ಗ್ರಾಮೀಣ ಭಾರತದಲ್ಲಿ ಆರ್ಥಿಕತೆಯ ಜೀವನಾಡಿಯಾಗಿರುವ ಸಹಕಾರ ಸಂಘ, ಸಂಸ್ಥೆಗಳು ಮತ್ತು ಸಹಕಾರ ಬ್ಯಾಂಕುಗಳು ಕೂಡ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಮೋಸದಂಥ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದು ವಿಪರ್ಯಾಸದ ಬೆಳವಣಿಗೆ. ಆರ್ಥಿಕ ಒಳಗೊಳ್ಳುವಿಕೆಯ ಜಾಲವನ್ನು ಬಲಪಡಿಸಲು ಸಹಕಾರ ತತ್ತ್ವಕ್ಕಿಂತ ಪರಿಣಾಮಕಾರಿ ಮಾಧ್ಯಮ ಬೇರೆ ಇಲ್ಲ. ಜನರ ವಿಶ್ವಾಸಾರ್ಹತೆ ಉಳಿಸಿ, ಬೆಳೆಸಿಕೊಳ್ಳಬೇಕಿದ್ದ ಸಹಕಾರಿ ರಂಗ ತನ್ನದೇ ಅಪಸವ್ಯಗಳಿಂದ ಸೊರಗುತ್ತಿದೆ. ಅಭಿವೃದ್ಧಿಯ ಹಾದಿಯಿಂದ ವಿಮುಖವಾಗುತ್ತಿದೆ. ಲೆಕ್ಕಪತ್ರಗಳಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲ ಮಹತ್ವದ ಕ್ರಮಗಳಿಗೆ ಮುಂದಾಗಿದೆ. ‘ಸಹಕಾರ ಇಲಾಖೆಯಲ್ಲಿ ಲೆಕ್ಕ ಪರಿಶೋಧನೆಯನ್ನು ಇಲಾಖೆ ವತಿಯಿಂದ ಕೈಗೊಳ್ಳಲು ಅನುಕೂಲವಾಗುವಂತೆ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಖಾಲಿ ಇರುವ 402 ಲೆಕ್ಕ ಪರಿಶೋಧಕರ ಹುದ್ದೆ ಭರ್ತಿ ಮಾಡಲಾಗುವುದು. ಈಗಾಗಲೇ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ. ಎಲ್ಲ ಸಂಘಗಳಲ್ಲಿ ಲೆಕ್ಕ ಪರಿಶೋಧನೆಯನ್ನು ಪಾರದರ್ಶಕವಾಗಿ, ಕಟ್ಟುನಿಟ್ಟಾಗಿ ಮಾಡಲು ಮಾರ್ಗಸೂಚಿ ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿರುವುದು ಸಕಾಲಿಕ ಕ್ರಮ. ಇದರಿಂದಾಗಿ ಇಲಾಖಾ ಲೆಕ್ಕ ಪರಿಶೋಧಕರು ಗುಣಮಟ್ಟದ ಆಡಿಟ್ ಮಾಡಿಸಲು ಅನುವಾಗಲಿದೆ. ಅಲ್ಲದೆ, ಸರಿಯಾಗಿ ಆಡಿಟ್ ಮಾಡಿಸದ ಸುಮಾರು 60 ಸಹಕಾರ ಸಂಘಗಳನ್ನು ರದ್ದು ಮಾಡಲಾಗಿರುವುದು ಗಮನಾರ್ಹ.
ಹಲವು ಸಹಕಾರಿ ಬ್ಯಾಂಕುಗಳು, ಸಂಘಗಳು ಮೂಲಉದ್ದೇಶವನ್ನು ಗಾಳಿಗೆ ತೂರಿ, ಅನರ್ಹ ವ್ಯಕ್ತಿ/ಸಂಸ್ಥೆಗಳಿಗೆ ಭದ್ರತೆಯಿಲ್ಲದೆ ಸಾಲ ನೀಡಿ, ಸ್ವಜನಪಕ್ಷಪಾತ, ಅವ್ಯವಹಾರ, ನಕಲಿ ಖಾತೆಗಳ ಸೃಷ್ಟಿ, ರಾಜ್ಯ ಸರ್ಕಾರಗಳ ಹಸ್ತಕ್ಷೇಪ, ರಾಜಕೀಯ ಪ್ರಭಾವದಿಂದಾಗಿ ಹತ್ತಾರು ಅಕ್ರಮಗಳಿಗೆ ಕೈ ಹಾಕಿದವು. ಇದರಿಂದ ಠೇವಣಿದಾರರು ಬೀದಿಗೆ ಬಿದ್ದರು. ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್, ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ಮಾಧವಪುರ ಮರ್ಚೆಂಟೈಲ್ ಕೋ ಆಪರೇಟಿವ್ ಬ್ಯಾಂಕ್, ಕೃಷಿ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ಚಾರ್​ವಿುನಾರ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ನಾಗ್ಪುರ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಹೀಗೆ ಹಲವು ಬ್ಯಾಂಕ್​ಗಳು ಹಗರಣದಲ್ಲಿ ಸಿಲುಕಿಕೊಂಡಿವೆ. ಇವುಗಳನ್ನು ನಂಬಿದ್ದ ಗ್ರಾಹಕರೀಗ ಕೋರ್ಟು-ಕಚೇರಿ ಅಲೆಯುವಂತಾಗಿದೆ. ರಾಜ್ಯ ಸರ್ಕಾರವು ‘ಅನಿಯಂತ್ರಿತ ಠೇವಣಿ ಸಂಗ್ರಹ (ನಿಯಂತ್ರಣ) ಕಾಯ್ದೆ’ ರೂಪಿಸಿದ್ದು, ಆ ಮುಖೇನ ಅವ್ಯವಹಾರಗಳನ್ನು ಕೊನೆಗಾಣಿಸಲು ಹೊರಟಿರುವುದು ಉತ್ತಮ ಬೆಳವಣಿಗೆ. ಖಾಸಗಿ/ಸಹಕಾರಿ ಬ್ಯಾಂಕುಗಳ ಎಲ್ಲ ವ್ಯವಹಾರಗಳನ್ನು ರಿಸರ್ವ್ ಬ್ಯಾಂಕ್ ಪರಿಧಿಯಲ್ಲಿಡುವ ‘ಬ್ಯಾಂಕಿಂಗ್ ನಿಯಂತ್ರಕ ತಿದ್ದುಪಡಿ ಮಸೂದೆ-2020’ ಕೂಡ ಪರಿಣಾಮಕಾರಿ ಹೆಜ್ಜೆಯಾಗಿದೆ. ದೇಶದಲ್ಲೀಗ 1934 ಸಹಕಾರಿ ಬ್ಯಾಂಕುಗಳಿದ್ದು, ಕಳೆದೆರೆಡು ದಶಕಗಳಲ್ಲಿ ಅವ್ಯವಹಾರ, ಹಣಕಾಸು ಕೊರತೆ ಕಾರಣಗಳಿಗಾಗಿ 430 ಸಹಕಾರಿ ಬ್ಯಾಂಕ್​ಗಳ ಪರವಾನಗಿ ರದ್ದುಪಡಿಸಲಾಗಿದೆ. ಅದೇನಿದ್ದರೂ, ಸಹಕಾರಿ ಬ್ಯಾಂಕುಗಳು ಮತ್ತು ಸಂಘ, ಸಂಸ್ಥೆಗಳು ಕೊರತೆ, ಭ್ರಷ್ಟಾಚಾರವನ್ನು ದೂರವಾಗಿಸಿ ಗ್ರಾಹಕರ ವಿಶ್ವಾಸಾರ್ಹತೆ ಕಾಯ್ದುಕೊಳ್ಳಲು ಮೊದಲ ಆದ್ಯತೆ ನೀಡಬೇಕು. ಆಗಲೇ, ಸಹಕಾರ ರಂಗದ ನೈಜ ಉದ್ದೇಶ, ಆಶಯ ಈಡೇರಲು, ಜನರಿಗೆ ನಿಜಾರ್ಥದಲ್ಲಿ ನೆರವಿಗೆ ಬರಲು ಸಾಧ್ಯ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 1 =
Remember me
