|ಮೃತ್ಯುಂಜಯ ಕಪಗಲ್ಹೊಸಪೇಟೆ
ರಾಜ್ಯದ ಸಚಿವರ ಕಾರ್ಯಶೈಲಿ ಬದಲಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ಸಂಪುಟ ಬದಲಾವಣೆ ನಿಶ್ಚಿತ ಎಂಬ ಇಂಗಿತವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಆಮೂಲಕ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಬಹುದಾದ ಸಾಧ್ಯತೆಗೂ ಇಂಬು ನೀಡಿದ್ದಾರೆ. ಅಲ್ಲದೆ, ರಾಜ್ಯದ ಪ್ರತಿಯೊಂದು ಬೆಳವಣಿಗೆಯನ್ನು ವರಿಷ್ಠರು ಅವಲೋಕಿಸುತ್ತಿದ್ದಾರೆ ಎಂಬ ನೇರ ಎಚ್ಚರಿಕೆ ರವಾನಿಸಿದ್ದಾರೆ. ಬದಲಾವಣೆ ಸಂಕಲ್ಪದೊಂದಿಗೆ ಎದುರಾಗಿರುವ ಹೊಸ ಸವಾಲುಗಳನ್ನು ಮೆಟ್ಟಿನಿಂತು ಮಿಷನ್ 150 ಸಂಕಲ್ಪ ಸಾಧಿಸುವ ಛಲಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ, ಕೋರ್ ಕಮಿಟಿ ಸಭೆ ಮುನ್ನುಡಿ ಬರೆದಿದೆ. ಆಕರ್ಷಣೀಯವಾದ ಗುರಿಯೊಂದಿಗೆ ನಿಷ್ಠುರ ನಿರ್ಧಾರಗಳ ಮೂಲಕ ಮುಂದಿನ ಪ್ರತಿಯೊಂದು ನಡೆ ನಿರ್ಧರಿಸುವ ಜವಾಬ್ದಾರಿ ತನ್ನದು ಎಂಬ ನಿಲುವನ್ನು ವರಿಷ್ಠರು ತಳೆದಿರುವ ಮಹತ್ವದ ಸುಳಿವನ್ನೂ ನೀಡಿದೆ.
ಕೋರ್ ಕಮಿಟಿ ಸಭೆ ಔಪಚಾರಿಕವಾಗಿ ನಡೆದಿದ್ದರೂ ಮಿಷನ್ 150 ಸಂಕಲ್ಪ ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ನಾಯಕತ್ವವನ್ನು ಇನ್ನಷ್ಟು ಬಿಗು ಮಾಡುವತ್ತ ವರಿಷ್ಠರ ಚಿತ್ತ ನೆಟ್ಟಿರುವುದು ಸ್ಪಷ್ಟವೆಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ವಾತಾವರಣ ಹೇಗಿದೆ ಎಂದು ತಿಳಿದುಕೊಳ್ಳಲು ನಡ್ಡಾ ಪ್ರಯತ್ನಿಸಿದ್ದು, ಸರ್ಕಾರ ಮತ್ತು ರಾಜ್ಯ ನಾಯಕರ ಕಾರ್ಯವೈಖರಿ ಸುಧಾರಣೆಗೂ ಸಲಹೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾರ್ಯಕಾರಿಣಿ ಸಭೆ ಬಿಜೆಪಿ ಸಂಸ್ಕೃತಿಗೆ ಒಗ್ಗದ ಕೊರತೆಗಳನ್ನು ಸರಿದೂಗಿಸಿಕೊಳ್ಳುವ ಗುರುತರ ಜವಾಬ್ದಾರಿಯನ್ನು ಸರ್ಕಾರಕ್ಕೆ ನೀಡಿದೆ.
ಮೋದಿಗೆ ಜೈಕಾರ:ಪ್ರಧಾನಿ ನರೇಂದ್ರ ಮೋದಿಗೆ ಉಘೕ ಉಘೕ ಎನ್ನುವ ಮೂಲಕ ಕಾರ್ಯಕಾರಿಣಿ ಸಭೆಗೆ ಭಾನುವಾರ ತೆರೆಬಿದ್ದಿದ್ದು, ಜನಪರ, ದಕ್ಷ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವೇ ರಾಜ್ಯ ಸರ್ಕಾರಕ್ಕೆ ಮೇಲ್ಪಂಕ್ತಿಯಾಗಲಿದೆ ಎಂಬ ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲ ಜನರಿಗೆ ತಲುಪಿಸಿ, ವ್ಯಾಪಕ ಪ್ರಚಾರದ ಮೂಲಕ ಜಾಗೃತಿ ಮೂಡಿಸಿದರೆ ಪ್ರತಿಪಕ್ಷಗಳ ಸವಾಲು ಸಮರ್ಥವಾಗಿ ನಿಭಾಯಿಸಬಹುದು. ಅದೇ ಕಾಲಕ್ಕೆ ಜನರ ವಿಶ್ವಾಸ ಗಳಿಸಿ ಸರ್ಕಾರದ ಪರ ಅಭಿಪ್ರಾಯ, ಪಕ್ಷದ ಪರವಾಗಿ ಅಲೆ ಸೃಷ್ಟಿಸಲು ಸಂಘಟನೆ ಶಕ್ತವಾಗಲಿದೆ ಎಂಬ ಮಂತ್ರವನ್ನೇ ಕಾರ್ಯಕಾರಿಣಿ ಮತ್ತು ಕೋರ್ ಕಮಿಟಿ ಸಭೆಗಳು ಪುನರುಚ್ಚರಿಸಿವೆ.
ಹಿಂದು ಸಮಾಜದ ರಕ್ಷಣೆ ಜತೆಗೆ ಸರ್ವಾಂಗೀಣ ಅಭಿವೃದ್ಧಿಗೆ ವಿಜಯನಗರ ಸಾಮ್ರಾಜ್ಯ ಮಾದರಿಯಾಗಿದೆ. ಅದನ್ನೇ ಅನುಸರಿಸಿ ಜನರ ವಿಶ್ವಾಸ ಗಳಿಸುವ ಮೂಲಕ ನಿರೀಕ್ಷಿತ ಗುರಿಯೆಡೆಗೆ ಸಾಗಬೇಕು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಯಕರು ರಾಷ್ಟ, ರಾಜ್ಯ ನಾಯಕರು ಹೇಳುವ ಮೂಲಕ ಮುಖಂಡರು ಮತ್ತು ಕಾರ್ಯಕರ್ತರಿಗೆ ಹುರಿದುಂಬಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ನಕಾರಾತ್ಮಕ ಧೋರಣೆಯ ರಾಜಕಾರಣಕ್ಕೆ ಒತ್ತು ನೀಡಿದೆ ಎಂಬ ವಾಗ್ದಾಳಿ ಪಕ್ಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾನುವಾರವೂ ಮುಂದುವರಿಯಿತು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಕಲ್ಲಿದ್ದಲು, ಗಣಿ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದ ವೇಳೆ ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಮುಳುಗಿದ್ದು, ಆ ಪಕ್ಷದ ಕನಸು ಕನಸಾಗಿಯೇ ಉಳಿಯಲಿದೆ ಎಂದು ಲೇವಡಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಖಂಡನಾ ನಿರ್ಣಯ ಮಂಡಿಸಿದ ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್ ಸೈದ್ಧಾಂತಿಕವಾಗಿ ದಿವಾಳಿಯಾಗಿದ್ದು, ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮರೆಮಾಚಲು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು ಎನ್ನಲಾಗಿದೆ. ಹಿಜಾಬ್ ವಿಚಾರ, ಹೈಕೋರ್ಟ್ ತೀರ್ಪ, ಹರ್ಷ ಹತ್ಯೆ ಪ್ರಕರಣದಲ್ಲಿ ದ್ವಂದ್ವ ನಿಲುವು ತಳೆದ ಕಾಂಗ್ರೆಸ್ ತುಷ್ಟೀಕರಣವನ್ನು ಎತ್ತಿ ತೋರಿಸಿದ್ದು, ಸಾವಿನಲ್ಲಿ ರಾಜಕೀಯ, ಪಾದಯಾತ್ರೆಯಂತಹ ಅಣಕು ಪ್ರದರ್ಶನದ ಮೂಲಕ ನಕಾರಾತ್ಮಕ ರಾಜಕಾರಣ ಮಾಡುತ್ತಿದೆ ಎಂದು ಖಂಡನಾ ನಿರ್ಣಯದಲ್ಲಿ ಉಲ್ಲೇಖಿಸಿದೆ.
ಹಣದುಬ್ಬರ ನಿಯಂತ್ರಣ, ಕರೊನಾ ವಿರುದ್ಧದ ಸಮರದಲ್ಲಿ ಯಶಸ್ಸು, ಅಭಿವೃದ್ಧಿಗೆ ವೇಗ, ಭ್ರಷ್ಟಾಚಾರ ಮುಕ್ತ ಆಡಳಿತ, ಯೂಕ್ರೇನ್-ರಷ್ಯಾ ಯುದ್ಧದ ವಿಚಾರದಲ್ಲಿ ತಳೆದ ನಿಲುವು, ಭಾರತೀಯರ ರಕ್ಷಣೆ, ಸಂಕಷ್ಟಕ್ಕೆ ಸಿಲುಕಿದ ರಾಷ್ಟಗಳಿಗೆ ಸಹಾಯ ಹಸ್ತ ಮುಂತಾದ ಕ್ರಮಗಳು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಮೆರುಗು ನೀಡಿದ್ದು, ಭಾರತದ ಘನತೆ-ಗೌರವ ಹೆಚ್ಚುವ ಜತೆಗೆ ಬಿಜೆಪಿ ವಿಶ್ವಮಾನ್ಯ ಪಕ್ಷವಾಗಿದೆ ಎಂದು ಅಭಿನಂದನಾ ನಿರ್ಣಯದಲ್ಲಿ ಪ್ರಸ್ತಾಪಿಸಲಾಗಿದೆ.
ಅಧಿಕಾರದ ರಾಜಕಾರಣಕ್ಕಿಂತ ಜನರ ಅಭ್ಯುದಯ ಹಾಗೂ ದೇಶದ ಅಭಿವೃದ್ಧಿಗೆ ಬಿಜೆಪಿ ಕಟಿಬದ್ಧವಾಗಿದೆ ಎನ್ನುವುದು ಜನರಿಗೂ ತಿಳಿದಿದ್ದು, ಮುಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಗುರಿ ತಲುಪೇ ತಲುಪುತ್ತೇವೆ.
|ಜೆ.ಪಿ.ನಡ್ಡಾಬಿಜೆಪಿ ರಾಷ್ಟೀಯ ಅಧ್ಯಕ್ಷ
ನ್ಯಾಯಸಮ್ಮತ, ಕಾನೂನು ಮತ್ತು ಸುವ್ಯವಸ್ಥೆಯ ಆಡಳಿತ, ಅಭಿವೃದ್ಧಿ ಪರನಿಲುವು, ಮೋದಿ ನಾಯಕತ್ವ, ಸಕಾರಾತ್ಮಕ ಚಿಂತನೆ ಹೊತ್ತ ರಿಪೋರ್ಟ್ ಕಾರ್ಡ್​ನೊಂದಿಗೆ ಜನರ ಬಳಿ ಹೋಗುತ್ತೇವೆ. ಪ್ರಜಾಪ್ರಭುತ್ವದ ಸಮರ ಸಾರಿದ್ದೇವೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ಚಾಟಿ:ಕಾಂಗ್ರೆಸ್​ನವರು ಸಿಎಂ ಹುದ್ದೆಯನ್ನು ತಲಾ ಎರಡೂವರೆ ವರ್ಷ ಹಂಚಿಕೊಂಡು ಅಧಿಕಾರಕ್ಕೆ ಬಂದು ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಅದೇ ರೀತಿ ಮೋದಿ ಇದ್ದಾರೆ, ಡಬಲ್ ಇಂಜಿನ್ ಸರ್ಕಾರವಿದೆ ಎಂಬ ಭ್ರಮೆಯಲ್ಲಿ ನೀವೆಲ್ಲ (ಪಕ್ಷದ ನಾಯಕರು) ಇದ್ದೀರಿ. ಜವಾಬ್ದಾರಿ ಅರಿತು ಕೆಲಸ ಮಾಡದಿದ್ದರೆ ಪಶ್ಚಾತ್ತಾಪಪಡುತ್ತೀರಿ ಎಂದು ಮಾಜಿ ಸಿಎಂ ಬಿಎಸ್​ವೈ ಚಾಟಿ ಬೀಸಿದರು ಎಂದು ಮೂಲಗಳು ತಿಳಿಸಿವೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ನಾನು ರಾಜ್ಯ ಪ್ರವಾಸ ಕೈಗೊಂಡಿರುವೆ. ಅದರಂತೆ ಸಭೆಗೆ ಬಂದಿರುವ ಎಲ್ಲ ನಾಯಕರು ರಾಜ್ಯ ಸುತ್ತಬೇಕು, ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಎಸ್ಸಿ, ಎಸ್ಟಿ ಸಮಸ್ಯೆಗಳಿಗೆ ಸ್ಪಂದಿಸಿ, ಮಹಿಳಾ ಸಂಘಟನೆ ಬಲವರ್ಧನೆ ಮಾಡಿದರೆ 150 ಸ್ಥಾನಗಳ ಗುರಿ ತಲುಪಲು ಸಾಧ್ಯವಿದ್ದು, ಆಸಕ್ತ ಬೇರೆ ಪಕ್ಷದ ದಲಿತ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಖಡಕ್ ಆಗಿ ಸಲಹೆ ನೀಡಿದರು ಎನ್ನಲಾಗಿದೆ.
ಮಟ್ಟ ಹಾಕುವ ತಂತ್ರ:ಹೊಸಪೇಟೆಯಲ್ಲಿ ನಡ್ಡಾ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೇ 35 ನಿಮಿಷ ಮಾತುಕತೆ ನಡೆಸಿದ್ದಾರೆ. ನಡ್ಡಾ ವಾಸ್ತವ್ಯ ಹೂಡಿರುವ ರೆಸಾರ್ಟ್ನಲ್ಲಿ ಸಭೆ ನಡೆದಿದ್ದ್ದು, ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ರ್ಚಚಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಸಂಪುಟ ಪುನಾರಚನೆ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆಗೆ ಹಸಿರು ನಿಶಾನೆ ನೀಡುವ ಭರವಸೆ ಕೂಡ ನಡ್ಡಾ ವ್ಯಕ್ತಪಡಿಸಿದ್ದಾರೆ. ಜತೆಗೆ ಸರ್ಕಾರ ಕ್ಲೀನ್ ಹ್ಯಾಂಡ್ ಇರಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆನ್ನಲಾಗಿದೆ. ನಾಯಕತ್ವದ ವಿರುದ್ಧ ಗುಸುಗುಸು ಮಾತನಾಡುವವರ ಬಗ್ಗೆ ಮಾಹಿತಿ ಕೊಡಿ. ಅಂತಹವರನ್ನು ಈಗಲೇ ಮಟ್ಟ ಹಾಕಬೇಕು. ಚುನಾವಣಾ ವರ್ಷದಲ್ಲಿ ಈ ಬೆಳವಣಿಗೆ ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮುಂದಿನ ಕಾರ್ಯಕಾರಿಣಿ:ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಜುಲೈ ಅಂತ್ಯಕ್ಕೆ ಆಯೋಜಿಸಲು ತೀರ್ವನಿಸಲಾಗಿದೆ ಎಂದು ಸಭೆಯ ಮುಕ್ತಾಯ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪ್ರಕಟಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
