ಎನ್.ಎಲ್. ಶಿವಮಾದು ಬೆಂಗಳೂರುಡಿಪ್ಲೊಮಾ ವಿದ್ಯಾರ್ಥಿಗಳಿಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಿದೇಶಿ ಶಿಕ್ಷಣ ಯೋಜನೆ ಸ್ಥಗಿತಗೊಂಡಿದೆ. ಅಮೆರಿಕದ ಅಥೆನ್ಸ್ ವಿಶ್ವವಿದ್ಯಾಲಯವು ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಏಕಾಏಕಿ ರದ್ದುಗೊಳಿಸಿದೆ. ಇದರ ಪರಿಣಾಮ ವಿದೇಶದಲ್ಲಿ ಓದುವ ಕನಸು ಕಂಡಿದ್ದ ಡಿಪ್ಲೊಮಾ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಅತಂತ್ರವಾಗಿದೆ.
ರಾಜ್ಯದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಪ್ಲೊಮಾ ಕೋರ್ಸ್ ನೀಡಬೇಕೆಂಬ ಉದ್ದೇಶದಿಂದ ಪ್ರತಿ ವಿದ್ಯಾರ್ಥಿಗೆ 3 ವರ್ಷದಲ್ಲಿ ವಿದೇಶದ ವ್ಯಾಸಂಗ ಮತ್ತು ಹಾಸ್ಟೆಲ್ ವ್ಯವಸ್ಥೆ, ವಿಮಾನ ಟಿಕೆಟ್ ಸೇರಿ ಸಂಪೂರ್ಣ ಖರ್ಚು ವೆಚ್ಚದೊಂದಿಗೆ ಓದಬೇಕೆಂಬ ಯೋಜನೆಯನ್ನು ರೂಪಿಸಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ. ಖರ್ಚು ಮಾಡುವುದಾಗಿ ಘೋಷಿಸಿತ್ತು.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ರ್ಯಾಂಕ್ ಪಡೆದು ಸರ್ಕಾರದ ಭರವಸೆಯೊಂದಿಗೆ 2021-22ನೇ ಸಾಲಿನಲ್ಲಿ ಮೊದಲ ವರ್ಷದ ಡಿಪ್ಲೊಮಾ ವ್ಯಾಸಂಗದ ಬಳಿಕ ವಿದ್ಯಾರ್ಥಿಗಳು ಕಳೆದೆರಡು ವರ್ಷದಿಂದ ಅತಂತ್ರರಾಗಿದ್ದಾರೆ.
ಏನಿದು ವಿದೇಶಿ ಶಿಕ್ಷಣ ಯೋಜನೆ?:ಬೆಂಗಳೂರಿನ ಎಸ್​ಜೆ ಪಾಲಿಟೆಕ್ನಿಕ್​ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಸೈಬರ್ ಭದ್ರತೆ, ಟೂರಿಸಂ ಆಂಡ್ ಹಾಸ್ಪಿಟಲಿಟಿ ಮ್ಯಾನೇಜ್​ವೆುಂಟ್ ಕೋರ್ಸ್​ಗಳಿಗೆ ತಲಾ 24 ವಿದ್ಯಾರ್ಥಿಗಳಂತೆ 48 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.
ಒಡಂಬಡಿಕೆ ಪ್ರಕಾರ, 3 ವರ್ಷದಲ್ಲಿ ಮೊದಲ ವರ್ಷ ರಾಜ್ಯದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾರೆ. 2ನೇ ವರ್ಷವನ್ನು ಅಲ್ಲಿನ ವಿಶ್ವವಿದ್ಯಾಲಯದ ಬೋಧಕರು ಆನ್​ಲೈನ್ ಮೂಲಕ ಬೋಧನೆ ಮಾಡಿದ್ದು, ಅದೂ ಪೂರ್ಣವಾಗಿಲ್ಲ. 3ನೇ ವರ್ಷವನ್ನು ಅಮೆರಿಕ ಕಾಲೇಜುಗಳಲ್ಲಿ ಮುಂದುವರಿಸಬೇಕಿತ್ತು. ಈಗ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ ಎನ್ನುವಂತಾಗಿದೆ. ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಪ್ರವೇಶ ದಾಖಲಾತಿಯಿಂದ ಹಿಡಿದು ಎಲ್ಲ ಸೌಲಭ್ಯಗಳು ಕೂಡ ಉಚಿತವಾಗಿರಲಿದೆ. 2ನೇ ಬ್ಯಾಚಿಗೆ ಸರ್ಕಾರದಿಂದ ಶೇ.50 ಮತ್ತು ವಿದ್ಯಾರ್ಥಿಗಳು ಶೇ.50 ವೆಚ್ಚವನ್ನು ಪಾವತಿ ಮಾಡುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಈಗ ಎಂಒಯು ರದ್ದುಗೊಂಡಿದೆ.
ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ. ವೆಚ್ಚ:ವಿದೇಶದಲ್ಲಿ ವ್ಯಾಸಂಗ ಮಾಡುವ ಕನಸು ಹೊತ್ತ ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಕಲಿಯುತ್ತಿದ್ದರು. ಸರ್ಕಾರ ಕೂಡ ವಿದ್ಯಾರ್ಥಿಗಳನ್ನು ಕಳಿಹಿಸಿಕೊಡಲು ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ. ವೆಚ್ಚ ಮಾಡಲು ಸಿದ್ಧತೆ ನಡೆಸಿತ್ತು. ಆದರೆ, ವಿದ್ಯಾರ್ಥಿಗಳು 2ನೇ ವರ್ಷದಲ್ಲಿ ಆನ್​ಲೈನ್ ಕಲಿಯುವ ವೇಳೆಯೇ ಅಲ್ಲಿನ ಪ್ರಾಧ್ಯಾಪಕರು ಮತ್ತು ವಿಶ್ವವಿದ್ಯಾಲಯವು ನಮ್ಮಲ್ಲಿ ಸೈಬರ್ ಭದ್ರತೆ, ಪ್ರವಾಸೋದ್ಯಮ ಕೋರ್ಸ್​ಗಳಿಲ್ಲ. ಮನಃಶಾಸ್ತ್ರ, ಪುರಾಣ (ಮೈಥಾಲಜಿ) ಸೇರಿ ಇತರೆ ಕೋರ್ಸ್​ಗಳಿವೆ ಎಂದು ಹೇಳಲು ಶುರು ಮಾಡಿದೆ. ಅದನ್ನು ಇಲ್ಲಿನ ಸರ್ಕಾರದ ಪ್ರತಿನಿಧಿಗಳು ಸರಿಯಾಗಿ ರ್ಚಚಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ 2ನೇ ವರ್ಷದ ಆನ್​ಲೈನ್ ತರಗತಿಗಳು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ದೊರೆತಿಲ್ಲ. 3ನೇ ವರ್ಷದ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಅಮೆರಿಕಕ್ಕೆ ಹೋಗಬೇಕಾದವರು ಏನನ್ನೂ ಓದಲು ಸಾಧ್ಯವಾಗದೆ ಮನೆಯಲ್ಲಿದ್ದಾರೆ. ಈ ವಿಚಾರವಾಗಿ ಸರ್ಕಾರವು ಸರಿಯಾದ ರೀತಿಯಲ್ಲಿ ಸ್ಪಂದಿಸದ ಕಾರಣ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿದ್ದಾರೆಂದು ಪಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತನಿಖೆಗೆ ಸರ್ಕಾರ ಚಿಂತನೆ:ಯೋಜನೆಯನ್ನು ಉನ್ನತ ಶಿಕ್ಷಣ ಇಲಾಖೆಯು ಸ್ಥಗಿತಗೊಳಿಸಿಲ್ಲ. ಆದರೆ, ಅಲ್ಲಿನ ವಿಶ್ವವಿದ್ಯಾಲಯವೇ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಇಲಾಖೆ ಆಯುಕ್ತರು ಹೊರತುಪಡಿಸಿ ಉಳಿದ ಯಾರಿಗೂ ಮಾಹಿತಿ ತಿಳಿದಿಲ್ಲ. ಆದ್ದರಿಂದ ಯೋಜನೆಯನ್ನು ತನಿಖೆಗೆ ಒಳಪಡಿಸಲು ಚಿಂತನೆ ನಡೆಸುತ್ತಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. ಅಲ್ಲಿನ ವಿವಿ ಆಡಳಿತ ಮಂಡ ಳಿಯು ಹಿಂದಿನ ಆಯುಕ್ತರಿಗೆ ಇ-ಮೇಲ್ ಕಳಿಸಿ ಒಡಂಬಡಿಕೆ ಮಾಡಿ ಕೊಂಡಿರುವ ಕೋರ್ಸ್​ಗಳು ನಮ್ಮಲ್ಲಿ ಲಭ್ಯವಿಲ್ಲ. ಇದಕ್ಕಾಗಿ ಕಮ್ಯುನಿಟಿ ಕಾಲೇಜುಗಳನ್ನು ಹುಡುಕಿಕೊಳ್ಳುವುದು ಉತ್ತಮ ಎಂಬ ಸಂದೇಶ ಕಳಿಸಿದ್ದಾರೆ. ಒಂದು ರೀತಿಯಲ್ಲಿ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಸರಿಯಾದ ಒಡಂಬಡಿಕೆ ಮಾಡಿಕೊಳ್ಳದ ಕಾರಣ ಈ ಎಲ್ಲ ಸಮಸ್ಯೆಗಳು ಎದುರಾಗಿವೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಮೊರೆ ಹೋಗಲು ಸಿದ್ಧತೆ:ವಿದ್ಯಾರ್ಥಿಗಳ 2 ವರ್ಷ ಶೈಕ್ಷಣಿಕ ಜೀವನ ಹಾಳಾಗಿದೆ. ಈ ಬಗ್ಗೆ ಸರ್ಕಾರದ ಯಾವೊಬ್ಬ ಅಧಿಕಾರಿಗಳು ಕೂಡ ಹೊಣೆಗಾರಿಕೆ ಪ್ರದರ್ಶಿಸುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗುವು ದಾಗಿ ಪಾಲಕರೊಬ್ಬರು ತಿಳಿಸಿದ್ದಾರೆ.
ಹಿಂದಿನ ಸರ್ಕಾರವು ಸರಿಯಾದ ರೀತಿಯಲ್ಲಿ ಒಪ್ಪಂದ ಮಾಡಿ ಕೊಂಡಿಲ್ಲ. ವಿದ್ಯಾರ್ಥಿಗಳ ದೃಷ್ಟಿಯಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮ ಮಾಡಲಾಗುತ್ತಿದೆ.
| ಡಾ.ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
