ಶ್ರೀಶೈಲ ಪೀಠದ 32ನೇ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ರೀಶೈಲ ಸೂರ್ಯ ಸಿಂಹಾಸನ ಮಹಾಪೀಠವನ್ನೇರಿ 12 ಸಂವತ್ಸರಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆ ಸುದೀರ್ಘ ಕಾರ್ಯಕ್ರಮಗಳ ಮೊದಲ ಭಾಗವಾಗಿ ಅ.29ರಂದು ಬೃಹತ್ ಪಾದಯಾತ್ರೆಗೆ ಚಾಲನೆ ದೊರೆಯಲಿದೆ.
ರಾಯಣ್ಣ ಆರ್.ಸಿ./ಪ್ರಶಾಂತ ರಿಪ್ಪನ್​ಪೇಟೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನ ವೀರಭದ್ರ ದೇವಸ್ಥಾನದಿಂದ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಲೋಕಕಲ್ಯಾಣಕ್ಕಾಗಿ 560 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಅ.29ರಂದು ಬೆಳಗ್ಗೆ 11ಕ್ಕೆ ಚಾಲನೆ ಸಿಗಲಿದೆ ಎಂದು ಶ್ರೀಶೈಲ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನ ಜಗದ್ಗುರು ಪಂಡಿತಾರಾಧ್ಯ ಮಹಾಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಗುರುವಾರ ಯಡೂರಿನ ಕಾಡಸಿದ್ದೇಶ್ವರ ಮಠದಲ್ಲಿ ‘ವಿಜಯವಾಣಿ’ ಜತೆ ಮಾತನಾಡಿದರು. ಪ್ರತಿವರ್ಷ ಯುಗಾದಿ ಸಂದರ್ಭದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಲಕ್ಷಾಂತರ ಜನ ಶ್ರೀಶೈಲಕ್ಕೆ ಆಗಮಿಸುತ್ತಾರೆ. ಜನರ ಕಷ್ಟಕಾರ್ಪಣ್ಯಗಳನ್ನು ಅರಿಯುವುದು ಕೂಡ ಪಾದಯಾತ್ರೆ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಗಣನೀಯ ಸೇವೆ ಮಾಡಿರುವ ಸಾಧಕರನ್ನು ಗುರುತಿಸಿ ಅನೇಕರಿಗೆ ಏಳೆಂಟು ವರ್ಷದಿಂದ ಯಡೂರಿನ ಜಾತ್ರಾ ಮಹೋತ್ಸವದಲ್ಲಿ ವಿಶ್ವಚೇತನ ಪ್ರಶಸ್ತಿ ನೀಡಲಾಗುತ್ತಿದೆ. ಅವರೆಲ್ಲರನ್ನೂ ಆಹ್ವಾನಿಸಿ, ಪಾದಯಾತ್ರೆಗೆ ಚಾಲನೆ ನೀಡಲು ಸಂಕಲ್ಪ ಮಾಡಿದ್ದರೂ ಕೆಲವರು ವೃದ್ಧಾಪ್ಯದಲ್ಲಿರುವುದರಿಂದ ಆಗಮಿಸಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಮುಖಂಡರು ಹಾಗೂ ಸಾಧಕರ ಜತೆ ಪಾದಯಾತ್ರೆ ಆರಂಭಿಸಲಾಗುವುದು. ಕಾಶಿ ಪೀಠದ ನೂತನ ಜಗದ್ಗುರುಗಳು, ನಿಡಸೋಸಿಯ ಸ್ವಾಮೀಜಿ ಸ್ನಾನ್ನಿಧ್ಯವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹ್ಲಾದ ಜೋಶಿ ಹಾಗೂ ಸಚಿವರಾದ ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ,
ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ, ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಎಂಎಲ್ಸಿ ಪ್ರಕಾಶ ಹುಕ್ಕೇರಿ, ಬಾಗಲಕೋಟೆಯ ಹಿರಿಯ ಶರಣಜೀವಿ ವೀರಣ್ಣ ಚರಂತಿಮಠ ಹಾಗೂ 50ಕ್ಕೂ ಹೆಚ್ಚು ಮಠಾಧೀಶರು ಆಗಮಿಸಲಿದ್ದಾರೆ.
ಧಾರ್ವಿುಕ ಜಾಗೃತಿಗಾಗಿ ಪಾದಯಾತ್ರೆ, ಪ್ರಧಾನಿ ಮೋದಿ ಹಾಗೂ 5 ಸಿಎಂಗಳಿಗೆ ಶ್ರೀಶೈಲ ಕಾರ್ಯಕ್ರಮಕ್ಕೆ ಆಹ್ವಾನ
ಪಾದಯಾತ್ರೆ ಸಂಪನ್ನಗೊಂಡ ನಂತರ ಡಿ.1ರಿಂದ ಶ್ರೀಶೈಲ ಜಗದ್ಗುರುಗಳ ತಪೋನುಷ್ಠಾನ ಆರಂಭಗೊಳ್ಳಲಿದೆ. 42 ದಿನಗಳ ಕಾಲ ನಡೆಯುವ ಅನುಷ್ಠಾನದಲ್ಲಿ ಪ್ರತಿದಿನ ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಮತ್ತಿತರ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮವಾಗಿ 2023ರ ಜ.10 ರಿಂದ 15 ರವರೆಗೆ ಶ್ರೀಶೈಲ ಕ್ಷೇತ್ರದಲ್ಲಿ ವಿವಿಧ ಸಮಾರಂಭಗಳು ನಡೆಯಲಿವೆ. ಶತಮಾನದ ಹಿರಿಮೆ ಹೊಂದಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನವನ್ನು ಒಂದು ದಿನ ಆಯೋಜಿಸಲಾಗಿದೆ. ಹಾಗೂ ರಾಷ್ಟ್ರೀಯ ವೇದಾಂತ ಸಮ್ಮೇಳನ ಇತ್ಯಾದಿ ನಡೆಯಲಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಐದು ರಾಜ್ಯಗಳ ಮುಖ್ಯಮಂತ್ರಿಗಳಿಗೆ (ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ) ಆಹ್ವಾನ ನೀಡಲಾಗಿದೆ.
ಪಾದಯಾತ್ರೆ ಸಂಚರಿಸುವ ಮಾರ್ಗದಲ್ಲಿನ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಪರಿಸರ, ಧರ್ಮ, ಸಾವಯವ ಕೃಷಿ ಹಾಗೂ ಆರೋಗ್ಯ ಜಾಗೃತಿಗಾಗಿ ವಿವಿಧ ಕಾರ್ಯ ಕ್ರಮ ಸೇರಿದಂತೆ ಇಷ್ಟಲಿಂಗ ದೀಕ್ಷೆ ನೀಡುವ, ದುಶ್ಚಟಗಳ ಭಿಕ್ಷೆ ಬೇಡುವ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಗೆ ಬೇಕಾದ ಎಲ್ಲ ರೀತಿಯ ಮುಂಜಾ ಗ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶ್ರೀಶೈಲ ಜಗದ್ಗುರುಗಳು ತಿಳಿಸಿದರು.
ಪಾದಯಾತ್ರೆ ಸಾಗುವ 560 ಕಿ.ಮೀ ದಾರಿಯ ಎರಡೂ ಬದಿಯಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ. ಪುಣೆ ನಗರದಲ್ಲಿ ಕರ್ನಾಟಕದ ರಾಚಯ್ಯ ಹಿರೇಮಠ ಎಂಬ ಗಾರ್ಡನ್ ಇಂಜಿನಿಯರ್ ಇದ್ದಾರೆ. ಅರಣ್ಯ ಇಲಾಖೆ ಹೊರತುಪಡಿಸಿ, ಇನ್ನುಳಿದೆಡೆ ಸಸಿ ನೆಡುವುದಕ್ಕಾಗಿ ಸಸಿ, ಸಲಕರಣೆಗಳು ಹಾಗೂ ವಾಹನ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಿದ್ದು, ಅವರ ತಂಡ ನಮ್ಮ ಪಾದಯಾತ್ರೆ ಜತೆ ಜತೆಗೆ ಶ್ರೀಶೈಲದ ವರೆಗೂ ಆಗಮಿಸಲಿದ್ದಾರೆ ಎಂದು ಶ್ರೀಗಳು ಹೇಳಿದರು.
ಕರ್ನಾಟಕದ ಗತವೈಭವ ಸಾರುವ ನಿಟ್ಟಿನಲ್ಲಿ ಕರ್ನಾಟಕದಿಂದ ಶ್ರೀಶೈಲಕ್ಕೆ ಬಂದಿದ್ದ ಮಹಾತ್ಮರ ಮೂರ್ತಿಗಳನ್ನು ನಿರ್ವಿುಸಲಾಗಿದೆ. ಎರಡು ದೊಡ್ಡ ಮಂಟಪಗಳಲ್ಲಿ ಮೂರ್ತಿಗಳನ್ನು ಕುಳ್ಳಿರಿಸಿಕೊಂಡು ಅವರನ್ನೇ ಕರೆದುಕೊಂಡು ತೆರಳುತ್ತಿದ್ದೇವೆ ಎಂಬ ಭಾವದಿಂದ ಸರ್ವಾಲಂಕೃತ 6 ವಾಹನಗಳಲ್ಲಿ ಮೆರವಣಿಗೆ ಮೂಲಕ ಸಾಗಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ, ಶ್ರೀಶೈಲ ಗುರುಕುಲದಲ್ಲಿ ವ್ಯಾಸಂಗ ಮಾಡಿದ್ದ ದೇವರ ದಾಸಿಮಯ್ಯ, ಅಲ್ಲಮಪ್ರಭು, ಅಕ್ಕಮಹಾದೇವಿ, ಸೊಲ್ಲಾಪುರದ ಸಿದ್ದರಾಮೇಶ್ವರ, ಹೇಮರಡ್ಡಿ ಮಲ್ಲಮ್ಮ, ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಪಂಡಿತಾರಾಧ್ಯರ ಭವ್ಯ ಮೂರ್ತಿಗಳಿರುತ್ತವೆ. ಶ್ರೀಶೈಲದ ಹೆಗ್ಗುರುತು, ವೈಭವ ಮತ್ತು ಈ ಮಹನೀಯರ ಅವಿನಾಭಾವ ಸಂಬಂಧ ತಿಳಿಸುವುದು ಇದರ ಉದ್ದೇಶ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಆರೋಗ್ಯದ ದೃಷ್ಟಿಯಿಂದ ಆಂಬುಲೆನ್ಸ್, ವೈದ್ಯರ ತಂಡ ಹಾಗೂ ಸೂಕ್ತ ಔಷಧೋಪಚಾರ ಹಾಗೂ ಕುಡಿಯುವ ನೀರಿನ ಟ್ಯಾಂಕರ್​ಗಳ ವ್ಯವಸ್ಥೆಯಿದೆ. ಭಕ್ತರ ಸರಕು ಸಾಗಿಸಲು ಗೂಡ್ಸ್ ವಾಹನಗಳಿರುತ್ತವೆ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು.
ಶ್ರೀಶೈಲ ಕ್ಷೇತ್ರವನ್ನು ‘ಧಾರ್ವಿುಕ ತ್ರಿವೇಣಿ ಸಂಗಮ’ ಎಂದು ಕರೆಯಲಾಗುತ್ತದೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಮಲ್ಲಿಕಾರ್ಜುನ ಲಿಂಗ, 18 ಶಕ್ತಿಪೀಠಗಳಲ್ಲೊಂದಾದ ಶ್ರೀ ಭ್ರಮರಾಂಬಾ ದೇವಾಲಯ ಮತ್ತು ಸನಾತನ ಪಂಚಪೀಠಗಳಲ್ಲೊಂದಾದ ಶ್ರೀಮದ್ಗಿರಿರಾಜ ಸೂರ್ಯ ಸಿಂಹಾಸನ ಜಗದ್ಗುರು ಪೀಠ ಇರುವ ಪವಿತ್ರ ಕ್ಷೇತ್ರ. ವ್ಯಾಸ ಮಹರ್ಷಿಗಳು ಸ್ಕಂದ ಪುರಾಣದ ಶ್ರೀಶೈಲ ಖಂಡದಲ್ಲಿ ಕ್ಷೇತ್ರದ ಮಹಿಮೆಯನ್ನು ವಿಸõತವಾಗಿ ವರ್ಣಿಸಿದ್ದಾರೆ. ‘ಶ್ರೀಶೈಲ ಶಿಖರೇ ದೃಷ್ಟೇ ಪುನರ್ಜನ್ಮ ನ ವಿದ್ಯತೆ’-ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಮಂದಿರದ ಶಿಖರ ದರ್ಶನ ಮಾಡಿದರೂ ಸಾಕು ಮನುಷ್ಯನಿಗೆ ಪುನರ್ಜನ್ಮವಿಲ್ಲದೇ ಮೋಕ್ಷ ಪಡೆಯುತ್ತಾನೆ- ಎಂದು ವ್ಯಾಸರು ವಿವರಿಸಿದ್ದಾರೆ. ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಮಹಾಸ್ವಾಮಿಗಳು ಕಳೆದ 12 ವರ್ಷಗಳಲ್ಲಿ ಪೀಠದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದು, ಆಂಧ್ರಪ್ರದೇಶ ಸರ್ಕಾರ ಮಂಜೂರು ಮಾಡಿದ 10 ಎಕರೆ ಭೂಮಿಯಲ್ಲಿ ವಿವಿಧ ಸಾಮಾಜಿಕ, ಧಾರ್ವಿುಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಆದರೂ ಮಾಡಿರುವ ಕೆಲಸಗಳಿಗಿಂತ ಮಾಡಬೇಕಾದ ಕಾರ್ಯ ಬಹಳಷ್ಟಿದೆ ಎಂಬ ಭಾವನೆ ಹೊಂದಿದ್ದಾರೆ.
ಸುಕ್ಷೇತ್ರ ಯಡೂರ ಶ್ರೀವೀರಭದ್ರೇಶ್ವರ ಸನ್ನಿಧಾನದಲ್ಲಿ ಪಾದಯಾತ್ರೆ ಆರಂಭವಾಗಿ ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧ ಗ್ರಾಮ, ಪಟ್ಟಣಗಳ ಮೂಲಕ ತೆಲಂಗಾಣ ಮತ್ತು ಆಂಧ್ರಪದೇಶವನ್ನು ಪ್ರವೇಶ ಮಾಡಿ ಅಂತಿಮವಾಗಿ ನ.30ರಂದು ಶ್ರೀಶೈಲ ಕ್ಷೇತ್ರ ತಲುಪಲಿದೆ. ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭ್ರಮರಾಂಬಾ ಸಮೇತ ಜಗದ್ಗುರು ಪಂಡಿತಾರಾಧ್ಯರ ದರ್ಶನ ಮಾಡಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಸಂಪನ್ನಗೊಳ್ಳಲಿದೆ. ಪ್ರತಿ ದಿನ ಬೆಳಗ್ಗೆ 10 ಕಿ.ಮೀ ಸಂಜೆ 10 ಕಿ.ಮೀ ಸೇರಿ ನಿತ್ಯ 20 ಕಿ.ಮೀ ದೂರ ಪಾದಯಾತ್ರೆ ಸಾಗಲಿದೆ. ಬಳಿಕ 42 ದಿನಗಳ ಕಾಲ ತಪೋನುಷ್ಠಾನ ನಡೆಯಲಿದೆ. ಒಟ್ಟು 80 ದಿನಗಳ ಕಾಲ(ಅ.29ರಿಂದ 2023ರ ಜ.15ರವರೆಗೆ) ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fifteen =
Remember me
