ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ‘ಇ-ಆಸ್ಪತ್ರೆ’ ಸ್ಪರ್ಶ ನೀಡುವ ಸರ್ಕಾರದ ಪ್ರಯತ್ನ ಮುಂದುವರಿಸಿದ್ದು, 122 ತಾಲೂಕು ಆಸ್ಪತ್ರೆಗಳು ಹಾಗೂ 50 ಸಮುದಾಯ ಆರೋಗ್ಯ ಕೇಂದ್ರ, 3 ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಇದು ಅನುಷ್ಠಾನಕ್ಕೆ ಬರುತ್ತಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಇದಕ್ಕಾಗಿ 56.79 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು.
ಏನಿದು ಯೋಜನೆ?: ಇ-ಆಸ್ಪತ್ರೆ ಎಂದರೆ, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಆರೋಗ್ಯ ಸಂಬಂಧಿ ಮಾಹಿತಿಯನ್ನು ವೈಜ್ಞಾನಿಕವಾಗಿ ದಾಖಲೆ ಮಾಡಿಟ್ಟುಕೊಳ್ಳುವುದು. ರೋಗಿಯು ಮುಂದೆ ಯಾವುದೇ ಸಂದರ್ಭದಲ್ಲಿ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಾಗ ಅವರ ಮಾಹಿತಿ ಚಿಕಿತ್ಸೆ ನೀಡುವ ವೈದ್ಯರಿಗೆ ತಿಳಿಯಲಿದೆ. ಈ ಯೋಜನೆ ಆರಂಭವಾಗಿ ಮೂರು ವರ್ಷಗಳೇ ಕಳೆದಿವೆ. ಇದೀಗ ತಾಲೂಕು ಮತ್ತು ಅದಕ್ಕಿಂತಲೂ ಕೆಳಹಂತದ ಆಸ್ಪತ್ರೆಗಳಿಗೆ ವಿಸ್ತರಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ.
ಉಪ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ವಿಭಾಗೀಯ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಇದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಬೇಕೆಂಬ ಉದ್ದೇಶವಿದೆ.
ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲೂ ರೋಗಿಗಳು ದಾಖಲೆ ಮಾಡಿಟ್ಟುಕೊಳ್ಳುವ ವ್ಯವಸ್ಥೆ ಇಲ್ಲ. ರೋಗಿಗಳಲ್ಲಂತೂ ದಾಖಲೆ ಇಟ್ಟುಕೊಂಡು ಮುಂದಿನ ಚಿಕಿತ್ಸೆ ವೇಳೆ ಆಸ್ಪತ್ರೆ ಗಮನಕ್ಕೆ ತರುವ ಸಂಸ್ಕೃತಿ ಇಲ್ಲ. ಇ-ಆಸ್ಪತ್ರೆ ಮೂಲಕ ಈ ಕೊರತೆಯನ್ನು ನೀಗಿಸಿಕೊಳ್ಳಲಾಗುತ್ತದೆ.
ಇ-ಆಸ್ಪತ್ರೆ ಸೇವೆಯಡಿ ಪ್ರತಿ ರೋಗಿಗೂ ಬಾರ್ ಕೋಡ್ ಹೊಂದಿರುವ ಒಪಿಡಿ ಚೀಟಿ ನೀಡಲಾಗುತ್ತದೆ. ಬಳಿಕ ತಪಾಸಣೆ ವೇಳೆ, ಪತ್ತೆಯಾದ ರೋಗ, ನೀಡಿದ ಚಿಕಿತ್ಸೆ, ಔಷಧ, ಔಷಧ ಶಿಫಾರಸು, ಚಿಕಿತ್ಸೆ ನೀಡಿದ ವೈದ್ಯರು, ಪ್ರಯೋಗಾಲಯ ಮಾಹಿತಿ ದಾಖಲಾಗುತ್ತ ಹೋಗುತ್ತದೆ. ಪ್ರತಿ ವೈದ್ಯರಿಗೂ ಯೂನಿಕ್ ಕೋಡ್ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಹಾಗಾಗಿ ವೈದ್ಯರು ತಮ್ಮದೇ ಆದ ಐಡಿಯಲ್ಲಿ ಲಾಗ್ ಇನ್ ಆಗಿ ಚಿಕಿತ್ಸೆ ನೀಡಬೇಕು. ರೋಗಿಗೂ ಸಹ ಪ್ರತಿ ಹಂತದ ವಿವರ ಎಸ್​ಎಂಎಸ್ ಸಂದೇಶ ಬರುತ್ತದೆ.
ಪ್ರಮುಖ ತೀರ್ಮಾನಗಳು
ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿ ಮೀನು ಜಟ್ಟಿಗಳ ನಿರ್ಮಾಣಕ್ಕೆ 12 ಕೋಟಿ ರೂ.
ಮೈಸೂರು ಲ್ಯಾಂಪ್ ಮತ್ತು ಮೈಸೂರು ಮಿನರಲ್ಸ್ ವಿಲೀನ ಮುಂದೂಡಿಕೆ
250 ಅಟೆಂಡರ್ ನೇಮಕಕ್ಕೆ ಘಟನೋತ್ತರ ಅನುಮತಿ ಕರ್ನಾಟಕ ಎಂಪ್ಲಾಯಿಮೆಂಟ್ ಸರ್ವೀಸಸ್ ವೃಂದ ನೇಮಕಾತಿ 2020ಗೆ ಅಸ್ತು
ಕರ್ನಾಟಕ ರೇಸ್ ಕೋರ್ಸ್ ಲೈಸೆನ್ಸಿಂಗ್ ತಿದ್ದುಪಡಿ ವಿಧೇಯಕ
ಶಿಂಷಾದಿಂದ ಭೀಮಾ ಜಲಾಶಯಕ್ಕೆ ನೀರೊದಗಿಸಲು 20.83 ಕೋಟಿ ರೂ. ಕಣ್ವದಿಂದ 17 ಕೆರೆಗೆ ನೀರು ತುಂಬಿಸಲು 24.85 ಕೋಟಿ ರೂ.
ಗ್ರಾಮೀಣ ನೈರ್ಮಲ್ಯ ನೀತಿಗೆ ಒಪ್ಪಿಗೆ ಉನ್ನತ ಶಿಕ್ಷಣಸಂಸ್ಥೆಗಳ ವೇತನ- ಪಿಂಚಣಿ ನಿಯಂತ್ರಣ ಮಸೂದೆಗೆ ಒಪ್ಪಿಗೆ
ಓಪನ್ ಸ್ಪೇಸ್ ಪ್ರಿವೆನ್​ಶನ್ ಆಫ್ ಡಿಸ್​ಫಿಗರ್ ಮೆಂಟ್ ಬಿಲ್, ಮುನಿಸಿಪಾಲಿಟಿ ಆಂಡ್ ಅದರ್ ಲಾ ಬಿಲ್, ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್ ಬಿಲ್​ಗೆ ಒಪ್ಪಿಗೆ
2 ಸಂಪುಟ ಉಪ ಸಮಿತಿ
ಹುದ್ದೆಗಳ ವಿಲೀನೀಕರಣ ಮಾಡುವ ಬಗ್ಗೆ ಸಂಪುಟಕ್ಕೆ ಶಿಫಾರಸು ಮಾಡಲು ಉಪ ಸಮಿತಿ ರಚನೆಯಾಗಿದೆ. ವಿವಿಧ ಹುದ್ದೆಗಳು ಗಣನೀಯ ಪ್ರಮಾಣದಲ್ಲಿ ವೇತನ ಪಡೆಯುತ್ತಿವೆ. ಇದರಿಂದ ಭವಿಷ್ಯದಲ್ಲಿ ಸರ್ಕಾರದ ಆದಾಯವೆಲ್ಲ ವೇತನ ನೀಡಲು ವೆಚ್ಚವಾಗುತ್ತದೆ. ಈ ಕಾರಣಕ್ಕೆ ಹುದ್ದೆ ವಿಲೀನೀಕರಣ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಂಪುಟದಲ್ಲಿ ಚರ್ಚೆಯಾಗಿದೆ. ನೈಸ್​ನ ಭೂಮಿ ಖರೀದಿ ವಿಚಾರದಲ್ಲೂ ಪರಾ ಮರ್ಶೆಗೆ ಸಂಪುಟ ಉಪ ಸಮಿತಿ ರಚಿಸಲಾಗಿದೆ.
ಅಟಲ್ ಭೂಜಲ ಯೋಜನೆಗೆ ಒಪ್ಪಿಗೆ
ಅಂತರ್ಜಲ ಮಟ್ಟವನ್ನು ಹೆಚ್ಚಿಸಲು 1200 ಕೋಟಿ ರೂ. ವೆಚ್ಚದ ಅಟಲ್ ಭೂಜಲ್ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ಸಾರ್ವಜನಿಕ ಸಹಭಾಗಿತ್ವದಡಿ ಅಂತರ್ಜಲ ಹೆಚ್ಚಿಸುವ ವಿವಿಧ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ವಸತಿ ಶಾಲೆಗೆ ಹಣ
ಸಮಾಜ ಕಲ್ಯಾಣ ಇಲಾಖೆಯಿಂದ 25 ಸ್ಥಳದಲ್ಲಿ ಎಸ್ಸಿಎಸ್ಟಿ ಮಕ್ಕಳಿಗಾಗಿ ಅಂಬೇಡ್ಕರ್ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ವಿುಸಲು 579.75 ಕೋಟಿ ರೂ. ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ.
ಎಲ್ಲೆಲ್ಲಿ ಇ-ಆಸ್ಪತ್ರೆ?
ಬಾಗಲಕೋಟೆ, ಕೋಲಾರದಲ್ಲಿ ತಲಾ 6, ಚಾಮರಾಜನಗರ 4, ಉಡುಪಿ, ಯಾದಗಿರಿಯಲ್ಲಿ ತಲಾ 3, ಬೆಂಗಳೂರು, ದಕ್ಷಿಣ ಕನ್ನಡ, ವಿಜಯಪುರ, ಚಿಕ್ಕಮಗಳೂರಿನಲ್ಲಿ ತಲಾ 2,ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕಲಬುರಗಿ, ಮಂಡ್ಯ, ಶಿವಮೊಗ್ಗ, ಮೈಸೂರು, ರಾಮನಗರ, ಕೊಡಗು, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 1 ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಹಂತದ ಇ-ಹಾಸ್ಟಿಟಲ್ ವ್ಯವಸ್ಥೆ ಜಾರಿಯಾಗಿದೆ. 122 ತಾಲೂಕುಗಳಲ್ಲಿ ಮೊದಲ ಹಂತದ ಇ-ಆಸ್ಪತ್ರೆ ಯೋಜನೆ ಅನುಷ್ಠಾನ ಪ್ರಕ್ರಿಯೆ ನಡೆದಿದ್ದು, ಎರಡು ವಾರದಲ್ಲಿ ಕಾರ್ಯಗತವಾಗಲಿದೆ.
ರಾಜ್ಯದಸರ್ಕಾರಿ ಆಸ್ಪತ್ರೆಗಳಲ್ಲಿ ಇ- ಆಸ್ಪತ್ರೆ ವ್ಯವಸ್ಥೆ ಜಾರಿಗೆ ಸಿದ್ಧತೆ ಕೈಗೊಳ್ಳಲಾಗಿದೆ. ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ಮೊದಲ ಹಂತದ ಯೋಜನೆ ಕಾರ್ಯಗತವಾಗಿದೆ. ಯೋಜನೆಯ ಸಂಪೂರ್ಣ ಅನುಷ್ಠಾನ ಶೀಘ್ರ ಆಗಲಿದೆ.
| ಅರುಣಕುಮಾರ ಡಿ.ಪಿ. ಉಪ ನಿರ್ದೇಶಕ, ಇ-ಆಸ್ಪತ್ರೆ ಯೋಜನೆ, ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
