ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ನಿಗಾವಹಿಸಿದರೂ ಮಾದಕ ವಸ್ತು ಜಾಲಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಹೊಸಹೊಸ ಮಾರ್ಗಗಳಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದೆ. ಕಾನೂನುಬಾಹಿರ ಕೃತ್ಯಗಳಿಗೆ ಬಳಸುವ ಡಾರ್ಕ್​ವೆಬ್​ಸೈಟ್ ಮೂಲಕ ವಿದೇಶಗಳಿಂದ ಮಾದಕ ವಸ್ತು ಭಾರತಕ್ಕೆ ಆಮದಾಗುತ್ತಿದೆ. 2021ರ ವರದಿಗಳ ಪ್ರಕಾರ, 15-64 ವಯೋಮಾನದವರಲ್ಲಿ ಸುಮಾರು 296 ದಶಲಕ್ಷ ಜನರು ಮಾದಕ ವ್ಯಸನದ ಬಳಕೆಯಲ್ಲಿ ತೊಡಗಿದ್ದಾರೆ. ಅರಿವು, ಕಾನೂನುಗಳು ಮತ್ತು ನಿಬಂಧನೆಗಳ ಹೊರತಾಗಿಯೂ ಜನರು ಈ ಮಾದಕ ದ್ರವ್ಯಗಳ ಸೇವನೆಗೆ ಒಳಗಾಗುತ್ತಿದ್ದಾರೆ.
ಈ ಪಿಡುಗಿನ ವಿರುದ್ಧ ಹೋರಾಡಲು ಪ್ರತಿ ವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನ ಆಚರಿಸಲಾಗುತ್ತಿದೆ. ‘ಮಾದಕವಸ್ತುಗಳ ಬಳಕೆಗೆ ಮಾಡುತ್ತಿದ್ದ ಹೂಡಿಕೆಯನ್ನು ಇನ್ನು ಮುಂದೆ ತಡೆಗಟ್ಟುವಲ್ಲಿ ಮಾಡಿರಿ’ ಎಂಬ ಘೋಷಣೆಯೊಂದಿಗೆ ಈ ವರ್ಷದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಣಿಕೆ ವಿರೋಧಿ ಸಪ್ತಾಹ ಆಚರಿಸಲಾಗುತ್ತಿದೆ.
2019ರಿಂದ 2021ರ ಅಂತ್ಯದವರೆಗೆ ಕರ್ನಾಟಕದಲ್ಲಿ ಎನ್​ಸಿಬಿ ಹಾಗೂ ಸ್ಥಳೀಯ ಪೊಲೀಸರು 8500 ಪ್ರಕರಣ ದಾಖಲಿಸಿದ್ದಾರೆ. 12607 ಆರೋಪಿಗಳನ್ನು ಬಂಧಿಸಿದ್ದು, 1482 ಕೆಜಿ ಚರಸ್, 12055 ಕೆಜಿ ಮೆಥಂಪೆಟಮೈನ್ ಹಾಗೂ 32 ಸಾವಿರ ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. ಮಾದಕ ವಸ್ತು ಪೂರೈಕೆ ವೇಳೆ ಸಿಕ್ಕಿಬೀಳುವ ಆರೋಪಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಆಂಧ್ರಪ್ರದೇಶದ ಕರ್ನಲ್, ಅನಂತಪುರ, ತಮಿಳುನಾಡಿನ ಕೃಷ್ಣಗಿರಿ, ಒಡಿಶಾ ಮತ್ತು ಗೋವಾದಿಂದ ಬೆಂಗಳೂರಿಗೆ ಗಾಂಜಾ ರವಾನೆಯಾಗುತ್ತಿದೆ. ಆದರೆ, ಎಲ್​ಎಸ್​ಡಿ, ಎಂಡಿಎಂಎ, ಮಿಯ್ನಾಂ, ಕೊಕೇನ್, ಬ್ರೌನ್​ಶುಗರ್, ಹಾಶಿಸ್​ನಂತಹ ಡ್ರಗ್ಸ್ ವಿದೇಶಗಳಿಂದ ಬರುತ್ತಿದೆ. ಪಾಕಿಸ್ತಾನ, ಅಪ್ಘಾನಿಸ್ತಾನ, ಇರಾನ್, ಮ್ಯಾನ್ಮಾರ್​ನಿಂದ ಹೆರಾಯಿನ್, ಅಫೀಮಿನಂಥ ಡ್ರಗ್ಸ್ ರಾಜ್ಯಕ್ಕೆ ಕಾಲಿಡುತ್ತಿದೆ. ಮುಂಬೈ, ಗೋವಾ, ಮಂಗಳೂರು, ಚೆನ್ನೈಗೆ ಸಮುದ್ರಮಾರ್ಗದಲ್ಲಿ ಕೋಟ್ಯಂತರ ರೂ. ಮೌಲ್ಯದ ಹೊಸ ಡ್ರಗ್ಸ್​ಗಳು ಬರಲಾರಂಭಿಸಿವೆ. ಅಲ್ಲಿಂದ ರೈಲು ಮತ್ತು ಬಸ್​ಗಳ ಸಹಾಯದಿಂದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾದಕ ವಸ್ತುಗಳಾವುವು?:ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಮಾರಿಜುವಾನಾ, ಗಾಂಜಾ, ತಂಬಾಕು, ಮತ್ತು ವೈದ್ಯರ ಸಲಹೆ ಪಡೆಯದೆ ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಮುಂತಾದವು ವ್ಯಸನಿಗಳು ಹೆಚ್ಚಾಗಿ ಬಳಸುವ ಮಾದಕ ದ್ರವ್ಯಗಳು.
ಟಾರ್ಗೆಟ್ ಯಾರು?:ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು, ಸಾಫ್ಟ್​ವೇರ್ ಕಂಪನಿ ಉದ್ಯೋಗಿಗಳು ಹಾಗೂ ಶ್ರೀಮಂತ ವರ್ಗದ ಯುವಕ, ಯುವತಿಯರು ಎಲ್​ಎಸ್​ಡಿ, ಕೊಕೇನ್, ಬ್ರೌನ್​ಶುಗರ್, ಹಾಶಿಸ್​ನಂತಹ ಬೆಲೆ ಬಾಳುವ ಡ್ರಗ್ಸ್ ಮೈಕ್ರೋ ಗ್ರಾಂ ಲೆಕ್ಕದಲ್ಲಿ ಖರೀದಿಸುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ನಡೆಯುವ ಕಿಟ್ಟಿ ಪಾರ್ಟಿಗಳು, ಪಬ್, ಡ್ಯಾನ್ಸ್​ಬಾರ್​ಗಳಲ್ಲೂ ಇದರ ಘಾಟು ಹೆಚ್ಚಾಗಿದೆ. ಕೂಲಿಕಾರ್ವಿುಕರು, ಬಡವರ್ಗದ ಯುವಕ- ಯುವತಿಯರು ಗಾಂಜಾ ಖರೀದಿಸಿ ಸೇವಿಸುತ್ತಾರೆ.
ಡ್ರಗ್ಸ್ ತಡೆಗೆ ಕಾರ್ಯಕ್ರಮ:ಹೆಚ್ಚಾಗಿ ಚಿಕ್ಕ ವಯಸ್ಸಿನ ಮಕ್ಕಳು ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ಉದ್ದೇಶಕ್ಕೆ ರಾಜ್ಯ ಔಷಧ ನಿಯಂತ್ರಕ ಇಲಾಖೆ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಪ್ರತಿ 6 ತಿಂಗಳಿಗೊಮ್ಮೆ ರಾಜ್ಯದ ಎಲ್ಲೆಡೆ ಮಾದಕ ದ್ರವ್ಯ ಸೇವನೆ ಮತ್ತು ಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಜತೆಗೆ ಅಧಿಕಾರಿಗಳೇ ಖುದ್ದು ಗ್ರಾಹಕರ ಸೋಗಿನಲ್ಲಿ ಔಷಧ ಅಂಗಡಿಗಳಿಗೆ ತೆರಳಿ ಡ್ರಗ್ಸ್ ಗಳನ್ನು ಕೇಳುತ್ತಾರೆ. ಮಾರಾಟ ಮಾಡುತ್ತಿದ್ದರೆ ಅಂತಹ ಔಷಧ ಅಂಗಡಿ ಪರವಾನಗಿ ರದ್ದುಪಡಿಸಲಾಗುತ್ತದೆ. ಆತನ ಕೃತ್ಯ ಗಂಭೀರವಾಗಿದ್ದರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಾರ್ವಜನಿಕವಾಗಿ ಮಾದಕ ದ್ರವ್ಯ ಸೇವನೆ, ಮಾರಾಟ, ಸಾಗಾಟ ಮಾಡುತ್ತಿರುವ ಮಾಹಿತಿ ಲಭ್ಯವಾದರೆ ಔಷಧ ನಿಯಂತ್ರಕರ ಕಚೇರಿಗೆ ಮಾಹಿತಿ ನೀಡಿ. ದೂರು ಕೊಡುವ ವ್ಯಕ್ತಿಯ ಹೆಸರು, ವಿಳಾಸವನ್ನು ಗೌಪ್ಯವಾಗಿ ಕಾಪಾಡಲಾಗುತ್ತದೆ ಎಂದು ರಾಜ್ಯ ಔಷಧ ನಿಯಂತ್ರಕ ಭಾಗೋಜಿ ಟಿ. ಖಾನಾಪುರೆ ಭರವಸೆ ನೀಡಿದರು.
ಡಾರ್ಕ್ ವೆಬ್​ಸೈಟ್ ರಹಸ್ಯ:ಡ್ರಗ್ಸ್ ವಹಿವಾಟು ಬಹುತೇಕ ಡಾರ್ಕ್ ವೆಬ್​ಸೈಟ್​ನಲ್ಲೇ ನಡೆಯುತ್ತಿದೆ. ಡ್ರಗ್ಸ್ ಆರ್ಡರ್ ಮಾಡಿದವರು ಯಾರು? ಎಲ್ಲಿಂದ? ಎಂಬ ಮಾಹಿತಿ ಬಹಿರಂಗವಾಗುವುದಿಲ್ಲ. ಡೆಲಿವರಿ ಮಾಡುವ ಸಂದರ್ಭದಲ್ಲಿ ಮಾತ್ರವೇ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಡ್ರಗ್ಸ್ ಬುಕ್ ಮಾಡಿದವರಿಗೆ ಕೊರಿಯರ್ ಮೂಲಕ ಮನೆಬಾಗಿಲಿಗೇ ತಲುಪುತ್ತದೆ.
ವ್ಯಸನದ ಆರಂಭ?:ಮೊದಮೊದಲು ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ತಮ್ಮ ಒತ್ತಡವನ್ನು ಶಮನಗೊಳಿಸಲೋ, ಸ್ನೇಹಿತರ ಒತ್ತಾಯಕ್ಕೋ ಮಾದಕದ್ರವ್ಯ ಉಪಯೋಗಿಸಲು ಆರಂಭಿಸುತ್ತಾರೆ. ದುರ್ಬಲ ವ್ಯಕ್ತಿತ್ವ, ಮನೋ ಸಾಮರ್ಥ್ಯ ಕಡಿಮೆ ಇದ್ದವರು ವ್ಯಸನಿಗಳಾಗುತ್ತಾರೆ.
ವಿದೇಶಿ ಪೆಡ್ಲರ್​ಗಳ ಸವಾಲು :ನೈಜೀರಿಯಾ ಸೇರಿ ಆಫ್ರಿಕಾ ಖಂಡದ ಹಲವು ಪ್ರಜೆಗಳು ರಾಜ್ಯದ ವಿವಿಧೆಡೆ ಸಕ್ರಿಯವಾಗಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕದಲ್ಲಿನ ಮಾದಕವಸ್ತುಗಳ ಜಾಲದಲ್ಲಿ ಶೇಕಡ 40ರಷ್ಟು ವಿದೇಶಿಯರ ಪಾತ್ರ ಇದೆ. ಎನ್​ಸಿಬಿ ಅಧಿಕಾರಿಗಳು 2019ರಲ್ಲಿ 430, 2020ರಲ್ಲಿ 196 ಹಾಗೂ 2021ರಲ್ಲಿ 345 ವಿದೇಶಿ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ.
ವಿದೇಶಿಗರ ಅಕ್ರಮ ವಾಸ:ನೈಜೀರಿಯಾ, ಉಗಾಂಡ, ಕೀನ್ಯಾ, ಘಾನ, ಸೂಡಾನ್, ಲಿಬಿಯಾ ಸೇರಿ ಆಫ್ರಿಕಾ ಮೂಲದ ಪ್ರಜೆಗಳು ಪ್ರವಾಸಿ, ವ್ಯಾಸಂಗ, ಉದ್ಯಮದ ಹೆಸರಿನಲ್ಲಿ ವೀಸಾ ಪಡೆದು ರಾಜ್ಯಕ್ಕೆ ಕಾಲಿಡುತ್ತಾರೆ. ಉತ್ತರ ಭಾರತದಲ್ಲಿರುವ ಕೆಲ ರಾಜ್ಯಗಳಲ್ಲಿರುವ ಪೆಡ್ಲರ್​ಗಳನ್ನು ಸಂರ್ಪಸಿ ಕಡಿಮೆ ಬೆಲೆಗೆ ಅವರಿಂದ ಡ್ರಗ್ಸ್ ಖರೀದಿಸಿ ರಾಜ್ಯದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ಬಾಂಗ್ಲಾ, ನೇಪಾಳ ಪ್ರಜೆಗಳು ಅಕ್ರಮವಾಗಿ ದೇಶಕ್ಕೆ ನುಸುಳಿ ರಾಜಾರೋಷವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ.
ಲೋಕಸಭೆ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve + twenty =
Remember me
