ಅವಿನಾಶ ಮೂಡಂಬಿಕಾನ
ಬೆಂಗಳೂರು:ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾಗೂ ಕೇರಳದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಚಿನ್ನ ಕಳ್ಳಸಾಗಣೆ ದಂಧೆಗೂ ನಂಟಿರುವ ಮತ್ತೊಂದು ಅಚ್ಚರಿಯ ಸಂಗತಿ ಬಟಾಬಯಲಾಗಿದೆ. ಆ ಮೂಲಕ ಚಂದನವನದ ನಶೆಯ ಬೇರು ಮಹಾರಾಷ್ಟ್ರದ ಬಳಿಕ ಮತ್ತೊಂದು ರಾಜ್ಯಕ್ಕೆ ವಿಸ್ತರಿಸಿದಂತಾಗಿದೆ. ಡ್ರಗ್ಸ್ ದಂಧೆಯ ತನಿಖೆ ನಡೆಸುತ್ತಿರುವ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಹಾಗೂ ಬೆಂಗಳೂರು ಕ್ರೖೆಂ ಬ್ರ್ಯಾಂಚ್ (ಸಿಸಿಬಿ) ಜತೆಗೆ ಇದೀಗ ಜಾರಿ ನಿರ್ದೇಶನಾಲಯ (ಇಡಿ) ಕೂಡ ಪ್ರವೇಶಿಸಿರುವುದು ನಶೆಯ ಮತ್ತೇರಿಸಿಕೊಂಡವರಿಗೆ ಮತ್ತಷ್ಟು ನಡುಕ ತಂದಿದೆ.
ಸ್ಯಾಂಡಲ್​ವುಡ್ ಅಂಗಳದಲ್ಲಿ
(ಬುಧವಾರದ ವಿದ್ಯಮಾನಗಳು)
* ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾಗಿಣಿ, ಸಂಜನಾ ವಿಚಾರಣೆ
* ಇನ್​ಸ್ಪೆಕ್ಟರ್ ಅಂಜುಮಾಲಾ, ಕಾತ್ಯಾಯಿನಿ ಅವರಿಂದ ವಿಚಾರಣೆ
* ಡ್ರಗ್ಸ್ ಕೇಸ್ ಸಂಬಂಧ ತನಿಖಾಧಿಕಾರಿಗಳಿಂದ ಪೇಪರ್ ವರ್ಕ್
* ಮಕ್ಕಳ ಭೇಟಿಗೆ ಪಾಲಕರಿಗೆ ಅವಕಾಶ ಕೊಡದ ಅಧಿಕಾರಿಗಳು
* ಸಂಜನಾ ಸ್ನೇಹಿತ, ಶಾಸಕರ ಆಪ್ತ ಶೇಖ್ ಫಾಸಿಲ್ ಮನೆ ಮೇಲೆ ದಾಳಿ
* ಸಿಸಿಬಿಯಿಂದ ಶೇಖ್ ಫಾಸಿಲ್ ಕುಟುಂಬ ಸದಸ್ಯರ ವಿಚಾರಣೆ
* ನಟಿ ರಾಗಿಣಿ, ರಾಹುಲ್ ತೋನ್ಸೆಯಿಂದ ಜಾಮೀನಿಗಾಗಿ ಅರ್ಜಿ ಸಲ್ಲಿಕೆ
* ಎ1 ಶಿವಪ್ರಕಾಶ್, ಶೇಖ್ ಫಾಸಿಲ್​ನಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ
* ಜಾಮೀನು ಅರ್ಜಿ ತಿರಸ್ಕರಿಸುವಂತೆ ಮನವಿ ಮಾಡಲು ಸಿಸಿಬಿ ಸಿದ್ಧತೆ
* ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಮುಂದುವರೆದ ಶೋಧ
* ಡ್ರಗ್ಸ್ ಕುರಿತು ಈಗ ಮಾತನಾಡುವುದು ಸರಿಯಲ್ಲ ಎಂದು ನಟ ಶಿವರಾಜ್​ಕುಮಾರ್
ಸ್ಯಾಂಡಲ್​ವುಡ್ ಡ್ರಗ್ಸ್ ದಂಧೆಯಲ್ಲಿ ಬಂಧಿತರಾಗಿರುವವರ ಜತೆ ಕೇರಳದ ಸ್ಮಗ್ಲಿಂಗ್ ರಾಣಿ ಎಂದೇ ಕುಖ್ಯಾತಿಯಾಗಿರುವ ಸ್ವಪ್ನಾ ಸುರೇಶ್ ಗ್ಯಾಂಗ್ ಸಂಪರ್ಕದಲ್ಲಿತ್ತು. ಅಷ್ಟೇ ಅಲ್ಲ ಚಿನ್ನದ ಕಳ್ಳಸಾಗಣೆಗೆ ಚಂದನವನದ ಡ್ರಗ್ಸ್ ದಂಧೆಯಲ್ಲಿರುವ ಪ್ರಭಾವಿಗಳೂ ಸ್ವಪ್ನಾಗೆ ನೆರವು ನೀಡಿದ್ದರು ಎಂಬ ಸಂಗತಿ ಇಡಿ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬೆಂಗಳೂರು ವಿಭಾಗದ ಇಡಿ ಅಧಿಕಾರಿಗಳನ್ನು ಸಂರ್ಪಸಿರುವ ಕೇರಳ ಅಧಿಕಾರಿಗಳ ತಂಡ ಡ್ರಗ್ಸ್ ಜಾಲದ ಈವರೆಗಿನ ತನಿಖೆಯ ಸಂಪೂರ್ಣ ವಿವರ ಕೊಡುವಂತೆ ಕೇಳಿದೆ.
ಇದನ್ನೂ ಓದಿ:ಪತ್ರಕರ್ತನ ಟ್ವೀಟ್​ಗೆ ಸ್ಪಂದಿಸಿದ ಸಂಸದೆ ಕವಿತಾ; ಒಂದೇ ತಾಸಿನಲ್ಲಿ ಎಲ್ಲವನ್ನೂ ಒದಗಿಸಿದರು
ಡ್ರಗ್ಸ್ ದಂಧೆಯಲ್ಲಿ ನೂರಾರು ಕೋಟಿ ರೂ. ಅಕ್ರಮ ವಹಿವಾಟು ಹಾಗೂ ವಿದೇಶಿ ವ್ಯವಹಾರದ ನಂಟಿರುವುದು ಈಗಾಗಲೇ ದೃಢವಾಗಿದೆ. ಆದ್ದರಿಂದ ಇಡಿ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಹಾಗೂ ಡ್ರಗ್ಸ್ ಪೆಡ್ಲರ್​ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ವಿಚಾರ ಬಾಯ್ಬಿಟ್ಟ ಸ್ಮಗ್ಲರ್ಸ್!
ಕೇರಳದ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಸ್ವಪ್ನಾ ಸುರೇಶ್, ಸರಿತಾ, ಫಾಜಿಲ್ ಫರೀದ್ ಮತ್ತು ಸಂದೀಪ್ ನಾಯರ್ ಪ್ರಮುಖ ಆರೋಪಿಗಳಾಗಿದ್ದಾರೆ. ಇವರ ವಿಚಾರಣೆ ವೇಳೆ ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಜತೆ ನಂಟಿರುವ ವಿಚಾರ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:‘ಉದ್ಯೋಗ ಕೊಡುತ್ತೇವೆ ಎಂದು ಹೇಳಿ, ಪಕೋಡ ಮಾರುವ ಐಡಿಯಾ ಕೊಟ್ರು…’
ಕೊಚ್ಚಿ ಕೋರ್ಟ್​ಗೆ ಇಡಿ ಹೇಳಿದ್ದೇನು?
ಕೇರಳದ ಚಿನ್ನ ಸ್ಮಗ್ಲಿಂಗ್ ದಂಧೆ ಕುರಿತಂತೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಬೆಂಗಳೂರು ಡ್ರಗ್ಸ್ ದಂಧೆಗೂ ಚಿನ್ನ ಸ್ಮಗ್ಲಿಂಗ್​ಗೂ ನಂಟಿದೆ ಎಂದು ಕೊಚ್ಚಿಯ ವಿಶೇಷ ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಡ್ರಗ್ಸ್ ದಂಧೆಯಲ್ಲಿ ಈಗಾಗಲೇ ಬಂಧಿತರಾಗಿರುವ ಪ್ರಭಾವಿ ವ್ಯಕ್ತಿಯೊಬ್ಬರು ಸ್ವಪ್ನಾ ಸುರೇಶ್ ಮತ್ತು ಪಿ.ಎಸ್.ಸರಿತಾ ಜತೆ ಸಂಪರ್ಕ ಹೊಂದಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ. 14.82 ಕೋಟಿ ಮೌಲ್ಯದ 30 ಕೆಜಿ ಚಿನ್ನ ಕಳ್ಳಸಾಗಣೆ ಕೇಸಿನ ವಿಚಾರಣೆ ನಡೆಯುತ್ತಿದೆ.
ಬಯಲಾಗಿದ್ದೇನು?
* ಕೇರಳದ ಸ್ಮಗ್ಲಿಂಗ್ ರಾಣಿ ಸ್ವಪ್ನಾ ಸುರೇಶ್ ದಂಧೆಗೆ ಚಂದನವನದ ಡ್ರಗ್ಸ್ ಜಾಲದಲ್ಲಿರುವ ಪ್ರಭಾವಿಗಳಿಂದ ನೆರವು
* ಚಿನ್ನದ ಕಳ್ಳಸಾಗಣೆಯಂತೆ ಬೆಂಗಳೂರಿಗೆ ವಿದೇಶಿ ಡ್ರಗ್ಸ್ ಸ್ಮಗ್ಲಿಂಗ್ ಮಾಡಿದ್ದಳು
ಚಿನ್ನ ಸಾಗಣೆ ಶೈಲಿಯಲ್ಲೇ ಡ್ರಗ್ಸ್ ದಂಧೆ
ಸ್ವಪ್ನಾ ಸುರೇಶ್ ರಾಜತಾಂತ್ರಿಕ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ಗಲ್ಪ್ ರಾಷ್ಟ್ರಗಳಿಂದ ರಾಜತಾಂತ್ರಿಕ ಮಾರ್ಗದಲ್ಲಿ ನೂರಾರು ಕೋಟಿ ರೂ. ಮೌಲ್ಯದ ಚಿನ್ನವನ್ನು ಸ್ಮಗ್ಲಿಂಗ್ ಮಾಡಿದ್ದಳು. ಇದೇ ಮಾದರಿಯಲ್ಲಿ ನೂರಾರು ಕೋಟಿ ರೂ. ಮೌಲ್ಯದ ವಿದೇಶಿ ಡ್ರಗ್ಸ್ ಅನ್ನೂ ರಾಜತಾಂತ್ರಿಕ ಮಾರ್ಗದಲ್ಲಿ ಬೆಂಗಳೂರಿಗೆ ಸ್ಮಗ್ಲಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಯುಎಇ ದೂತಾವಾಸ ಕಚೇರಿಯ ಮಾಜಿ ಉದ್ಯೋಗಿಯಾಗಿದ್ದ ಸ್ವಪ್ನಾ, ಕೇರಳದ ಹಲವು ರಾಜಕಾರಣಿಗಳಿಗೂ ಆಪ್ತೆಯಾಗಿದ್ದಳು. ಕೇರಳ ತನಿಖಾ ಸಂಸ್ಥೆಯು ಬೆಂಗಳೂರಿನ ಇಡಿ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ವಿವರ ಸಂಗ್ರಹಿಸುತ್ತಿದೆ.
ಇದನ್ನೂ ಓದಿ:ಟಿ-ಶರ್ಟ್​ ಮೇಲೆ ಮುದ್ರಿಸಿದ ಒಂದು ‘ಸ್ಲೋಗನ್’​​ನಿಂದ ಹೈರಾಣಾಗುತ್ತಿರುವ ಯುವ ಉದ್ಯಮಿ…
ಮುಂದೇನು?
* ಬೆಂಗಳೂರು ವಿಭಾಗದ ಇಡಿ ಅಧಿಕಾರಿಗಳು ವಿವರ ನೀಡಿದಲ್ಲಿ ಡ್ರಗ್ಸ್ ದಂಧೆಯಡಿ ಬಂಧಿತರಾಗಿರುವರರಿಗೆ ಮತ್ತಷ್ಟು ಸಂಕಷ್ಟ
* ರಾಗಿಣಿ, ಸಂಜನಾ ಸೇರಿ ಡ್ರಗ್ಸ್ ಪೆಡ್ಲರ್​ಗಳನ್ನು ಕೇರಳ ತಂಡ ವಶಕ್ಕೆ ಪಡೆಯಬಹುದು
* ಬಂಧಿತರ ಜಾಮೀನು ನಿರೀಕ್ಷೆ ಪ್ರಯತ್ನಕ್ಕೆ ಹಿನ್ನಡೆ ಆಗಬಹುದು
* ದಂಧೆ ಹಿಂದೆ ಇರುವ ಮತ್ತಷ್ಟು ಪ್ರಭಾವಿಗಳ ಮುಖವಾಡ ಕಳಚಬಹುದು
ಬೆಂಗ್ಳೂರಲ್ಲಿ ಅಡಗಿದ್ದ ಸ್ವಪ್ನಾ
ಚಿನ್ನದ ಸ್ಮಗ್ಲಿಂಗ್ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಸ್ವಪ್ನಾ ಸುರೇಶ್ ಹಾಗೂ ಸಂದೀಪ್ ನಾಯರ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಫೋನ್ ಕರೆ ಬೆನ್ನತ್ತಿದ್ದ ಎನ್​ಐಎ ತಂಡ ಕೋರಮಂಗಲದ ಖಾಸಗಿ ಹೋಟೆಲ್​ವೊಂದರಲ್ಲಿ ಜು.12ರಂದು ಇಬ್ಬರನ್ನೂ ಬಂಧಿಸಿತ್ತು. ಪಿಎಂಎಲ್​ಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಸಂದರ್ಭದಲ್ಲಿ ಸ್ಥಳೀಯ ಡ್ರಗ್ ಪೆಡ್ಲರ್​ಗಳ ಸಹಕಾರದಿಂದಲೇ ಸ್ವಪ್ನಾ ಸುರೇಶ್ ಬೆಂಗಳೂರಿನಲ್ಲಿ ಅಡಗಿ ಕುಳಿತಿದ್ದಳು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ:‘ಯಾವ ಕಾರಣಕ್ಕೂ ಚೀನಾ ಸೈನಿಕರು ಭಾರತದ ಭೂ ಪ್ರದೇಶ ಪ್ರವೇಶಿಸಲು ಬಿಡಬೇಡಿ…’
ಏನಿದು ಚಿನ್ನ ಸ್ಮಗ್ಲಿಂಗ್ ಪ್ರಕರಣ ?
ಜು.5ರಂದು ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 14.82 ಕೋಟಿ ರೂ ಮೌಲ್ಯದ 30 ಕೆ.ಜಿ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು. ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್ ಕಚೇರಿಯ ವಿಳಾಸ ಹೊಂದಿದ್ದ ಆ ಪಾರ್ಸಲ್ ಅನ್ನು ಯುಎಇಯಿಂದ ರಾಜತಾಂತ್ರಿಕ ಮಾರ್ಗದ ಮೂಲಕ ಕಳುಹಿಸಿರುವುದು ಬಹಿರಂಗಗೊಂಡಿತ್ತು.
ಇದನ್ನೂ ಓದಿ:ಮುಂದುವರಿದ ಕರೊನಾ ಅಬ್ಬರ; ಸೋಂಕಿನಿಂದ ಮೃತರಾದ ಸಿಪಿಐ
ಆಸ್ತಿ ಮೇಲೆ ಇಡಿ ಕಣ್ಣು
ಸದ್ಯ ಡ್ರಗ್ಸ್ ಜಾಲದ ಹಿಂದಿರುವ ಕಾಣದ ಕೈಗಳ ಬಗ್ಗೆ ಶೋಧ ನಡೆಸಲಾಗುತ್ತಿದೆ. ಮುಖ್ಯವಾಗಿ ವಿದೇಶಗಳಿಂದ ನೂರಾರು ಕೋಟಿ ರೂ. ಮೌಲ್ಯದ ಡ್ರಗ್ಸ್​ಗಳನ್ನು ಪ್ರಭಾವಿಗಳು ಅಕ್ರಮವಾಗಿ ತರಿಸಿಕೊಂಡಿರುವ ಬಗ್ಗೆ ಇಡಿಗೆ ಸುಳಿವು ಸಿಕ್ಕಿದೆ. ಈ ಬಗ್ಗೆ ಸೂಕ್ತ ಸಾಕ್ಷ್ಯ ಕಲೆ ಹಾಕಲಾಗುತ್ತಿದೆ. ಸಿನಿಮಾ, ಉದ್ಯಮ, ರಾಜಕೀಯದ ನಂಟು ಹೊಂದಿರುವ ಹಲವು ಪ್ರಭಾವಿಗಳ ಮಕ್ಕಳಿಗೆ ಹೆಚ್ಚಿನ ಬೆಲೆಗೆ ವಿದೇಶಿ ಮಾದಕ ವಸ್ತುಗಳನ್ನು ಪೂರೈಕೆ ಮಾಡಿ ಕೋಟ್ಯಂತರ ರೂ. ಸಂಪಾದಿಸಿರುವ ಪೆಡ್ಲರ್​ಗಳು ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಮೊದಲು ಪೆಡ್ಲರ್​ಗಳನ್ನು ಖೆಡ್ಡಕ್ಕೆ ಬೀಳಿಸಿ ಅವರ ಅಕ್ರಮ ಆಸ್ತಿ-ಪಾಸ್ತಿ ಮುಟ್ಟುಗೊಲು ಹಾಕಲು ಇಡಿ ಸಿದ್ಧತೆ ನಡೆಸಿದೆ.
ಇದನ್ನೂ ಓದಿ:ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!
ಬೆಂಗ್ಳೂರಲ್ಲೇ 300 ಕೋಟಿ ವ್ಯವಹಾರ
ಚಿನ್ನ ಹಾಗೂ ಡ್ರಗ್ಸ್ ಕಳ್ಳಸಾಗಣೆ ಒಂದೇ ಮಾದರಿಯಲ್ಲಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೇರಳದ ಚಿನ್ನ ಸ್ಮಗ್ಲರ್​ಗಳಿಗೆ ಡ್ರಗ್ ಪೆಡ್ಲರ್​ಗಳ ನೆರವಿನ ಅಗತ್ಯವಿತ್ತು. ಹೀಗಾಗಿ ಸ್ವಪ್ನಾ ಸುರೇಶ್ ಹಾಗೂ ಆಕೆಯ ಗ್ಯಾಂಗ್ ಡ್ರಗ್ಸ್ ಮಾಫಿಯಾ ಜತೆಗೆ ನಂಟು ಇಟ್ಟುಕೊಂಡಿದ್ದರು. ವಾರ್ಷಿಕವಾಗಿ ಬೆಂಗಳೂರಿನಲ್ಲೇ 300 ಕೋಟಿ ರೂ.ಗೂ ಅಧಿಕ ಡ್ರಗ್ಸ್ ವಹಿವಾಟು ನಡೆಯುತ್ತದೆ ಎಂದು ಅಂದಾಜಿಸಲಾಗಿದೆ.
ಟ್ರಂಪ್ ನೊಬೆಲ್ ನಾಮನಿರ್ದೇಶನಕ್ಕೆ ಕಾಶ್ಮೀರದ ಕನೆಕ್ಷನ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + seven =
Remember me
