ನಾಟಕ ವಿಮರ್ಶೆ: ನಾಟಕಪ್ರಿಯ ಮಾಧುರಿ ಶಿವಣಗಿ, ಬೆಂಗಳೂರು.
ಬೆಂಗಳೂರು:ಕನ್ನಡ ರಂಗಭೂಮಿಯ ವಿಸ್ಮಯಗಳಲ್ಲಿ ಡಾ.ಯಶವಂತ ಸರದೇಶಪಾಂಡೆ ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿ ನಾಲ್ಕು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಪ್ರಸ್ತುತ ಪಡಿಸಿರುವ ನಾಟಕ ‘ಸಹಿ ರೀ ಸಹಿ’, ರಂಗಪ್ರಸ್ಥತಿಯೂ ಒಂದು, ಅದೊಂದು ರಂಗಾದ್ಭುತ ! ಮರಾಠಿ ಮೂಲ ಕೇದಾರ ಶಿಂಧೆಯವರದು. ಮರಾಠಿಯ ಜನಪ್ರಿಯ ನಾಟಕಕಾರ ಕೇದಾರ ಶಿಂಧೆ ಬರೆದ ಅತ್ಯುತ್ತಮ ರಂಗಕೃತಿ ಇದಾಗಿದ್ದು, ಭರತ ಜಾಧವ ಎಂಬ ಅದ್ಭುತ ಕಲಾವಿದರು 4000ಕ್ಕೂ ಹೆಚ್ಚು ಪ್ರದರ್ಶನಗಳನ್ನು ದೇಶದಾದ್ಯಂತ ಪ್ರದರ್ಶಿಸಿದ್ದಾರೆ.
ಇದನ್ನು ಓದಿ:ಅಭಿಮಾನಿಗಳಿಗೆ ಎಚ್ಚರದಿಂದಿರಲು ಟಾಲಿವುಡ್​ ಮೆಗಾಸ್ಟಾರ್ ಸೂಚನೆ​​​; ನಟ ಚಿರಂಜೀವಿ ಹೀಗೆಳಿದ್ದೇಕೆ?
ಮರಾಠಿಯಿಂದ ಕನ್ನಡಕ್ಕೆ, ಕನ್ನಡದಿಂದ ಮರಾಠಿಗೆ ನಾಟಕಗಳು ಅನುವಾದವಾಗುವುದು ಹೊಸದೇನಲ್ಲ. 70, 80, 90ರ ದಶಕದಿಂದಲೇ ಜಯವಂತ ದಳವಿ, ವಿಜಯ ತೆಂಡೂಲ್ಕರ್, ವಸಂತ ಸಬ್ಮಿಸ್ ಅವರ ಮರಾಠಿ ನಾಟಕಗಳು ಕನ್ನಡಕ್ಕೆ ಅನುವಾದಗೊಂಡು ಹಲವಾರು ಪ್ರದರ್ಶನಗಳನ್ನು ಕಂಡಿವೆ. ಶಂಕರನಾಗ್ ಅವರು ನಿರ್ದೇಶಿಸಿ, ಅಭಿನಯಿಸಿದ ‘ಸಂಧ್ಯಾಛಾಯಾ’, ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ನಾಟಕಗಳು ಮೂಲ ಮರಾಠಿಯಲ್ಲಿ ರಚಿತವಾಗಿದ್ದು ಕನ್ನಡದಲ್ಲೂ ಬಹಳ ಜನಪ್ರಿಯವಾದವು.
1997ರಿಂದ ಈಚೆಗೆ ಡಾ.ಯಶವಂತ ಸರದೇಶಪಾಂಡೆ ಮರಾಠಿಯಿಂದ ಕನ್ನಡಕ್ಕೆ ತಂದ ‘ಆಲ್ ದಿ ಬೆಸ್ಟ್’ ನಾಟಕದಿಂದ ಮನೆ ಮಾತಾದರು. ಈ ನಾಟಕದ ಯಶಸ್ಸಿನ ನಂತರ ಅವರ ಸಂಸ್ಥೆ ವಿಭಿನ್ನ ರಂಗ ಪ್ರಯೋಗಗಳನ್ನು ಮಾಡಿತು. ‘ರಾಶಿಚಕ್ರ’ ಎಂಬ ಏಕವ್ಯಕ್ತಿ ರಂಗಪ್ರಯೋಗ, ‘ದಿಲ್ ಮಾಂಗೇ ಮೊರ್’, ‘ಒಂದ ಆಟ ಭಟ್ಟರದು’, ‘ಓ ಲವ್ವೆ ಜೀವನ ಸಾಕ್ಷಾತ್ಕಾರ’, ‘ಹಿಂಗಾದ್ರ ಡಾಟ್ ಕಾಮಿಡಿ’, ‘ಸಹಿ ರೀ ಸಹಿ’, ‘ಹೀಗೇಕೆ ನೀ ದೂರ ಓಡುವೆ’, ನಾಟಕಗಳನ್ನ ಕನ್ನಡೀಕರಿಸಿ ರಾಜ್ಯಾದ್ಯಂತ ಪ್ರದರ್ಶಿಸಿದರು. ಈ ಎಲ್ಲ ನಾಟಕಗಳು ಮೂಲ ಮರಾಠಿಯಾದರೂ ಸರದೇಶಪಾಂಡೆಯವರ ಅನುವಾದ ಅವು ಮೂಲ ಕನ್ನಡದಲ್ಲೇ ರಚಿಸಲಾಗಿದೆ ಎಂಬಷ್ಟರಮಟ್ಟಿಗೆ ಸಮರ್ಪಕವಾಗಿವೆ. ಅದರಲ್ಲೂ ಅವರ ನಿರ್ದೇಶನ ಮತ್ತು ಅಭಿನಯ ಏಕಮೇವಾದ್ವಿತೀಯ, ರಂಗದ ಮೇಲೆ ಅವರು ಬಣ್ಣ ಹಚ್ಚಿ ಬಂದಾಗ ಅವರಿಗೆ ಅವರೇ ಸಾಠಿ! ಅದರಲ್ಲಂತೂ ‘ಸಹಿ ರೀ ಸಹಿ’ ನಾಟಕದಲ್ಲಿ ನಾಲ್ಕು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವುದನ್ನು ನೋಡುವದೇ ಕಣ್ಣಿಗೆ ಹಬ್ಬ.

ಇತ್ತೀಚಿಗೆ ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಪ್ರೆಸ್ಟೀಜ್ ಸೆಂಟರ್ ಫ಼ಾರ್ ಪರಫಾರ್ಮಿಂಗ್​​ ಆರ್ಟ್ಸ್​​​ನಲ್ಲಿ ಪ್ರದರ್ಶಿತವಾಯಿತು. ಬೆಂಗಳೂರಿನ ಎಲ್ಲ ಮೂಲೆಯಿಂದಲೂ ಆಗಮಿಸಿದ ಹೆಚ್ಚು ಕಡಿಮೆ ಸಾವಿರ ಜನರ ಎದುರು ಡಾ.ಯಶವಂತ ಸರದೇಶಪಾಂಡೆಯವರ ಗುರು ಇನ್​ಸ್ಟಿಟ್ಯೂಟ್​, ಹುಬ್ಬಳ್ಳಿ ತಂಡ ನಾಟಕ ಪ್ರಸ್ತುತಿ ಮಾಡಿತು. ನಾಟಕ ವೀಕ್ಷಿಸಿದ ಪ್ರತಿ ಪ್ರೇಕ್ಷಕನಿಗೂ ಕಚಗುಳಿ ಇಟ್ಟಂತೆ ನಗು… ಉತ್ತರ ಕರ್ನಾಟಕದ ಭಾಷೆ ಮತ್ತು ಅಲ್ಲಿಯ ನಟ ನಟಿಯರು, ಅವರ ಬಾಯಿಂದ ಅದನ್ನು ಕೇಳುವುದೇ ಖುಷಿ, ಒಬ್ಬರಿಗಿಂತ ಒಬ್ಬರು ಜಿದ್ದಿಗೆ ಬಿದ್ದಂತೆ ನಟಿಸುವ ಕಲಾವಿದರು ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡರು.
ವಕೀಲ ಬಾಚಯ್ಯನ ಪಾತ್ರದಲ್ಲಿ ಕೃಷ್ಣಮೂರ್ತಿ ಗಾವಕರ ತಮ್ಮ ಗಡಸು ಧ್ವನಿ ಮತ್ತು ಸ್ಪಷ್ಟ ಮಾತುಗಾರಿಕೆ ಹಾಗೂ ವಿಶೇಷ ಮ್ಯಾನರಿಸಂನಿಂದ ಗಮನ ಸೆಳೆದರು. ಎರಡನೇ ಮೂರನೇ ವಾರಸದಾರರ ಪಾತ್ರದಲ್ಲಿ ಪ್ರಿಯಾ ಕುಲಕರ್ಣಿ ಮತ್ತು ಅರವಿಂದ ಪಾಟೀಲ್ ಮಿಂಚಿದರು. ಎರಡನೇ ಮಡದಿಯಾಗಿ ಶಿಲ್ಪಾ ಪಾಂಡೆ, ಸೆಕ್ರೆಟರಿಯಾಗಿ ಪ್ರದೀಪ ಮುಧೋಳ ಶ್ರೀಮಂತನನ್ನು ಕೊಂದು ಆಸ್ತಿ ಹೊಡೆಯುವ ನೀಚತನದ ಪಾತ್ರಕ್ಕೆ ಜೀವ ತುಂಬಿದರು. ಇದಲ್ಲದೆ ಕುಡುಕನ ಪಾತ್ರದಲ್ಲಿ ರವಿ ಕುಲಕರ್ಣಿ, ಮಗಳ ಪಾತ್ರದಲ್ಲಿ ಅರ್ಪಿತಾ, ಸಹಾಯಕರಾಗಿ ಸುಮಂತ ಕುಲಕರ್ಣಿ ಮತ್ತು ಶೇಖರ ಪಾಟೀಲ್ ತಮ್ಮ ತಮ್ಮ ಪಾತ್ರಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದರು.
ಇವರೆಲ್ಲರೊಂದಿಗೆ ಒಟ್ಟು 50ಕ್ಕೂ ಹೆಚ್ಚು ದೃಶ್ಯಗಳಲ್ಲಿ ಮತ್ತು ನಾಲ್ಕು ಪಾತ್ರಗಳಲ್ಲಿ ಯಶವಂತ ಸರದೇಶಪಾಂಡೆ ಎಂಬ ಕಲಾಕೋವಿದನನ್ನು ಕಾಣುವುದು ಸಂಭ್ರಮದ ಸಂಗತಿ. ನಾಲ್ಕು ಬೇರೆ ಬೇರೆ ಪಾತ್ರಗಲ್ಲಿ ಅವರ ಅಭಿನಯ ಚಾತುರ್ಯ, ಸಂಭಾಷಣಾ ಕಲೆ ಮತ್ತು ಸಹ ನಟ-ನಟಿಯರೊಂದಿಗಿನ ಹೊಂದಾಣಿಕೆ ಮನೋಜ್ಞ! ಏಕಕಾಲದಲ್ಲಿ ನಾಲ್ಕೂ ಪಾತ್ರಗಳು ರಂಗದ ಮೇಲೆ ಬಂದಾಗಿನ ದೃಶ್ಯವಂತೂ ಅವಿಸ್ಮರಣೀಯ.ಈ ದೃಶ್ಯ ನೋಡಿದ ಪ್ರೇಕ್ಷಕರೆಲ್ಲ ಎದ್ದು ನಿಂತು ಸ್ಟ್ಯಾಂಡಿಂಗ್ ಓವೇಶನ್ ನೀಡಿದರು. ಈ ಯಶಸ್ವಿ ಪ್ರದರ್ಶನಕ್ಕೆ ನೇಪಥ್ಯದ ಜವಾಬ್ದಾರಿಯೂ ಪ್ರಮುಖ ಕಾರಣವಾಗಿದೆ.

ಗುರು ಇನ್​ಸ್ಟಿಟ್ಯೂಟ್​​​, ಹುಬ್ಬಳ್ಳಿ ತಂಡದ ಜೀವನ್ ಫರ್ನಾಂಡಿಸ್ ಅವರು ತಂಡದ ಮೇಲ್ವಿಚಾರಣೆಯ ಜತೆಗೆ ಆಕರ್ಷಕ ರಂಗ ಸಜ್ಜಿಕ್ಕೆ ತಯಾರಿಸಿದ್ದರು. ಸಂಗೀತ ಅಜಯ ಅತುಲ ಮತ್ತು ಪ್ರವೀಣ ಡಿ. ರಾವ್ ಅದನ್ನು ಐಶ್ವರ್ಯ ತಾಂಬೆ ನಿರ್ವಹಿಸಿದರು. ಬೆಳಕಿನ ವಿನ್ಯಾಸ ನಿರ್ವಹಣೆ ನಾಗರಾಜ ಪಾಟೀಲರದು, ಮುಖವರ್ಣಿಕೆ ಶ್ರೀಕಾಂತ ಕುಲಕರ್ಣಿ ಅವರದು, ಈ ನಾಲ್ವರ ಕೆಲಸದ ವೈಖರಿ ಬಹಳ ಅಪ್ಯಾಯಮಾನವಾಗಿತ್ತಲ್ಲದೆ ಈಡಿ ಪ್ರದರ್ಶನಕ್ಕೆ ಕಳೆ ಕಟ್ಟಿಕೊಟ್ಟಿತು. ಪ್ರೆಸ್ಟೀಜ್ ಸೆಂಟರ್ ಫ಼ಾರ್ ಪರಫಾರ್ಮಿಂಗ್​​ ಆರ್ಟ್ಸ್ ಸಿಬ್ಬಂದಿಯ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಯಾವುದೇ ಗೊಂದಲವಿಲ್ಲದೆ ಪ್ರೇಕ್ಷಕರು ಸ್ಥಾನಾಪನ್ನರಾದರು. ಶುಚಿಯಾದ ವಾತಾವರಣ, ಶೌಚಾಲಯಗಳು, ಚಹಾ ಪಾಣಿ ವ್ಯವಸ್ಥೆ ಮತ್ತದೆಲ್ಲಕ್ಕಿಂತ ಸಿಬ್ಬಂದಿಯ ಪ್ರೇಕ್ಷಕಸ್ನೇಹಿ ವಹಿವಾಟು ಹಿತವಾಗಿತ್ತು. ಇನ್ನಷ್ಟು ಮತ್ತಷ್ಟು ಕನ್ನಡ ಕಾರ್ಯಕ್ರಮ ಈ ಸಭಾಂಗಣದಲ್ಲಿ ಆಯೋಜಿತವಾಗಬೇಕು. ಕನ್ನಡ ಪ್ರೇಕ್ಷಕ ಮತ್ತೆ ಮತ್ತೆ ಇಲ್ಲಿಗೆ ಬರಬೇಕು, ಆಗಲೇ ಕನ್ನಡ ರಂಗಚಟುವಟಿಕೆಗೆ ಮೆರಗು ಬರಲು ಸಾಧ್ಯ.
ಗುರು ಇನ್​ಸ್ಟಿಟ್ಯೂಟ್​​, ಹುಬ್ಬಳ್ಳಿ ತಂಡ ಅಭಿನಯಿಸಿದ ‘ಸಹಿ ರೀ ಸಹಿ’ ನಾಟಕ ನೋಡಿದ ಬೆಂಗಳೂರಿನ ಪ್ರೇಕ್ಷಕರು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳುವಂಥದ್ದು, ಮತ್ತೆ ಮತ್ತೆ ಪ್ರದರ್ಶವಾದಾಗ ಇನ್ನೊಮ್ಮೆ ಮತ್ತೊಮ್ಮೆ ನೋಡಬೇನಿಸುವ ಸುಂದರ ಕನ್ನಡ ನಾಟಕವಿದು. ನಿಮ್ಮ ಸುತ್ತಮುತ್ತ ಎಲ್ಲಾದರೂ ಪ್ರದರ್ಶಿತವಾಗುತ್ತಿದ್ದರೆ ದಯವಿಟ್ಟು ನಿಮ್ಮ ಕುಟುಂಬ, ಸ್ನೇಹಿತರೊಂದಿಗೆ ತಪ್ಪದೆ ನೋಡಿ ಎಂದು ಮನವಿ ಮಾಡುತ್ತೇನೆ.
ಬೇಕೆ ಬೇಕು ನ್ಯಾಯ ಬೇಕು.. ಯುವಕರ ಈ ಪ್ರತಿಭಟನೆ ಏತಕ್ಕಾಗಿ ಗೊತ್ತೆ? ತಿಳಿದ್ರೆ ನಗುವುದಂತು ಪಕ್ಕಾ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 17 =
Remember me
