|ಅವಿನಾಶ ಮೂಡಂಬಿಕಾನಬೆಂಗಳೂರು
ಕರೊನಾ ಲಾಕ್​ಡೌನ್​ನಿಂದಾಗಿ ಬಹುತೇಕ ವ್ಯಾಪಾರ ವ್ಯವಹಾರಗಳು, ಕೈಗಾರಿಕೆಗಳು ಸಂಕಷ್ಟ ಅನುಭವಿಸಿವೆ. ಆದರೆ, ಡ್ರಗ್ಸ್ ಮಾರಾಟ ದಂಧೆ ಮಾತ್ರ ಹುಲುಸಾಗಿ ಬೆಳೆದಿದೆ! ಲಾಕ್​ಡೌನ್ ಅವಧಿಯಲ್ಲಿ ಅಗತ್ಯಸೇವೆಗಳ ಪೂರೈಕೆಗೆ ನೀಡಲಾಗಿರುವ ಅವಕಾಶವನ್ನೇ ಬಂಡವಾಳ ಮಾಡಿಕೊಂಡ ಡ್ರಗ್ಸ್ ಮಾರಾಟ ದಂಧೆಕೋರರು ಸಾಮಾಜಿಕ ಜಾಲತಾಣಗಳಲ್ಲೇ ಡೀಲ್ ಕುದುರಿಸಿ ಮಾದಕ ವಸ್ತುಗಳನ್ನು ಮನೆಗಳಿಗೆ ಪೂರೈಸುತ್ತಿದ್ದಾರೆ. ಈ ಆನ್​ಲೈನ್ ವೇದಿಕೆಯಲ್ಲಿ ನೂರಾರು ಕೋಟಿ ರೂ.ವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಆನ್​ಲೈನ್​ನಲ್ಲೇ ಡ್ರಗ್ಸ್ ವ್ಯಸನಿಗಳನ್ನು ಸಂರ್ಪಸಿ, ಅವರಿಂದ ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡು, ಅವರ ಮನೆ ಬಾಗಿಲಿಗೇ ಮಾದಕ ವಸ್ತು ಪೂರೈಸುವ ವ್ಯವಸ್ಥೆ ಹುಟ್ಟಿಕೊಂಡಿದೆ. ಪೆಡ್ಲರ್​ಗಳ ಈ ಹೊಸ ಪ್ಲಾ್ಯನ್​ನಿಂದ ಸ್ಥಳೀಯ ಪೊಲೀಸರು, ಎನ್​ಸಿಬಿ ಹಾಗೂ ಇತರ ತನಿಖಾ ಸಂಸ್ಥೆಗಳಿಗೆ ಡ್ರಗ್ಸ್ ಜಾಲದ ಜಾಡು ಹಿಡಿಯುವುದೇ ಸವಾಲಾಗಿದೆ. ಈ ನಡುವೆಯೇ, ಕಳೆದ 12 ತಿಂಗಳಲ್ಲಿ 50.23 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.
ಕಳೆದ ಐದೂವರೆ ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 10,949 ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬಂದಿವೆ. 2020ರಲ್ಲಿಯೇ 4,066 ಕೇಸ್ ದಾಖಲಾಗಿದ್ದು, 5,291 ಪೆಡ್ಲರ್​ಗಳನ್ನು ಬಂಧಿಸಲಾಗಿದೆ. 2021ರಲ್ಲಿ ಲಾಕ್​ಡೌನ್ ವೇಳೆ ಬಿಗಿ ಪೊಲೀಸ್ ಪಹರೆ ನಡುವೆಯೂ ಕರ್ನಾಟಕದಲ್ಲಿ 300 ಕೋಟಿ ರೂ.ಗೂ ಅಧಿಕ ಮೊತ್ತದ ಡ್ರಗ್ಸ್ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ ಎನ್​ಡಿಪಿಎಸ್ ಕಾಯ್ದೆಯಡಿ 1,819 ಕೇಸ್ ದಾಖಲಾಗಿದೆ.
ವಾಟ್ಸ್​ಆಪ್​ನಲ್ಲೇ ಡೀಲ್!:ಕರೊನಾ ನಿರ್ಬಂಧಗಳಿಂದಾಗಿ ವ್ಯಸನಿಗಳು ಡ್ರಗ್ಸ್​ಗಾಗಿ ಆನ್​ಲೈನ್ ಮೊರೆ ಹೋಗುತ್ತಿದ್ದಾರೆ. ಕೆಲ ಗೌಪ್ಯ ವೆಬ್​ಸೈಟ್, ವಾಟ್ಸ್​ಆಪ್, ಫೇಸ್​ಬುಕ್, ಟೆಲಿಗ್ರಾಮ್ಂತಹ ಸಾಮಾಜಿಕ ಜಾಲತಾಣಗಳಲ್ಲಿ ಡ್ರಗ್ಸ್ ಡೀಲ್​ಗಾಗಿಯೇ ಪ್ರತ್ಯೇಕ ಗ್ರೂಪ್ ಸೃಷ್ಟಿಸಲಾಗಿದೆ. ಪರಿಚಿತ ಗ್ರಾಹಕರನ್ನಷ್ಟೇ ಈ ಗ್ರೂಪ್​ಗೆ ಸೇರಿಸಿ ಅವರ ಬೇಡಿಕೆಗೆ ಅನುಗುಣವಾಗಿ ಮಾದಕ ವಸ್ತುಗಳನ್ನು ಮನೆ ಬಾಗಿಲಿಗೆ ಸರಬರಾಜು ಮಾಡಲಾಗುತ್ತದೆ. ಗ್ರಾಹಕರು ತಮಗೆ ಬೇಕಿರುವ ಡ್ರಗ್ ಹೆಸರನ್ನು ಗ್ರೂಪ್​ನಲ್ಲಿ ನಮೂದಿಸಿ ಅದಕ್ಕೆ ತಗುಲುವ ಹಣವನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಪೆಡ್ಲರ್​ಗಳು ಸೂಚಿಸುವ ಖಾತೆಗೆ ಜಮೆ ಮಾಡಿದ ಕೆಲ ಹೊತ್ತಿನಲ್ಲೇ ಗ್ರಾಹಕರ ಮನೆ ಬಾಗಿಲಿಗೆ ಡ್ರಗ್ಸ್ ಪೂರೈಕೆಯಾಗುತ್ತದೆ.
ಡ್ರಗ್ಸ್ ಹೇಗೆ ಸಿಗುತ್ತೆ?:ಡಾರ್ಕ್ ವೆಬ್​ನ ಟಾರ್ ಬ್ರೋಸರ್ ಹಾಗೂ ಡ್ರಿಯೇಡ್ ವೆಬ್​ಸೈಟ್​ನಿಂದ ವಿವಿಧ ಬಗೆಯ ಡ್ರಗ್ಸ್ ಬಗ್ಗೆ ಮಾಹಿತಿ ಪಡೆಯುವ ಪೆಡ್ಲರ್​ಗಳು, ವಿಕ್ಕರ್-ಮೀ ಆಪ್​ನಲ್ಲಿ ವೆಗೆಟರ್ ಎಂಬ ಸ್ಥಳೀಯ ವೆಂಡರ್​ನಿಂದ ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ ಕಡಿಮೆ ಬೆಲೆಗೆ ಎಂಡಿಎಂಎ, ಎಕ್ಸ್​ಟಸಿ ಮಾತ್ರೆ, ಎಲ್​ಎಸ್​ಡಿ ಸ್ಟಿಪ್ಸ್ ನಂತಹ ಬೆಲೆ ಬಾಳುವ ಡ್ರಗ್ಸ್ ಖರೀದಿಸುತ್ತಾರೆ. ನಂತರ ಕೊರಿಯರ್ ಮೂಲಕ ತಾವಿದ್ದಲ್ಲಿಗೆ ತರಿಸಿಕೊಳ್ಳುತ್ತಾರೆ. ಜತೆಗೆ ವಿದೇಶಗಳಿಂದ ಕೊರಿಯರ್ ಮುಖಾಂತರ ಕಾಗೋ ವಿಮಾನಗಳಲ್ಲೂ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಡ್ರಗ್ಸ್​ಗಳು ಆಮದಾಗುತ್ತಿವೆ. ಗಾಂಜಾವನ್ನು ಆಂಧ್ರ ಪ್ರದೇಶ, ತಮಿಳುನಾಡು, ಅಸ್ಸಾಂ, ನೇಪಾಳದಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಪೂರೈಕೆ ಹೇಗೆ?:ಪೆಡ್ಲರ್​ಗಳು ಅಮೆಜಾನ್ ಪ್ಯಾಕ್​ಗಳಲ್ಲಿ ಡ್ರಗ್ಸ್​ಗಳನ್ನು ಹಾಕಿ ಅಮೆಜಾನ್ ಟೇಪ್​ಗಳಿಂದ, ವ್ಯಾಕ್ಯೂಮ್ ಫುಡ್​ಸೀಲ್​ಗಳಿಂದ ಸೀಲ್ ಮಾಡಿ ಗ್ರಾಹಕರಿಗೆ ಪೂರೈಸುತ್ತಾರೆ. ಇತ್ತೀಚೆಗೆ ಅಗತ್ಯ ವಸ್ತುಗಳ ಹೆಸರಿನಲ್ಲಿ ಡೋಂಜೊ ಮುಖಾಂತರ ಡ್ರಗ್ಸ್ ಸುಲಭವಾಗಿ ಗ್ರಾಹಕರ ಕೈ ಸೇರುತ್ತಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ಕಣ್ತಪ್ಪಿಸಲು ವಿವಿಧ ಕಂಪನಿಯ ಫುಡ್ ಡೆಲಿವರಿ ಬಾಯ್ಗಳ ಮೂಲಕವೂ ಡ್ರಗ್ಸ್ ಸರಬರಾಜು ಮಾಡಲಾಗುತ್ತಿರುವ ವಿಚಾರ ಗೊತ್ತಾಗಿದೆ.
ಯಾವ ಡ್ರಗ್ಸ್​ಗೆ ಬೇಡಿಕೆ?:ಗಾಂಜಾ, ಅಫೀಮು, ಕೊಕೇನ್, ಹ್ಯಾಶಿಶ್, ಹೆರಾಯಿನ್, ಕೆಟಾಮಿನ್, ಚರಸ್, ಎಂಡಿಎಂಎ ಮಾತ್ರೆ, ಎಲ್​ಎಸ್​ಡಿ ಮಾದಕ ವಸ್ತು
ಟಾರ್ಗೆಟ್ ಯಾರು?:ಟೆಕ್ಕಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ವರ್ಗದ ಯುವಕ ಹಾಗೂ ಯುವತಿಯರು. ್ಮಕೂಲಿ ಕಾರ್ವಿುಕರು ಹಾಗೂ ಬಡವರನ್ನು ಕೂಡ ಟಾರ್ಗೆಟ್ ಮಾಡ್ತಾರೆ.
ಶಿಕ್ಷೆ ಏನು?:ಡ್ರಗ್ಸ್ ಪೂರೈಸುವಾಗ ಸಿಕ್ಕಿಬಿದ್ದು, ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖ ಲಾಗಿ, ಅಪರಾಧ ಎಸಗಿರು ವುದು ಸಾಬೀತಾದರೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ ಆಗು ತ್ತದೆ. ಬಹುತೇಕ ಪ್ರಕರಣಗಳಲ್ಲಿ ಜಾಮೀನು ಸಿಗುವುದರಿಂದ ಮತ್ತೆ ದಂಧೆಯಲ್ಲಿ ತೊಡಗುತ್ತಾರೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ವಿದೇಶಿಗರೇ ಜಾಸ್ತಿ:ನೈಜೀರಿಯಾ ಸೇರಿ ಆಫ್ರಿಕಾ ಖಂಡದ ಪ್ರಜೆಗಳು ಡ್ರಗ್ಸ್ ದಂಧೆಯಲ್ಲಿ ಹೆಚ್ಚು ಭಾಗಿಯಾಗಿದ್ದಾರೆ. ರಾಜ್ಯದಲ್ಲಿರುವ ದಂಧೆಯಲ್ಲಿ ಶೇ.40 ವಿದೇಶಿಯರಿದ್ದಾರೆ. ಪ್ರವಾಸ, ವ್ಯಾಸಂಗ, ಉದ್ಯಮದ ಹೆಸರಿನಲ್ಲಿ ವೀಸಾ ಪಡೆದು ರಾಜ್ಯಕ್ಕೆ ಬರುವ ಇವರು ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಅಕ್ರಮವಾಗಿ ಉಳಿಯುತ್ತಾರೆ. ಬಾಂಗ್ಲಾ, ನೇಪಾಳ ಪ್ರಜೆಗಳೂ ಅಕ್ರಮವಾಗಿ ದೇಶಕ್ಕೆ ನುಸುಳಿ ರಾಜಾರೋಷವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ.
ರಾಜ್ಯದ ಹಲವೆಡೆ ಕಳೆದ ವರ್ಷ ವಶಪಡಿಸಿಕೊಳ್ಳ ಲಾದ 50 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಾದಕವಸ್ತು ಗಳನ್ನು ಶನಿವಾರ ನಾಶ ಪಡಿಸಲಾಗುವುದು.
|ಬಸವರಾಜ ಬೊಮ್ಮಾಯಿಗೃಹ ಸಚಿವ
ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ದಂಧೆಯಲ್ಲಿ ತೊಡಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿದೇಶಿ ಪೆಡ್ಲರ್​ಗಳನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಲಾಗಿದೆ.
|ಕಮಲ್ ಪಂತ್ಪೊಲೀಸ್ ಆಯುಕ್ತರು, ಬೆಂಗಳೂರು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seventeen =
Remember me
