ಹುಬ್ಬಳ್ಳಿ:ದೇಶದಲ್ಲಿ ಹತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ತಪ್ಪು ನೀತಿಗಳಿಂದ ಭಾರತವನ್ನು ದಿವಾಳಿ ರಾಷ್ಟ್ರವನ್ನಾಗಿ ಮಾಡಿತ್ತು. ಇದರಿಂದ ಮುಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರ ಕೈಗೆ ಅಕ್ಷರಶಃ ಚೊಂಬು ಕೊಟ್ಟು ಹೋಗಿದ್ದರು ಎಂದು ಮಾಜಿ ಸಂಸದ, ಉದ್ಯಮಿ ಡಾ. ವಿಜಯ ಸಂಕೇಶ್ವರ ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಹೋಟೆಲ್​ನಲ್ಲಿ ಭಾನುವಾರ ಸಂಜೆ ಸಿಟಿಜನ್ಸ್ ಫೋರಂ ಫಾರ್ ಡೆವಲಪಮೆಂಟ್ ಆಯೋಜಿಸಿದ್ದ ಪ್ರಬುದ್ಧರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಟಲಿಯ ಚಮಚಾಗಳು ಮೋದಿ ಕೈಗೆ ಚೊಂಬು ಕೊಟ್ಟರು ಎಂದು ಅಂದಿನ ಸಂದರ್ಭವನ್ನು ವಿವರಿಸಿದರು.
ತಮ್ಮ ಅಧಿಕಾರಾವಧಿಯಲ್ಲಿ ಮೌನಿಬಾಬಾ (ಅಂದಿನ ಪ್ರಧಾನಿ ಮನಮೋಹನ ಸಿಂಗ್) ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ದೇಶಕ್ಕೆ, ಹಿಂದುಗಳಿಗೆ, ಮಹಿಳೆಯರಿಗೆ, ಅರ್ಥಿಕ ವ್ಯವಸ್ಥೆಗೆ ಮಾರಕವಾದ ಅನೇಕ ತಪ್ಪು ಕೆಲಸಗಳನ್ನು ತುಂಬಾ ವ್ಯವಸ್ಥಿತವಾಗಿ ಮಾಡಿದ್ದರು. 2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲು ಒಂದು ತಿಂಗಳು ವಿಳಂಬವಾಗಿದ್ದರೆ ದೇಶದಲ್ಲಿ ದೊಡ್ಡ ಅರಾಜಕತೆಯೇ ಸೃಷ್ಟಿಯಾಗುತ್ತಿತ್ತು. ಎಲ್ಲ ತೈಲ ಉತ್ಪನ್ನ ರಾಷ್ಟ್ರಗಳು ಭಾರತಕ್ಕೆ ಇನ್ನು ಹದಿನೈದು ದಿನಗಳಲ್ಲಿ ಪೆಟ್ರೋಲ್-ಡಿಸೇಲ್ ರಫ್ತು ಮಾಡುವುದಿಲ್ಲ ಎಂದು ಹೇಳಿದ್ದವು. ಮೋದಿ ಅವರು ಪ್ರಧಾನಿಯಾದ ಕೂಡಲೇ ಮಾಡಿದ ಮೊದಲ ಕೆಲಸವೆಂದರೆ, ಎಲ್ಲ ತೈಲ ಉತ್ಪನ್ನ ರಾಷ್ಟ್ರಗಳಿಗೆ ಕರೆ ಮಾಡಿ ಹಿಂದಿನ ಬಾಕಿ ಚುಕ್ತಾ ಮಾಡುವುದಾಗಿ ಭರವಸೆ ನೀಡಿದರಲ್ಲದೆ, ಮುಂದೆ ಹಣ ಕೊಟ್ಟು ಖರೀದಿ ಮಾಡುವುದಾಗಿ ಹೇಳಿದ್ದರು. ಮೋದಿ ಅವರ ಮೇಲೆ ವಿಶ್ವಾಸವಿಟ್ಟು ಎಲ್ಲ ತೈಲ ಉತ್ಪನ್ನ ರಾಷ್ಟ್ರಗಳು ಭಾರತಕ್ಕೆ ತೈಲ ಪೂರೈಕೆ ಮಾಡಿದವು. ಇಲ್ಲದಿದ್ದರೆ ದೇಶ ಅಂದೇ ದೊಡ್ಡ ಅರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿತ್ತು ಎಂದು ವಿವರಿಸಿದರು.
ಕಾಂಗ್ರೆಸ್ಸಿನ ಬೋಗಸ್ ಪ್ರಣಾಳಿಕೆ:ಪ್ರಧಾನಿ ಮೋದಿ ಅವರ ವರ್ಚಸ್ಸಿನಿಂದ ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅವರು ಬಿಡುಗಡೆ ಮಾಡಿರುವ ಪ್ರಣಾಳಿಕೆ ಶೇ. 100 ಬೋಗಸ್. ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 273 ಸ್ಥಾನಗಳನ್ನು ಗೆಲ್ಲಬೇಕು. ಆದರೆ, ಕಾಂಗ್ರೆಸ್ ಸ್ಪರ್ಧೆ ಮಾಡಿರುವುದು 230 ಸ್ಥಾನಗಳಲ್ಲಿ. ಇದರಲ್ಲಿ ಅವರು ಗೆಲ್ಲುವುದು 30 ಸ್ಥಾನಗಳು ಎಂಬುದು ಎಲ್ಲರಿಗೂ ಗೊತ್ತಿದೆ. ಉಳಿದ 243 ಸ್ಥಾನಗಳ ಗೆಲುವಿಗೆ ಕಾಂಗ್ರೆಸ್ ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು. ಆಗ, ಎಲ್ಲ ಪಕ್ಷಗಳು ಸೇರಿ ಕಾಂಗ್ರೆಸ್ ಪಕ್ಷವೊಂದರ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದಿಲ್ಲ ಎಂದು ಡಾ. ವಿಜಯ ಸಂಕೇಶ್ವರ ಕುಟುಕಿದರು.
ಮುಂದಿನ ಪೀಳಿಗೆ ಬಗ್ಗೆ ಚಿಂತನೆ ಮಾಡುವಂಥ ಅದ್ಭುತ ವ್ಯಕ್ತಿ ಪ್ರಧಾನಿ ಮೋದಿ. ಇಷ್ಟೆಲ್ಲ ಕೆಲಸ ಮಾಡಿದರೂ, ಜಗತ್ತೇ ಕೊಂಡಾಡಿದರೂ ಅವರಿಗೆ ತೃಪ್ತಿ ಎಂಬುದು ಇಲ್ಲ. ದೇಶವಾಸಿಗಳಿಗೆ ಸಂಪೂರ್ಣ ನ್ಯಾಯ ಒದಗಿಸಿಲ್ಲ ಎಂಬ ಕೊರಗು ಅವರಲ್ಲಿ ಇಂದಿಗೂ ಇದೆ. ಈ ಬಾರಿ ನಾವು ಅವರಿಗೆ ಪೂರ್ಣ ಬಹುಮತ ಅಂದರೆ ಲೋಕಸಭೆಯಲ್ಲಿ 406 ಸ್ಥಾನಗಳನ್ನು ಕೊಡಬೇಕಿದೆ ಎಂದು ಹೇಳಿದರು.
ಜೋಶಿ ಅವರಿಂದ ಸಾಕಷ್ಟು ಅಭಿವೃದ್ಧಿ:ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಲ್ಕು ಬಾರಿ ಆಯ್ಕೆಯಾಗಿರುವ ಪ್ರಲ್ದಾದ ಜೋಶಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅನೇಕ ಯೋಜನೆಗಳನ್ನು ತಂದಿದ್ದಾರೆ. ಮೊದಲ ಎರಡು ಅವಧಿಯಲ್ಲಿ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಇದ್ದರಿಂದ ಜೋಶಿ ಅವರು ಅಸಹಾಯಕರಾಗಿದ್ದರು. 10 ವರ್ಷಗಳ ಅನುಭವದಿಂದ ಮೋದಿ ಅವರ ಸರ್ಕಾರದಲ್ಲಿ ವೇಗವಾಗಿ ಕೆಲಸ ಮಾಡಿದ್ದಾರೆ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.
ಬೇರೆ ರಾಜ್ಯಗಳಿಗೆ ಹೋಗುವ ಯೋಜನೆಗಳನ್ನು ಧಾರವಾಡಕ್ಕೆ ತಂದಿದ್ದಾರೆ. ಧಾರವಾಡ ಐಐಟಿ, ಐಐಐಟಿ ಅವರ ಬಹು ದೊಡ್ಡ ಕೊಡುಗೆ. ಕೇಂದ್ರ ಸಚಿವರು ಎಂಬ ಅಹಂ ಇಲ್ಲದೇ, ಶಿಷ್ಟಾಚಾರವನ್ನು ಬದಿಗಿಟ್ಟು ಸಲೀಸಾಗಿ ಜನರೊಂದಿಗೆ ಹೊಂದಿಕೊಳ್ಳುವ ಇವರಂಥ ಸಂಸದರನ್ನು ನಾನು ನನ್ನ ಜೀವನದಲ್ಲಿ ನೋಡಿಲ್ಲ. ವಿಮಾನಯಾನ ಕಂಪನಿ ಅಧಿಕಾರಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿ ಹುಬ್ಬಳ್ಳಿಯಿಂದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಿರುವುದನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಡೇಂಜರ್:
ದೇಶದಲ್ಲಿ 56 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಯಾವುದೇ ಸಕಾರಣವಿಲ್ಲದೇ 57 ಬಾರಿ ವಿವಿಧ ರಾಜ್ಯ ಸರ್ಕಾರಗಳನ್ನು ವಜಾ ಮಾಡಿದೆ. ದೇಶದಲ್ಲಿ 5 ವರ್ಷಗಳ ಆಡಳಿತ ನಡೆಸಿದ ಅಟಲ್ ಬಿಹಾರಿ ವಾಜಪೇಯಿ ಹಾಗೂ 10 ವರ್ಷಗಳ ಆಡಳಿತ ನಡೆಸಿದ ನರೇಂದ್ರ ಮೋದಿ ಅವರು ಈ ಅವಧಿಯಲ್ಲಿ ಒಂದೇ ಒಂದು ರಾಜ್ಯ ಸರ್ಕಾರವನ್ನು ಕಿತ್ತು ಹಾಕಲಿಲ್ಲ. ಮೋದಿ ಡೇಂಜರೋ ಅಥವಾ ಕಾಂಗ್ರೆಸ್ ಡೇಂಜರೋ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗುತ್ತದೆ. ಆಗ ಅವರು ಸರ್ವಾಧಿಕಾರಿಯಾಗಿ ದಿಢೀರನೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಿದ್ದರು. ಮುಂದೆ ವಾಜಪೇಯಿ ಅವರು ಬಹುಮತ ಸಾಬೀತುಪಡಿಸಲು ಕೆಲವೇ ಸಂಸದರ ಬಲ ಕಡಿಮೆ ಇದ್ದಾಗಲೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರ ಎಸಗುವಂಥ ನಿರ್ಧಾರ ಕೈಗೊಳ್ಳದೇ ರಾಜೀನಾಮೆ ನೀಡುವ ಮೂಲಕ ದೇಶದ ಘನತೆಯನ್ನು ಹೆಚ್ಚಿಸುತ್ತಾರೆ. ಪ್ರಸ್ತುತ ಆರ್ಥಿಕ ಅಶಿಸ್ತು, ದುರಾಡಳಿತ ನಡೆಸುವ ರಾಜ್ಯ ಸರ್ಕಾರಗಳನ್ನು ಒಂದೇ ನಿಮಿಷದಲ್ಲಿ ವಜಾ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ, ದೆಹಲಿಯಲ್ಲಿ ಬಿಜೆಪಿಯೇತರ ಸರ್ಕಾರಗಳ ಆರ್ಥಿಕ ಅಶಿಸ್ತು, ದುರಾಡಳಿತದ ನಡುವೆಯೂ ಪ್ರಧಾನಿ ಮೋದಿ ಅವರು ಅಲ್ಲಿಯ ಸರ್ಕಾರವನ್ನು ಕಿತ್ತು ಹಾಕಲು ಕ್ರಮ ಕೈಗೊಳ್ಳಲಿಲ್ಲ. ಇದು ಶ್ರೇಷ್ಠವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೋದಿ ಪಾಲಿಸುತ್ತಿದ್ದಾರೆಂದು ಎಂಬುದಕ್ಕೆ ನಿದರ್ಶನವಾಗಿದೆ ಎಂದರು.
ಮೇ 7ಕ್ಕೆ ಮುಗಿಯುವುದಿಲ್ಲ:
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಿಗದಿಯಾಗಿದೆ. ಆದರೆ, ನಮ್ಮ ಕೆಲಸ ಮೇ 7ಕ್ಕೆ ಮುಗಿಯು ವುದಿಲ್ಲ. ರಾಷ್ಟ್ರಾದ್ಯಂತ ನನ್ನ ನೆಟ್​ವರ್ಕ್ ಇದ್ದು, ನನ್ನ ಸಂಪರ್ಕದಲ್ಲಿರುವ ಎಲ್ಲರನ್ನು ಸಂರ್ಪಸಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಮತ ಚಲಾಯಿಸಿ ಎಂದು ಮನವಿ ಮಾಡುತ್ತೇನೆ. ಇಲ್ಲಿ ಸೇರಿರುವ ಗಣ್ಯರು ತಮ್ಮ ಸಂಪರ್ಕ ದಲ್ಲಿರುವವರನ್ನು ಸಂರ್ಪಸಿ ಬಿಜೆಪಿಗೆ ಮತ ಚಲಾಯಿಸುವಂತೆ ಪ್ರೇರೇಪಿಸಿ ಎಂದು ಡಾ.ವಿಜಯ ಸಂಕೇಶ್ವರ ಮನವಿ ಮಾಡಿದರು.
ಮಾನವೀಯತೆಗೆ ಒತ್ತು:
ದೇಶದಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಮೋದಿ ಅವರು ಮಾನವೀಯತೆಗೆ ಒತ್ತು ಕೊಟ್ಟಿದ್ದಾರೆ. ಅವರ ಮಾನವೀಯ ಗುಣಕ್ಕೆ ಜಗತ್ತೇ ಬೆರಗಾಗಿದೆ. ಅಬುಧಾಬಿಯಲ್ಲಿ ಹಿಂದು ದೇಗುಲ ನಿರ್ಮಾಣ ಮಾಡಲಾಗಿದೆ. ಹಿಂದು ದೇಗುಲಗಳಲ್ಲಿ ಮುಸ್ಲಿಮರು ಉಪವಾಸ ಬಿಟ್ಟಿದ್ದಾರೆ. ಹಿಂದುತ್ವವು ಜಗತ್ತಿನೆಲ್ಲೆಡೆ ಮೋದಿ ಅವರ ಮೂಲಕ ವಿಸ್ತಾರಗೊಂಡಿದೆ ಎಂದು ಡಾ. ಸಂಕೇಶ್ವರ ಹೇಳಿದರು.
ತಪ್ಪದೇ ಮತ ಚಲಾಯಿಸಿ:
ಇಂಡಿಯಾ ಶೈನಿಂಗ್ ಎಂಬ ತಪ್ಪು ಕಲ್ಪನೆಯಿಂದ, 6 ತಿಂಗಳು ಮುಂಚಿತವಾಗಿ ಲೋಕಸಭೆಗೆ ಚುನಾವಣೆ ನಡೆಸಿದ್ದರಿಂದ ಬಿಜೆಪಿ 2004ರಲ್ಲಿ ಸೋಲು ಕಂಡಿತ್ತು. ಮತ ಗಳಿಕೆಯಲ್ಲಿ ಶೇ. 3 ಕೊರತೆಯಿಂದ 2009ರಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. 2014ರಲ್ಲಿ ಗುಜರಾತ್ ಮುಖ್ಯಮಂತ್ರಿ ಮೋದಿ ಅವರನ್ನು ಮುಂಚಿತವಾಗಿಯೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿದ ಪರಿಣಾಮ ಹಾಗೂ ಮತದಾನ ಪ್ರಮಾಣದಲ್ಲಿ ಶೇ.10 ಏರಿಕೆಯಾಗಿದ್ದರಿಂದ ದೇಶದಲ್ಲಿ ಒಂದು ಸದೃಢ ಸರ್ಕಾರ ಅಧಿಕಾರಕ್ಕೆ ಬಂದಿತು. ಹಾಗಾಗಿ ನನ್ನ ಒಂದು ಮತದಿಂದ ಏನೂ ವ್ಯತ್ಯಾಸವಾಗುವುದಿಲ್ಲ ಎಂದು ಯಾರೊಬ್ಬರೂ ತಾತ್ಸಾರ ಮಾಡಬಾರದು. ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಬೇಕು ಎಂದು ಡಾ. ವಿಜಯ ಸಂಕೇಶ್ವರ ಕರೆ ನೀಡಿದರು.
ಭಾರತ ಮಾತೆ ಮುಖದಲ್ಲಿ ಮಂದಹಾಸ ಮೂಡಿಸಿದ ಮೋದಿ
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಗರ್ವ ಹೆಚ್ಚಿಸಿದ್ದಾರೆ. ಭಾರತ ಮಾತೆಯ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. 10 ವರ್ಷದಲ್ಲಿ ಭಾರತದ ವೈಭವವು ತುತ್ತ ತುದಿಗೆ ಬಂದು ನಿಂತಿದೆ. ಇಂತಹ ವಿಕಾಸ ಮುಂದುವರಿಯಬೇಕಾದರೆ ಇದಕ್ಕೆ ಕಾರಣರಾದ ಮೋದಿ ಅವರನ್ನು ಎಲ್ಲರೂ ಮತ್ತೆ ಬೆಂಬಲಿಸಬೇಕಾಗಿದೆ ಎಂದು ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಮನವಿ ಮಾಡಿದರು.
ಉಚಿತ ಕೊಡುಗೆಗಳ ಬೆನ್ನು ಹತ್ತಿ ಮೋದಿ ಅವರನ್ನು ನಿರ್ಲಕ್ಷ್ಯ ಮಾಡಿದರೆ ಮುಂದೆ ಇಂತಹ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಭಾರತದ ಸಂಪತ್ತನ್ನು ಅಭಿವೃದ್ಧಿ ಮಾಡುವ ಕೆಲಸಕ್ಕೆ ಮೋದಿ ಕೈ ಹಾಕಿದ್ದಾರೆ. ದುಡಿದು ತಿನ್ನಬಲ್ಲ ಸಾಮರ್ಥ್ಯವನ್ನು ಕೊಟ್ಟಿದ್ದಾರೆ. ಡಿಜಿಟಲ್ ಸೌಲಭ್ಯ, ಸಾಮಾಜಿಕ ಭದ್ರತೆ ವ್ಯವಸ್ಥೆ, ಭೌತಿಕ ಅಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರದಲ್ಲಿ ಹೇಗೆಲ್ಲ ಬದಲಾವಣೆಯಾಗಿದೆ. ಮೊದಲು ಯುಪಿಎ ಕಾಲದಲ್ಲಿ ಹೇಗಿತ್ತು. ಈಗ ಎಷ್ಟೊಂದು ಬದಲಾಗಿದೆ ಎಂಬುದನ್ನು ದಾಖಲೆ ಹಾಗೂ ಅಂಕಿ-ಅಂಶಗಳ ಸಮೇತ ವಿವರಿಸಿದರು.
ಫಾಸ್ಟ್​ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಟೋಲ್ ಗೇಟ್​ಗಳಲ್ಲಿ ಪ್ರತಿ ವಾಹನವು ಸರಾಸರಿ ಕಾಯುವ ಸಮಯ 12 ಸೆಕೆಂಡ್​ಗಳಿಗೆ ಇಳಿದಿದೆ. ಇದಕ್ಕೂ ಮೊದಲು ಪ್ರತಿ ವಾಹನವು ಸರಾಸರಿ 40 ನಿಮಿಷ ಕಾಯಬೇಕಾಗಿತ್ತು. ಇಂದು ಫಾಸ್​ಟ್ಯಾಗ್ ವ್ಯವಸ್ಥೆಯಿಂದ ಟೋಲ್​ಗಳಲ್ಲಿ ಇಂಧನ ಉಳಿತಾಯವಾಗಿ ನಿತ್ಯ 17 ಸಾವಿರ ಕೋಟಿ ರೂ. ನಷ್ಟ ತಪ್ಪುತ್ತಿದೆ. 10 ವರ್ಷದಲ್ಲಿ ಹೊಸದಾಗಿ 31 ಸಾವಿರ ಕಿ.ಮೀ. ರೈಲು ಹಳಿ ಹಾಕಲಾಗಿದೆ. ಬಹುತೇಕ ಏಕಪಥ ಮಾರ್ಗಗಳು ದ್ವಿಪಥವಾಗಿವೆ. ಶೇ.90 ರೈಲು ಮಾರ್ಗಗಳು ವಿದ್ಯುದ್ಧೀಕರಣಗೊಂಡಿವೆ. ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ವಿದ್ಯುದ್ಧೀಕರಣಗೊಂಡ ಮಾರ್ಗ ಹೊಂದಿದ ರಾಷ್ಟ್ರವಾಗಿದೆ ಎಂದರು.
2030ರ ವೇಳೆಗೆ ರೈಲು ಪ್ರಯಾಣದ ವ್ಯವಸ್ಥೆಯನ್ನು ವೇಟಿಂಗ್ ಲಿಸ್ಟ್​ನಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗುವ ಪೂರ್ವದಲ್ಲಿ ಕೇವಲ 214 ಕಿಲೋ ಮೀಟರ್​ನಷ್ಟು ಮೆಟ್ರೋ ರೈಲು ಮಾರ್ಗ ಇತ್ತು. ಇಂದು 714 ಕಿಲೋ ಮೀಟರ್​ಗೆ ಹೆಚ್ಚಿಸಿದ್ದಾರೆ. ಈ ಹಿಂದೆ ದೇಶದಲ್ಲಿ ರೈಲಿನ ವೇಗ ಗಂಟೆಗೆ ಕೇವಲ 60ರಿಂದ 80 ಕಿಲೋಮೀಟರ್ ಇತ್ತು. ಇಂದು ಗಂಟೆಗೆ 130ರಿಂದ 160 ಕಿಮೀ ವೇಗದಲ್ಲಿ ಸಂಚರಿಸುವ ಸ್ವದೇಶಿ ನಿರ್ವಿುತ ವಂದೇ ಭಾರತ ರೈಲು ಬಂದಿದೆ. ಯಾರೆಲ್ಲ ವಂದೇ ಮಾತರಂ ಹೇಳಲು ಹಿಂಜರಿಯುತ್ತಿದ್ದರೋ ಅವರೆಲ್ಲ ಇಂದು ಸ್ಪೀಡ್ ಬೇಕಾದರೆ ವಂದೇ ಭಾರತ ಎಂದು ಹೇಳಲೇಬೇಕಾಗಿದೆ. ಇದು ಮೋದಿ ಅವರ ಶಕ್ತಿ ಎಂದರು. ಮೋದಿ ಅವರು ಎಷ್ಟು ಅಭಿವೃದ್ಧಿ ಹಾಗೂ ಹೊಸ ಕೆಲಸಗಳನ್ನು ಕೈಗೊಂಡಿದ್ದಾರೆ ಎಂದು ನೆನಪಿನಲ್ಲಿಟ್ಟುಕೊಳ್ಳಲು ಕಷ್ಟವಾಗುತ್ತಿದೆ ಎಂದು ಐಎಎಸ್ ಓದುತ್ತಿದ್ದ ವಿದ್ಯಾರ್ಥಿಯೇ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸೂಲಿಬೆಲೆ ಹೇಳಿದರು.
ಅಟಲ್ ಕಾಲದಲ್ಲಿ ವೇಗ:
ಅಟಲ್ ಬಿಹಾರಿ ವಾಜಪೇಯಿ ಅವರು ಸುವರ್ಣ ಚತುಷ್ಪಥ ಯೋಜನೆ ತರುವ ಮೂಲಕ ಹೈವೇಗಳಿಗೆ ಅಭಿವೃದ್ಧಿ ಯೋಗ ತಂದಿ ದ್ದರು. ಮೋದಿ ಅವರು ಅಟಲ್​ಜೀ ಆರಂಭಿಸಿದ ಕಾರ್ಯ ಮುಂದುವರಿಸಿದರು. ದೇಶದಲ್ಲಿ 1947ರಿಂದ 2014ರವರೆಗೆ ರಸ್ತೆ ನಿರ್ವಣಕ್ಕೆ 7ಲಕ್ಷ ಕೋಟಿ ರೂ. ವ್ಯಯಿಸಲಾಗಿತ್ತು. ಮೋದಿ ಅವರು 2014ರಿಂದ 2024ರವರೆಗೆ 7 ಲಕ್ಷ ಕೋಟಿ ರೂ. ಖರ್ಚು ಮಾಡಿದ್ದಾರೆ. ಇದರಿಂದ ದೇಶದಲ್ಲಿ ಬಹುದೊಡ್ಡ ಬದಲಾವಣೆ ಬಂದಿದ್ದು, ರಸ್ತೆ ಸಂಚಾರಕ್ಕೆ ವೇಗ ಸಿಕ್ಕಿದೆ ಎಂದು ಸೂಲಿಬೆಲೆ ತಿಳಿಸಿದರು.
ಸಚಿವರಿಗೆ ಸಿದ್ಧತೆ ಬೇಕು:
ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಸಚಿವರು ಪ್ರಧಾನಿ ಬಳಿ ಹೋಗಬೇಕಿದ್ದರೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ಹೋಗಬೇಕು. ಇಲಾಖೆ ಮಾಹಿತಿ ಯನ್ನು ಸ್ವತಃ ಅವರೇ ಕೇಳಿ ತಿಳಿದು ಕೊಳ್ಳುತ್ತಾರೆ ಎಂದು ಅನೇಕ ಸಚಿವರು ಹೇಳಿಕೊಳ್ಳುತ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆ ವಿವರಿಸಿದರು.
ಭಾರತ ಅಭಿವೃದ್ಧಿಶೀಲ ರಾಷ್ಟ್ರವೆಂಬ ಹಣೆಪಟ್ಟಿಯಿಂದ ವಿಮುಕ್ತಿ ಹೊಂದಬೇಕು ಎಂದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಅವರು ಮೂರನೇ ಅವಧಿಗೆ ನೇತೃತ್ವ ವಹಿಸಿದರೆ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಹಕ್ಕು ಚಲಾವಣೆ ಮಾಡುವ ಮೂಲಕ ಶೇಕಡವಾರು ಮತದಾನದಲ್ಲಿ ಹೆಚ್ಚಳ ತರಬೇಕು. ಇದರಿಂದ ‘ವಿಕಸಿತ ಭಾರತ’ದ ಕನಸು ಮುಂದಿನ ದಿನಗಳಲ್ಲಿ ಸಾಕಾರವಾಗಲಿದೆ.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 15 =
Remember me
