| ಡಾ.ರಮಾನಂದ ಬನಾರಿ ಮಂಜೇಶ್ವರ
ಇತಿಹಾಸವನ್ನು ಬರೆಯುವವರು ಬಹಳ ಮಂದಿ. ಆದರೆ ಇತಿಹಾಸವನ್ನೇ ನಿರ್ವಿುಸುವವರು ಕೆಲವೇ ಕೆಲವು ಮಂದಿ. ಪೂಜ್ಯ ಎಡನೀರು ಸ್ವಾಮೀಜಿಯವರು ಅಂತಹ ವಿರಳ ವರ್ಗಕ್ಕೆ ಸೇರಿದವರು. ಯಕ್ಷಗಾನದ ಕುರಿತಾಗಿ ಮಡಿವಂತಿಕೆಯಿದ್ದ ಒಂದು ಕಾಲಘಟ್ಟದಲ್ಲಿ ಸ್ವಾಮೀಜಿಯೊಬ್ಬರು ಯಕ್ಷಗಾನವನ್ನು ಅಪ್ಪಿಕೊಂಡರೆಂದರೆ ಯಾರೇ ಆದರೂ ಸುಲಭವಾಗಿ ಒಪ್ಪಿಕೊಳ್ಳಲಾರರು. ಇಂತಹ ಅಸಂಭಾವ್ಯವನ್ನು ಸಂಭವನೀಯವಾಗಿರಿಸಿದ್ದರಿಂದಲೇ ಧರ್ಮ ಮತ್ತು ಕಲೆಗಳನ್ನು ಸಮನ್ವಯಿಸಿದ ಒಬ್ಬ ಅಸಾಧಾರಣ ಮಠಾಧೀಶರಾಗಿ ಕವಿಗಳ ನಡುವೆ ಕಾಳಿದಾಸನ ಹಾಗೆ ಯತೀಶ್ವರರ ನಡುವೆ ಅವರ ಸ್ಥಾನ ನಿಜವಾದ ಅರ್ಥದಲ್ಲಿ ಅಪೂರ್ವ, ಅದ್ವಿತೀಯವಾಗಿದೆ.
ಹಿಂದಿನಿಂದಲೂ ಎಡನೀರು ಶ್ರೀಮಠ ಧಾರ್ವಿುಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆಶ್ರಯ ಸ್ಥಾನವಾಗಿತ್ತು. ಶ್ರೀಮದ್ವೀಶ್ವ ರಾನಂದ ಭಾರತೀ ಶ್ರೀಪಾದರ ಕಾಲದಲ್ಲಿ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಜರಗುತ್ತಿದ್ದವು. ಈಗ ಮಠವು ಇಂತಹ ಕಾರ್ಯಕ್ರಮಗಳ ತವರುಮನೆಯೇ ಆಗಿದೆ. ಯಕ್ಷಗಾನ ಕಲಾವಿದರಿಗೆ, ಕಲಾರಾಧಕರಿಗೆ, ಸಂಗೀತಜ್ಞರಿಗೆ, ವಿದ್ವಾಂಸರಿಗೆ ಇದೊಂದು ಯಾತ್ರಾಸ್ಥಳ ಎಂಬ ಗೌರವಕ್ಕೂ ಪಾತ್ರವಾಗಿದೆ. ಈ ಬೆಳವಣಿಗೆಗೆ ಮುಖ್ಯ ಕಾರಣ ಈಗಿನ ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರಿಗೆ ವಿಭಿನ್ನ ಕಲೆಗಳ ಮೇಲಿರುವ ಒಲವು. ಗೋಪಾಲಕೃಷ್ಣನ ಆರಾಧನೆಯನ್ನು ನಡೆಸುವಷ್ಟೇ ನಿಷ್ಠೆ, ಭಕ್ತಿ ಮತ್ತು ಶ್ರದ್ಧೆಯಿಂದ ಅವರು ಕಲಾರಾಧನೆಯನ್ನೂ ನಡೆಸುತ್ತಿದ್ದರು. ಯಕ್ಷಗಾನವಂತೂ ಅವರ ಸ್ವಧರ್ಮವೇ ಆಗಿದೆಯೇನೋ ಎನ್ನುವಷ್ಟೂ ಅವರಿಗೆ ಆಪ್ತವಾಗಿತ್ತು.
‘ನಾನು ಶಾಸ್ತ್ರೀಯ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವನಲ್ಲ. ಆದರೆ ಕೃಷ್ಣನ ಪ್ರೇರಣೆಯಂತೆ ಹಾಡುತ್ತೇನೆ’ ಎಂದು ಹೇಳಿದ್ದ ಸ್ವಾಮೀಜಿಯವರನ್ನು ಕೇರಳದ ಪತ್ರಿಕೆಯೊಂದು ಹಾಡುವ ಸ್ವಾಮೀಜಿಯೆಂದೇ ಕೊಂಡಾಡಿತು. ಅವರು ಹಾಡಿರುವ ಧ್ವನಿಸುರುಳಿಗಳು ಭಕ್ತಿಗೀತೆಗಳಾಗಲೀ, ಸಂಸ್ಕೃತ ಸ್ತೋತ್ರಗಳಾಗಲೀ, ಯಕ್ಷಗಾನ ಹಾಡುಗಳಾಗಲಿ ಎಲ್ಲವೂ ಜನಪ್ರಿಯವಾಗಿವೆ. ಯಕ್ಷಗಾನ ಹಾಡುಗಳು ಗುಣಮಟ್ಟದ ದೃಷ್ಟಿಯಿಂದ ವಿಶಿಷ್ಟವಾದ ದಾಖಲೆಯನ್ನೇ ನಿರ್ವಿುಸಿವೆ. ಅವರು ಹಾಡಿದ ನನ್ನ ಕವಿತೆಗಳ ಧ್ವನಿಸುರುಳಿ ‘ಕಾವ್ಯಶ್ರೀ’ ಕಾವ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ ಮಾತ್ರವಲ್ಲ ನನಗೆ ವಿಶೇಷವಾದ ಧನ್ಯತೆಯನ್ನು ತಂದುಕೊಟ್ಟಿದೆ.
ಎಡನೀರು ಮಠದಲ್ಲಿ ಯಕ್ಷಗಾನ, ನೃತ್ಯ, ಸಂಗೀತ, ನಾಟಕ, ಧಾರ್ವಿುಕ ಸಭೆ, ವಿಚಾರಗೋಷ್ಠಿ ಇತ್ಯಾದಿ ನಡೆಯುತ್ತಲೇ ಇರುತ್ತವೆ. ತರುಣ ಕಲಾವೃಂದ, ಭಾರತೀ ಕಲಾಸದನ, ಶ್ರೀ ಗೋಪಾಲಕೃಷ್ಣ ಸೇವಾ ಸಂಸ್ಥೆ ಮೊದಲಾದ ಇಲ್ಲಿನ ಸಾಂಸ್ಕೃತಿಕ ಸಂಘಟನೆಗಳಿಗೆ ಸ್ವಾಮಿಗಳದ್ದೇ ಮಾರ್ಗದರ್ಶನ. ಅನೇಕ ನಾಟಕ ಪ್ರದರ್ಶನಗಳಲ್ಲಿ ಅವರದ್ದೇ ನಿರ್ದೇಶನ. ಸ್ವತಃ ಸಮರ್ಥ ನಾಟಕಕಾರರೂ ಆಗಿದ್ದ ಸ್ವಾಮೀಜಿ, ಸತ್ಯದರ್ಶಿ ಎಂಬ ಹೆಸರಿನಿಂದ ‘ಛಲದಂಕ ಕೌರವ’, ‘ಮದನದಹನ’ ‘ದೈತ್ಯಗುರು ಶುಕ್ರಾಚಾರ್ಯ’, ‘ಸತ್ಯಮೇವ ಜಯತೇ’, ‘ನಿಕುಲು ಎನನು ಮರಪಡೆ’ (ತುಳು) ಮೊದಲಾದ ಹಲವಾರು ನಾಟಕಗಳನ್ನೂ ರಚಿಸಿದ್ದಾರೆ. ಭಾವಪೂರ್ಣವಾದ ಮಾತುಗಳೊಂದಿಗೆ ಸುಮಧುರ ವಾದ ಹಾಡುಗಳೊಂದಿಗೆ ಯಕ್ಷಗಾನದ ಸೊಗಡಿನಲ್ಲಿ ಅವರು ನಿರೂಪಿಸುತ್ತಿದ್ದ ಹರಿಕಥೆಯಂತೂ ವಿಶಿಷ್ಟವಾದ ರಸಲೋಕ, ಧಾರ್ವಿುಕ ಕ್ಷೇತ್ರದಲ್ಲೂ ಶ್ರೀಗಳದ್ದು ಸಾಂಸ್ಕೃತಿಕ ಕ್ರಾಂತಿ.
ಇತಿಹಾಸದ ಇಣುಕು-ನೋಟ:ರಾಜ್ಯ ಪುನರ್ವಿಂಗಡನೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳಕ್ಕೆ ಸೇರಿ ಹೋದ ಶ್ರೀ ಎಡನೀರು ಕ್ಷೇತ್ರ ಮಧುವಾಹಿನಿಯ ತಟದಲ್ಲಿ ಕೇರಳ ಕರ್ನಾಟಕಗಳ ಗಡಿ ಪ್ರದೇಶವಾಗಿರುವ ಕಾಸರಗೋಡಿನ ಪುಣ್ಯಭೂಮಿಯಲ್ಲಿರುವ ಅತ್ಯಂತ ಪವಿತ್ರವೂ ಪ್ರಾಚೀನವೂ ಕಾರಣಿಕವೂ ಆದ ಕ್ಷೇತ್ರವಾಗಿದೆ. ಹಿರಿಯ ಸಂಶೋಧಕರೂ ಎಡನೀರು ಶ್ರೀ ಮಠದ ನಿಕಟವರ್ತಿಗಳೂ ಆಗಿದ್ದ ವೆಂಕಟರಾಜ ಪುಣಿಂಚಿತ್ತಾಯರು ಅಭಿಪ್ರಾಯಪಡುವಂತೆ ಶ್ರೀಮದ್ ಜಗದ್ಗುರು ಶಂಕರಾಚಾರ್ಯರ ಮೊದಲ್ಗೊಂಡು ತೋಟಕಾಚಾರ್ಯ ಪರಂಪರೆಯಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರಕ್ಕೆ ಸುಮಾರು ಆರೇಳು ಶತಮಾನಗಳ ಚಾರಿತ್ರಿಕ ಹಿನ್ನೆಲೆಯಿದೆ. ಶ್ರೀ ಮಠದ ಗುರು ಪರಂಪರೆಯಲ್ಲಿ ಈಗಾಗಲೇ ಹನ್ನೆರಡು ಮಂದಿ ಅಧೀಶ್ವರರು ಆಗಿ ಹೋಗಿದ್ದಾರೆ. ಶಂಕರಾಚಾರ್ಯರರ ಕಾಲದಲ್ಲಿ ಸ್ಥಾಪಿತವಾದ ತ್ರಿಶೂರಿನ ಚತುರಾಮ್ನಾಯ ಮಠಗಳ ಅಥವಾ ಸಭಾ ಮಠಗಳಲ್ಲಿ ಒಂದು ತೋಟಕಾಚಾರ್ಯ ಪರಂಪರೆ ಎಂಬುದಕ್ಕೆ ಆಧಾರ ದೊರೆಯುತ್ತವೆ. ಶಂಕರಾಚಾರ್ಯರ ಕಾಲದಲ್ಲಿ ಸ್ಥಾಪಿತವಾದ ತ್ರಿಶೂರಿನ ಚತುರಾಮ್ನಾಯ ಮಠಗಳೇ ವಿಸ್ತಾರಗೊಂಡು ಉತ್ತರ ಕೇರಳದ ತ್ರಿಶಂಬಲದಲ್ಲೂ ನಾಲ್ಕು ಸಭಾಮಠಗಳಾಗಿ ರೂಪುಗೊಂಡಿವೆ. ಅವುಗಳಲ್ಲಿ ಪಡಿಞಾರ್ ಮಠ ಇಳನೀರ ಮಠವೆಂಬ ಹೆಸರಿನಿಂದ ಈಗಲೂ ಪ್ರಸಿದ್ಧವಾಗಿದೆ. ಕಾಲಾಂತರದಲ್ಲಿ ಜೀರ್ಣವಾಗಿದ್ದ ಕಟ್ಟಡವನ್ನು ನವೀಕರಿಸಿದವರು ಬ್ರಹ್ಮೈಕ್ಯ ಶ್ರೀ ಈಶ್ವರಾನಂದ ಭಾರತೀ ಸ್ವಾಮಿಗಳು.ಇದನ್ನೂ ಓದಿ:ಅಮೃತಧಾರೆ|ನಿರ್ಣಯ ತೆಗೆದುಕೊಳ್ಳಲು ಅಂತರ್​ದೃಷ್ಟಿ ಅವಲಂಬಿಸಬಹುದೆ?
ಕೇಶವಾನಂದ ಭಾರತಿ, ಸಚ್ಚಿದಾನಂದ ಭಾರತಿ, ಬಾಲಕೃಷ್ಣಾನಂದ ಭಾರತೀ, ಈಶ್ವರಾನಂದ ಭಾರತಿ ಎಂಬ ನಾಲ್ಕು ಹೆಸರುಗಳೇ ಇಲ್ಲಿ ಯತಿಗಳಾದವರಿಗೆ ಪುನರಾವೃತ್ತಿಯಾಗುವುದನ್ನು ಕಾಣುತ್ತೇವೆ. ಈ ಪರಂಪರೆಯಲ್ಲಿ 1960ರಲ್ಲಿ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿದವರು ಶ್ರೀ ಕೇಶವಾನಂದ ಭಾರತೀ ಪಾದಂಗಳವರು. ಬಡತನದ ಛಾಯೆಯಲ್ಲಿದ್ದ ಶ್ರೀಮಠದಲ್ಲಿ ಆರ್ಥಿಕವಾದ ಪ್ರಗತಿಯನ್ನು ಸಾಧಿಸಿ ತೋರಿಸಿದವರು ಬ್ರಹ್ಮೈಕ್ಯ ಈಶ್ವರಾನಂದ ಸ್ವಾಮೀಜಿ. ಅವರ ಕಾಲದಲ್ಲಿಯೇ ಶಿಕ್ಷಣ ಮತ್ತು ಕಲೆಗಳ ಮೂಲಕ ಸಂಸ್ಕೃತಿಯ ಪ್ರಚಾರಕ್ಕೆ, ಸಮಾಜದ ಅಭಿವೃದ್ಧಿಗೆ ನಾಂದಿ ಹಾಡಲಾಯಿತು. ಈಶ್ವರಾನಂದ ಭಾರತೀ ಪಾದಂಗಳವರ ಕರಕಮಲ ಸಂಜಾತ ಶ್ರೀ ಕೇಶವಾನಂದ ಭಾರತಿಯವರು ಶ್ರೀ ಗುರುಗಳ ಮಾರ್ಗದರ್ಶನದಲ್ಲಿಯೇ ನಡೆದು ಧರ್ಮ, ಕಲೆ, ಸಂಸ್ಕೃತಿಗಳಿಗೆ ಪ್ರೋತ್ಸಾಹವನ್ನಿತ್ತು ಶ್ರೀ ಮಠವನ್ನೇ ಅವುಗಳ ಕೇಂದ್ರವನ್ನಾಗಿ ಪರಿವರ್ತಿಸಿದರು. ಶ್ರೀ ಮಠ ಎಲ್ಲ ಕ್ಷೇತ್ರಗಳಲ್ಲೂ ಜಾಗತಿಕವಾದ ಪ್ರಸಿದ್ಧಿಯನ್ನು ಪಡೆಯುವುದಕ್ಕೆ ಕಾರಣರಾದರು.
(ಲೇಖಕರು ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ)
ಮನೋಲ್ಲಾಸ: ವರ್ತಮಾನದ ಬಾಳಜೇನನ್ನು ಸವಿಯೋಣ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:15 − eleven =
Remember me
