ಸಾಮಾಜಿಕ ಮಾಧ್ಯಮಗಳ ಮೇಲೆ ಯಾವುದೇ ಕಡಿವಾಣ ಇಲ್ಲದಿರುವುದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗುತ್ತಿರುವುದು ನಿಜವೇ. ವೈಯಕ್ತಿಕ ದ್ವೇಷಸಾಧನೆ, ಸಾಮರಸ್ಯಕ್ಕೆ ಪೆಟ್ಟು, ಅನಗತ್ಯ ವಾದ-ವಿವಾದಗಳು, ಮಹಿಳೆಯರ ವಿರುದ್ಧ ಶೋಷಣೆ, ಹೆಚ್ಚುತ್ತಿರುವ ಸೈಬರ್ ದಾಳಿ ಪ್ರಕರಣಗಳು ಹೀಗೆ ಅದಕ್ಕೆ ಹತ್ತಾರು ಕರಾಳಮುಖಗಳಿವೆ. ಈ ಬಗ್ಗೆ ಸಮಾಜದ ಹಲವು ವಲಯಗಳು ಮಾತ್ರವಲ್ಲದೆ ನ್ಯಾಯಾಲಯಗಳು ಕೂಡ ಕಳವಳ ವ್ಯಕ್ತಪಡಿಸಿವೆ ಎಂಬುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಮತ್ತು ಸಮಾಜಕ್ಕೆ ಅಹಿತಕರ ಎನಿಸುವ ಅಂಶಗಳನ್ನು ತಡೆಯಲು ಕೇಂದ್ರ ಸರ್ಕಾರ ಸುದ್ದಿ ವೆಬ್ ಪೋರ್ಟಲ್​ಗಳನ್ನು ಮತ್ತು ಒಟಿಟಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನಕ್ಕೆ ಒಳಪಡಿಸಲು ಕೆಲ ದಿನಗಳ ಹಿಂದಷ್ಟೇ ನಿರ್ಧರಿಸಿದೆ. ಆದರೆ, ಕೇರಳ ಸರ್ಕಾರ ಪೊಲೀಸ್ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತಂದು, ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೋಗಿ ಜನವಿರೋಧವನ್ನು ಎದುರಿಸಬೇಕಾಗಿ ಬಂದಿದೆ. ಈ ವಿರೋಧದ ದನಿ ಹೆಚ್ಚುತ್ತಿದ್ದಂತೆ ‘ಪೊಲೀಸ್ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವ ಯಾವುದೇ ಚಿಂತನೆ ಇಲ್ಲ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಹೇಳಿದ್ದು, ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಈ ಕಾನೂನಿನ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸುವುದಾಗಿಯೂ ಹೇಳಿದ್ದಾರೆ.
ಇದೊಂದು ಸೂಕ್ಷ್ಮ ಪ್ರಕರಣ. ಕಠಿಣ ಕಾಯ್ದೆಯನ್ನು ಏಕಾಏಕಿ ಜಾರಿಗೆ ತಂದು, ‘ಸಾಮಾಜಿಕ ಮಾಧ್ಯಮಗಳ ಮೂಲಕ ಏನೂ ಮಾತನಾಡಬೇಡಿ’ ಎಂಬಂಥ ವಾತಾವರಣ ಸೃಷ್ಟಿಸಿದರೆ ಅದರಿಂದ ಖಂಡಿತವಾಗಿಯೂ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗುವುದಲ್ಲದೆ, ವಾಕ್ ಸ್ವಾತಂತ್ರ್ಯಕ್ಕೂ ಪೆಟ್ಟು. ಇಲ್ಲಿ ಇನ್ನೊಂದು ಅಪಾಯವಿದೆ. ಹೀಗೆ ಅಭಿಪ್ರಾಯವನ್ನು ‘ಹತ್ತಿಕ್ಕುವ’ ಸಂಪೂರ್ಣ ಅಧಿಕಾರ ಪೊಲೀಸ್ ಖಾತೆ ಬಳಿ ಹೋದರೆ ಅಧಿಕಾರ ದುರುಪಯೋಗ ಆಗದೆ ಇದ್ದೀತೆ? ಆ ಅಪಸವ್ಯಗಳಿಗೆ ಯಾರು ಹೊಣೆ? ಮುಂದೆ, ಅದು ವೈಯಕ್ತಿಕ ದ್ವೇಷ ಅಥವಾ ಬೇರೆ ಆಯಾಮದ ಸ್ವರೂಪ ಪಡೆದುಕೊಂಡರೆ ಅದು ಕೇವಲ ಹೊಸ ಸಮಸ್ಯೆಯಲ್ಲ ಸಮಾಜದ ಸ್ವಾಸ್ಥ್ಯಕ್ಕೆ ಮಾರಕ ಆಗಬಲ್ಲದು.
ಸಾಮಾಜಿಕ ಜಾಲತಾಣ ಅಥವಾ ಸೈಬರ್ ಮೂಲಕ ನಡೆಸುವ ಅವಹೇಳನ ಮತ್ತು ಇತರ ಕುಕೃತ್ಯಗಳಿಗೆ ಕಡಿವಾಣ ಬೀಳಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕೆ ಸಂಬಂಧಿಸಿ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂಥ ಏಕರೂಪದ ನೀತಿಯನ್ನು ಕೇಂದ್ರ ಸರ್ಕಾರವೇ ರೂಪಿಸಿ, ಜಾರಿಗೆ ತರುವುದು ಹೆಚ್ಚು ಸೂಕ್ತ. ಇಲ್ಲದಿದ್ದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ ನಿಯಮಗಳು ಬಂದು, ಸಮಸ್ಯೆಯ ಪರಿಹಾರಕ್ಕಿಂತ ಗೊಂದಲವೇ ಹೆಚ್ಚಾಗಿ ಬಿಡುತ್ತದೆ. ಪ್ರಸಕ್ತ ಸಂದರ್ಭದಲ್ಲಿ ಕೇರಳ ಸರ್ಕಾರ ಅಂಥದ್ದೇ ಗೊಂದಲವನ್ನು ಸೃಷ್ಟಿಸಿದ್ದು, ವಿವೇಚನಾಯುಕ್ತ ನಿರ್ಧಾರಕ್ಕೆ ಬರಬೇಕಿದೆ. ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿ ಆಗದಂತೆ ಮತ್ತು ಸಾಮಾಜಿಕ ಮಾಧ್ಯಮಗಳ ದುರುಪಯೋಗವೂ ತಡೆಯುವಂತೆ ಮಧ್ಯಮ ಮಾರ್ಗವೊಂದನ್ನು ಹುಡುಕುವುದು ಅನಿವಾರ್ಯ.
2021ರಲ್ಲಿ ಸ್ವಾತಂತ್ರ್ಯೋತ್ಸವ, ಕ್ರಿಸ್​ಮಸ್​, ಮಹಾವೀರ ಜಯಂತಿಗಿಲ್ಲ ಸಾರ್ವತ್ರಿಕ ರಜೆ; ಆದರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + sixteen =
Remember me
