ನೈಸರ್ಗಿಕ ಪ್ರಕೋಪಗಳ ಮುಂದೆ ಮನುಷ್ಯ ಅಸಹಾಯಕನಾಗಿ ಬಿಡುತ್ತಾನೆ. ಧುತ್ತೆಂದು ಬಂದೆರಗುವ ಇಂಥ ಆಪತ್ತುಗಳು ಭಾರಿ ಹಾನಿ ಸೃಷ್ಟಿಸುವ ಜತೆಗೆ ಮನುಷ್ಯ ತತ್ತರಿಸಿ ಬಿಡುವಂತೆ ಮಾಡುತ್ತವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ವಾಯುಭಾರ ಕುಸಿತದಿಂದಾಗುವ ಚಂಡಮಾರುತ ಅಥವಾ ಅತಿಯಾದ ಅಕಾಲಿಕ ಮಳೆಯ ಕುರಿತಂತೆ ತಂತ್ರಜ್ಞಾನದ ಬಲದಿಂದ ಮುಂಚೆಯೇ ಮಾಹಿತಿ ಸಿಗುತ್ತಿರುವ ಪರಿಣಾಮ, ತೀವ್ರ ಸ್ವರೂಪದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು, ಜನರನ್ನು ಅಪಾಯಕಾರಿ ಪ್ರದೇಶಗಳಿಂದ ಸ್ಥಳಾಂತರಿಸಲು ಆ ಮೂಲಕ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ಹಾನಿಯನ್ನು ತಗ್ಗಿಸಲು ಸಾಧ್ಯವಾಗುತ್ತಿದೆ ಎಂಬುದು ಸಮಾಧಾನಕರ ಸಂಗತಿ. ಚೆನ್ನೈ ಮತ್ತು ಪುದುಚೇರಿಗೆ ಬಂದಪ್ಪಳಿಸಿದ ನಿವಾರ್ ಚಂಡಮಾರುತದ ಪರಿಣಾಮ ತಮಿಳುನಾಡಿನ 16 ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಅದೃಷ್ಟವಶಾತ್ ಹೆಚ್ಚಿನ ಪ್ರಾಣಹಾನಿ ಸಂಭವಿಸಿಲ್ಲ. ಬುಧವಾರ ಸಂಜೆ 16 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ ‘ನಿವಾರ್’ ಭೂಪ್ರದೇಶವನ್ನು ಅಪ್ಪಳಿಸುವ ಸಂದರ್ಭದಲ್ಲಿ ಗಂಟೆಗೆ 120-130 ಕಿ.ಮೀ. ವೇಗದಲ್ಲಿತ್ತು. ಆ ಬಳಿಕ ಚಂಡಮಾರುತ ದುರ್ಬಲಗೊಂಡಿದೆಯಾದರೂ, ಗುರುವಾರ ಬೆಳಗಿನ ಹೊತ್ತಿಗೆ ಪುದುಚೇರಿಯಲ್ಲಿ 233 ಮಿ.ಮೀಟರ್ ಮತ್ತು ಚೆನ್ನೈನಲ್ಲಿ 237 ಮಿ.ಮೀಟರ್ ಮಳೆ ಸುರಿದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ವ್ಯಾಪಕ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗುರುವಾರ ಸರ್ಕಾರ ರಜೆ ಘೋಷಿಸಿದ್ದರಿಂದ, ಜನಸಂಚಾರ ವಿರಳವಾಗಿತ್ತು.
ಈ ಹಿಂದೆ ಒಡಿಶಾಕ್ಕೆ ಚಂಡಮಾರುತ ಅಪ್ಪಳಿಸಿದಾಗಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂಚಿತವಾಗಿಯೇ ಸೂಕ್ತ ಕ್ರಮಗಳನ್ನು ಕೈಗೊಂಡು ಹಾನಿ ಪ್ರಮಾಣವನ್ನು ತಗ್ಗಿಸಲು ಯಶಸ್ವಿಯಾಗಿದ್ದವು. ತಮಿಳುನಾಡಿನಲ್ಲೂ ಅದೇ ಮಾದರಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಾಜ್ಯ ವಿಪತ್ತು ನಿರ್ವಹಣಾ ತಂಡಗಳ ಜತೆಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡಗಳನ್ನೂ ನಿಯೋಜಿಸಲಾಗಿತ್ತು. ನೌಕಾಪಡೆ ಮತ್ತು ಕರಾವಳಿ ಗಸ್ತು ಪಡೆ ಕೂಡ ಸನ್ನದ್ಧ ಸ್ಥಿತಿಯಲ್ಲಿದ್ದವು. ಚೆನ್ನೈಯೊಂದರಲ್ಲೇ 267 ಮರಗಳು ಬಿದ್ದಿದ್ದು ಆ ಪೈಕಿ 250 ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ನಾಗರಿಕರು ಟ್ವಿಟರ್​ನಲ್ಲಿ ದೂರು ಸಲ್ಲಿಸಿದ್ದ 1 ಗಂಟೆಯೊಳಗೆ ಚೆನ್ನೈ ಮಹಾನಗರಪಾಲಿಕೆ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಜನರ ಶ್ಲಾಘನೆಗೆ ಪಾತ್ರವಾಗಿದೆ. ತಮಿಳುನಾಡಿನಲ್ಲಿ 3085 ಕಾಳಜಿ ಕೇಂದ್ರಗಳಿಗೆ 2.25 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
ಮೂಲಗಳ ಪ್ರಕಾರ, ಮೂಲಸೌಕರ್ಯಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ಇದನ್ನು ಸರಿಪಡಿಸುವುದು ಆಡಳಿತದ ಮುಂದಿನ ಸವಾಲಾಗಿದೆ. ಹಾನಿಯಾಗಿರುವ ಪ್ರದೇಶಗಳಲ್ಲಿ ಸರಿಯಾದ ಸಮೀಕ್ಷೆ ನಡೆಸಬೇಕಿದ್ದು, ಮೂಲಸೌಕರ್ಯಗಳನ್ನು ಮರುಸ್ಥಾಪಿಸಬೇಕಿದೆ. ಈ ಬಗೆಯ ಕೆಲಸಗಳಲ್ಲಿ ಯಾವುದೇ ಕಾರಣಕ್ಕೆ ವಿಳಂಬಧೋರಣೆ ಬೇಡ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದ್ದು, ನಗರ ಪ್ರದೇಶಗಳಷ್ಟೇ ಅಲ್ಲದೆ ಗ್ರಾಮೀಣ ಭಾಗದತ್ತಲೂ ಸೂಕ್ತ ಗಮನ ಹರಿಸಬೇಕಿದೆ. ಜನಜೀವನ ಮುಂಚಿನಂತೆ ಸಾಮಾನ್ಯವಾಗಲು ಅವಶ್ಯಕ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 1 =
Remember me
