ಬೆಂಗಳೂರು:ಮಳೆಯ ತೀವ್ರ ಕೊರತೆ ಪರಿಣಾಮ ಕರುನಾಡಿನ ಮುಕ್ಕಾಲು ಭಾಗಕ್ಕೆ ಬರದ ಕಾಮೋಡ ಆವರಿಸಿದ್ದು, ಮುಂಬರುವ ಕಠಿಣ ದಿನಗಳನ್ನು ಎದುರಿಸಲು ರಾಜ್ಯ ಸರ್ಕಾರ ತಾಲೀಮು ಆರಂಭಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಪ್ರಕೃತಿ ವಿಕೋಪ ನಿರ್ವಹಣೆ ಕುರಿತ ಸಂಪುಟ ಉಪ ಸಮಿತಿ ಸಭೆ ಬುಧವಾರ ನಡೆದಿದ್ದು, ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ ನಡೆಸಿದ್ದ ತಳಮಟ್ಟದ ಸಮೀಕ್ಷೆ ವರದಿ ಆಧರಿಸಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಜತೆಗೆ ಬರ ಘೋಷಣೆ ಬಳಿಕ ಮುಂದೆ ಪರಿಸ್ಥಿತಿ ನಿರ್ವಹಣೆಗೆ ಹಲವು ಶಿಫಾರಸುಗಳನ್ನು ಮಾಡಿದ್ದು, ತಕ್ಷಣ ಜಾರಿ ಮಾಡುವ ನಿಟ್ಟಿನಲ್ಲಿಯೂ ಸಲಹೆ ನೀಡಿದೆ. ಗುರುವಾರ ಸಂಪುಟ ಸಭೆ ನಡೆಯಬೇಕಿತ್ತು. ವಿವಿಧ ಕಾರಣದಿಂದ ಈ ವಾರ ಸಂಪುಟ ಸಭೆ ನಡೆದಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಂಪುಟ ಉಪ ಸಮಿತಿ ಸಭೆಯ ಶಿಫಾರಸು ಆಧರಿಸಿ ಗುರುವಾರ ಬರಪೀಡಿತ ತಾಲೂಕುಗಳ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಬುಧವಾರ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಸಚಿವ ಕೃಷ್ಣ ಬೈರೇಗೌಡ, ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಮತ್ತು ಬೆಳೆ ಪರಿಶೀಲನೆ (ಗ್ರೌಂಡ್ ಟ್ರುತಿಂಗ್) ನಡೆಸಲಾಗಿದ್ದು, ಕೇಂದ್ರದ ಮಾರ್ಗಸೂಚಿಯಂತೆ 161 ತಾಲೂಕುಗಳು ಬರ ಘೊಷಣೆಗೆ ಅರ್ಹವಾಗಿವೆ. ಇದಲ್ಲದೆ, 34 ತಾಲೂಕುಗಳಲ್ಲಿ ಸ್ಥಿತಿ ಗಂಭೀರವಾಗಿದ್ದು, ಕೇಂದ್ರ ಮಾರ್ಗಸೂಚಿ ಅನ್ವಯಿಸದಿದ್ದರೂ ಈ ತಾಲೂಕುಗಳನ್ನೂ ಪಟ್ಟಿಗೆ ಸೇರಿಸಲಾಗಿದೆ.
ಕಳೆದ ವಾರ ನಡೆದ ನಾಲ್ಕನೇ ಸಂಪುಟ ಉಪ ಸಮಿತಿ ಸಭೆಯಲ್ಲೇ 62 ತಾಲೂಕುಗಳು ಕೇಂದ್ರ ಮಾರ್ಗಸೂಚಿಯಂತೆ ಬರ ಘೊಷಣೆಗೆ ಅರ್ಹ ಎಂಬ ತೀರ್ವನಕ್ಕೆ ಬರಲಾಗಿತ್ತು. ಆದರೂ ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಇದ್ದ ಕಾರಣಕ್ಕೆ 134 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಪರಿಶೀಲನೆಗೆ ಸೂಚಿಸಲಾಗಿತ್ತು. ಎಲ್ಲಾ ತಾಲೂಕುಗಳ ವರದಿಯೂ ಮಂಗಳವಾರ ಕೈಸೇರಿದ್ದು ಇದರ ಆಧಾರದ ಮೇಲೆ ಬರ ತಾಲೂಕುಗಳ ಪಟ್ಟಿ ಸಿದ್ದಪಡಿಸಲಾಗಿದೆ ಎಂದು ವಿವರಿಸಿದರು.
ಉಳಿದ ಕಡೆಯೂ ಭಾಗಶಃ:ಮಾನದಂಡದ ಪ್ರಕಾರ 195 ತಾಲೂಕನ್ನು ಬರ ಪೀಡಿತ ಎಂದು ಖಚಿತಪಡಿಸಿಕೊಳ್ಳಲಾಗಿದೆ. ಇದಲ್ಲದೆ 40 ತಾಲೂಕುಗಳಲ್ಲಿ ಭಾಗಶಃ ಬರದ ಸ್ಥಿತಿ ಇದೆ. ಹೀಗಾಗಿ 15 ದಿನಗಳ ನಂತರ ಸ್ಯಾಟಲೈಟ್ ಇಮೇಜ್ ಆಧರಿಸಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆಗೆ ಸೂಚಿಸಲಾಗುವುದು.
ವೈಜ್ಞಾನಿಕ ಸಂಶೋಧನೆ ವಿವಿಗಳಿಗೆ ಹೊಣೆ:ಬರದಿಂದ ಬೆಳೆ ಪರಿಸ್ಥಿತಿಯೂ ಆಶಾದಾಯಕವಾಗಿಲ್ಲ. ಕೆಲವು ಕಡೆ ಬೆಳೆ ಚಿಗುರಿದೆ, ಆದರೆ ಇಳುವರಿ ಬರಲಿದೆಯೇ ಎಂಬ ಖಾತ್ರಿ ಇಲ್ಲ. ಈ ಕಾರಣಕ್ಕೆ ವೈಜ್ಞಾನಿಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯ ಮತ್ತು ಒಂದು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಲಾಗಿದೆ.
ಮತ್ತೊಂದು ಸುತ್ತು:ಅಕ್ಟೋಬರ್ ಕೊನೆಯವರೆಗೆ ಬೆಳೆ ಸಮೀಕ್ಷೆ ನಡೆಸಿ ಬರ ಘೊಷಣೆ ಮಾಡಲು ಅವಕಾಶ ಇದೆ. ಹೀಗಾಗಿ ಈಗ ತಿಳಿಸಿರುವ 195 ತಾಲೂಕುಗಳೇ ಅಂತಿಮವಲ್ಲ. ಮುಂದಿನ ದಿನಗಳಲ್ಲಿ ಬೆಳೆ ಸಮೀಕ್ಷೆ ಆಧರಿಸಿ ಮತ್ತೊಂದಿಷ್ಟು ತಾಲೂಕುಗಳನ್ನೂ ಬರ ಪೀಡಿತ ಎಂದು ಘೊಷಿಸಲಾಗುವುದು. ಈ ಬಗ್ಗೆ ಕೇಂದ್ರಕ್ಕೆ ಮತ್ತೊಂದು ಮನವಿ ಸಲ್ಲಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು. ಕೇಂದ್ರದ ಮಾರ್ಗಸೂಚಿಗೆ ಅನ್ವಯಿಸದ 40 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಇದೆ. ಆದರೆ ಸ್ಯಾಟಲೈಟ್ ಇಮೇಜ್​ನಲ್ಲಿ ತೇವಾಂಶದ ಹಸಿರು ಹೊದಿಕೆ ಕಂಡುಬಂದಿದೆ. ಕೇಂದ್ರ ಸರ್ಕಾರ ಬರ ಘೊಷಣೆಗೆ ಮುನ್ನ ಈ ಸ್ಯಾಟಲೈಟ್ ಇಮೇಜ್ ಪರಿಶೀಲಿಸುವುದು ವಾಡಿಕೆ. ಹೀಗಾಗಿ ಈ ಇಮೇಜ್​ಗಳು ಈಗಲೇ ಬರ ಘೊಷಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಪ್ರಧಾನಿ ವಿರುದ್ಧ ಸಚಿವರ ಆಕ್ರೋಶ:ಕೇಂದ್ರ ಮಾರ್ಗಸೂಚಿಗಳು ಬರ ಘೊಷಣೆಗೆ ಅನುಕೂಲಕರವಾಗಿಲ್ಲ. ಹೀಗಾಗಿ ಹಳೆಯ ಮಾರ್ಗಸೂಚಿಯನ್ನೇ ಅನುಸರಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಆದರೆ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಯಾವಕಾಶ ಕೋರಿದ್ದಾರೆ. ಆದರೆ, ಅವಕಾಶ ಏಕೆ ನೀಡುತ್ತಿಲ್ಲವೆಂಬುದು ಗೊತ್ತಾಗುತ್ತಿಲ್ಲ. ಪರಿಣಾಮ ಬರ ಘೊಷಣೆ ಕಗ್ಗಂಟಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಮಳೆ ಮುನ್ಸೂಚನೆ: ಸೆಪ್ಟೆಂಬರ್​ 12ರಿಂದ 20ರ ವರೆಗೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾದರೆ, ಉತ್ತರ ಮತ್ತು ದಣ ಒಳನಾಡಿನ ಭಾಗದಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್​ ಜಾರಕಿಹೊಳಿ, ಕೃಷಿ ಸಚಿವ ಚಲುವರಾಯಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್​ ರ್ಖಗೆ, ಸಹಕಾರ ಸಚಿವ ಎನ್​ ರಾಜಣ್ಣ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್​ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.
ತಿಂಗಳಾಂತ್ಯಕ್ಕೆ ಮನವಿ:ಬರ ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಸಮಗ್ರ ವರದಿ ಸಿದ್ಧವಾಗಲಿದೆ. ಬಳಿಕ ದೆಹಲಿಗೆ ತೆರಳಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ.
1. ಬರ ಘೋಷಿತ ಪ್ರತಿ ತಾಲೂಕಲ್ಲೂ ಟಾಸ್ಕ್ ಫೋರ್ಸ್ ಘೋಷಿಸ ಲಾಗುತ್ತದೆ. ತಕ್ಷಣದ ನಿರ್ಧಾರವನ್ನು ಸ್ಥಳೀಯವಾಗಿಯೇ ಕೈಗೊಳ್ಳಲು ಇದು ಅಧಿಕಾರ ಹೊಂದಿರಲಿದೆ.
2. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಹಣಕಾಸನ್ನು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಜಿಪಂ ನೀಡಲಿದೆ. ಟ್ಯಾಂಕರ್, ಬೋರ್​ವೆಲ್ ಬಳಕೆಗೆ ಅವಕಾಶ.
3. ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ 100 ದಿನಗಳ ಮಾನವ ದಿನವನ್ನು 150 ದಿನಕ್ಕೆ ಹೆಚ್ಚಿಸಲಾಗುವುದು. ಈ ಸಂಬಂಧ ಶೀಘ್ರ ಆದೇಶ ಹೊರಬೀಳಲಿದೆ.
4. ಅಗತ್ಯ ಮೇವಿನ ದಾಸ್ತಾನಿಗೆ ಸೂಚಿಸಲಾಗಿದೆ. ರೈತರಿಗೆ ಮೇವಿನ ಬಿತ್ತನೆ ಬೀಜ ಉಚಿತವಾಗಿ ವಿತರಿಸಲು 20 ಕೋಟಿ ರೂ. ನೀಡಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 10 =
Remember me
