ಬೆಂಗಳೂರು: ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಬರನಿರ್ವಹಣೆ ಕೈಪಿಡಿ 2020 ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿಯೇ ಬರಗಾಲ ಘೋಷಣೆ ವಿಳಂಬವಾಗಿದೆ. ಈ ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬರ ಘೋಷಣೆಗೆ ಅಗತ್ಯವಾಗಿರುವ  ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹಿಂದೆಯೇ ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯ ವರೆಗೆ ಉತ್ತರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬರಘೋಷಣೆಯ ಮಾನದಂಡಗಳ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡಹೇರಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ಆ ಕೆಲಸವನ್ನು ಮಾಡದೆ ರಾಜ್ಯದ ಬರ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರದ ವಿರುದ್ದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ದೇಶಾದ್ಯಂತ ಶೇ.10 ಮಳೆಯ ಕೊರತೆಯನ್ನೂ ಸಹ ಬರದ ವರ್ಷ ಎಂದು ತೀರ್ಮಾನಿಸಿ ಘೋಷಿಸುತ್ತದೆ. ಆದರೆ, ಮಾನದಂಡಗಳ ಪ್ರಕಾರ ರಾಜ್ಯಗಳು ಬರ ಘೋಷಣೆಯನ್ನು ಮಾಡಬೇಕಾದರೆ ಮಳೆಯ ವ್ಯತ್ಯಯ ಸೂಚ್ಯಂಕವು ಶೇ.60ಕ್ಕಿಂತ ಹೆಚ್ಚಿರಬೇಕು ಎನ್ನಲಾಗಿದೆ. ನಾವು ಈ ಎರಡರ ನಡುವಿನ ಅಂತರವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಮಳೆಯ ವ್ಯತ್ಯಯ ಸೂಚ್ಯಂಕವು ಶೇ.20ರಿಂದ ಶೇ.59ರವರೆಗೆ ಇದ್ದರೂ ಅದು ಬರ ಘೋಷಣೆಗೆ ಅಗತ್ಯವಾದ ಕ್ರಿಯಾಕಾರಣ (ಟ್ರಿಗರ್‌) ಅಂಶವೆಂದು ಪರಿಗಣಿಸಬೇಕು ಎಂದಿದ್ದಾರೆ.
ಶುಷ್ಕ ಅಥವಾ ಒಣ ಹವೆಯ ವಿಚಾರದಲ್ಲಿಯೂ ಕೈಪಿಡಿಯಲ್ಲಿ ಕಠಿಣವಾದ ನಿಯಮಾವಳಿ ಇದೆ. ಬರ ಘೋಷಿಸಲು ಮೂರು ವಾರಗಳ ಒಣಹವೆಯನ್ನು ಸೂಚ್ಯಂಕವಾಗಿ ಪರಿಗಣಿಸಲಾಗಿದೆ. ವಿಪರ್ಯಾಸವೆಂದರೆ, ಎರಡು ಮೂರು ವಾರಗಳ ಒಣಹವೆ ಕೂಡ ಬೆಳೆಯ ಮೇಲೆ ಗಂಭೀರ ದುಷ್ಪರಿಣಾಮ ಉಂಟು ಮಾಡಿ ಸರಿಪಡಿಸಲಾಗದ ಬೆಳೆಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಮಳೆ ಕುರಿತಾದ ಸೂಚ್ಯಂಕದಲ್ಲಿ ಒಣಹವೆಯ ಅವಧಿಯನ್ನು ಎರಡು ವಾರಗಳಿಗಿಂತ ಕಡಿಮೆ ಎಂದು ಪರಿಗಣಿಸಬೇಕು.
ಬರ ಘೋಷಣೆಯ ವಿಳಂಬಕ್ಕೆ ಕಾರಣವಾಗುವ ಕೈಪಿಡಿಯಲ್ಲಿರುವ ಮತ್ತೊಂದು ಪ್ರಮುಖ ಮಾನದಂಡವೆಂದರೆ ಅದು ರಾಜ್ಯ ಸರ್ಕಾರವು ‘ಇನ್ನು ಯಾವುದೇ ಬಿತ್ತನೆ ಚಟುವಟಿಕೆ’ ನಡೆಯುವುದಿಲ್ಲ ಎಂದು ಬೆಳೆ ಹಂಗಾಮಿನ ವೇಳೆ ಕೇಂದ್ರ ಸರ್ಕಾರಕ್ಕೆ ಕಡ್ಡಾಯವಾಗಿ ಪ್ರಮಾಣಪತ್ರ ಸಲ್ಲಿಸಬೇಕಿರುವುದು. ಇದು ಇನ್‌ಪುಟ್‌ ಸಬ್ಸಿಡಿ ಪರಿಕಲ್ಪನೆಗೆ ವ್ಯತಿರಿಕ್ತವಾಗಿದೆ. ಇನ್‌ಪುಟ್‌ ಸಬ್ಸಿಡಿ ಪರಿಕಲ್ಪನೆಯು ತಕ್ಷಣದ ಪರಿಹಾರ ನೀಡುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸಬೇಕು ಎನ್ನುತ್ತದೆ. ಆದರೆ, ಮೇಲೆ ಹೇಳಿದ ಕೇಂದ್ರದ ನಿಯಮಾವಳಿಯಿಂದಾಗಿ ರಾಜ್ಯ ಸರ್ಕಾರವು ಬರ ಘೋಷಣೆ ಮಾಡಿ ತಕ್ಷಣ ಪರಿಹಾರಕ್ಕೆ ಮುಂದಾಗಲು ಸಾಧ್ಯವಾಗುವುದಿಲ್ಲ.
ಬರ ಘೋಷಣೆಗೆ ಪರಿಗಣಿಸಲಾಗುವ ಇತರ ಸೂಚ್ಯಂಕಗಳಾದ ಅಂತರ್ಜಲ ಮಟ್ಟ, ಜೈವಿಕ ಪರಿಸರದ (ಬಯೋಮಾಸ್‌) ಸೂಚ್ಯಂಕಗಳು ಸಹ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಅಂತರ್ಜಲದ ಮಟ್ಟ ಕುಸಿಯಲು ಅಥವಾ ಹೆಚ್ಚಳವಾಗಲು ಕನಿಷ್ಠ 2-3 ವಾರಗಳ ಅವಧಿಯ ಅಗತ್ಯವಿದೆ. ಹಾಗಾಗಿ ಇದರ ಪರಿಗಣನೆಯ ವೇಳೆ ವಿವೇಚನೆ ಅಗತ್ಯ. ಅದೇ ರೀತಿ, ಉಪಗ್ರಹ ಆಧರಿತ ಎನ್‌ಡಿವಿಐ ಸೂಚ್ಯಂಕವು ಕಳೆಯನ್ನೂ ಸಹ ಹಸಿರು ಜೈವಿಕ ಪರಿಸರವೆಂದು ಪರಿಗಣಿಸುವ ಸಾಧ್ಯತೆ ಇದೆ. ಈ ಅಂಶಗಳು ಬರ ಘೋಷಣೆಗೆ ಅಗತ್ಯವಾದ ಸೂಚ್ಯಂಕಗಳ ಪರಿಶೀಲನೆಯಲ್ಲಿ ನೇತ್ಯಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳೆಹಾನಿ ಸಹಾಯಧನಕ್ಕೆ ಅರ್ಹತೆ ಪಡೆಯಲು ಬರನಿರ್ವಹಣೆ ಕೈಪಿಡಿ 2016 ರಲ್ಲಿನ ನಿಯಮಗಳು ಹಾಗೂ ಎಸ್‌ ಡಿ ಆರ್‌ ಎಫ್‌ / ಎನ್‌ ಡಿ ಆರ್‌ ಎಫ್‌‌ ನಿಯಮಾವಳಿಗಳನ್ನು ಸಮೀಕರಿಸುವ ಅಗತ್ಯವಿದೆ. ಬರ ನಿರ್ವಹಣೆ ಕೈಪಿಡಿಯ ಮಾನದಂಡದಡಿ ಬೆಳೆಹಾನಿ ಸಹಾಯಧನಕ್ಕೆ ಅರ್ಹತೆಗೆ ಪಡೆಯಲು ಶೇ. 50  ರಷ್ಟು ಬೆಳೆಹಾನಿ ಪ್ರಮಾಣ ಅಗತ್ಯವಿರುತ್ತದೆ, ಈ ಪ್ರಮಾಣ ವಿಪತ್ತಿನ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಎಸ್ ‌ಡಿ ಆರ್ ‌ಎಫ್‌/ ಎನ್‌ ಡಿ ಆರ್‌ ಎಫ್‌ ಮಾನದಂಡಗಳ ಅಡಿ ಸೂಚಿಸಿರುವ ಶೇ.33 ಬೆಳೆ ನಾಶಕ್ಕೆ ವ್ಯತಿರಿಕ್ತವಾಗಿದೆ. ಹಾಗಾಗಿ, ಕೈಪಿಡಿಯಲ್ಲಿನ ಮಾನದಂಡವನ್ನು ಇದಕ್ಕೆ ಹೊಂದಾಣಿಕೆ ಮಾಡುವುದು ಸೂಕ್ತವಾಗಿದೆ.
ಬರದಿಂದ ಉಂಟಾಗುವ ಸಂಕಷ್ಟವನ್ನು ಎದುರಿಸುವಲ್ಲಿ ವಿಮೆಯ ಪಾತ್ರವು ಮಹತ್ವದ್ದಾಗಿದೆ. ಪ್ರಸಕ್ತ ವ್ಯವಸ್ಥೆಯಲ್ಲಿ ತಮ್ಮ ಹಕ್ಕಿನ ವಿಮೆಯ ಹಣವನ್ನು ಪಡೆಯುವಲ್ಲಿ ರೈತರು ಅನೇಕ ಸಂದರ್ಭಗಳಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕೆ ಕಾರಣ ಜೋಡಣೆಯಿಲ್ಲದೆ ಚದುರಿರುವ ಪ್ರಸಕ್ತ ವ್ಯವಸ್ಥೆ. ಇನ್‌ಪುಟ್‌ ಸಬ್ಸಿಡಿಯ ವಿತರಣೆಯನ್ನು ವಿಮಾ ಕಂಪೆನಿಗಳು ಬೆಳೆ ನಾಶವಾಗಿರುವ ಸಂಬಂಧ ವಿಮಾ ಪರಿಹಾರ ನೀಡಲು ಪುರಾವೆಯಾಗಿ ಪರಿಗಣಿಸಬೇಕು. ಹೀಗೆ ವಿಮಾ ಪರಿಹಾರ ಹಾಗೂ ಇನ್‌ಪುಟ್‌ ಸಬ್ಸಿಡಿಗಳನ್ನು ಜೋಡಿಸುವುದರಿಂದ ರೈತರಿಗೆ ಸಂಕಷ್ಟದ ಸಮಯದಲ್ಲಿ ಅತ್ಯಗತ್ಯವಾದ ಆರ್ಥಿಕ ಬೆಂಬಲವು ತ್ವರಿತವಾಗಿ ಒದಗಿಸಲು ಸಾಧ್ಯವಾಗುತ್ತದೆ. ಇದರಿಂದ ವಿಮಾ ಪರಿಹಾರಕ್ಕೆ ಸಂಬಂಧಿಸಿದ ಸಂಕೀರ್ಣ ಪ್ರಕ್ರಿಯೆಯಲ್ಲಿ ಸರಳತೆ ಸಾಧ್ಯವಾಗುವುದಲ್ಲದೆ, ಪಾರದರ್ಶಕತೆಯೂ ಮೂಡುತ್ತದೆ. ವಿಮೆಯ ಪರಿಹಾರ ದೊರೆಯುವಲ್ಲಿನ ವಿಳಂಬ ಕಡಿಮೆಯಾಗುತ್ತದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 2 =
Remember me
