ಬೆಂಗಳೂರು:ಪ್ರಸಕ್ತ ವರ್ಷದಲ್ಲಿ ಹೇಳಿಕೊಳ್ಳುವಷ್ಟೂ ಮುಂಗಾರು ಮಳೆ ಸುರಿಯದ ಪರಿಣಾಮ ರಾಜ್ಯದ ಶೇ.70 ಪ್ರದೇಶಗಳಿಗೆ ಬರ ಸಿಡಿಲು ಬಡಿದಿದೆ. ಇದರಿಂದಾಗಿ ರೈತಾಪಿ ವರ್ಗ ದಯನೀಯ ಪರಿಸ್ಥಿತಿ ಎದುರಿಸುವಂತಾಗಿದೆ. ಬಾಡಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಅನ್ನದಾತ ಹರಸಾಹಸ ಪಡುವಂತಾಗಿದೆ.
ರಾಜ್ಯದ 18 ಜಿಲ್ಲೆಗಳಿಂದ ಒಟ್ಟು 132 ತಾಲೂಕುಗಳಲ್ಲಿ ತೀವ್ರವಾಗಿ ಮಳೆ ಕೊರತೆ ಉಂಟಾಗಿದೆ. 13 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆ ಬಿದ್ದಿದರೂ ಜೂನ್ ಮತ್ತು ಆಗಸ್ಟ್‌ನಲ್ಲಿ ಮಳೆ ಕುಂಠಿತಗೊಂಡಿದೆ. ಈ ಬಾರಿ ಯಾವುದೇ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯೇ ಸುರಿದಿರುವ ನಿರ್ದೇಶನಗಳಿಲ್ಲ. ಇದರಿಂದಾಗಿ ಅನ್ನದಾತನಿಗೆ ಸಂಕಷ್ಟ ಬಂದೊರಗಿದೆ. ಬರುವ ದಿನಗಳಲ್ಲಿ ಮಳೆ ಬಾರದಿದ್ದರೆ ಆಹಾರ ಉತ್ಪಾದನೆ ಕುಂಠಿತಗೊಂಡು ಬೆಲೆ ಏರಿಕೆ ಬಿಸಿಯೂ ತಟ್ಟಲಿದೆ. ಜತೆಗೆ ಕುಡಿಯುವ ನೀರುಗಾಗಿ ಹಾಹಾಕಾರವೂ ಶುರುವಾಗಲಿದೆ. ಜಾನುವಾರಿಗಳಿಗೂ ಕುಡಿಯುವ ನೀರಿಲ್ಲದೆ ಸಂಕಷ್ಟ ಎದುರಾಗಲಿದೆ.ಮಳೆ ಅಭಾವದಿಂದ ಮಳೆಗಾಲದಲ್ಲಿಯೂ ಬೇಸಿಗೆ ವಾತಾವರಣ ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗತೊಡಗಿದೆ. ಜೂನ್‌ನಲ್ಲಿ ಮಳೆ ಕೈಕೊಟ್ಟರೆ, ಜುಲೈ 2ವಾರದಲ್ಲಿ ರಾಜ್ಯದಲ್ಲಿ ಮಳೆ ಅಬ್ಬರಿಸಿತ್ತು. ಆ.1ರಿಂದ ಆ.25ರವರೆಗೆ ಬೆರಳಣಿಕೆ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಮಳೆಯೇ ಸುರಿದಿಲ್ಲ.
ರಾಜ್ಯಕ್ಕೆ ಈ ಬಾರಿ ತಡವಾಗಿ ಮುಂಗಾರು ಪ್ರವೇಶಿಸಿತ್ತು. ಆರಂಭದಲ್ಲೇ ಮುಂಗಾರು ದುರ್ಬಲಗೊಂಡಿತ್ತು. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಮೂರ‌್ನಾಲ್ಕ ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿದೆ. 2020 ಮತ್ತು 2022ರ ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. 2021ರ ಜೂನ್‌ನಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆ ಸುರಿದಿದೆ. ಅಲ್ಲದೆ, ಮೂರು ವರ್ಷಗಳಿಂದ ಕರಾವಳಿ,ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗುತ್ತಿರವುದು ಆತಂಕ ಮೂಡಿಸಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿದ್ದರೂ ಸೂಕ್ತ ಸಮಯದಲ್ಲಿ ಮಳೆ ಬಂದಿಲ್ಲ. ಈ ಎಲ್ಲ ಅಂಶವನ್ನು ಗಮನಿಸಿದರೆ ಮಳೆ ದಿನಗಳಲ್ಲಿ ಬದಲಾವಣೆ ಆಗುತ್ತಿದೆ ಎಂದು ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾವ್ಯಾವ ಜಿಲ್ಲೆಗಳಲ್ಲಿ ಕೊರತೆ?ಬೆಂಗಳೂರು ನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಬಳ್ಳಾರಿ, ವಿಜಯನಗರ, ಕೊಪ್ಪಳ, ಬಾಗಲಕೋಟೆ, ಹಾವೇರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶೇ.50ರಷ್ಟು ಮಳೆ ಕೊರತೆ ಉಂಟಾಗಿದೆ. ಬೆಂ.ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್, ಬೆಳಗಾವಿ, ವಿಜಯಪುರ, ಗದಗ, ಧಾರವಾಡ ಹಾಗೂ ಉತ್ತರ ಕನ್ನಡದಲ್ಲಿ ಸರಾಸರಿ ಶೇ.10ರಿಂದ ಶೇ.20ರವರೆಗೆ ಮಳೆ ಕುಂಠಿತವಾಗಿದೆ. ರಾಜ್ಯದ ಒಂದೇ ಒಂದು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿಲ್ಲ.
ಇದನ್ನೂ ಓದಿ:
ದೇವರೇ ಕಾಪಾಡಬೇಕು:ಕೊಡಗು, ಮೈಸೂರು ಹಾಗೂ ಮಂಡ್ಯದಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಿದೆ. ಆದರೂ ರಾಜ್ಯ ಸರ್ಕಾರವು ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿದೆ. ತಮಿಳುನಾಡು ವಾದಕ್ಕೆ ಪ್ರತಿರೋಧ ತೋರದೆ ನೀರು ಬಿಟ್ಟಿದ್ದಕ್ಕೆ ಈಗಾಗಲೇ ಹಳೆಯ ಮೈಸೂರು ಭಾಗದ ರೈತರಿಂದ ಆಕ್ರೋಶ ಭುಗಿಲೆದ್ದಿದೆ. ದಿನದಿಂದ ದಿನಕ್ಕೆ ಕೆಆರ್‌ಎಸ್ ಬರಿದಾಗುತ್ತಿದೆ. ಇಂಥ ವಿಷಮ ಪರಿಸ್ಥಿತಿ ಇರುವುದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ರೈತರ ಸಲಹೆವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಸುರಿಯದಿದ್ದರೆ ಬೆಂಗಳೂರು ಸೇರಿ ಮೈಸೂರು ಭಾಗದ ಜಿಲ್ಲೆಗಳಿಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಲಿದೆ. ಆ ಭಾಗದಲ್ಲಿ ಈಗಾಗಲೇ ಬೆಳೆಗಳು ಒಣಗುತ್ತಿದ್ದು, ಇವುಗಳನ್ನು ಉಳಿಸಿಕೊಳ್ಳಲು ರೈತರು ಸಂಕಷ್ಟಪಡುವಂತಾಗಿದೆ. ಅದೇರೀತಿ, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಮಳೆ ಕೊರತೆಯಿಂದಾಗಿ ಅಲ್ಲಿನ ಪ್ರಮುಖ ಜಲಾಶಯಗಳಲ್ಲಿಯೂ ನೀರು ಬರಿದಾಗುತ್ತಿದೆ.
ಮಳೆ ಕೊರತೆ ವಿವರ:ಜೂ 1ರಿಂದ ಆ.25ರವರೆಗೆ ರಾಜ್ಯಾದ್ಯಂತ 600 ಮಿಮೀ ಮಳೆ ಆಗಬೇಕಿತ್ತು. ಆದರೆ, 488 ಮಿಮೀ ಮಳೆಯಾಗಿದ್ದು, ಶೇ.26 ಕೊರತೆಯಾಗಿದೆ. ಅದೇರೀತಿ, ದಕ್ಷಿಣ ಕರ್ನಾಟಕ ಭಾಗದಲ್ಲಿ 215 ಮಿಮೀ ಮಳೆ ಬದಲಾಗಿ 158 ಮಿಮೀ ಸುರಿದಿದ್ದು, ಶೇ.26 ಮಳೆ ಕುಂಠಿತವಾಗಿದೆ. ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ 317 ಮಿಮೀ ಮಳೆ ಆಗಬೇಕಿತ್ತು. ಆದರೆ, 265 ಮಿಮಿ ಮಳೆಯಾಗಿದ್ದು, ಶೇ.16 ಅಭಾವ ಉಂಟಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ 1,330 ಮಿಮೀ ಮಳೆಯಾಗುವ ಬದಲು ಕೇವಲ 791 ಮಿಮೀ ಬಿದ್ದಿದ್ದು, ಶೇ.41 ಮಳೆ ಕುಂಠಿತವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ 2,697 ಮಿಮೀ ಬದಲು 2,096 ಮಿಮೀ ಮಳೆಯಾಗಿದ್ದು, ಶೇ.22 ವಾಡಿಕೆಗಿಂತ ಕಡಿಮೆ ಸುರಿದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + one =
Remember me
