ವಿಲಾಸ ಮೇಲಗಿರಿ ಬೆಂಗಳೂರುಬರ ಪರಿಣಾಮದ ಆಯಾಮ ಸರ್ವವ್ಯಾಪಿ. ‘ಹರಿವ ನದಿಗೆ ಮೈಯಲ್ಲ ಕಾಲು’ ಎಂಬಂತೆ ಬರ ಇಡೀ ಬದುಕಿಗೇ ಬರೆ ಎಳೆಯುತ್ತದೆ. ಬರ ಎಂದಾಕ್ಷಣ ಆರ್ಥಿಕ ಆಯಾಮವೊಂದೇ ಅಲ್ಲ, ಜನ, ಜಾನುವಾರು, ಮಣ್ಣಿನ ಆರೋಗ್ಯಕ್ಕೂ ಮಾರಕ.
ಕೃಷಿಯು ರಾಜ್ಯದ ಜಿಡಿಪಿಗೆ ಶೇಕಡ 17ರಷ್ಟು ಕೊಡುಗೆ ಕೊಟ್ಟರೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶೇಕಡ 60ರಷ್ಟು ಉದ್ಯೋಗ ಕೊಡುವ ಕ್ಷೇತ್ರ. ಬರದ ಸಂದರ್ಭದಲ್ಲಿ ವಿಶೇಷವಾಗಿ ಗ್ರಾಮೀಣ ರೈತರು, ಕೃಷಿ ಕೂಲಿಕಾರ್ವಿುಕರಿಗೆ ಉದ್ಯೋಗವಿಲ್ಲದಾಗುತ್ತದೆ. ಇದು ಅವರ ಆರ್ಥಿಕ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ.
ರಾಜ್ಯದಲ್ಲಿ ಈ ಬಾರಿ ಹಿಂಗಾರು ಮತ್ತು ಮುಂಗಾರು ಎರಡೂ ಕೈಕೊಟ್ಟಿವೆ. 122 ವರ್ಷಗಳ ಬಳಿಕ ಅತೀ ಕಡಿಮೆ ಮಳೆ ಬಿದ್ದ ವರ್ಷ 2023. 236 ತಾಲೂಕುಗಳ ಪೈಕಿ 223 ತಾಲೂಕು ಬರಪೀಡಿತ ತಾಲೂಕುಗಳಾಗಿವೆ. ಈ ಪೈಕಿ 196 ತಾಲೂಕು ತೀವ್ರ ಬರಪೀಡಿತ ಎಂದು ಘೊಷಿಲಾಗಿದೆ. ರಾಜ್ಯದಲ್ಲಿ ಕಳೆದ ವರ್ಷ 168 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಆಗಿ ಸಾರ್ವಕಾಲಿಕ ದಾಖಲೆಯಾಗಿತ್ತು. ಈ ಬಾರಿ 148 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನಾ ಗುರಿ ಹೊಂದಲಾಗಿತ್ತು. ಆದರೆ, ಮಳೆ ಕೈಕೊಟ್ಟಿದ್ದರಿಂದ 50 ಲಕ್ಷ ಮೆ.ಟನ್ ಕಡಿಮೆ ಆಗುವುದಾಗಿ ಅಂದಾಜಿಸಲಾಗಿದೆ. ಬರ ದೀರ್ಘಾವಧಿ ಪರಿಣಾಮಗಳನ್ನೂ ಉಂಟುಮಾಡುತ್ತದೆ. 2013ರ ಬರದ ಕರಿನೆರಳು 10 ವರ್ಷ ನಮ್ಮನ್ನು ಬಾಧಿಸಿದ ನಿದರ್ಶನ ಕಣ್ಣಮುಂದಿದೆ.
ಅಭಿವೃದ್ಧಿಗೆ ಅಡ್ಡಿ:ಸರ್ಕಾರ ರೈತರಿಗೆ ಬೆಳೆ ಪರಿಹಾರ ನಷ್ಟ ತಲಾ 2000 ರೂ. ಘೋಷಣೆ ಮಾಡಿದ್ದು, ಅದಕ್ಕೆ 900 ಕೋಟಿ ರೂ., ಮಧ್ಯಂತರ ಬಿತ್ತನೆಗೆ 600 ಕೋಟಿ ರೂ., ತೊಗರಿ ಬೆಳೆ ಬೆಂಬಲ ಬೆಲೆಗೆ 250 ಕೋಟಿ ರೂ. ಹಾಗೂ ಕೊಬ್ಬರಿ ಖರೀದಿಗೆ ಪ್ರೋತ್ಸಾಹಧನ ಹೀಗೆ ಸರ್ಕಾರ 2000 ಕೋಟಿ ರೂ. ವೆಚ್ಚ ಮಾಡಿದರೆ, ಅದರಿಂದ ಅಭಿವೃದ್ಧಿಗೂ ಅಡ್ಡಿ.
ಬಡ್ಡಿಮನ್ನಾಕ್ಕೆ 540 ಕೋಟಿ ರೂ. ಬೇಕು:ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಿರುವ ಸರ್ಕಾರ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿಸಾಲದ ಮೇಲಿನ ಬಡ್ಡಿ ಮನ್ನಾ ಘೋಷಣೆ ಮಾಡಿದೆ. ಈ ಬಡ್ಡಿ ಮನ್ನಾಕ್ಕೆ 540 ಕೋಟಿ ರೂ.ಗಳ ಅಗತ್ಯವಿದೆ ಎಂದು ಅಂದಾಜಿಸಿದೆ. ಇದು ಕೂಡ ಬರದ ಪರಿಣಾಮವಾಗಿ ರಾಜ್ಯ ಸರ್ಕಾರದ ಮೇಲೆ ಬಿದ್ದಿರುವ ಹೊರೆಯಾಗಿದೆ.
ಸರ್ಕಾರಗಳ ನಡುವೆ ಜಟಾಪಟಿ:ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ವಿವಿಧ ತೆರಿಗೆ ಪಾಲಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಜಟಾಪಟಿ ನಡೆಯುತ್ತಿದೆ. ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕಾರೀಫ್​ನಲ್ಲಿ 48 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಗೀಡಾಗಿದೆ. ಇದರಿಂದ 35,162.05 ಕೋಟಿ ರೂ.ನಷ್ಟವಾಗಿದೆ. ಈ ನಷ್ಟಕ್ಕೆ ರಾಜ್ಯ ಸರ್ಕಾರ 18,171.44 ಕೋಟಿ ರೂ. ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಇದುವರೆಗೆ ನಯಾ ಪೈಸೆ ಬಿಡುಗಡೆಯಾಗಿಲ್ಲ. ಈ ನಡುವೆ ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಮೊದಲ ಕಂತಾಗಿ ತಲಾ 2 ಸಾವಿರ ರೂ.ಗಳಂತೆ 33 ಲಕ್ಷ ರೈತರಿಗೆ 628 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಎನ್​ಡಿಆರ್​ಎಫ್/ಎಸ್.ಡಿ.ಆರ್.ಎಫ್ ಅನುದಾನದ ನಿರೀಕ್ಷೆಯಲ್ಲಿರುವ ಸರ್ಕಾರ ಈ ಹಣ ಬಿಡುಗಡೆಯಾದರೆ ರೈತರಿಗೆ ಇನ್ನಷ್ಟು ನೆರವು ನೀಡುವ ವಾಗ್ದಾನ ಮಾಡಿದೆ. ಕೇಂದ್ರ ಕೊಡಲೊಲ್ಲದು, ರಾಜ್ಯ ಬಿಡಲೊಲ್ಲದು ಎಂಬ ಪರಿಸ್ಥಿತಿಯಲ್ಲಿ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿರುವುದಂತೂ ಸತ್ಯ.
ನರೇಗಾ ಕೂಲಿಯೂ ಖೋತಾ!:ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕಾರ್ವಿುಕರಿಗೆ 100 ದಿನ ಉದ್ಯೋಗ ಕೊಡುತ್ತಿದೆ. ರಾಜ್ಯದಲ್ಲಿ ಈ ಯೋಜನೆ ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರಿಂದ ದುಡಿವ ದಿನಗಳು ಬಹುತೇಕ ಮುಗಿದಿವೆ. ಹಾಗಾಗಿ ರಾಜ್ಯ ಸರ್ಕಾರ ನರೇಗಾ ಕಾಯ್ದೆಯನ್ವಯ ಬರದ ಸಂದರ್ಭದಲ್ಲಿ 100 ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದೆ. ಅದರೆ, ಅದಕ್ಕೆ ಅನುಮೋದನೆ ಸಿಕ್ಕಿಲ್ಲ. ಹಾಗಾಗಿ ಗ್ರಾಮೀಣ ಕೂಲಿ ಕಾರ್ವಿುಕರ ಕೈಗೆ ದುಡಿಯಲು ಕೆಲಸವಿಲ್ಲದಾಗಿದೆ, ಹೊಟ್ಟೆಗೆ ಅನ್ನ ಸಿಗದಂತಾಗಿದೆ.
ಹೆಚ್ಚಲಿದೆ ಹಣದುಬ್ಬರದ ಪರಿಣಾಮ:ಬರದಿಂದ ಆರ್ಥಿಕ ಪ್ರಗತಿ ಕುಗ್ಗುತ್ತದೆ. ಹಣದುಬ್ಬರದ ಒತ್ತಡವನ್ನು ಸರ್ಕಾರ ಎದುರಿಸಬೇಕಾಗುತ್ತದೆ. ದುರ್ಬಲ ಮುಂಗಾರು ಹಿಂಗಾರು ಮಳೆಯಿಂದ ಕೃಷಿ ಚಟುವಟಿಕೆ ಸೊರಗಿವೆ. ಅಣೆಕಟ್ಟುಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಬೆಳೆಗೆ ನೀರು ಬಿಡುವುದನ್ನು ನಿಲ್ಲಿಸಿ ಕುಡಿಯುವ ನೀರಿಗೆ ಮಾತ್ರ ಸಂಗ್ರಹಿಸಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ವೃದ್ಧರು, ಮಹಿಳೆಯರು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತವೆ. ಇದರಿಂದ ಸರ್ಕಾರ ಆರ್ಥಿಕ ಒತ್ತಡಕ್ಕೆ ಸಿಲುಕುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದ ಹಾದಿ ಹಿಡಿದು ಮಾಗೋಪಾಯಗಳನ್ನು ಕಂಡುಹಿಡಿಯಬೇಕಿದೆ.
ಅಂತರ್ಜಲ ಕುಸಿತದ ಆತಂಕ:ಇಡೀ ವರ್ಷ ಮಳೆರಾಯ ಕೈಕೊಟ್ಟಿರುವುದರಿಂದ ಭೂಮಿಯ ತೇವಾಂಶ ಒಣಗಿದೆ. ಅಂತರ್ಜಲ ಕುಸಿಯುವ ಆತಂಕ ಎದುರಾಗಿದೆ. ಜಲಾಶಯಗಳು ಬತ್ತುತ್ತಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಸಾಧ್ಯತೆಗಳಿವೆ. 7082 ಹಳ್ಳಿ ಹಾಗೂ ನಗರ ಮತ್ತು ಪಟ್ಟಣ ಪ್ರದೇಶದ 1193 ವಾರ್ಡ್​ಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಪ್ರಸ್ತುತ 156 ಹಳ್ಳಿಗಳಲ್ಲಿ 183 ಕೊಳವೆಬಾವಿ ಬಾಡಿಗೆಗೆ ಪಡೆಯಲಾಗಿದೆ. 46 ಹಳ್ಳಿ ಹಾಗೂ 46 ವಾರ್ಡ್​ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ. ಜಲಾಶಯಗಳು ಬರಿದಾಗುತ್ತಿರುವ ಕಾರಣ ಜಲ ವಿದ್ಯುತ್ ಉತ್ಪಾದನೆ ಕೂಡ ಕುಂಠಿತವಾಗಿದೆ. ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಬೇಕಾದ ಪರಿಸ್ಥಿತಿ ತಲೆದೋರಿದೆ.
ಪ್ರತಿಪಕ್ಷಗಳಿಗೆ ಅಸ್ತ್ರ:ಬರ ಪರಿಹಾರ ಮತ್ತು ಬರ ನಿರ್ವಹಣೆ ಪ್ರತಿಪಕ್ಷಗಳ ಹೋರಾಟಕ್ಕೆ ದೊಡ್ಡ ಅಸ್ತ್ರವಾಗಿದೆ. ಬಿಜೆಪಿ ಅವಧಿಯಲ್ಲಿ ಕೇಂದ್ರದ ಮಾರ್ಗಸೂಚಿಗಿಂತ ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಅದನ್ನೇ ಮುಂದಿಟ್ಟು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದೆ. ಈ ಹೋರಾಟ ವಿಧಾನ ಮಂಡಲದ ಒಳಗೂ ಪ್ರತಿಧ್ವನಿಸುವ ಸಾಧ್ಯತೆ ಇದೆ.
ಹಸಿರು ಬರದಿಂದ ತುಸು ಉಸಿರು:ಮೊದಲೆಲ್ಲ ಬರ ಎಂದರೆ ವ್ಯಾಪಕವಾಗಿ ಒಣಗಿದ ಬೆಳೆಗಳೇ ಕಾಣುತ್ತಿದ್ದವು. ಈ ಬಾರಿ ಕೇಂದ್ರದ ಬರ ಅಧ್ಯಯನ ತಂಡ ಬಂದಾಗ ಅಂತಹ ಪರಿಸ್ಥಿತಿ ಇರಲಿಲ್ಲ. ಪೈರು ಹಸಿರಾಗಿ ಕಂಡರೂ ಕಾಳು ಕಟ್ಟದಿರುವುದನ್ನು ಮನದಟ್ಟು ಮಾಡಿಕೊಡಲಾಯಿತು. ಜತೆಗೆ ಹಿಂದಿನಂತೆ ಇಡೀ ರಾಜ್ಯಕ್ಕೆ ರಾಜ್ಯವೇ ಏಕರೂಪವಾಗಿ ಬರ ಬಂದಿಲ್ಲ. ಕೆಲವು ತಾಲೂಕು/ಜಿಲ್ಲೆಗಳಲ್ಲಿ ತೀವ್ರ ಬರವಿದ್ದರೆ, ಮತ್ತೆ ಕೆಲವು ತಾಲೂಕು/ಜಿಲ್ಲೆಗಳಲ್ಲಿ ಸಾಧಾರಣ ಬರವಿದೆ. ಹಾಗಾಗಿ 20-30 ವರ್ಷಗಳ ಹಿಂದಿನಂತೆ ರೈತರು, ಕೃಷಿ ಕೂಲಿಕಾರ್ವಿುಕರು ಗುಳೆ ಹೋಗುವ ಪರಿಸ್ಥಿತಿ ಇಲ್ಲ. ಹಸಿರು ಬರದ ಕಾರಣ ಜಾನುವಾರುಗಳ ಮೇವಿನ ಸಮಸ್ಯೆ ಅಷ್ಟಾಗಿ ಬಿಗಡಾಯಿಸಿಲ್ಲ.
ಬರ ರೈತರ ಮೇಲೆ ಗಂಭೀರ ಪರಿಣಾಮ ಬೀರಿದೆ. ಅದರಲ್ಲೂ ಉತ್ತರ ಕರ್ನಾಟಕದ ರೈತರು ತತ್ತರಿಸಿದ್ದಾರೆ. ಇದರಿಂದ ಬೆಲೆ ಏರಿಕೆ ಉಂಟಾಗಿ ಜನಸಾಮಾನ್ಯರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉಚಿತ ಯೋಜನೆಗಳಿಂದ ಜನರಿಗೆ ತಕ್ಕ ಮಟ್ಟಿಗೆ ಅನುಕೂಲವಾಗಿವೆ. ಬರ ನಿರ್ವಹಣೆಗೆ ಕೆಲವು ಸವಲತ್ತುಗಳನ್ನು ವಿಸ್ತರಿಸಲೇಬೇಕಾದ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ.
| ಸಂಪತ್ ರಾಮನ್,  ಸಲಹೆಗಾರರು, ಕೈಗಾರಿಕಾ ಸಮಿತಿ, ಅಸೋಚಾಮ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 4 =
Remember me
