ಬೆಂಗಳೂರು:ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣದ ಸಂಬಂಧ ಸಿಬಿಐ ಸಲ್ಲಿಸಿದ್ದ ಬಿ ವರದಿ ತಿರಸ್ಕರಿಸಿ, ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ಹಾಗೂ ಪ್ರಕರಣ ರದ್ದು ಕೋರಿ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ ಹಾಗೂ ಎ.ಎಂ. ಪ್ರಸಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಬುಧವಾರ ಪ್ರಕಟಿಸಿರುವ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ, ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ಎತ್ತಿಹಿಡಿದಿದ್ದು, ಮೂವರೂ ಅರ್ಜಿದಾರರ ವಿರುದ್ಧದ ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ದಾಖಲೆಗಳು ಅರ್ಜಿದಾರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆನ್ನುವುದನ್ನು ಮೇಲ್ನೋಟಕ್ಕೆ ಸಾಬೀತು ಪಡಿಸಿಲ್ಲ. ಅರ್ಜಿದಾರರ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳು ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದು, ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗಿದೆ. ಆದ್ದರಿಂದ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬಹುದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಾದವೇನು?:ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಪ್ರಕರಣದ ಸಂಬಂಧ ಕಾಗ್ನಿಜೆನ್ಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯ ಲೋಪವೆಸಗಿದೆ. ಮೊದಲು ತನಿಖೆ ನಡೆಸಿದ್ದ ಸಿಐಡಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಮೃತರ ಕುಟುಂಬ ಸದಸ್ಯರು ಸುಪ್ರೀಂಕೋರ್ಟ್ ಮೊರೆ ಹೋದ ಕಾರಣ, ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ ಸಹ ಪ್ರಕರಣದ ಸಂಬಂಧ 2019ರ ಅ.30ರಂದು ಬಿ ರಿಪೋರ್ಟ್ ಸಲ್ಲಿಸಿದೆ. ಹೀಗಿದ್ದರೂ, ಸಿಬಿಐ ವರದಿ ತಿರಸ್ಕರಿಸಿ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿದ್ದರು.
ಸಿಬಿಐ ವಾದವೇನು?:ಸಿಬಿಐ ಪರ ವಾದ ಮಂಡಿಸಿದ್ದ ಪಿ. ಪ್ರಸನ್ನ ಕುಮಾರ್, ಮಂಗಳೂರು ಚರ್ಚ್ ಗಲಭೆ ನಡೆದ 3 ವರ್ಷಗಳ ನಂತರ ಜಾರ್ಜ್ ಸಚಿವರಾಗಿದ್ದಾರೆ. ಗಣಪತಿ ಆತ್ಮಹತ್ಯೆಗೆ 4 ವರ್ಷಗಳ ಹಿಂದೆ ಮೇಲಧಿಕಾರಿಗಳು ನೀಡಿದ ಕಿರುಕುಳ ಕಾರಣ ಎನ್ನಲಾಗಿದೆ. ಆದರೆ, ಈ ಆರೋಪವನ್ನು ಆತ್ಮಹತ್ಯೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮೇಲಾಗಿ, ಗಣಪತಿ ಅವರಿಗೆ ಮರೆವಿನ ಕಾಯಿಲೆ ಜತೆಗೆ, ಆರಂಭಿಕ ಹಂತದ ಪಾರ್ಕಿನ್‌ಸನ್ ಎಂಬ ಮಾನಸಿಕ ಕಾಯಿಲೆಯೂ ಇತ್ತು ಎಂದು ವೈದ್ಯರ ವರದಿಯಲ್ಲಿ ತಿಳಿದುಬಂದಿದೆ. ಅವರ ಆತ್ಮಹತ್ಯೆ ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಾೃಧಾರಗಳಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
