ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರದ್ದು ಬಹುಮುಖಿ ವ್ಯಕ್ತಿತ್ವ. ಫೋಟೋಗ್ರಫಿ, ಶಿಕಾರಿ, ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ‘ಪುಸ್ತಕ ಪ್ರಕಾಶನ’ದ ಮೂಲಕ ಓದುವ ಸಂಸ್ಕೃತಿಯನ್ನು ಉತ್ತೇಜಿಸಿದರು. ಅಮೂಲ್ಯ ಮತ್ತು ಸದಭಿರುಚಿಯ ಪುಸ್ತಕಗಳನ್ನು ಪ್ರಕಟಿಸಿ, ಓದುಗರ ಕೈಗೆ ವಿತರಿಸುವ ಹೊತ್ತಿಗೆ ತೇಜಸ್ವಿ ಯಾವೆಲ್ಲ ತೊಂದರೆಗಳನ್ನು ಅನುಭವಿಸಬೇಕಾಯಿತು, ಅದನ್ನವರು ಮೀರಿ ನಿಂತ ಪರಿ ಇದೆಲ್ಲವನ್ನೂ ತೇಜಸ್ವಿಯವರ ಪತ್ನಿ ಆರ್.ರಾಜೇಶ್ವರಿ ‘ನನ್ನ ತೇಜಸ್ವಿ’ ಪುಸ್ತಕದಲ್ಲಿ ದಾಖಲಿಸಿದ್ದು, ಮತ್ತಷ್ಟು ವಿವರಗಳನ್ನು ವಿಜಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.
ನಿರೂಪಣೆ: ಬಂಕೇನಹಳ್ಳಿ ನಂದೀಶ್
ಪೂರ್ಣಚಂದ್ರ ತೇಜಸ್ವಿ 1961ರಲ್ಲಿ ಎಂ.ಎ. ಮಾಡಿದ ನಂತರ ಅವರಿಗೆ ಒಂದು ಕನಸಿತ್ತು. ನಮ್ಮ ಕನ್ನಡಿಗರಿಗೆ ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ತರಹದ ಮಾಸಿಕವನ್ನು ಕನ್ನಡದಲ್ಲಿ ತರಬೇಕು. ಕನ್ನಡಿಗರ ಕೈಗಿಡಬೇಕು ಎನ್ನುವ ಹಂಬಲ ಅವರದಾಗಿತ್ತು. 1963ರಲ್ಲಿ ಹೈಡಲ್​ಬರ್ಗ್ ಮುದ್ರಣಯಂತ್ರ ಖರೀದಿಸಿ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ನೃಪತುಂಗ ಮುದ್ರಣಾಲಯ ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ಪ್ರೆಸ್ಸಿನ ಪ್ರತಿಯೊಂದು ಕೆಲಸವನ್ನೂ ಕಲಿತುಕೊಂಡರು. ಮೊಳೆ ಜೋಡಿಸುವುದರಿಂದ ಹಿಡಿದು ಪುಸ್ತಕ ಹೊರತರುವ ಕೆಲಸದವರೆಗೂ ಕರಗತ ಮಾಡಿಕೊಂಡರು. ಪುಸ್ತಕ ಮುದ್ರಿಸಿ ಪ್ರಕಟಣೆ ಮಾಡುವುದರ ಜತೆಗೆ ಅದರ ಮಾರ್ಕೆಟಿಂಗ್ ಕೂಡ ಅಷ್ಟೇ ಮುಖ್ಯವಾದದ್ದು ಎಂಬುದು ತೇಜಸ್ವಿ ಅರಿವಿಗೆ ಬಂತು.

ಗೆಳೆಯನೊಂದಿಗೆ ಸೇರಿ ಈ ಮುದ್ರಣಾಲಯ ಪ್ರಾರಂಭಿಸಿದ್ದ ತೇಜಸ್ವಿ ಕಾರಣಾಂತರಗಳಿಂದ ಪ್ರೆಸ್​ನಿಂದ ಹೊರಬಂದರು. ತೇಜಸ್ವಿ 17 ವರ್ಷದವರಾಗಿದ್ದಾಗ ( ಆಗ ಇಂಟರ್​ವಿುೕಡಿಯಟ್​ನಲ್ಲಿ ಓದುತ್ತಿದ್ದರು) ತಂದೆಗೆ ಬರೆದ ಕಾಗದದಲ್ಲಿ, ‘ನೀವು ಕಾಡಿನಿಂದ ನಗರಕ್ಕೆ ಹೋಗಿ ಬದುಕನ್ನು ಕಂಡುಕೊಂಡಿರಿ. ನನಗೆ ಇವತ್ತಿಗೆ ನಗರದಿಂದ ಕಾಡಿನಲ್ಲಿ ಬದುಕಬೇಕು ಅನಿಸುತ್ತಿದೆ’ ಎಂದು ಹೇಳಿದ್ದರು.
ಮೂಡಿಗೆರೆಯ ಬೂತನಕಾಡಿಗೆ ನನ್ನನ್ನು ಮಾತನಾಡಿಸಿಕೊಂಡು ಹೋಗಲು ಬರುತ್ತಿದ್ದರು. ಅಲ್ಲಿನ ಕಾಡು ಅವರನ್ನು ತುಂಬ ಸೆಳೆಯಿತು. ಕಾಡು ತೇಜಸ್ವಿ ಅವರನ್ನು ರೂಪಿಸಿತು ಎಂದರೆ ಉತ್ಪ್ರೇಕ್ಷೆಯಾಗಲಾರದು. ತಾವೇ ಯಾಕೆ ಒಂದು ಪ್ರಕಾಶನ ಪ್ರಾರಂಭಿಸಬಾರದು ಎನಿಸಿ ತೇಜಸ್ವಿ, ಅವರ ಆಪ್ತಗೆಳೆಯ ಮೈಸೂರಿನ ಬಿ.ಎನ್.ಶ್ರೀರಾಮ್ ಜನ್ನಾಪುರದ ಆರ್.ರಾಘವೇಂದ್ರ ಈ ಮೂವರೂ ಸೇರಿ ಪುಸ್ತಕ ಪ್ರಕಾಶನ ಪ್ರಾರಂಭಿಸಲು ಹೊರಟರು. ಮುಖಪುಟದ ವಿನ್ಯಾಸ, ಕಾಗದದ ಗುಣಮಟ್ಟ, ಒಳಗೆ ಚಿತ್ರಗಳು ಹೇಗೆ ಬರಬೇಕು, ಅಕ್ಷರಗಳು ಯಾವ ಫಾಂಟ್​ನಲ್ಲಿರಬೇಕು?-ಈ ಎಲ್ಲ ಸಂಗತಿಗಳ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಿದ್ದರು. ಪುಸ್ತಕದ ಬೆಲೆ ಬಗ್ಗೆ ಶ್ರೀರಾಮ್ ಅವರಲ್ಲಿ ರ್ಚಚಿಸುತ್ತಿದ್ದರು. ಪುಸ್ತಕಗಳು ಮನಮೋಹಕವಾಗಿ ಬರತೊಡಗಿದವು. ತೇಜಸ್ವಿ ಮತ್ತು ಶ್ರೀರಾಮ್ ಅವರಿಗೆ ತೃಪ್ತಿಯಾಯಿತು, ಹೆಮ್ಮೆಯಾಯಿತು. ಇವರಿಬ್ಬರಿಗೂ ಅತ್ಯುತ್ತಮ ಪುಸ್ತಕ ತರಬೇಕೆನ್ನುವ ಕಲ್ಪನೆ ಇದ್ದಿದ್ದರಿಂದ ಅದನ್ನು ಸಾಧಿಸಿ ಯಶಸ್ವಿಯೂ ಆದರು.
ಪುಸ್ತಕ ಪ್ರಾಧಿಕಾರ ಅತ್ಯುತ್ತಮ ಪುಸ್ತಕಗಳಿಗೆ ಕೊಡುವ ಬಹುಮಾನವನ್ನು ‘ಪುಸ್ತಕ ಪ್ರಕಾಶನ’ಕ್ಕೆ (1994-95) ನೀಡಿ ಸನ್ಮಾನಿಸಿತು. ಒಳ್ಳೆಯ ಪುಸ್ತಕ ತರುವುದರ ಜೊತೆಗೆ ಅದನ್ನು ದೂರದೂರಿಗೆ ಓದಲಿಚ್ಛಿಸುವರ ಕೈ ಸೇರುವಂತೆ ಮಾಡಬೇಕೆಂಬ ಉದ್ದೇಶದಿಂದ ತೇಜಸ್ವಿ ಮೂಡಿಗೆರೆಯಿಂದ ‘ಬುಕ್​ಪೋಸ್ಟ್ ಸರ್ವೀಸು’ ಸೌಲಭ್ಯದ ವ್ಯವಸ್ಥೆಯನ್ನೂ ರೂಪಿಸಿದರು. ‘ನಮ್ಮಲ್ಲಿ ದೊರೆಯುವ ಪುಸ್ತಕದ ಪಟ್ಟಿ, ನೋಡಬೇಕಾದ ಪುಸ್ತಕಗಳನ್ನು ವಿ.ಪಿ. ಮುಖಾಂತರ ತರಿಸಿಕೊಳ್ಳಬಹುದು. ಅದರ ಅಂಚೆ ಮತ್ತು ಪ್ಯಾಕಿಂಗ್ ವೆಚ್ಚವನ್ನು ಪುಸ್ತಕ ಪ್ರಕಾಶನದವರೇ ಭರಿಸುತ್ತಾರೆ. ಈ ಸೌಲಭ್ಯದ ವ್ಯವಸ್ಥೆಯಿಂದ ಲಾಭವಿರದಿದ್ದರೂ ಜನಕ್ಕೆ ತಲುಪಬೇಕೆಂಬ ಆಶಯ ಮುಖ್ಯವಾದುದು’ ಎಂದು ತೇಜಸ್ವಿ ಅಭಿಮತವಾಗಿತ್ತು.
ಇದಕ್ಕಾಗಿ ಪುಸ್ತಕ ಪ್ರಕಾಶನದ ಒಂದು ಮನವಿಯನ್ನು ತೇಜಸ್ವಿ ತಯಾರಿಸಿದರು. ‘ನಿಮ್ಮ ಮಕ್ಕಳನ್ನು ಕತ್ತಲಲ್ಲಿ ಇಡಬೇಡಿ. ಅತಿ ವೇಗವಾಗಿ ಮುಂದೆ ಸಾಗುತ್ತಿರುವ ಜಗತ್ತಿನ ಪರಿಚಯ ಇಲ್ಲದಿದ್ದರೆ ನಿಮ್ಮ ಮಕ್ಕಳ ಬುದ್ಧಿಶಕ್ತಿ, ಕುತೂಹಲ, ಚಟುವಟಿಕೆಗಳೆಲ್ಲ ಕುಂಠಿತಗೊಳ್ಳುತ್ತವೆ. ಆಧುನಿಕ ಜಗತ್ತಿನ ಸರಳಜ್ಞಾನ ಇವತ್ತಿನ ನಾಗರಿಕತೆಯ ಮೊದಲಗತ್ಯವಾಗಿದೆ. ನಮ್ಮ ವಿದ್ಯಾಭ್ಯಾಸ ಕ್ರಮದಲ್ಲಿ, ಶಾಲೆ-ಕಾಲೇಜುಗಳಲ್ಲಿ ಈ ವಿಸõತ ಜ್ಞಾನದ ಪರಿಚಯ ಸಿಗುವುದಿಲ್ಲ. ಇದು ಕನ್ನಡದ ಮಕ್ಕಳ ಮನೋವಿಕಾಸ ಸರ್ವತೋಮುಖವಾಗಿ ಸಾಗಲು ಮೊದಲ ಅಡ್ಡಿಯಾಗಿದೆ. ಈ ದಿಕ್ಕಿನಲ್ಲಿ ಕನ್ನಡದ ಮಕ್ಕಳಿಗೆ ವಿಶ್ವದ ಸರ್ವತೋಮುಖ ಪರಿಚಯ ಮಾಡುವ ಪ್ರಯತ್ನವಾಗಿ ನಾವು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದೇವೆ ಮತ್ತು ಪ್ರಕಟಿಸಲಿದ್ದೇವೆ. ಜಗತ್ತಿನ ಆಗುಹೋಗುಗಳು, ಆಶ್ಚರ್ಯಾದ್ಭುತಗಳನ್ನು ನಮ್ಮ ಮಕ್ಕಳಿಗೆ ಪರಿಚಯ ಮಾಡುವ ಪ್ರಯತ್ನ ಇದು’.
ಪುಸ್ತಕ ಸಂಸ್ಕೃತಿ ವೃದ್ಧಿಸಬೇಕೆಂಬ ಉದ್ದೇಶದಿಂದ ತೇಜಸ್ವಿ ಇನ್ನೂ ಒಂದು ಸೌಲಭ್ಯ ಕಲ್ಪಿಸಿಕೊಟ್ಟರು. ಪುಸ್ತಕದ ವ್ಯಾಪಾರಿಗಳು ತರಿಸಿಕೊಂಡ ನಮ್ಮ ಪುಸ್ತಕಗಳು ಅಕಸ್ಮಾತ್ ಖರ್ಚಾಗದೆ ಉಳಿದಿದ್ದರೆ ಪುಸ್ತಕಗಳನ್ನು ಸುಸ್ಥಿತಿಯಲ್ಲಿಟ್ಟು ವಾಪಸ್ ಕಳಿಸಲು ಅವಕಾಶವುಂಟೆಂದರು. ಆದರೆ ಅತಿ ವೇಗದಲ್ಲೇ ನಮ್ಮ ಪುಸ್ತಕಗಳು ಖರ್ಚಾಗುತ್ತಿದ್ದರಿಂದ ಯಾರೂ ಹಿಂದಿರುಗಿಸಿಲ್ಲ ಎಂಬುದು ಹೆಮ್ಮೆಯ ವಿಚಾರ. ಪುಸ್ತಕ ಪ್ರಕಾಶನದ ಮತ್ತು ಉದಯರವಿ ಪ್ರಕಾಶನದ ಮಾರಾಟ ವ್ಯವಸ್ಥೆಯನ್ನು ಶ್ರೀರಾಮ್ ಸಮರ್ಥವಾಗಿ ನಿರ್ವಹಿಸುತ್ತಿರುವುದರಿಂದ ಪುಸ್ತಕಗಳ ಮರುಮುದ್ರಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಮೊದಲ ಪ್ರಯತ್ನವೆಂಬಂತೆ, ಯಾವ್ಯಾವುದೋ ಸ್ಕೀಂಗಳಿಗೆ ಪುಸ್ತಕ ಸರಬರಾಜಿಗೆ ಶ್ರೀರಾಮ್ ಹೋಗಿದ್ದಂತೆಯೇ ಹಿಂದೆ ಸರಿದರು. ‘ಜನರಲ್ ಸೇಲ್ಸ್ ಮುಖಾಂತರವೇ ಓದುಗರನ್ನು ತಲುಪಬೇಕು. ಆ ಮುಖಾಂತರವೇ ನಮ್ಮ ಮೆರಿಟ್ ಪಡೆದುಕೊಳ್ಳಬೇಕು ಮತ್ತು ನಮ್ಮ ಮೆರಿಟ್ ತೋರಿಸಿಕೊಳ್ಳಬೇಕು’ ಎಂಬುವುದು ತೇಜಸ್ವಿ ಅಭಿಪ್ರಾಯವಾಗಿತ್ತು.
ತಂತ್ರಜ್ಞಾನದ ಬಳಕೆ:1993ರಲ್ಲಿ ‘ಅಚ್ಚಗನ್ನಡ ನುಡಿಕೋಶ’ ಪುಸ್ತಕವನ್ನು ತಂದರು. ಅದು ಹಳಗನ್ನಡದ ಡಿಕ್ಷ್​ನರಿಯಾಗಿದ್ದರಿಂದ ಅದರ ಕೆಲಸವೇ ಬೇರೆ ರೀತಿಯಾಗಿತ್ತು. ಕನ್ನಡ ತಂತ್ರಾಂಶ ಸಮಸ್ಯೆ ತಲೆದೋರಿತು. ಆಗ ಎಸ್​ಆರ್​ಜಿ ತಂತ್ರಜ್ಞರಾದ ವೆಂಕಟೇಶ್ ಮನೆಗೆ ಬಂದರು. ಅವರು ತೇಜಸ್ವಿಯ ಕಾರ್ಯಕುಶಲತೆ ನೋಡಿ, ತೇಜಸ್ವಿ ಒಂದೇ ವರ್ಷದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ದಲ್ಲಿ ಹಿಮಾಲಯ ಪರ್ವತವನ್ನೇರಿರುವರೆಂದು ಆಶ್ಚರ್ಯ, ಮೆಚ್ಚುಗೆ ವ್ಯಕ್ತಪಡಿಸಿ ‘ಹ್ಯಾಟ್ಸ್​ಫ್ ತೇಜಸ್ವಿಗೆ’ ಎಂದರು. ಸ್ವತಃ ಪರಿಶ್ರಮದಿಂದಲೇ ಕಲಿಯುತ್ತ ಹೋದರು ತೇಜಸ್ವಿ. ಪುಸ್ತಕ ತರುವಲ್ಲಿ ತೇಜಸ್ವಿ ಒಂದೊಂದೂ ನೂತನ ಪ್ರಯೋಗ ಮಾಡಿದಂತೆಲ್ಲ ಕಂಪ್ಯೂಟರಿನ ತಂತ್ರಾಂಶವನ್ನೂ ಅಪ್​ಡೇಟ್ ಮಾಡುತ್ತ ಹೋಗಬೇಕಾಯ್ತು. ಮೊದಲಿಗೆ ಎಸ್​ಆರ್​ಜಿಯ ಡಾಸ್ ಬಳಕೆ ಆಧಾರದ ಮೇಲೆ ಕೆಲಸ ಮಾಡಿದರು. ಅದು ಮಾರುಕಟ್ಟೆಯಿಂದ ಮರೆಯಾಯಿತು. ಕೊನೆಗೆ ಎಂಎಸ್ ಡಾಸ್ ವರ್ಷನ್ ಸಹ ಮಾರುಕಟ್ಟೆಯಿಂದ ನಿರ್ಗಮಿಸಿ ಅದರ ಬದಲಿಗೆ ವಿಂಡೋ 95 ಬಂತು. ಇಲ್ಲಿಂದ ಶುರುವಾಗಿದ್ದು ಇದರ ತೊಂದರೆಗಳು.
ತೇಜಸ್ವಿ ಹೇಳುತ್ತಿದ್ದಂತೆ, ಪ್ರೆಸ್ ಹಾಕಿಕೊಂಡು ಮೊಳೆ ಜೋಡಿಸುತ್ತ ಕಂಪೋಸಿಟರುಗಳಿಗೆ ಸಲಾಂ ಹೊಡೆದು ಪುಸ್ತಕ ಹೊರತರಲು ಏಗುತ್ತಿದ್ದ ಹಾಗೆಯೇ ಇನ್ನೊಂದು ರೀತಿಯಲ್ಲಿ ಇಲ್ಲಿ ಏಗಬೇಕಾಗಿ ಬಂದು ಸಾಕು ಬೇಕಾಗಿಹೋಯ್ತು. ಹಾಗಾಗಿ ಇವರು ತಂತ್ರಾಂಶದ ಬಗ್ಗೆ ಚಿಂತಿಸತೊಡಗಿದರು.
ಮಾಹಿತಿ-ತಂತ್ರಜ್ಞಾನ ಕ್ಷೇತ್ರ ಪುಸ್ತಕ ಪ್ರಕಟಣೆ, ಪತ್ರವ್ಯವಹಾರ, ಗಣಿತ ಲೆಕ್ಕಾಚಾರ, ಇತ್ಯಾದಿಗಳಲ್ಲೇ ನಿಂತಿದ್ದರೆ ನಾವು ಈಗಿರುವ ಕನ್ನಡದ ತಂತ್ರಾಂಶಗಳ ಬಗ್ಗೆ ಇಷ್ಟು ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ತಂತ್ರಜ್ಞಾನ ಕ್ಷೇತ್ರ ನಮ್ಮ ಊಹೆಗೂ ಮೀರಿದ ವೇಗದಲ್ಲಿ ವಿಸ್ತರಿಸಿತು. ಇಂಟರ್​ನೆಟ್ ಪದಾರ್ಪಣೆ ಮಾಡಿತು. ಇ-ಮೇಲ್ ಶುರುವಾಯ್ತು. ನಂತರ ಇಂಟರ್​ನೆಟ್ ಆಧಾರದ ಮೇಲೆ ಇ-ವಾಣಿಜ್ಯ ಶುರುವಾಯ್ತು. ಇದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ವವ್ಯಾಪಿಯಾದ ಬದಲಾವಣೆಗಳು ಶುರುವಾದವು. ನಂತರ ಇ-ಆಡಳಿತ ಬಂತು. ಭಾಷಾ ಕ್ಷೇತ್ರದಲ್ಲಿ ವಾಯ್್ಸ ರೆಕಗ್ನಿಷನ್ ಸಾಫ್ಟ್​ವೇರ್​ಗಳು, ಕ್ಯಾರಕ್ಟರ್ ರೆಗ್ನಿಷನ್ ಸಾಫ್ಟ್ ವೇರ್, ಭಾಷೆಯಿಂದ ಭಾಷೆಗೆ ತರ್ಜುಮೆ ಮಾಡುವ ಸಾಫ್ಟ್ ವೇರ್​ಗಳೂ ಬಂದು ಕಂಪ್ಯೂಟರ್ ಸಾಧ್ಯತೆಗಳನ್ನು ಹೆಚ್ಚಿಸಿವೆ. ತೇಜಸ್ವಿಯ ಈ ಚಿಂತನೆಗಳು ಇನ್ನೊಂದು ಪುಸ್ತಕದಲ್ಲಿ ಬರಲಿದೆ.
ಪುಸ್ತಕ ಪ್ರಕಾಶನ ಕನ್ನಡ ಪ್ರಕಾಶನ ಕ್ಷೇತ್ರದಲ್ಲಿ ಒಂದು ಅಸದೃಶ ಸಾಹಸ. ವಸ್ತು, ವಿಷಯ, ಪುಸ್ತಕದ ಕಾಗದ, ರಕ್ಷಾಪುಟ ವಿನ್ಯಾಸ, ಶ್ರೇಷ್ಠಮುದ್ರಣ, ಓದುಗರಿಗೆ ವಿಚಾರ ತಲುಪಿಸುವ ಗದ್ಯಶೈಲಿ, ಪ್ರತಿಯೊಂದರಲ್ಲಿಯೂ ಜಗತ್ತಿನ ಅತ್ಯುತ್ತಮ ಪ್ರಕಾಶನಗಳಿಗೆ ಸರಿಗಟ್ಟುವ ಸಾಧನೆ ಮಾಡಬೇಕೆಂಬ ನಿರ್ಧಾರದಿಂದ ನಾಡಿನ ಅಗ್ರಮಾನ್ಯ ಲೇಖಕರ, ಕಲಾವಿದರ, ತಂತ್ರಜ್ಞರ, ಮುದ್ರಕರ, ಅವಿರತ ಶ್ರಮ, ಸಾಧನೆ, ಸಹಕಾರಗಳೊಂದಿಗೆ ಹೊರಟಿರುವ ಸಾಹಸ. ನೆನಪಿರಲಿ ‘ಪುಸ್ತಕ ಪ್ರಕಾಶನ’ ಕೇವಲ ಪುಸ್ತಕಗಳನ್ನು ಬಿಕರಿ ಮಾಡುವ ಸಂಸ್ಥೆಯಲ್ಲ. ಅದೊಂದು ಗುರಿ ಮತ್ತು ಆದರ್ಶಗಳುಳ್ಳ ಉದ್ದೇಶಪೂರ್ವಕ ಸಾಹಸ.
| ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಪ್ರಕಾಶನ ಕ್ಷೇತ್ರದ ಬಗ್ಗೆ ಮಾತಿನ ಮೆಲುಕು)
https://www.vijayavani.net/sbi-moots-vrs-to-optimise-costs/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fourteen =
Remember me
