ಬೆಂಗಳೂರು:ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದ 545 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಹಗರಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯದ (ಇಡಿ) ಆಗಮನವಾಗಿದೆ. ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸ್ ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಎಡಿಜಿಪಿ ಅಮೃತ್ ಪೌಲ್ ಮತ್ತು ಡಿವೈಎಸ್​ಪಿ ಶಾಂತಕುಮಾರ್​ಗೆ ಸೇರಿದ ಮನೆ, ಕಚೇರಿ ಮತ್ತು ಆಪ್ತರ ಮನೆಗಳು ಸೇರಿ 11 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಡಿಜಿಪಿ ಅಮೃತ್ ಪೌಲ್ ಅವರ ಸಹಕಾರನಗರದ ಮನೆ ಮತ್ತು ಡಿವೈಎಸ್​ಪಿ ಶಾಂತಕುಮಾರ್​ಗೆ ಸೇರಿದ ಆಡುಗೋಡಿ ಟೆಕ್ನಿಕಲ್ ಸೆಲ್ ಸಮೀಪದ ಸರ್ಕಾರಿ ಕ್ವಾಟರ್Åಸ್ ಮೇಲೆ ದಾಳಿ ನಡೆಸಿ ಸಂಜೆವರೆಗೂ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಮತ್ತು ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆ ವಿವರಗಳು, ಆಸ್ತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿ ಅಕ್ರಮ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಇಡಿ ಬಂದಿದ್ದೇಕೆ?
ಆರ್​ಬಿಐ ನಿಯಮ ಉಲ್ಲಂಘಿಸಿ ಮತ್ತು ತೆರಿಗೆ ಪಾವತಿಸದೆ ನಗದು ರೂಪದಲ್ಲಿ ಹಣ ವಹಿವಾಟು ನಡೆಸಿರುವುದು ಸ್ಥಳೀಯ ಪೊಲೀಸರು ಅಥವಾ ಸಿಬಿಐ, ಆದಾಯ ತೆರಿಗೆ ಅಧಿಕಾರಿಗಳ ತನಿಖೆ ವೇಳೆ ಗೊತ್ತಾದರೆ ಕೂಡಲೇ ಇಡಿ ಸ್ವಯಂ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸುತ್ತದೆ. ಎಸ್​ಐ ನೇಮಕ ಹಗರಣದಲ್ಲಿ ಅಕ್ರಮ ಹಣಕಾಸಿನ ವಹಿವಾಟು ನಡೆದಿರುವುದು ಸಿಐಡಿ ತನಿಖೆಯಲ್ಲಿ ಈಗಾಗಲೇ ದೃಢಪಟ್ಟಿದೆ. ಸಿಐಡಿ ತನಿಖೆಯ ದಾಖಲೆಗಳನ್ನು ಪಡೆದು ಅದರ ಆಧಾರದಲ್ಲಿ ಇಡಿ ಮುಂದಿನ ತನಿಖೆ ನಡೆಸುತ್ತಿದೆ.
ಹಣ ಕೊಟ್ಟವರೆಲ್ಲ ಪಾಸ್
2021ರ ಅ.3ಕ್ಕೆ ಲಿಖಿತ ಪರೀಕ್ಷೆ ನಡೆದು 2022ರ ಜ.19ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಅದರಲ್ಲಿ ಡೀಲ್​ನಲ್ಲಿ ಭಾಗಿಯಾಗಿದ್ದ 26 ಅಭ್ಯರ್ಥಿಗಳು ಸ್ಥಾನ ಪಡೆದಿದ್ದರು. ಇದನ್ನು ಅರಿತ ಹರ್ಷ, ಏಜೆಂಟ್​ಗಳ ಮೂಲಕ ಅಭ್ಯರ್ಥಿಗಳಿಂದ ಮತ್ತೆ 3 ಕೋಟಿ ರೂ. ಸಂಗ್ರಹಿಸಿದ್ದ. ಪಿಎ ಶ್ರೀನಿವಾಸ್​ಗೆ 2 ಬ್ಯಾಗ್​ನಲ್ಲಿ ಈ ಮೊತ್ತ ತುಂಬಿ ಕೊಟ್ಟಿದ್ದ. ಸಿಐಡಿ ತನಿಖೆ ವೇಳೆ ಒಟ್ಟು 4 ಕೋಟಿ ರೂ. ಜಪ್ತಿ ಮಾಡಲಾಗಿದೆ. ಅಕ್ರಮದ ಮೊತ್ತ ಇನ್ನೂ ಹೆಚ್ಚು ಎನ್ನಲಾಗಿದೆ.
ನೂರಕ್ಕೆ ತಲುಪಿದ ಬಂಧಿತರ ಸಂಖ್ಯೆ
ಎಸ್​ಐ ನೇಮಕಾತಿ ಹಗರಣದಲ್ಲಿ ಸಿಐಡಿ ಅಧಿಕಾರಿಗಳು ಎಡಿಜಿಪಿ ಅಮೃತ್ ಪೌಲ್, ಡಿವೈಎಸ್​ಪಿ ಶಾಂತಕುಮಾರ್, ಪೊಲೀಸ್ ಅಧಿಕಾರಿ, ಸಿಬ್ಬಂದಿ, ರಾಜಕಾರಣಿಗಳು, ಅಭ್ಯರ್ಥಿಗಳು ಸೇರಿದಂತೆ ಅಂದಾಜು 100 ಮಂದಿಯನ್ನು ಬಂಧಿಸಿದ್ದಾರೆ. ಮೂವರಿಗೆ ಜಾಮೀನು ಲಭಿಸಿದ್ದು, ಉಳಿದವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಡೀಲ್ ಕುದುರಿಸಿದ್ದ ಹರ್ಷ!
ಮೇಲಧಿಕಾರಿಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದಂತೆ ಶಾಂತಕುಮಾರ್, ಈ ಮಾಹಿತಿಯನ್ನು ಹರ್ಷಗೆ ರವಾನಿಸಿದ್ದರು. ಎಫ್​ಡಿಎ ಹರ್ಷ, ತನ್ನ ಸಂಪರ್ಕದಲ್ಲಿದ್ದ ಪಿಎಸ್​ಐ ಮತ್ತು ಆರ್​ಪಿಎಸ್ ಕಡೆಯಿಂದ 26 ಅಭ್ಯರ್ಥಿಗಳ ಸಂಪರ್ಕ ಮಾಡಿ ತಲಾ 30ರಿಂದ 60 ಲಕ್ಷ ರೂ.ಗೆ ಡೀಲ್ ಕುದುರಿಸಿದ್ದ. ಲಿಖಿತ ಪರೀಕ್ಷೆಗೂ ಮೊದಲು ಅಭ್ಯರ್ಥಿಗಳಿಂದ ನಗದು ರೂಪದಲ್ಲಿ 1.65 ಕೋಟಿ ರೂ.ಗಳನ್ನು ಹರ್ಷ ಸಂಗ್ರಹಿಸಿದ್ದ. ಹರ್ಷನ ಕಡೆಯಿಂದ 1.65 ಕೋಟಿ ರೂ. ಪಡೆದ ಶಾಂತಕುಮಾರ್, 30 ಲಕ್ಷ ರೂ.ಗಳನ್ನು ಕಮಿಷನ್ ಆಗಿ ಇಟ್ಟುಕೊಂಡು ಉಳಿಕೆ 1.35 ಕೋಟಿ ರೂ.ಅನ್ನು ಬ್ಯಾಗ್​ಗೆ ತುಂಬಿದ್ದ. ಶಾಂತಕುಮಾರ್​ಗೆ ಈ ಹಣದೊಂದಿಗೆ ಬರುವಂತೆ ಪೌಲ್ ಸೂಚಿಸಿದ್ದರು. ಅದರಂತೆ ಹೋದಾಗ ಎಡಿಜಿಪಿ ತನ್ನ ಕಾರಿನಲ್ಲಿ ಬ್ಯಾಗ್ ಇರಿಸಿಕೊಂಡು ತೆರಳಿದ್ದರು ಎಂದು ಆರೋಪಿಸಲಾಗಿದೆ.
ಪಿಎಸ್​ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿ, ಅಂತಿಮ ವರದಿ ನೀಡುವವರೆಗೂ ಪರೀಕ್ಷೆ ನಡೆಸುವುದಿಲ್ಲ. ಹಿರಿಯ ಪೋಲಿಸ್ ಅಧಿಕಾರಿಗಳು ಸೇರಿ 107 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿರುವ ಹಿನ್ನೆಲೆಯಲ್ಲಿ ಹೆಚ್ಚು ಮಾತನಾಡುವುದಿಲ್ಲ. ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ರಾಜಕೀಯ ಲಾಬಿ, ಒತ್ತಡಗಳಿಗೆ ಮಣಿದು ವರ್ಗಾವಣೆ ಮಾಡುತ್ತಿಲ್ಲ.
| ಆರಗ ಜ್ಞಾನೇಂದ್ರ ಗೃಹಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 16 =
Remember me
