇಶ ಏನಾಗಿತ್ತು?ಹರಿದು ಹಂಚಿಹೋಗಿದ್ದ ವೀರಶೈವ ಲಿಂಗಾಯತ ಸಮಾಜವನ್ನು ಸಂಘಟಿಸಿ ಆ ಮೂಲಕ ಸಮುದಾಯದ ಹಿತ ಕಾಯುವ ಸದುದ್ದೇಶದಿಂದ 1904ರಲ್ಲಿ ಹಾನಗಲ್ ಕುಮಾರಸ್ವಾಮಿ ಅವರಿಂದ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಆಯಿತು. ಆ ಕಾಲದಲ್ಲಿ ಹರಿಹರದಿಂದ ಆಚೆಗೆ ಮುಂಬೈ ಪ್ರಾಂತದ ಪ್ರದೇಶಗಳು ಶಿಕ್ಷಣದಲ್ಲಿ ಹಿಂದುಳಿದಿದ್ದವು. ಮಕ್ಕಳ ವಿದ್ಯಾರ್ಜನೆಗೆ ಮಠಾಧೀಶರ ಸಹಕಾರದೊಂದಿಗೆ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಶ್ರೀಮಂತರು ಸಹಾಯಕ್ಕೆ ನಿಂತರು. ಕೆಎಲ್​ಇ ಸೊಸೈಟಿ, ಬಾಗಲಕೋಟೆ ಬಸವೇಶ್ವರ ಸೇರಿ ವಿಜಯಪುರ ಇತರೆಡೆ ದೊಡ್ಡ ಶಿಕ್ಷಣ ಸಂಸ್ಥೆಗಳು ತೆರೆದವು. ಸಮಾಜದ ಮಕ್ಕಳು ವಿದ್ಯಾವಂತರಾದರು. ಅಂದಿನ ಮಹಾರಾಜರ ಪ್ರೋತ್ಸಾಹದಿಂದ ಹಳೇ ಮೈಸೂರು ಭಾಗ ಮುಂದುವರಿದಿತ್ತು. ಆದರೆ ಉತ್ತರ ಕರ್ನಾಟಕ ಹಿಂದುಳಿದಿತ್ತು. ಇದನ್ನು ಮನಗಂಡು ನಮ್ಮ ಸಮಾಜದ ‘ಸರ್ಪ¤ಗಳು’ ಎನಿಸಿದ್ದ ಶಿರಸಂಗಿ ಲಿಂಗರಾಜರು, ಹರತಾಳು ರುದ್ರೇಗೌಡರು, ವಾರದ ಮಲ್ಲಪ್ಪ, ಸರ್ ಸಿದ್ದಪ್ಪ ಕಂಬಳಿ, ಬಸವನಾಳು ಇನ್ನಿತರರು ಸಂಘಟನೆಯ ಸಂಕಲ್ಪ ಮಾಡಿದರು.
ಅಧಿವೇಶನದ ನಿರ್ಣಯಗಳ ಸ್ವರೂಪ ಹೇಗಿರುತ್ತದೆ?ಸಮಾಜವು ಪ್ರಸ್ತುತ ಎದುರಿಸುತ್ತಿರುವ ಎಲ್ಲ ಬಿಕ್ಕಟ್ಟುಗಳ ಬಗ್ಗೆ ಅಧಿವೇಶನದಲ್ಲಿ ವಿಸõತ ಚರ್ಚೆ ನಡೆಯಲಿದೆ. ಒಳ ಪಂಗಡಗಳಿಗೆ ಒಬಿಸಿ ಮೀಸಲಾತಿ ನೀಡುವುದು, ಜಾತಿ ಸಮೀಕ್ಷೆ ವಿಚಾರಗಳು ಪ್ರಮುಖವಾದವು. ಮಹಾ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ವೀರಶೈವ ಲಿಂಗಾಯತ ಮಹಾಸಭಾದ ಎಲ್ಲ ಘಟಕಗಳಿಗೆ ಜವಾಬ್ದಾರಿ ಕೊಡಲಾಗುವುದು.
ಒಬಿಸಿಯೇ ನಮ್ಮ ಅಜೆಂಡಾವೀರಶೈವ ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂಬುದೇ ನಮ್ಮ ಪ್ರಮುಖ ಅಜೆಂಡಾ! ಎಲ್ಲರ ಅಭಿಪ್ರಾಯ ಪಡೆದು ಈ ಕುರಿತು ನಿರ್ಣಯ ಅಂಗೀಕರಿಸಲಾಗುವುದು. ಒಳಪಂಗಡಗಳ ಭೇದ ಮರೆತು ಒಂದಾಗಬೇಕು. ಸಮುದಾಯದ ಹಿತಕ್ಕೆ ಧಕ್ಕೆ ಆದಾಗ ಸಿಡಿದೇಳಬೇಕು, ಸ್ವಾಭಿಮಾನಿಗಳಾಗಿ. ಬದುಕುವಂತೆ ಆಧಿವೇಶನ ಸಾರಲಿದೆ.
ಸಮಾಜದ ಒಳ ಪಂಗಡಗಳು, ಜನಸಂಖ್ಯೆ ಎಷ್ಟು?ವೀರಶೈವ ಲಿಂಗಾಯತ ಸಮಾಜದಲ್ಲಿ 89 ಒಳ ಪಂಗಡಗಳಿವೆ. ಕರ್ನಾಟಕದಲ್ಲಿ ನಮ್ಮ ಜನಸಂಖ್ಯೆ 2 ಕೋಟಿ ಮೀರಿದೆ. ಇದೀಗ ನಮ್ಮ ಸಮಾಜದ ಜನಸಂಖ್ಯೆಯನ್ನು 60 ಲಕ್ಷ ಎಂದು ತೋರಿಸಲಾಗುತ್ತಿದೆ. ಇದು ಶುದ್ಧ ಸುಳ್ಳು. ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಪ್ರಕಾರ ಶೇ.17.25, ವೆಂಕಟಸ್ವಾಮಿ ವರದಿ ಪ್ರಕಾರ ಶೇ. 19.25 ರಷ್ಟು ಜನಸಂಖ್ಯೆ ಇದೆ. ದೇವರಾಜು ಅರಸು ಅವಧಿಯಲ್ಲಿ ಮಂಡನೆಯಾದ ಹಾವನೂರು ವರದಿಯಲ್ಲಿ ಶೇ. 16.75ರಷ್ಟು ಜನಸಂಖ್ಯೆ ಇದೆ ಎಂದು ಹೇಳಿದಾಗ ಆಗ ಸಚಿವರಾಗಿದ್ದ ಭೀಮಣ್ಣ ಖಂಡ್ರೆ, ವಿಧಾನಸಭೆಯಲ್ಲೇ ಆ ವರದಿ ಹರಿದು ಹಾಕಿ ವಿರೋಧ ವ್ಯಕ್ತಪಡಿಸಿದ್ದರು.
ಸಮಾಜ ಎದುರಿಸುತ್ತಿರುವ ಸವಾಲುಗಳೇನು?ನಮ್ಮ ಒಳ ಪಂಗಡಗಳಿಗೆ ಕೇಂದ್ರದ ಒಬಿಸಿ ಮೀಸಲು ಸಿಗಬೇಕು ಎಂಬುದೇ ಈಗಿರುವ ಸವಾಲು. ಸಮಾಜದ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ ಲಭಿಸಲು ಮೀಸಲಾತಿ ಬೇಕು. ಸಮಾಜದ ಜನರು ಸಾಮಾಜಿಕ, ಆರ್ಥಿಕ, ರಾಜ ಕೀಯವಾಗಿ ಮುಂದೆ ಬರಬೇಕು ಎನ್ನು ವುದೇ ವೀರಶೈವ ಮಹಾಸಭಾದ ಉದ್ದೇಶ.
ಮಹಾಸಭಾದ ಸದಸ್ಯತ್ವ ಎಷ್ಟಿದೆ?ಮಹಾಸಭಾಗೆ ಪ್ರಸ್ತುತ 1.75 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ರಾಜ್ಯದಲ್ಲಿ 2 ಕೋಟಿ, ಇಡೀ ದೇಶದಲ್ಲಿ 4 ಕೋಟಿಯಷ್ಟು ನಮ್ಮ ಜನಸಂಖ್ಯೆಯಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಮಾಜದ ಜನ ಜಾಸ್ತಿ ಇದ್ದಾರೆ. ಸಮಾಜದ ಪ್ರತಿಯೊಬ್ಬರೂ ಮಹಾಸಭಾದ ಸದಸ್ಯರಾಗಬೇಕು ಎಂಬುದು ನಮ್ಮ ಆಶಯವಾಗಿದೆ.
ಧೋನಿ ಸರ್​ ಕಪ್​ ಗೆಲ್ಲಲು RCBಗೆ ಸಹಾಯ ಮಾಡಿ: ಯುವಕನ ಮನವಿಗೆ ಮಾಹಿ ಕೊಟ್ಟ ಉತ್ತರ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
