| ಶ್ರೀಕಾಂತ್ ಶೇಷಾದ್ರಿ
ಬೆಂಗಳೂರು:ಪರಿಶಿಷ್ಟ ಜಾತಿ ಒಳಮೀಸಲು ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಒಳಮೀಸಲು ಕುರಿತ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಪರ-ವಿರೋಧದ ಹೇಳಿಕೆಗಳೂ ಬರುತ್ತಿವೆ. ಇದೇ ವೇಳೆ ಪರಿಶಿಷ್ಟ ಪಂಗಡದಲ್ಲೂ ಒಳಮೀಸಲು ಕೊಡಬೇಕೆಂಬ ದನಿ ಗಟ್ಟಿಯಾಗಿ ಕೇಳಿಸದ ಸ್ಥಿತಿಯಲ್ಲಿದೆ.
ಈ ಮಧ್ಯೆ ಪರಿಶಿಷ್ಟ ಪಂಗಡದ ಒಳಮೀಸಲು ಜಾರಿ ಮಾಡಬೇಕೆಂಬ ಬಗ್ಗೆ ಪ್ರೊ.ಮುಜಾಫರ್ ಅಸ್ಸಾದಿ ಅವರ ‘ನ್ಯಾಯಾಂಗ ಸಮಿತಿ’ ಸರ್ಕಾರಕ್ಕೆ ಸಲ್ಲಿಸಿದ ವರದಿ ಧೂಳು ತಿನ್ನುತ್ತಿದೆ. ಈ ವರದಿ ನ್ಯಾಯಾಲಯ ಮುಖೇನ ಸರ್ಕಾರಕ್ಕೆ 2016ರಲ್ಲಿ ಸಲ್ಲಿಕೆಯಾಗಿದ್ದು, ನ್ಯಾಯಾಲಯ ವರದಿ ಅನುಷ್ಠಾನ ಮಾಡಲು 3 ತಿಂಗಳು ಗಡುವು ನೀಡಿತ್ತು. ಆದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ನ್ಯಾಯಾಂಗ ಉಲ್ಲಂಘನೆಯೂ ಆಗಬಹುದು.
ವನ್ಯಜೀವಿ ಕಾಯ್ದೆ ಅನುಷ್ಠಾನ ನೆಪದಲ್ಲಿ 1972ರಿಂದೀಚೆಗೆ 23 ಸಾವಿರ ಆದಿವಾಸಿಗಳನ್ನು ಅರಣ್ಯದಿಂದ ಒಕ್ಕಲೆಬ್ಬಿಸಲಾಗಿದೆ, ಪುನರ್ವಸತಿಯನ್ನೂ ಕಲ್ಪಿಸಿಲ್ಲ ಎಂದು ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಆದರೆ, ಅರಣ್ಯ ಇಲಾಖೆ ತಾನು ಒಕ್ಕಲೆಬ್ಬಿಸಿಲ್ಲ, ಸ್ವಯಂಪ್ರೇರಿತರಾಗಿ ಆದಿವಾಸಿಗಳು ಕಾಡಿನಿಂದ ಹೊರ ಬಂದಿದ್ದಾರೆ. ಪುನರ್ವಸತಿಯನ್ನೂ ಕಲ್ಪಿಸಲಾಗಿದೆ ಎಂದು ವಾದಿಸಿತು. ಈ ಕಾರಣಕ್ಕೆ ವಾಸ್ತವಾಂಶ ಕಂಡುಕೊಳ್ಳಲು 2012ರಲ್ಲಿ ಹೈಕೋರ್ಟ್ ಮುಖ್ಯನಾರ್ಯಮೂರ್ತಿಯವರು ಪ್ರೊ.ಮುಜಾಫರ್ ಅಸ್ಸಾದಿ ನೇತೃತ್ವದಲ್ಲಿ ಮೂರು ಜನರ ಸಮಿತಿ ರಚಿಸಿತು. ರಾಜ್ಯಾದ್ಯಂತ ಹಾಡಿಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಸಮಿತಿ 2016ರಲ್ಲಿ 30 ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.
ಈ ವರದಿಯ ಪ್ರಮುಖ ಅಂಶಗಳಲ್ಲಿ ಪರಿಶಿಷ್ಟ ಪಂಗಡದ ಆದಿವಾಸಿಗಳಿಗೆ ಒಳಮೀಸಲು ಅನಿವಾರ್ಯತೆ ಪ್ರಸ್ತಾಪಿಸಲಾಗಿದೆ. ಶೈಕ್ಷಣಿಕ, ರಾಜಕೀಯ, ಔದ್ಯೋಗಿಕವಾಗಿ ಪರಿಶಿಷ್ಟರ ಪ್ರಾತಿನಿಧ್ಯ ಕಡಿಮೆ ಇದೆ. ಅರಣ್ಯದೊಳಗೆ ಮತ್ತು ಅರಣ್ಯದಂಚಿನಲ್ಲಿರುವ ಆದಿವಾಸಿಗಳ ಪರಿಸ್ಥಿತಿ ಸುಧಾರಿಸಿಲ್ಲ. ಒಳಮೀಸಲು ಕೊಡಬೇಕೆಂಬ ದನಿಯೂ ಈ ಸಮುದಾಯಕ್ಕಿಲ್ಲ. ಸರ್ಕಾರ ಕೂಡ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ವಿಜಯವಾಣಿ ಜತೆ ಪ್ರೊ.ಅಸ್ಸಾದಿ ಅಭಿಪ್ರಾಯ ಹಂಚಿಕೊಂಡರು. ಪರಿಶಿಷ್ಟ ಪಂಗಡದಲ್ಲಿ ವಿವಿಧ ವರ್ಗಗಳಿದ್ದು, ಸರ್ಕಾರದ ಕಾನೂನುಗಳೇ ಅವರನ್ನು ಮತ್ತಷ್ಟು ಬಡತನಕ್ಕೆ ತಳ್ಳುತ್ತಿವೆ. ಅವರಿಗೆ ಒಳ ಮೀಸಲಾತಿ ನೀಡಿದಾಗ ಬದಲಾವಣೆ ಆರಂಭವಾಗಬಹುದು ಎಂದು ವಿವರಿಸಿದರು. ಶಿಕ್ಷಣ ವಂಚಿತ, ಬಡತನ, ಪ್ರಾತಿನಿಧ್ಯ ಕೊರತೆ ಆಧಾರದ ಮೇಲೆ ಅವರಿಗೆ ಒಳ ಮೀಸಲು ಅಗತ್ಯ ಎಂದು ನಮ್ಮ ಸಮಿತಿ ನ್ಯಾಯಾಲಯಕ್ಕೆ ಶಿಫಾರಸು ಮಾಡಿತ್ತು. ನ್ಯಾಯಾಲಯ ವರದಿಯನ್ನು ಒಪ್ಪಿ ಅನುಷ್ಠಾನ ಮಾಡಲು ಸರ್ಕಾರಕ್ಕೆ ಸೂಚಿಸಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದು ಅಸ್ಸಾದಿ ಅವರ ಬೇಸರ.
ಬಲಾಢ್ಯರಿಗೆ ಅವಕಾಶ
ಎಸ್​ಸಿ-ಎಸ್​ಟಿ ಪಟ್ಟಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಎಸ್ಸಿ-ಎಸ್ಟಿಗಳಲ್ಲಿ ಇರುವ ಬಲಾಢ್ಯರು ಅದೇ ಸಮುದಾಯದ ಹಿಂದುಳಿದಿರುವವರಿಗೆ ಸವಲತ್ತನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ವಾಲ್ಮೀಕಿ, ನಾಯಕ ಸಮುದಾಯ ಹೆಚ್ಚು ಪಾಲು ಪಡೆಯುತ್ತಿವೆ ಎಂಬ ಅಭಿಪ್ರಾಯವಿದೆ. ಇದು ಕಾಡೊಳಗೆ ಮತ್ತು ಕಾಡಂಚಿನಲ್ಲಿನ ಪರಿಶಿಷ್ಟ ಪಂಗಡದವರಿಗೂ ಲಭಿಸಬೇಕೆಂಬ ಸಣ್ಣ ದನಿ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
