ರಾಜಕೀಯ ಎಂದರೆ ಹಾಗೆಯೇ. ಕಲಹ, ವಿವಾದ, ವಾಗ್ವಾದ, ವೈಮನಸ್ಸು, ದ್ವೇಷ ಎಂಬಂತಾಗಿದೆ. ಅಧಿಕಾರಪ್ರಾಪ್ತಿಗಾಗಿ ನಡೆಯುವ ಈ ಅಪಸವ್ಯಗಳು ಸೃಷ್ಟಿಸುವ ಅವಾಂತರಗಳು ಅಷ್ಟಿಷ್ಟಲ್ಲ. ಅಷ್ಟಕ್ಕೂ, ಚುನಾವಣೆಗಳ ಆಶಯ ಪ್ರಜಾಪ್ರಭುತ್ವದ ಸ್ವಾಸ್ಥ್ಯವನ್ನು ಹೆಚ್ಚಿಸಿ, ಅಭಿವೃದ್ಧಿಯ ವೇಗಕ್ಕೆ ಇಂಬು ನೀಡುವುದು. ಆದರೆ, ಇತ್ತೀಚಿನ ದಶಕಗಳಲ್ಲಿ ಚುನಾವಣೆ ಎಂದರೆ ಹಣಬಲ, ಜಾತಿ ಲೆಕ್ಕಾಚಾರ, ಪರಸ್ಪರ ತೆಗಳುವಿಕೆ ಎಂಬಂತಾಗಿದೆ. ಎಷ್ಟೋ ಬಾರಿ ಟೀಕೆಗಳು ಸಭ್ಯತೆಯ ಚೌಕಟ್ಟನ್ನು ಮೀರುವುದುಂಟು. ಚುನಾವಣೆ ನಡೆದು, ಫಲಿತಾಂಶ ಬಂದು ಗೆದ್ದವರು ಅಧಿಕಾರ ಹಿಡಿಯುತ್ತಾರೆ, ಸೋತವರು ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ರಾಜಕೀಯ ಚಟುವಟಿಕೆಗಳಿಗೆ ಮರಳುತ್ತಾರೆ. ಆದರೆ, ಈ ನಡುವೆ ಚುನಾವಣೆಗಾಗಿ ಜಗಳ ಮಾಡಿಕೊಂಡ, ವಿರೋಧ ಸೃಷ್ಟಿಸಿಕೊಂಡ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮಾತ್ರ ದ್ವೇಷ ಅಥವಾ ಮುನಿಸು ಹೆಚ್ಚಿಸಿಕೊಂಡು, ಅನಗತ್ಯ ವಿವಾದ, ಕಲಹಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ. ಇದರಿಂದ ಧಕ್ಕೆ ಒದಗುವುದು ಸಾಮರಸ್ಯಕ್ಕೆ, ಸಹಬಾಳ್ವೆಗೆ.
ರಾಜ್ಯದಲ್ಲಿ ಉಪಚುನಾವಣೆ ಬಳಿಕ ರಾಜಕೀಯದ ರಂಗು ಗ್ರಾಮಗಳಿಗೆ ವ್ಯಾಪಿಸಿದೆ. ಕಾರಣ, ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದಿನಿಂದ (ಸೋಮವಾರ) ಆರಂಭವಾಗುತ್ತಿದೆ. ಕರ್ನಾಟಕದ ಒಟ್ಟು 5,735 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ 2,867, ಎರಡನೇ ಹಂತದಲ್ಲಿ 2,868 ಗ್ರಾಮ ಪಂಚಾಯತಿಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದ ನಾಮಪತ್ರ ಸಲ್ಲಿಕೆ ಡಿ.11 ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಗ್ರಾಮಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮತದಾರರಿಗೆ ನಾನಾ ಆಮಿಷ ಒಡ್ಡಲಾಗುತ್ತಿದೆ. ಹಣದ ಚಲಾವಣೆಯೂ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ನೀತಿ ಸಂಹಿತೆ ಪಾಲನೆಯಾಗುತ್ತಿಲ್ಲ ಎಂಬ ಆಕ್ಷೇಪದ ದನಿ ಜೋರಾಗಿ ಕೇಳಿಬರುತ್ತಿದೆ. ಗ್ರಾಮಾಭಿವೃದ್ಧಿಗೆ ಹೆಚ್ಚಿನ ಅನುದಾನ, ಗ್ರಾಮ ಪಂಚಾಯಿತಿಗಳಿಗೆ ಮತ್ತಷ್ಟು ಅಧಿಕಾರ ನೀಡುವ ಆಶ್ವಾಸನೆಗಳು ಕೇಳಿಬರುತ್ತಿವೆ.
ಗ್ರಾಮ ಪಂಚಾಯಿತಿ ಚುನಾವಣೆ ನೇರವಾಗಿ ರಾಜಕೀಯ ಪಕ್ಷಗಳ ನಡುವೆ ನಡೆಯದಿದ್ದರೂ, ಆ ಪಕ್ಷಗಳ ಬೆಂಬಲಿಗರ ಮಧ್ಯೆಯೇ ನಡೆಯುತ್ತದೆ ಎಂಬುದು ಗೊತ್ತಿರುವಂಥದ್ದೇ. ಹಾಗಾಗಿ, ಸಂಘಟನೆಯ ಬೇರುಗಳನ್ನು ಭದ್ರಗೊಳಿಸಲು ಎಲ್ಲ ಪಕ್ಷಗಳೂ ಈ ಚುನಾವಣೆಗೆ ಹೆಚ್ಚಿನ ಆದ್ಯತೆ ನೀಡುತ್ತವೆ. ವಿಚಿತ್ರವೆಂದರೆ, ಟಿಕೆಟ್ ಹಂಚಿಕೆ ಅಥವಾ ಪ್ರಚಾರದ ನೆಪದಲ್ಲಿ ಗ್ರಾಮಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಿ, ಕೆಲವೊಮ್ಮೆ ಅಹಿತಕರ ಘಟನೆಗಳು ನಡೆಯುತ್ತವೆ. ಅಂದರೆ, ಒಂದೇ ಮನೆಯ ಸದಸ್ಯರು ಬೇರೆ ಬೇರೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರ ಅಥವಾ ವಿರುದ್ಧವಾಗಿರುತ್ತಾರೆ.
ಸಾಮರಸ್ಯದಿಂದ, ಪರಸ್ಪರ ಸಹಕಾರ ಭಾವನೆಯಿಂದ ಬದುಕುತ್ತಿರುವವರು ಈ ಹೊತ್ತಲ್ಲಿ ಪರಸ್ಪರ ವೈರಿಗಳಂತೆ ವರ್ತಿಸುತ್ತಾರೆ. ಇದರಿಂದ ಗ್ರಾಮಗಳ ಸ್ಥಿತಿಯೇ ಬದಲಾಗಿ, ನೆಮ್ಮದಿಗೆ ಪೆಟ್ಟು ಬೀಳುತ್ತದೆ. ಚುನಾವಣೆ ಮುಗಿದರೂ, ಮನಸ್ಸಿಗೆ ಆದ ಗಾಯ ಮಾಯದೆ ಸಿಟ್ಟು, ಪ್ರತೀಕಾರದ ಭಾವನೆ ಮುಂದುವರಿಯುತ್ತದೆ. ಈ ವೇಳೆ ಹಾಗಾಗದಂತೆ ಪ್ರತೀ ಗ್ರಾಮದ ಹಿರಿಯರು, ಪ್ರಜ್ಞಾವಂತರು ಕಾಳಜಿ ವಹಿಸಬೇಕು. ಏಕೆಂದರೆ, ಎಲ್ಲಕ್ಕಿಂತ ಮುಖ್ಯವಾದದ್ದು ಗ್ರಾಮಗಳ ಸಾಮರಸ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twelve =
Remember me
