| ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು
ಆರೋಗ್ಯಕರ ರಾಷ್ಟ್ರ ನಿರ್ಮಾಣ ಮತ್ತು ಯುವಪೀಳಿಗೆ ಭವಿಷ್ಯರೂಪಿಸಲು ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ಅಡ್ಡಿಯಾಗಿದೆ. ಈ ಪಿಡುಗು ನಿಮೂಲನೆ ಸರ್ಕಾರಗಳಿಗೆ ದೊಡ್ಡ ಸವಾಲಾಗಿದೆ. ಕೇಂದ್ರ ಮತ್ತು ರಾಜ್ಯ ಪಡೆಗಳು ಸತತ ಪ್ರಯತ್ನ ಮಾಡುತ್ತಿದ್ದು, ಜನರ ಸಹಕಾರವೂ ಮುಖ್ಯವಾಗಿದೆ.
ಕರ್ನಾಟಕದಲ್ಲಿಯೂ ಡ್ರಗ್ಸ್ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಬೆಂಗಳೂರು, ಮಂಗಳೂರಿನಂತ ಕೆಲ ದೊಡ್ಡ ನಗರಗಳಲ್ಲಿ ಮಾತ್ರ ವ್ಯಾಪಿಸಿದ್ದ ಡ್ರಗ್ಸ್ ದಂಧೆ ಇಂದು ಪಟ್ಟಣ ಮತ್ತು ಹಳ್ಳಿಗಾಡಿಗೂ ತನ್ನ ಕಬಂಧಬಾಹುಗಳನ್ನು ವಿಸ್ತರಿಸಿದೆ. ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಆಂಧ್ರಪ್ರದೇಶದ ಕರ್ನಲ್, ಅನಂತಪುರ, ತಮಿಳುನಾಡಿನ ಕೃಷ್ಣಗಿರಿ, ಒಡಿಶಾ ಮತ್ತು ಗೋವಾದಿಂದ ಗಾಂಜಾ, ಗಾಂಜಾ ಎಣ್ಣೆ ರವಾನೆ ಆಗುತ್ತಿದೆ.
ಆಫ್ರಿಕಾ ದೇಶಗಳಿಂದ ಬರುತ್ತಿರುವ ಕೆಲ ವಿದೇಶಿಗರೂ ಮಾದಕ ದ್ರವ್ಯಗಳನ್ನು ರಾಜ್ಯಕ್ಕೆ ಹೊತ್ತುತರುತ್ತಿದ್ದಾರೆ. ಅದರಲ್ಲಿಯೂ ಮುಂಬೈ, ಗೋವಾ, ಮಂಗಳೂರು, ಚೆನ್ನೈಗೆ ಸಮುದ್ರ ಮಾರ್ಗದಲ್ಲಿ ಮಾದಕ ದ್ರವ್ಯಗಳು ಬಂದು ಅಲ್ಲಿಂದ ರೈಲು, ಬಸ್​ಗಳಲ್ಲಿ ಸ್ಥಳೀಯ ಪೆಡ್ಲರ್​ಗಳಿಗೆ ಪೂರೈಕೆ ಆಗುತ್ತಿದೆ. ಇತ್ತೀಚೆಗೆ ಡಾರ್ಕ್ ವೆಬ್​ಸೈಟ್​ನಲ್ಲೇ ನಡೆಯುತ್ತಿದೆ. ಈ ವೆಬ್​ಸೈಟ್​ನಲ್ಲಿ ಯಾರು? ಎಲ್ಲಿಂದ ಆರ್ಡರ್ ಮಾಡಿದ್ದಾನೆ? ಎಂಬ ಮಾಹಿತಿಯೂ ಬಹಿರಂಗವಾಗುವುದಿಲ್ಲ. ಡೆಲಿವರಿ ಸಂದರ್ಭದಲ್ಲಿ ಮಾತ್ರವೇ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಡಾರ್ಕ್ ವೆಬ್​ಸೈಟ್​ಗೆ ಹೋಗಿ ಡ್ರಗ್ಸ್ ಬುಕ್ ಮಾಡಿದರೆ ಕೊರಿಯರ್ ಮೂಲಕ ಮನೆ ಬಾಗಿಲಿಗೆ ತಲುಪುತ್ತದೆ. ಸ್ಥಳೀಯವಾಗಿ ಫುಡ್ ಮತ್ತು ಪಾರ್ಸೆಲ್ ಡಿಲವರಿ ಬಾಯ್ಗಳ ಸಕ್ರಿಯವಾಗಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್​ವೇರ್ ಇಂಜಿನಿಯರ್ ಉದ್ಯೋಗಿಗಳೂ ಹಾಗೂ ಶ್ರೀಮಂತ ವರ್ಗದ ಯುವಕ, ಯುವತಿಯರಿಗೆ ಗ್ರಾಂ ಲೆಕ್ಕದಲ್ಲಿ ಮಾರಾಟವಾಗುತ್ತಿದೆ. ಕೂಲಿ ಕಾರ್ವಿುಕರು, ಬಡವರ್ಗದ ಯುವಕ-ಯುವತಿಯರು ಗಾಂಜಾ ವ್ಯಸನಿಗಳಾಗಿದ್ದಾರೆ. ದಿನೇದಿನೆ ಮಾದಕ ದ್ರವ್ಯ ಜಾಲ ವ್ಯಾಪಿಸುತ್ತಿರುವುದಕ್ಕೆ ಪಾಲಕರ ವಲಯದಲ್ಲಿ ಕಳವಳ ವ್ಯಕ್ತವಾಗಿದೆ.
ವಿದೇಶಿ ಪೆಡ್ಲರ್​ಗಳ ಸವಾಲು:ಪ್ರವಾಸ, ವ್ಯಾಪಾರ ನೆಪದಲ್ಲಿ ನಗರ ಪ್ರವೇಶ ಮಾಡುವ ಆಫ್ರಿಕಾ ಖಂಡದ ಹಲವು ಪ್ರಜೆಗಳು ರಾಜ್ಯದ ವಿವಿಧೆಡೆ ಡ್ರಗ್ಸ್ ದಂಧೆಯಲ್ಲಿ ಸಕ್ರಿಯವಾಗಿದ್ದಾರೆ. ಕರ್ನಾಟಕದಲ್ಲಿನ ಮಾದಕ ವಸ್ತುಗಳ ಜಾಲದಲ್ಲಿ ಶೇ.40 ವಿದೇಶಿಯರ ಪಾತ್ರ ಇದೆ. ಎನ್​ಸಿಬಿ ಅಧಿಕಾರಿಗಳು 2020ರಲ್ಲಿ 196 ಹಾಗೂ 2021ರಲ್ಲಿ 345 ವಿದೇಶಿ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ. ಬೆಂಗಳೂರು ನಗರದಲ್ಲಿಯೇ 2023ನೇ ಸಾಲಿನಲ್ಲಿ 106 ವಿದೇಶಿಗರಗಳನ್ನು ಗಡಿಪಾರು ಮಾಡಿರುವ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಪಿಐಟಿ ಕಾಯ್ದೆಯಡಿ ಆಸ್ತಿ ಜಪ್ತಿ:ಮಾದಕ ವಸ್ತುಗಳ ಸರಬರಾಜು ಮತ್ತು ಮಾರಾಟ ಚಾಳಿ ಬಿಡದ ಪೆಡ್ಲರ್​ಗಳ ವಿರುದ್ಧ ಮಾದಕ ದ್ರವ್ಯ ಸಾಗಾಣಿಕೆ ತಡೆಗಟ್ಟುವಿಕೆ ಮತ್ತು ಸೈಕೋಟ್ರೋಪಿಕ್ (ಪಿಐಟಿ) ಕಾಯ್ದೆ ಜಾರಿಗೆ ತರಲಾಗುತ್ತಿದೆ. ಒಮ್ಮೆ ಕಾಯ್ದೆಯಡಿ ಜೈಲಿಗೆ ಹೋದರೆ ವಿಚಾರಣೆ ಪೂರ್ಣವಾಗುವವರೆಗೂ ಜಾಮೀನು ಸಿಗುವುದಿಲ್ಲ. ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈಗಾಗಲೆ ಬೆಂಗಳೂರಿನಲ್ಲಿ ಮೂವರ ವಿರುದ್ಧ ಪಿಐಟಿ ಜಾರಿ ಮಾಡಿದ್ದು, ಇಬ್ಬರ ಆಸ್ತಿ ಮುಟ್ಟುಗೊಲು ಹಾಕಿಕೊಳ್ಳಲಾಗಿದೆ.
ಪೆಡ್ಲರ್​ಗಳ ಮೇಲೆ ನಿಗಾ:ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾನಸಿಕ ಅಸ್ವಸ್ಥರು ಮತ್ತು ಮಾದಕ ವ್ಯಸನಿಗಳ ಸರ್ವೆ ನಡೆಸಿ ಅವರ ಮೂಲಕ ಡ್ರಗ್ಸ್ ಪೆಡ್ಲರ್​ಗಳ ಸುಳಿವು ಪಡೆದು ಬಂಧಿಸಲು ಖಾಕಿ ಪಡೆ ಮುಂದಾಗಿದೆ. ಇದಲ್ಲದೆ, ಜೈಲಿನಿಂದ ಬಿಡುಗಡೆಯಾದ ಕೈದಿಗಳು ಮತ್ತು ವಿದೇಶಿ ಡ್ರಗ್ಸ್ ಪೆಡ್ಲರ್​ಗಳ ಮೇಲೆ ನಿಗಾವಹಿಸಿ ಅವರ ಜಾಲವನ್ನು ಬುಡಸಮೇತ ತೆಗೆಯಲು ಮುಂದಾಗಿದೆ.
ಕಟ್ಟುನಿಟ್ಟಿನ ಕ್ರಮ ಅಗತ್ಯ:ಮಾದಕ ದ್ರವ್ಯ ಮಾರಾಟ ಮತ್ತು ಸಾಗಾಟ ತಡೆಗಟ್ಟುವ ಸಲುವಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರಲ್ಲಿ ಸೈಬರ್, ಆರ್ಥಿಕ ಮತ್ತು ನಾಕೋಟಿಕ್ (ಸಿಇಎನ್) ಠಾಣೆಗಳನ್ನು ಕಮಿಷನರೇಟ್​ನಲ್ಲಿ ಡಿಜಿಪಿ ಮತ್ತು ಜಿಲ್ಲೆಗಳಲ್ಲಿ ಎಸ್​ಪಿ ಮಟ್ಟದಲ್ಲಿ ತೆರೆಯಲಾಗಿದೆ. ಈ ಠಾಣೆಗಳಲ್ಲಿ ಕೇವಲ ಸೈಬರ್ ಕ್ರೖೆಂ ಕುರಿತು ಎಫ್​ಐಆರ್​ಗಳು ಮಾತ್ರ ದಾಖಲಾಗುತ್ತಿವೆ. ಡ್ರಗ್ಸ್ ಕುರಿತು ದೂರು ದಾಖಲಾಗುತ್ತಿಲ್ಲ. ಸಾಕಷ್ಟು ಕಡೆಗಳಲ್ಲಿ ಇದು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕಿದೆ.
3.03 ಲಕ್ಷ ಗಾಂಜಾ ವ್ಯಸನಿಗಳು:ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ವಹಿವಾಟು ವಾರ್ಷಿಕ ಸಾವಿರ ಕೋಟಿ ರೂ. ಎನ್ನಲಾಗಿದೆ. ಕೇಂದ್ರ ಸರ್ಕಾರ ನಡೆಸಿರುವ ಸರ್ವೆ ಪ್ರಕಾರ 2023 ಫೆ.7ರ ವರೆಗೆ ಕರ್ನಾಟಕದಲ್ಲಿ 3.03 ಲಕ್ಷ ಗಾಂಜಾ ವ್ಯಸನಿಗಳು ಇದ್ದಾರೆ. ಇದಲ್ಲದೆ, 7.29 ಲಕ್ಷ ಒಪಿಯಾಡ್ಸ್, 46 ಸಾವಿರ ಕೊಕೇನ್, 68 ಸಾವಿರ ಆಂಪಟಮೈನ್, 2.46 ಲಕ್ಷ ಪೇಂಟ್, ಸೆಲ್ಯುಷನ್, ಆಯಿಲ್ ವ್ಯಸನಿಗಳಿದ್ದಾರೆ. ಡ್ರಗ್ಸ್ ವ್ಯಸನದಿಂದ ರಾಜ್ಯದಲ್ಲಿ ವಾರ್ಷಿಕ ಸರಾಸರಿ 1,200 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
1908ಗೆ ಕರೆ ಮಾಡಿ ದೂರು ಕೊಡಿ:ಮಾದಕ ವಸ್ತು ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಮಾಹಿತಿ ಅಥವಾ ದೂರುಗಳನ್ನು ಕೊಡಲು ಟೋಲ್ ಫ್ರೀ ಸಂಖ್ಯೆ 1908 ಆರಂಭಿಸಲಾಗಿದೆ. ಸಾರ್ವಜನಿಕರು ಈ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.
ರಾಜಧಾನಿಯಲ್ಲೇ ಹೆಚ್ಚು:ರಾಜ್ಯದಲ್ಲಿ 2022ನೇ ಸಾಲಿನಲ್ಲಿ 6,406 ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ. 2023ರ ಏಪ್ರಿಲ್​ವರೆಗೆ 1,933 ಎನ್​ಡಿಪಿಎಸ್ ಕೇಸ್ ದಾಖಲಾಗಿವೆ. ಬೆಂಗಳೂರು ನಗರದಲ್ಲಿ 2022ರಲ್ಲಿ 579 ಪೆಡ್ಲರ್​ಗಳ ವಿರುದ್ಧ ಎಫ್​ಐಆರ್ ದಾಖಲಾದರೆ 3,448 ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 3,746 ಕೆಜಿ ಗಾಂಜಾ ಮತ್ತು 167 ಕೆಜಿ ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಅಂದಾಜು 89.53 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಮೊನ್ನೆ ಜಗ್ಗೇಶ್​ಗೆ ಕನ್ನಡ ಪಾಠ ಮಾಡಿದ್ದ ‘ಮೇಷ್ಟ್ರು’, ಇಂದು ಸಚಿವರು-ಸರ್ಕಾರಿ ಅಧಿಕಾರಿಗಳಿಗೂ ಕಿವಿಮಾತು
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:5 × five =
Remember me
